Advertisement

ಬಯಲು ಶೌಚಮುಕ್ತಕ್ಕೆ ತಾಪಂ ಇಒ ಪಣ!

03:38 PM Dec 05, 2019 | Naveen |

ರಘು ಶಿಕಾರಿ
ಶಿಕಾರಿಪುರ:
ಶಿಕಾರಿಪುರ ತಾಲೂಕು ಎಂದಾಕ್ಷಣ ಜನರ ಕಲ್ಪನೆಗೆ ಬರೋದು ಮುಖ್ಯಮಂತ್ರಿಗಳ ಕ್ಷೇತ್ರ. ಈ ತಾಲೂಕಿನಲ್ಲಿ ಎಲ್ಲಾ ರೀತಿಯ ಅಭಿವೃದ್ದಿ ಕಾರ್ಯಗಳು ಆಗಿವೆ. ಮೂಲ ಸೌಕರ್ಯಗಳು ಇವೆ ಎಂದು ಸಾಮಾನ್ಯವಾಗಿ ರಾಜ್ಯದ ಜನತೆ ಭಾವಿಸುತ್ತಾರೆ. ತಾಲೂಕಿನಲ್ಲಿ ಮೂಲ ಸೌಲಭ್ಯಗಳ ವ್ಯವಸ್ಥೆ ಸಾಕಷ್ಟು ರೀತಿಯಲ್ಲಿ ಕಲ್ಪಿಸಲಾಗಿದೆ. ಆದರು ಕೆಲವು ಹಳ್ಳಿಗಳಲ್ಲಿ ಇನ್ನೂ ಕೂಡ ಜನರು ಬಯಲು ಶೌಚ ಮಾಡುವುದನ್ನು ಬಿಟ್ಟಿಲ್ಲ. ಈ ವಿಷಯ ಮನಗಂಡ ತಾಲೂಕು ಪಂಚಾಯತ್‌ ಕಾರ್ಯ ನಿರ್ವಹಣಾಧಿಕಾರಿ ಪರಮೇಶ್ವರ್‌ ಅವರು ಇದಕ್ಕೆ ಸೂಕ್ತ ಕ್ರಮಕ್ಕೆ ಮುಂದಾಗಿದ್ದಾರೆ.

Advertisement

ಮುಂಜಾನೆ ಹಳ್ಳಿಗಳಿಗೆ ಭೇಟಿ: ತಾಪಂ ಕಾರ್ಯ ನಿರ್ವಹಣಾಧಿಕಾರಿ ಪರಮೇಶ್ವರ ಮತ್ತು ಅವರ ಅಧಿಕಾರಿಗಳ ತಂಡ ವಾರಕ್ಕೆ ಒಂದು ದಿನ ಆಯ್ದ ಹಳ್ಳಿಗಳಿಗೆ ಮುಂಜಾನೆ ಭೇಟಿ ನೀಡಿ ಬಯಲು ಶೌಚ ಮಾಡುವವರನ್ನು ಗುರುತಿಸಿ ಅವರ ಸಮಸ್ಯೆಗಳನ್ನು ಆಲಿಸಿ ಶೌಚಾಲಯವನ್ನು ಕಟ್ಟಿಕೊಳ್ಳುವಂತೆ ಅವರ ಮನವೊಲಿಸಿ ಸ್ಥಳದಲ್ಲಿಯೇ ಶೌಚಾಯಲಕ್ಕೆ ಗ್ರಾಪಂನಿಂದ ಹಣ ಮಂಜೂರು ಮಾಡುವಂತೆ ಕ್ರಮಕ್ಕೆ ಮುಂದಾಗುತ್ತಿದ್ದಾರೆ. ಇದೊಂದು ಅಂದೋಲನದ ರೀತಿಯಲ್ಲಿ ನಡೆಯುತ್ತಿದೆ ಎಂದರೂ ತಪ್ಪಾಗಲಾರದು.

ಪ್ರತ್ಯೇಕ ಕುಟುಂಬಗಳು ಹೊಂದಿಲ್ಲ ಶೌಚಾಲಯ: ಅಣ್ಣ- ತಮ್ಮ ಅಥವಾ ಮಕ್ಕಳು ಮದುವೆ ನಂತರ ಪ್ರತ್ಯೇಕ ಮನೆ ಮನೆ ಮಾಡಿಕೊಂಡಿದ್ದು ವಿಭಾಗವಾಗುತ್ತಾರೆ. ಇದರಿಂದ ಸರ್ವೆಯ ಪ್ರಕಾರ ಜಿಲ್ಲೆ ಬಯಲು ಶೌಚ ಮುಕ್ತವಾಗಿದೆ. ಅದರೂ ಈ ರೀತಿಯ ಸಮಸ್ಯೆಗಳಿಂದ ಶೌಚಾಲಯ ಇಲ್ಲದೇ ಅನೇಕ ಮನೆಗಳು ಇರುವುದು ಕಂಡುಬಂದಿದೆ. ಬಹುತೇಕ ತಾಂಡಾಗಳಲ್ಲಿ ಹಿಂದುಳಿದ ಪ್ರದೇಶಗಳಲ್ಲಿ ಈ ಸಮಸ್ಯೆ ಕಾಡುತ್ತಿದೆ.

