Advertisement

ನಮ್ಮ ಹಕ್ಕೊತ್ತಾಯ: ಪುತ್ತೂರಿಗೆ SP ಕಚೇರಿ ಸ್ಥಳಾಂತರ: ಶೀಘ್ರ ಕೂಡಿ ಬರಲಿ ಯೋಗ !

10:50 PM Apr 09, 2023 | Team Udayavani |

ಪುತ್ತೂರು: ದ.ಕ. ಜಿಲ್ಲಾ ಪೊಲೀಸ್‌ ಕಚೇರಿಯನ್ನು ಗ್ರಾಮಾಂತರದ ಕೇಂದ್ರ ಸ್ಥಾನದಲ್ಲಿರುವ ಪುತ್ತೂರಿಗೆ ವರ್ಗಾಯಿಸ ಬೇಕು ಎಂಬ ಹಲವು ಸಮಯಗಳ ಬೇಡಿಕೆ ಇನ್ನೂ ಈಡೇರಿಲ್ಲ. ಈ ಬಾರಿಯಾದರೂ ಇದಕ್ಕೆ ಸ್ಪಂದನೆ ಸಿಗಬೇಕು ಎನ್ನುವುದು ಇಲ್ಲಿನ ಜನರ ಹಕ್ಕೊತ್ತಾಯ.

Advertisement

ಎಸ್‌ಪಿ ಕಚೇರಿ ವ್ಯಾಪ್ತಿಯಲ್ಲಿದ್ದ ಮಂಗಳೂರು ಮಹಾನಗರದಲ್ಲಿ 2010 ರಲ್ಲಿ ಪೊಲೀಸ್‌ ಕಮಿಷನರೆಟ್‌ ಜಾರಿಗೆ ಬಂದಿತ್ತು. ಅನಂತರದಲ್ಲಿ ಮಂಗಳೂರು ಕಂದಾಯ ವಿಭಾಗ ವ್ಯಾಪ್ತಿಯಲ್ಲಿ ಕಮಿಷನರೆಟ್‌ ಬರುವುದರಿಂದ ಎಸ್ಪಿ ಕಚೇರಿಗೆ ಆ ವ್ಯಾಪ್ತಿಯಲ್ಲಿ ಅಧಿಕಾರ ವ್ಯಾಪ್ತಿ ಇಲ್ಲ. ಕಮಿಷನರೆಟ್‌ ವ್ಯವಸ್ಥೆ ಯನ್ನು ಉದ್ಘಾಟಿಸಿದ್ದ ಅಂದಿನ ಗೃಹ ಸಚಿವ ದಿ| ವಿ.ಎಸ್‌. ಆಚಾರ್ಯ ಅವರು ಎಸ್ಪಿ ಕಚೇರಿಯನ್ನು ಪುತ್ತೂರಿಗೆ ಸ್ಥಳಾಂತರಿಸುವ ಭರವಸೆ ನೀಡಿದ್ದರು. ಆದರೆ ಈ ಭಾಗದ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಅದು ಹಾಗೆಯೇ ಉಳಿಯಿತು.

ಮಂಗಳೂರಿನಿಂದ ಹೊರ ಭಾಗದ ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ ಹಾಗೂ ಕಡಬ ಈ ಗ್ರಾಮಾಂತರ ತಾಲೂಕುಗಳು ದ.ಕ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವ್ಯಾಪ್ತಿಗೆ ಬರುತ್ತವೆ. ಈ ಭಾಗದಲ್ಲಿ ಅಹಿತಕರ ಘಟನೆಗಳು ನಡೆದರೆ ಪೊಲೀಸ್‌ ಉನ್ನ ತಾಧಿಕಾರಿಗಳು ಮಂಗಳೂರಿನಿಂದ ಬರಬೇಕು ಅಥವಾ ಈ ಭಾಗದ ಠಾಣೆಗಳ ಅಧಿಕಾರಿಗಳು ಎಸ್ಪಿ ಸಭೆಗೆ ಮಂಗಳೂರಿಗೆ ಹೋಗಬೇಕು. ಮಂಗಳೂರಿನ ಅನಂತರದ ಎರಡನೇ ಅತೀ ದೊಡ್ಡ ಪಟ್ಟಣವಾಗಿರುವ ಪುತ್ತೂರಿನ ಗಡಿ ಭಾಗದಲ್ಲಿ ಬೆಳ್ತಂಗಡಿ, ಬಂಟ್ವಾಳ, ಸುಳ್ಯ, ಕಡಬ ತಾಲೂಕುಗಳು ಬೆಸೆದುಕೊಂಡಿವೆ. ಫರಂಗಿಪೇಟೆಯಿಂದ ಸಂಪಾಜೆ ತನಕ ಮತ್ತೂಂದು ಭಾಗದಲ್ಲಿ ಚಾರ್ಮಾಡಿ ಘಾಟಿ ತನಕ ಹಾಗೂ ಕೇರಳ ಗಡಿಭಾಗದ ಈಶ್ವರಮಂಗಲ, ಜಾಲ್ಸೂರು, ಪಾಣಾಜೆ, ವಿಟ್ಲ ಭಾಗ ಬರುತ್ತವೆ. ಪುತ್ತೂರು ಕೇಂದ್ರ ಸ್ಥಾನವಾದರೆ ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಹೆಚ್ಚು ಪ್ರಯೋಜನವಾಗಲಿದೆ.

~ ಕಿರಣ್‌ ಪ್ರಸಾದ್‌ ಕುಂದಡ್ಕ

Advertisement

Udayavani is now on Telegram. Click here to join our channel and stay updated with the latest news.

Next