Advertisement

ಶಿಗ್ಗಾವಿ ಬಟಾಲಿಯನ್‌ ಸಮಗ್ರ ಅಭಿವೃದ್ಧಿ ಗುರಿ: ಬೊಮ್ಮಾಯಿ

04:08 PM Jun 21, 2020 | Suhan S |

ಹಾವೇರಿ: ಶಿಗ್ಗಾವಿಯಲ್ಲಿರುವ ರಾಜ್ಯ ಮೀಸಲು ಪಡೆ ಬಟಾಲಿಯನ್‌ ಸಮಗ್ರ ಅಭಿವೃದ್ಧಿಪಡಿಸಿ ಅದನ್ನು ರಾಜ್ಯದಲ್ಲಿಯೇ ಮಾದರಿ ಬಟಾಲಿಯನ್‌ ಆಗಿ ಮಾಡುವ ಗುರಿ ಇದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

Advertisement

ಶನಿವಾರ ನಗರದ ಪ್ರವಾಸಿಗೃಹದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಬಟಾಲಿಯನ್‌ನಲ್ಲಿ ಇರುವ ಶಾಲೆಯ ವಿಸ್ತರಣೆ, ಮಾರುಕಟ್ಟೆ ಅಭಿವೃದ್ಧಿ, ಆರೋಗ್ಯ, ವ್ಯಾಯಾಮ ಹಾಗೂ ಆಸ್ಪತ್ರೆಗಳನ್ನು ಹೊಂದಿದ ಪೊಲೀಸ್‌ ಕಾಂಪ್ಲೆಕ್ಸ್‌ ನಿರ್ಮಿಸಲಾಗುವುದು. ಈ ಬಗ್ಗೆ ಸಮಗ್ರ ಯೋಜನಾ ವರದಿ ತಯಾರಿಸಲು ಸೂಚಿಸಲಾಗಿದೆ ಎಂದರು.ಪೊಲೀಸ್‌ ಗೃಹ-2020 ಕಾರ್ಯಕ್ರಮದಡಿಯಲ್ಲಿ ಪೊಲೀಸ್‌ ಸಿಬ್ಬಂದಿಗಾಗಿ ಈಗಾಗಲೇ ಶೇ. 48ರಷ್ಟು ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಮುಂದಿನ ಐದು ವರ್ಷಗಳಲ್ಲಿ 2025 ಯೋಜನೆಯಲ್ಲಿ 10 ಸಾವಿರ ಪೊಲೀಸ್‌ ಗೃಹಗಳನ್ನು ನಿರ್ಮಿಸಲಾಗುವುದು. ಕರ್ನಾಟಕ ರಾಜ್ಯ ದೇಶದಲ್ಲಿಯೇ ಅತಿಹೆಚ್ಚು ಪೊಲೀಸ್‌ ಗೃಹ ಹೊಂದಿರುವ ರಾಜ್ಯವಾಗಿದೆ ಎಂದರು.

ಪ್ರಸಕ್ತ ವರ್ಷದ ಬಜೆಟ್‌ನಲ್ಲಿ ಪೊಲೀಸ್‌ ಗೃಹ-2025 ಯೋಜನೆಗೆ ಮುಖ್ಯಮಂತ್ರಿಯವರು ಅನುಮೊದನೆ ನೀಡಿದ್ದಾರೆ. ಪೊಲೀಸ್‌ ಗೃಹ-2020 ಯೋಜನೆ ಡಿಸೆಂಬರ್‌ನಲ್ಲಿ ಮುಗಿಯಲಿದ್ದು, ಜನವರಿಯಿಂದ ಪೊಲೀಸ್‌ ಗೃಹ-2025 ಯೋಜನೆ ಆರಂಭವಾಗಲಿದೆ ಎಂದರು.

ಪೊಲೀಸ್‌ ಗೃಹ ಮಂಡಳಿಯಿಂದಲೂ ರಾಜ್ಯದಲ್ಲಿ ಎಲ್ಲೆಲ್ಲಿ ಅಗತ್ಯವಿದೆಯೋ ಅಲ್ಲೆಲ್ಲ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ, ಪೊಲೀಸ್‌ ಆಯುಕ್ತರ ಕಚೇರಿ, ಪೊಲೀಸ್‌ ಠಾಣೆ, ಪೊಲೀಸ್‌ ತರಬೇತಿ ಶಾಲೆ, ಕಾರಾಗೃಹ ಕಟ್ಟಡಗಳನ್ನು ನಿರ್ಮಿಸಲಾಗುವುದು. ಕೊರೊನಾ ಲಾಕ್‌ಡೌನ್‌ ಇರುವುದರಿಂದ ಯಾರಿಗೂ ತೊಂದರೆ ಆಗದಂತೆ ಪೊಲೀಸ್‌ ನೇಮಕಾತಿ ಪ್ರಕ್ರಿಯೆ ನಡೆಸಲಾಗುವುದು. ಈ ಬಗ್ಗೆ ಕೆಲವೇ ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಂಡು ಪ್ರಕಟಿಸಲಾಗುವುದು ಎಂದರು.

ಕೆಲ ಶಾಸಕರು ತಮ್ಮ ಕ್ಷೇತ್ರಕ್ಕೆ ಸಮರ್ಪಕ ಅನುದಾನ ಸಿಗುತ್ತಿಲ್ಲ ಎಂಬ ಅಸಮಾಧಾನ ಹೊರಹಾಕುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಆ ಶಾಸಕರೆಲ್ಲ ತಮ್ಮ ಕ್ಷೇತ್ರದ ಬಗ್ಗೆ ಕಳಕಳಿ ಇರುವವರಾಗಿದ್ದು, ಅಭಿವೃದ್ಧಿಪರ ನಿಲುವು ಉಳ್ಳವರಾಗಿದ್ದಾರೆ. ಸರ್ಕಾರದಿಂದ ಹೆಚ್ಚಿನ ಅನುದಾನ ಕೇಳುತ್ತಿದ್ದು, ಅದನ್ನು ನಾವು ಧನಾತ್ಮಕವಾಗಿ ಪರಿಗಣಿಸಬೇಕು ಎಂದರು

Advertisement
Advertisement

Udayavani is now on Telegram. Click here to join our channel and stay updated with the latest news.

Next