ಸ್ವಚ್ಛ ಭಾರತ್‌ ಮಿಷನ್‌ ಅಡಿಯಲ್ಲಿ ಶೌಚಾಲಯಕ್ಕೆ ಅನುದಾನ: ಕೇಂದ್ರ ಸರ್ಕಾರದ ಸ್ವಚ್ಛ ಭಾರತ್‌ ಮಿಷನ್‌ ಅಡಿಯಲ್ಲಿ ಪ್ರತಿ ಮನೆಗೂ ಶೌಚಾಲಯ ನಿರ್ಮಿಸಲು ಪ್ರೋತ್ಸಾಹ ಧನ ನೀಡುತ್ತಿದ್ದು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳಿಗೆ 15000/ ಸಾವಿರ ಹಾಗೂ ಹಿಂದುಳಿದ ವರ್ಗಗಳಿಗೆ 12000/ ರೂ. ಹಣವನ್ನು ಶೌಚಾಲಯ ನಿರ್ಮಿಸಿದ ಮೇಲೆ ಗ್ರಾಪಂ ಮೂಲಕ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಹಣ ಬಿಡುಗಡೆಯಾಗುತ್ತದೆ.

ಅಧಿಕಾರಿಗಳಿಗೆ ಎದರುರಾಗುತ್ತೆ ಸಾಕಷ್ಟು ಸಮಸ್ಯೆ: ಈ ರೀತಿ ಗ್ರಾಮೀಣ ಭಾಗದ ಜನರನ್ನು ಮನವೊಲಿಸುವ ಕೆಲಸ ಅಷ್ಟು ಸುಲಭದ ಮಾತಲ್ಲ. ಗ್ರಾಮೀಣ ಜನರು ಒಂದಕ್ಕೆ ಹತ್ತು ಪ್ರಶ್ನೆಗಳನ್ನು ಕೇಳುತ್ತಾರೆ. ಹಣ ಮುಂಚಿತವಾಗಿ ಕೊಡಿ. ಕಟ್ಟಿಕೊಳ್ಳುತ್ತೇವೆ ಮತ್ತು ಮಗಳ ಮದುವೆ ಮಾಡಿದ್ದೇವೆ, ಸಾಲ ಇದೆ, ಬೆಳೆ ಬಂದಿಲ್ಲ, ಅನಾವೃಷ್ಟಿ. ಹೀಗೆ ಹತ್ತು ಹಲವಾರು ಸಮಸ್ಯೆಗಳನ್ನು ಜನರ, ಅಧಿಕಾರಿಗಳ ಮುಂದೆ ಹೇಳಿಕೊಂಡು ಶೌಚಾಲಯ ನಿರ್ಮಾಣ ಮಾಡಿಕೊಳ್ಳಲು ಸಾದ್ಯವಾಗುತ್ತಿಲ್ಲ ಎಂದು ಹೇಳುತ್ತಾರೆ. ಈ ಎಲ್ಲಾ ಸಮಸ್ಯೆಗಳಿಗೆ ಜನರಿಗೆ ಮನವೊಲಿಸಿ ನೀವು ಶೌಚಾಲಯ ಕಟ್ಟಿಕೊಳ್ಳಿ. ದಾಖಲೆಗಳನ್ನು ನೀಡಿದ ತಕ್ಷಣ ಹಣ ಮಂಜೂರಾಗುತ್ತದೆ ಎಂದು ಜನರಿಗೆ ಅರಿವು ಮೂಡಿಸುತ್ತಾರೆ ಹಾಗೂ ಪಿಡಿಒಗಳಿಗೆ ಅದರ ಜವಾಬ್ದಾರಿಯನ್ನು ನೀಡಲಾಗುತ್ತದೆ.
ಎಲ್ಲಾ ಪಿಡಿಒಗಳು ಹಾಗೂ ಗ್ರಾಮದ ಮುಖ್ಯಸ್ಥರು ಅಧಿಕಾರಿ ವೃಂದದವರ ಟೀಮ್‌ ವರ್ಕ್‌ನಿಂದ ಕೆಲಸ ಸಾಧ್ಯವಾಗಿದೆ ಎನ್ನುತ್ತಾರೆ ಇಒ ಪರಮೇಶ್ವರ್‌.

Advertisement

ಬಯಲು ಶೌಚ ಮುಕ್ತಗೊಳಿಸುವ ಗುರಿ: ಶಿಕಾರಿಪುರ ತಾಲೂಕನ್ನು ಸಂಪೂರ್ಣವಾಗಿ ಬಯಲು ಶೌಚ ಮುಕ್ತಗೊಳಿಸುವ ಗುರಿಯನ್ನು ಹಾಕಿಕೊಂಡಿದ್ದು ಶೌಚಾಲಯ ನಿರ್ಮಾಣದಿಂದ ಹೊರಗುಳಿದವರ ಪಟ್ಟಿ ಸಿದ್ಧ ಮಾಡಿದ್ದು ಅದರಲ್ಲಿ 1926 ಶೌಚಾಲಯ ನಿರ್ಮಾಣದ ಗುರಿಯನ್ನು ಹಾಕಿಕೊಂಡಿದ್ದು ಅದರಲ್ಲಿ 1076 ಈಗಾಗಲೇ ನಿರ್ಮಾಣ ಮಾಡಿದ್ದು ಇನ್ನೂ 850 ನಿರ್ಮಾಣ ಮಾಡಲು ಬಾಕಿ ಇದೆ. ತಾಲೂಕನ್ನು ಬಯಲು ಶೌಚ ಮುಕ್ತ ಮಾಡುವ ಗುರಿಯನ್ನು ತಾಪಂ ಅಧಿಕಾರಿಗಳ ತಂಡ ಹಾಕಿಕೊಂಡಿದೆ. ಅಧಿಕಾರಿಗಳ ಈ ರೀತಿಯ ಉತ್ತಮ ಕೆಲಸಕ್ಕೆ ಜನಸಾಮಾನ್ಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next