ಇಸ್ಲಾಮಾಬಾದ್: ಪಾಕಿಸ್ತಾನದ ವಾಯುವ್ಯ ಪ್ರಾಂತ್ಯದ ಖೈಬರ್ ಪುಖ್ತುಂಖ್ವಾದಲ್ಲಿ ಕದನ ವಿರಾಮದ ಹೊರತಾಗಿಯೂ ಖುರ್ರಂ ಬುಡಕಟ್ಟು ಸಮುದಾಯದ ಭುಗಿಲೆದ್ದ ಹಿಂ*ಸಾಚಾರ ತೀವ್ರ ಸ್ವರೂಪ ಪಡೆದಿದ್ದು, ಸಾವನ್ನಪ್ಪಿದವರ ಸಂಖ್ಯೆ 124ಕ್ಕೆ ಏರಿಕೆಯಾಗಿದೆ.
ಕಳೆದ 10 ದಿನಗಳಿಂದ ಶಿಯಾ, ಸುನ್ನಿ ಸಮುದಾಯದ ನಡುವಿನ ಗುಂಡಿನ ಕಾಳಗ ಮುಂದುವರಿದಿದ್ದು, ಹಿಂಸಾಚಾರದಲ್ಲಿ 170ಕ್ಕೂ ಅಧಿಕ ಜನರು ಗಾಯಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಹಿಂಸಾಚಾರ ಪೀಡಿತ ಪ್ರದೇಶಕ್ಕೆ ಮುಖ್ಯಮಂತ್ರಿ ಅಲಿ ಅಮೀನ್ ಗಂಡಾಪುರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಬೇಕೆಂದು ಪ್ರಾಂತೀಯ ಗವರ್ನರ್ ಫೈಸಲ್ ಕರೀಂ ಮನವಿ ಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ.
ನವೆಂಬರ್ 22ರಂದು ಅಲಿಜೈ ಮತ್ತು ಬಗಾನ್ ಬುಡಕಟ್ಟುಗಳ ನಡುವೆ ಘರ್ಷಣೆ ಆರಂಭವಾಗಿತ್ತು. ನಂತರ ಪರಾಚಿನರ್ ಸಮೀಪ ಪ್ರಯಾಣಿಕರ ಬೆಂಗಾವಲು ವಾಹನದ ಮೇಲೆ ದಾಳಿ ನಡೆಸಿದ್ದು, ಸುಮಾರು 47 ಜನರು ಸಾವಿಗೀಡಾಗಿದ್ದರು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಮೃತರ ಸಂಖ್ಯೆ 57ಕ್ಕೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.