ಶಿಡ್ಲಘಟ್ಟ: ತಾಲೂಕಿನ ತಿಮ್ಮನಾಯಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಯಪ್ಪನಹಳ್ಳಿಯಲ್ಲಿ ಸುಮಾರು ಮೂರು ನಾಲ್ಕು ಕಡೆ ಏಳೆಂಟು ಮೈನಾ ಹಕ್ಕಿಗಳು ನಿಗೂಢವಾಗಿ ಸಾವನ್ನಪ್ಪಿದ್ದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಸಮೀಪದಲ್ಲಿ ಯಾವುದೇ ವಿದ್ಯುತ್ ತಂತಿಗಳಿಲ್ಲ, ಹಕ್ಕಿಗಳನ್ನು ಬೇಟೆಯಾಡಿರುವ ಕುರುಹುಗಳಾಗಲೀ ಇಲ್ಲ. ಅಕಸ್ಮಾತ್ ಯಾವುದಾದರೂ ವೈರಸ್ ರೋಗದಿಂದ ಇವು ಮೃತಪಟ್ಟಿವೆಯಾ, ಇವುಗಳಿಗೆ ವೈರಸ್ ತಗುಲಿದ್ದರೆ, ಅದು ಮನುಷ್ಯರಿಗೆ ಹರಡಬಹುದಾ ಎಂಬುದನ್ನು ತಜ್ಞರು ಸ್ಪಷ್ಟಪಡಿಸಬೇಕಿದೆ ಕೇವಲ ಮೈನಾ ಹಕ್ಕಿಗಳೇ ಏಕೆ ಸಾಯುತ್ತಿವೆ ಎಂಬುದನ್ನು ತಿಳಿಯಬೇಕಿದೆ.
ರಾಯಪ್ಪನಹಳ್ಳಿಯಲ್ಲಿ ಗ್ರಾಮದ ಸತೀಶ್‍ರೆಡ್ಡಿ ಅವರು ಈ ಹಕ್ಕಿಗಳು ಸತ್ತಿರುವುದನ್ನು ಕಂಡು ಒಂದೆರಡು ಕಡೆ ಮಣ್ಣು ಮುಚ್ಚಿದ್ದಾರೆ. ಅವರು ಈ ಹಕ್ಕಿಗಳ ನಿಗೂಢ ಸಾವಿನ ಬಗ್ಗೆ ಆತಂಕ ವ್ಯಕ್ತಪಡಿಸಿರುವುದಲ್ಲದೆ, ಕಳೆದ ಒಂದೆರಡು ತಿಂಗಳಿನಿಂದ ಈ ಭಾಗದಲ್ಲಿ ಶೇ 80 ರಷ್ಟು ಕಾಗೆಗಳು ಕಣ್ಮರೆಯಾಗಿವೆ ಎಂಬ ಮತ್ತೊಂದು ಆತಂಕದ ಸಂಗತಿಯನ್ನು ತಿಳಿಸಿದ್ದಾರೆ.
ಇದನ್ನೂ ಓದಿ:ರಾಜ್ಯ ಕುರಿಗಾಹಿಗಳ ನಿಯೋಗದಿಂದ ಸಚಿವ ಈಶ್ವರಪ್ಪ ಭೇಟಿ
ಈ ಬಗ್ಗೆ ಪಶುವೈದ್ಯಕೀಯ ಸಹಾಯಕ ನಿರ್ದೇಶಕ ಡಾ.ಬಿ.ಕೆ.ರಮೇಶ್ ಮಾತನಾಡಿ, ಹಕ್ಕಿಗಳು ಮೃತಪಟ್ಟಿರುವ ಚಿತ್ರಗಳನ್ನು ಗಮನಿಸಿದಾಗ ಅವು ತೋಟಗಳ ಪಕ್ಕದಲ್ಲಿ ಸತ್ತಿವೆ. ಬಹುಶಃ ಕೀಟನಾಶಕಗಳ ಸೇವನೆಯಿಂದ ಸತ್ತಿರಬಹುದು. ವೈರಲ್ ಇನ್‍ಫ್ಲುಯೆನ್ಜಾ ಖಾಯಿಲೆಯಿಂದಲೂ ಸತ್ತಿರಬಹುದು. ಈ ವೈರಲ್ ಖಾಯಿಲೆ ಮನುಷ್ಯರಿಗೆ ಹರಡುವುದಿಲ್ಲ ಹೆಬ್ಬಾಳದ ಬಳಿ ಇರುವ ಪ್ರಾಣಿ ಆರೋಗ್ಯ ಮತ್ತು ಜೈವಿಕ ಸಂಸ್ಥೆಗೆ ನಾಳೆ ಮೂರು ಮೃತಪಟ್ಟಿರುವ ಹಕ್ಕಿಗಳನ್ನು ಕಳಿಸಿ ಅಲ್ಲಿಂದ ವರದಿಯನ್ನು ಪಡೆಯಲಾಗುವುದು ಎಂದರು.
ಕಣ್ಮರೆಯಾಗಿರುವ ಕಾಗೆಗಳ ಬಗ್ಗೆಯೂ ಇಲಾಖೆಯ ವೈದ್ಯರು ಸ್ಥಳೀಯರೊಂದಿಗೆ ಸಮಲೋಚನೆ ನಡೆಸಿ ಮಾಹಿತಿ ಪಡೆಯಲಿದ್ದಾರೆ ಪಕ್ಷಿಗಳು ಮೃತಪಟ್ಟಿರುವ ವಿಚಾರದಿಂದ ಯಾರು ಆತಂಕಗೊಳ್ಳಬೇಕಾಗಿಲ್ಲ ಯಾವ ಕಾರಣಕ್ಕೆ ಪಕ್ಷಿಗಳು ಸಾವನ್ನಪ್ಪುತ್ತಿವೆ ಎಂದು ಪ್ರಯೋಗಾಲಯದ ವರದಿಯಿಂದ ಬಹಿರಂಗವಾಗಲಿದೆ ಎಂದರು.