ಶಿಡ್ಲಘಟ್ಟ: ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ತಾಲೂಕಿನ ದಿಬ್ಬೂರಹಳ್ಳಿಯಲ್ಲಿ 1969ರಲ್ಲಿ ಸ್ಥಾಪನೆಯಾಗಿ, ಅನೇಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿ, ಉನ್ನತ ಸ್ಥಾನ ಅಲಂಕರಿಸಲು ಕಾರಣವಾಗಿದ್ದ ಶ್ರೀ ವೆಂಕಟೇಶ್ವರ ಪ್ರೌಢಶಾಲೆಯನ್ನು ಆದಿಚುಂಚನಗಿರಿ ಮಠದ ಸುಪರ್ದಿಗೆ ನೀಡಲು ವೇದಿಕೆ ಸಜ್ಜಾಗಿದೆ.
ತಾಲೂಕಿನ ದಿಬ್ಬೂರಹಳ್ಳಿ, ಸಾದಲಿ, ಬಶೆಟ್ಟಹಳ್ಳಿ, ಚಿಲಕಲನೇಪು ಹೋಬಳಿಗಳ ಸುತ್ತಮುತ್ತಲಿನ ಬಡ ವಿದ್ಯಾವಂತ ಮಕ್ಕಳಿಗೆ ಗುಣಮಟ್ಟದ ವಿದ್ಯಾಭ್ಯಾಸ ನೀಡಿ, ಸಮಾಜದಲ್ಲಿ ಉತ್ತಮ, ಉನ್ನತ ವ್ಯಕ್ತಿಗಳನ್ನು ರೂಪಿಸಿದ ದಿಬ್ಬೂರಹಳ್ಳಿಯ ವೆಂಕಟೇಶ್ವರ ಪ್ರೌಢಶಾಲೆಯನ್ನು ಆದಿಚುಂಚನಗಿರಿ ಮಠದ ಸುಪರ್ದಿಗೆ ನೀಡುವ ಕಾರ್ಯಕ್ರಮ ಜೂ.7 ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಮುಖ್ಯಶಿಕ್ಷಕ ಡಿ.ಸಿ.ಗೋಪಿನಾಥ್ ತಿಳಿಸಿದರು.
ತಾಲೂಕಿನ ದಿಬ್ಬೂರಹಳ್ಳಿಯ ವೆಂಕಟೇಶ್ವರ ಪ್ರೌಢ ಶಾಲೆಯಲ್ಲಿ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ವಿದ್ಯಾಭ್ಯಾಸದ ಜೊತೆಗೆ ಆಧ್ಯಾತ್ಮಿಕ ಮೌಲ್ಯ, ಉತ್ತಮ ಸಮಾಜ ಕಟ್ಟುವ ಆಶಾಭಾವನೆಗಳೊಂದಿಗೆ ಶಾಲೆಯನ್ನು ಆದಿಚುಂಚನಗಿರಿ ಮಠದ ಸುಪರ್ದಿಗೆ ನೀಡಲು ಶಾಲಾ ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ಹೇಳಿದರು.
ಜೂ.7ರಂದು ಮಂಗಳವಾರ ಬೆಳಗ್ಗೆ 10 ಗಂಟೆಗೆ ವೆಂಕಟೇಶ್ವರ ಪ್ರೌಢಶಾಲೆ ಆವರಣದಲ್ಲಿ ಹಸ್ತಾಂತರ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಶಾಲೆಯ ಹಳೆ ವಿದ್ಯಾರ್ಥಿಗಳು, ಸಮುದಾಯದವರು ಭಾಗವಹಿಸಿ ಶ್ರೀಗಳ ಆಶೀರ್ವಾದ ಪಡೆದು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಈ ವೇಳೆ ಗ್ರಾಪಂ ಉಪಾಧ್ಯಕ್ಷ ಡಿ.ಜಿ.ರಾಮಚಂದ್ರ, ಭೂ ಅಭಿವೃದ್ಧಿ ಬ್ಯಾಂಕ್‌ನ ನಿರ್ದೇಶಕ ಡಿ.ಸಿ.ರಾಮಚಂದ್ರ, ಗ್ರಾಪಂ ಸದಸ್ಯ ಡಿ.ಪಿ.ನಾಗರಾಜ್, ಮಾಜಿ ಸದಸ್ಯ ಪ್ರಸನ್ನ, ಶ್ರೀರಂಗಪ್ಪ, ವಿಜಯಕುಮಾರ್, ತಲಕಾಯಲಬೆಟ್ಟ ಅಶ್ವತ್ಥರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.