Advertisement

Shiggaon Bypoll; ಯಾಸೀರ್‌ ಖಾನ್‌-ಖಾದ್ರಿ ನಡುವೆ ವೈಮನಸ್ಸು ಶುರುವಾಗಿದ್ದು ಏಕೆ?

05:24 PM Oct 26, 2024 | Team Udayavani |

ಉದಯವಾಣಿ ಸಮಾಚಾರ
ಹಾವೇರಿ: ಶಿಗ್ಗಾವಿ ಕಾಂಗ್ರೆಸ್‌ ಮುಸ್ಲಿಂ ಮುಖಂಡರಾದ ಮಾಜಿ ಶಾಸಕ ಅಜ್ಜಂಪೀರ್‌ ಖಾದ್ರಿ ಹಾಗೂ ಯಾಸೀರ್‌ ಅಹ್ಮದ್‌ಖಾನ್‌ ಅವರು ಕ್ಷೇತ್ರದಲ್ಲಿ ಅಸ್ತಿತ್ವ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಹಿನ್ನೆಲೆಯಲ್ಲಿ ಈ ಇಬ್ಬರ ನಡುವೆ ವೈಮನಸ್ಸು ಸೃಷ್ಟಿಗೆ
ಕಾರಣವಾಗಿದೆ.

Advertisement

ಇಬ್ಬರು ಮುಸ್ಲಿಂ ಸಮುದಾಯದ ಪ್ರಬಲ ನಾಯಕರಾಗಿದ್ದು ಕಳೆದ ವಿಧಾನಸಭೆ ಚುನಾವಣೆ ವೇಳೆ ಟಿಕೆಟ್‌ ಹಂಚಿಕೆ ಸಂದರ್ಭದಲ್ಲಿ ಭಿನ್ನಾಭಿಪ್ರಾಯ ಉಂಟಾಗಿದ್ದು, ಈ ಉಪಚುನಾವಣೆಯಲ್ಲೂ ಮುಂದುವರೆದಿದೆ. ಯಾಸೀರ್‌ಅಹ್ಮದ್‌ ಖಾನ್‌ ಮೂಲತಃ ಹಾನಗಲ್ಲ ತಾಲೂಕಿನ ಬೊಮ್ಮನಳ್ಳಿ ಗ್ರಾಮದವರು.

ಶಿಗ್ಗಾವಿಯಲ್ಲಿ ಹೋಟೆಲ್‌ ಉದ್ಯಮ ಆರಂಭಿಸಿ ನಂತರ ದಿನಗಳಲ್ಲಿಕಾಂಗ್ರೆಸ್‌ ಕಿಸಾನ್‌ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಪಕ್ಷದಲ್ಲಿ ಗುರುತಿಸಿಕೊಂಡು ಕ್ಷೇತ್ರದಲ್ಲಿ ಸಂಚರಿಸಿ ಪಕ್ಷ ಸಂಘಟನೆ ಮಾಡಿದ್ದರು. ಕಳೆದ ವಿಧಾನಸಭೆ ಚುನಾವಣೆ ವೇಳೆ ಅನಿರೀಕ್ಷಿತವಾಗಿ ಯಾಸೀರ್‌ ಅಹ್ಮದ್‌ ಪಠಾಣ ಅವರನ್ನು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಘೋಷಿಸಿ ಕಣಕ್ಕೆ ಇಳಿಸಿತು. ಕ್ಷೇತ್ರದಲ್ಲಿ ಹತ್ತಾರು ವರ್ಷ ಪಕ್ಷ ಸಂಘಟಿಸಿ ಪಕ್ಷಕ್ಕಾಗಿ ದುಡಿದಿದ್ದ ಮಾಜಿ ಶಾಸಕ ಅಜ್ಜಂಪೀರ್‌ ಖಾದ್ರಿಗೆ ಹಿನ್ನಡೆಯಾಗಿತ್ತು.

ಹೀಗಾಗಿ ಖಾದ್ರಿ ಅಸಮಧಾನಗೊಂಡು ಚುನಾವಣೆ ವೇಳೆ ತಟಸ್ಥರಾಗಿ ಉಳಿದಿದ್ದರು. ಖಾದ್ರಿ ನನ್ನ ಪರವಾಗಿ ಕೆಲಸ ಮಾಡದೇ
ತೆರೆಮರೆಯಲ್ಲಿ ಬೊಮ್ಮಾಯಿ ಪರ ಕೆಲಸ ಮಾಡಿದ್ದೇ ನನ್ನ ಸೋಲಿಗೆ ಕಾರಣವಾಗಿದೆ ಎಂದು ಪಠಾಣ ಆಕ್ರೋಶ ವ್ಯಕ್ತಪಡಿಸಿದ್ದರು.

Advertisement

ಎರಡು ಬಣದ ಹಗ್ಗ-ಜಗ್ಗಾಟ: ಕ್ಷೇತ್ರದಲ್ಲಿ ಖಾದ್ರಿ ಹಾಗೂ ಪಠಾಣ ತಮ್ಮ ಬಣಗಳನ್ನು ಕಟ್ಟಿಕೊಂಡು ಹಲವಾರು ಬಾರಿ ಶಕ್ತಿ ಪ್ರದರ್ಶನ ಮಾಡುವ ಮೂಲಕ ಟಿಕೆಟ್‌ ಗಿಟ್ಟಿಸಿಕೊಳ್ಳಲು ಯತ್ನಿಸಿದ್ದರು. ಈ ವೇಳೆ ಬೆಂಬಲಿಗರ ನಡುವೆ ಕೈಕೈ ಮೀಲಾಯಸುವ ಹಂತಕ್ಕೂ ತಲುಪಿತ್ತು. ಹೀಗಾಗಿ ಈ ಇಬ್ಬರು ನಾಯಕರ ನಡುವೆ ವೈಮಸ್ಸು ಸೃಷ್ಟಿಯಾಗುತ್ತಲೇ ಹೋಯಿತು.

