ಶಿಗ್ಗಾವಿ: ರಾಜ್ಯದಲ್ಲಿಯೇ ಪ್ರಥಮವೆನ್ನಲಾದ ಪೈಲೆಟ್ ಗ್ರೌಂಡ್+1 ಗುಂಪುಮನೆ ಯೋಜನೆಯಾಗಿದ್ದು, ಇದು ಕ್ಷೇತ್ರದ ಮೂರು ಪುರಸಭೆಯ ವ್ಯಾಪ್ತಿಯಲ್ಲಿನ 2 ಸಾವಿರ ಬಡ ಕುಟುಂಬಗಳಿಗೆ ಸುಸಜ್ಜಿತವಾದ ಮನೆ ನೀಡುವಲ್ಲಿ ಸಫಲತೆ ಕಾಣುವಂತಾಗಿದೆ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.
ಪಟ್ಟಣದ ಆಶ್ರಯ ಬಡಾವಣೆ ವಾಜಪೇಯಿ ನಗರ ವಸತಿ ಯೋಜನೆ ಮತ್ತು ಪ್ರಧಾನಮಂತ್ರಿ ಆವಾಸ ಯೋಜನೆಯಡಿ ನಿರ್ಮಿಸಲಾಗಿರುವ ಗುಂಪು ಮನೆಗಳ ಫಲಾನುಭವಿಗಳಿಗೆ ಸ್ವಾಧೀನ ಪತ್ರಗಳ ವಿತರಣೆ ಹಾಗೂ ಪುರಸಭೆ ವ್ಯಾಪ್ತಿಯ ನಗರೊತ್ಥಾನ ಯೋಜನೆಯಡಿ ವಿವಿಧ ವಿಭಾಗಗಳಲ್ಲಿ ಅಳವಡಿಸಿರುವ ಬೀದಿ ದೀಪಗಳ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಮೂರು ಪುರಸಭೆಯ ಶಿಗ್ಗಾವಿ 361 ಸವಣೂರು 1200 ಹಾಗೂ ಬಂಕಾಪುರ 604 ಗುಂಪು ಮನೆ ಜಿ+1 ಮನೆಗಳ ನಿರ್ಮಾಣದ ಕಾಮಗಾರಿ ನಡೆಯುತ್ತಿದ್ದು, ಆದಷ್ಟು ಬೇಗ ಹಂತ ಹಂತವಾಗಿ ಬಡ ಫಲಾನುಭವಿಗಳಿಗೆ ಸ್ವಾ ಧೀನಪತ್ರ ನೀಡಲಾಗುವುದು. 2012ರಲ್ಲಿ ಆರಂಭವಾದ ಯೋಜನೆ ಫಲಾನುಭವಿಗಳಿಗೆ
ಬ್ಯಾಂಕ್ ಸಾಲ ನೀಡಲು ಮುಂದೆ ಬರದ ಕಾರಣ ತಾಂತ್ರಿಕ ತೊಡಕುಗಳಿಂದ ಕಾರ್ಯ ವಿಳಂಭವಾಗಿತ್ತು. ಹಿಂದಿನ ರಾಜ್ಯ ಸರ್ಕಾರ ವಸತಿ ಇಲಾಖೆ ಮಂತ್ರಿಗಳು ಯೋಜನೆಯ ಬೆಂಬಲ ನೀಡಲಿಲ್ಲ. ಹೀಗಾಗಿ ಪ್ರಧಾನಮಂತ್ರಿ ಆವಾಸ ಯೋಜನೆಯಡಿ ಸುಮಾರು 11 ಕೋಟಿ ರೂ. ಅನುದಾನ ಪಡೆದು ಯೋಜನೆ ಪೂರ್ಣಗೊಳಸಲಾಗುತ್ತಿದ್ದು, ಆದಷ್ಟು ಬೇಗ ಬಡ ಜನತೆಗೆ ಮನೆ ಕನಸು ನನಸಾಗಲಿದೆ ಎಂದು ಭರವಸೆ ನೀಡಿದರು.
ಪ್ರತಿ ವರ್ಷ ಸ್ಲಂ ಬೋರ್ಡನಿಂದ ಹಣ ತಂದು ಎಸ್‌ಸಿ, ಎಸ್‌ಟಿ ಹಾಗೂ ಅಲ್ಪಸಂಖ್ಯಾತ ಜನಾಂಗ ಇರುವ ಬಡವಾಣೆಗೆ ಮೂಲ ಸೌಕರ್ಯ ಕಲ್ಪಿಸಲಾಗಿದೆ ಎಂದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಶಯದಂತೆ 2020ರೊಳಗೆ ಸೂರಿಲ್ಲದವರಿಗೆ ಸೂರು ಕಲ್ಪಿಸುವ ಕಾರ್ಯ ನಡೆದಿದೆ. ಹೀಗಾಗಿ ಈ ಯೋಜನೆ ಪೂರ್ಣಗೊಳಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನೀಡಿದ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 11ಕೋಟಿ ಮೊತ್ತವು ಸಹಕಾರಿಯಾಗಲಿದೆ ಎಂದರು.
ಪುರಸಭೆ ಸದಸ್ಯ ಸುಭಾಷ ಚವ್ಹಾಣ ಮಾತನಾಡಿ, ಬಡವರಿಗೆ ಅತೀ ಕಡಿಮೆ ದರದಲ್ಲಿ ಸುಸಜ್ಜಿತ ಮನೆ ನೀಡುವುದು ಶಾಸಕ ಬೊಮ್ಮಾಯಿವರ ಕನಸಿನ ಕೂಸು. ಈ ಯೋಜನೆ ಕಾರ್ಯರೂಪಕ್ಕೆ ಬಂದಿದ್ದು ನಮಗೆ ಹೆಮ್ಮೆಯ ವಿಷಯವಾಗಿದೆ ಎಂದರು.
ಪುರಸಭೆ ಅಧ್ಯಕ್ಷ, ಶಿವಪ್ರಸಾದ ಸುರಗಿಮಠ, ಉಪಾಧ್ಯಕ್ಷ ಪರಶುರಾಮ ಸೊನ್ನದ, ಸದಸ್ಯರಾದ ಫಕ್ಕಿರೇಶ ಶಿಗ್ಗಾವಿ, ಶ್ರೀಕಾಂತ ಬುಳ್ಳಕ್ಕನವರ, ಕೆಸಿಸಿ ಬ್ಯಾಂಕ್ ನಿರ್ದೇಶಕ ಗಂಗಣ್ಣ ಸಾತಣ್ಣವರ, ಮುಖ್ಯಾಧಿಕಾರಿ ಪಿ.ಕೆ. ಗುಡದಾರಿ, ಶಿವಾನಂದ ಮ್ಯಾಗೇರಿ, ಫಕ್ಕಿರಪ್ಪ ವಡ್ಡರ ಮೃತ್ಯುಂಜಯ ಕಟ್ಟಿಮನಿ, ನೀಲವ್ವ ಕಾಲವಾಡ ಹಾಗೂ ಫಲಾನುಭವಿಗಳು ಇದ್ದರು.