ತಮ್ಮ ತಮ್ಮ ಬಣಗಳನ್ನು ಕಟ್ಟಿಕೊಂಡು ಮುಖಂಡರಿಗೆ ಮನವಿ ಸಲ್ಲಿಸಿ ಟಿಕೆಟ್‌ ಗಿಟ್ಟಿಸಿಕೊಳ್ಳುವ ಮೂಲಕ ಅಲ್ಪಸಂಖ್ಯಾತ ಸಮುದಾಯದ ಪ್ರಭಾವಿ ಮುಖಂಡರಾಗಿ ಗುರುತಿಸಿಕೊಂಡು ಕ್ಷೇತ್ರದಲ್ಲಿ ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳಬೇಕಾಗಿತ್ತು.
ಹೀಗಾಗಿ ಈ ಬಾರಿ ಉಪಚುನಾವಣೆಯನ್ನೇ ವೇದಿಕೆಯಾಗಿ ಮಾಡಿಕೊಂಡು ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದರು. ಈ ನಡುವೆ ಯಾಸೀರ್‌ ಖಾನ್‌ ಪಠಾಣ ಮೂಲತಃ ಹಾನಗಲ್ಲ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದವಾಗಿದ್ದು, ಸ್ಥಳೀಯರಲ್ಲ ಎಂಬ ಕಾರಣಕ್ಕೆ ಅವರಿಗೆ ಟಿಕೆಟ್‌ ಕೊಡಬೇಡಿ ಎಂದು ಖಾದ್ರಿ ಬಣ ಮುಖಂಡರ ಗಮನಕ್ಕೆ ತಂದಿತ್ತು.

ಇನ್ನೊಂದೆಡೆ ಸತತ ನಾಲ್ಕು ಬಾರಿ ಅಜ್ಜಂಪೀರ್‌ ಖಾದ್ರಿ ಸೋಲು ಕಂಡಿದ್ದು, ಈ ಬಾರಿ ಅವರಿಗೆ ಟಿಕೆಟ್‌ ನೀಡಿದರೆ ಮತ್ತೆ ಕ್ಷೇತ್ರವನ್ನು ಕಳೆದುಕೊಳ್ಳಬೇಕಾಗುತ್ತೆ ಎಂದು ಪಠಾಣ ಬಣ ಕೂಡ ಪಕ್ಷದ ಗಮನಕ್ಕೆ ತಂದಿತ್ತು. ಹೀಗಾಗಿ ಪಕ್ಷದಲ್ಲಿ ಈ ಇಬ್ಬರು ನಾಯಕರ ಮುಸುಕಿನ ಗುದ್ದಾಟ ಮುಂದುವರೆಯುತ್ತಲೇ ಬಂದಿತ್ತು. ಈ ಉಪಚುನಾ ವಣೆಗೆ ಕಾಂಗ್ರೆಸ್‌ ಕೊನೆ ಕ್ಷಣದಲ್ಲಿ ಯಾಸೀರ್‌ ಖಾನ್‌ ಪಠಾಣ ಅವರಿಗೆ ಟಿಕೆಟ್‌ ಘೋಷಿಸುವ ಮೂಲಕ ಟಿಕೆಟ್‌ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಅಜ್ಜಂಪೀರ್‌ ಖಾದ್ರಿ ಬಣಕ್ಕೆ ನಿರಾಸೆಯಾಗಿದೆ. ಈ ಇಬ್ಬರ ವೈಮಸ್ಸು ಈಗ ಮತ್ತೊಂದು ಹಂತಕ್ಕೆ ತಲುಪಿದ್ದು, ಕಾಂಗ್ರೆಸ್‌ ಮುಖಂಡರು ಈ ಇಬ್ಬರನ್ನು ಹೇಗೆ ಸಮಾಧಾನ ಮಾಡಿ ಚುನಾವಣೆ ಎದುರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ಅಪ್ಪ ಆಯ್ತು ಈಗ ಪುತ್ರನ ಎದುರು ಪಠಾಣ ಕಾದಾಟ

ಶಿಗ್ಗಾವಿ ವಿಧಾನಸಭೆ ಕ್ಷೇತ್ರ ಬಿಜೆಪಿ ಭದ್ರಕೋಟೆ.  ಬಸವರಾಜ ಬೊಮ್ಮಾಯಿ ನಾಲ್ಕು ಬಾರಿ ಸತತ ಗೆಲುವು ಸಾಧಿಸಿ ಬಿಗಿ ಹಿಡಿತ ಹೊಂದಿದ್ದಾರೆ. ಅಲ್ಲದೇ ಸಿಎಂ, ಸಚಿವರಾಗಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಯಾಸೀರ್‌ಖಾನ್‌ ಪಠಾಣ 2023ರ ಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ ವಿರುದ್ಧ 35 ಸಾವಿರ ಮತಗಳ ಅಂತರದಿಂದ ಸೋತಿದ್ದರು. ಈ ಬಾರಿ ಅವರ
ಪುತ್ರ ಭರತ್‌ ಎದುರಾಳಿಯಾಗಿದ್ದಾರೆ. ಹೀಗಾಗಿ ಅಪ್ಪನ ಎದುರು ಸೋತ ಈಗ ಮಗನ ಎದುರು ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next