Advertisement

Politics: ಅಶೋಕ್‌ ಸಮಿತಿ ಪ್ರವಾಸ ತಂಡದಲ್ಲಿ ಶೆಟ್ಟರ್‌, ಸವದಿ?

11:58 PM Oct 31, 2023 | Team Udayavani |

ಬೆಂಗಳೂರು: ಕಾಂಗ್ರೆಸ್‌ ಶಾಸಕರ ದುಬಾೖ ಪ್ರವಾಸದ ಬಗ್ಗೆ ರಾಜ್ಯಾದ್ಯಂತ ಭಾರೀ ಚರ್ಚೆಯಾಗುತ್ತಿರುವುದರ ಮಧ್ಯೆಯೇ ಆರ್‌. ಅಶೋಕ್‌ ಅಧ್ಯಕ್ಷತೆಯಲ್ಲಿನ ವಿಧಾನ ಮಂಡಲದ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ನ. 2ರಂದು ಶಿಲ್ಲಾಂಗ್‌ ಹಾಗೂ ಕಾಶ್ಮೀರಕ್ಕೆ ಅಧ್ಯಯನ ಪ್ರವಾಸ ಹೊರಡಲಿದೆ. ಅಶೋಕ್‌ ಅಧ್ಯಕ್ಷತೆಯ ತಂಡದಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ್‌, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕೂಡಾ ಪ್ರಯಾಣಿಸುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.

Advertisement

ಆಪರೇಷನ್‌ ಹಸ್ತ, ಆಪರೇಷನ್‌ ಕಮಲದ ಬಗ್ಗೆ ಈಗ ಭಾರೀ ಚರ್ಚೆಯಾಗುತ್ತಿದೆ. ಯಾರಿಗೆ, ಯಾರು ಬಲೆ ಬೀಸುತ್ತಾರೆಂಬುದೇ ಗುಟ್ಟಾಗಿರುವಾಗ ಈ ಪ್ರವಾಸದ ಬಗ್ಗೆಯೂ ರಾಜಕೀಯ ಪಕ್ಷಗಳ ನಾಯಕರು ಹಾಗೂ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸುವಂತಾಗಿದೆ.

ಸಮಿತಿಯ ಮೂಲಗಳ ಪ್ರಕಾರ, ಇದೊಂದು ರಾಜಕೀಯ ರಹಿತ ಪ್ರವಾಸ. ಶಾಸನಬದ್ಧವಾಗಿಯೇ ಅಧ್ಯಯನ ಪ್ರವಾಸ ನಡೆಸುವುದಕ್ಕೆ ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಉಭಯ ಸದನದ ಸದಸ್ಯರು ತಯಾರಿ ನಡೆಸಿದ್ದಾರೆ. ಈ ಹಿಂದೆ ಶಾಸಕರಿಗೆ ವಿದೇಶ ಪ್ರವಾಸದ ಅವಕಾಶವಿತ್ತು. ಬರದ ಹಿನ್ನೆಲೆಯಲ್ಲಿ ಅದಕ್ಕೆ ಬ್ರೇಕ್‌ ಹಾಕಲಾಗಿದೆ. ಆದರೆ ಅನ್ಯರಾಜ್ಯ ಪ್ರವಾಸ ನಡೆಸಬಹುದಾಗಿದೆ. ನವೆಂಬರ್‌ ತಿಂಗಳಲ್ಲಿ ಪ್ರವಾಸ ನಡೆಸಲೇಬೇಕು. ಇಲ್ಲವಾದರೆ ಡಿಸೆಂಬರ್‌ನಲ್ಲಿ ಬೆಳಗಾವಿ ಅಧಿವೇಶನ ನಡೆಯುತ್ತದೆ. ಆ ಬಳಿಕ ಎಲ್ಲ ರಾಜಕೀಯ ಪಕ್ಷಗಳು ಲೋಕಸಭಾ ಚುನಾವಣ ತಯಾರಿಯಲ್ಲಿ ತೊಡಗಿಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ನವೆಂಬರ್‌ ತಿಂಗಳಲ್ಲೇ ಪ್ರವಾಸಕ್ಕೆ ಸ್ಪೀಕರ್‌ ಒಪ್ಪಿಗೆ ನೀಡಿದ್ದಾರೆ.

ಕುತೂಹಲವೇಕೆ?
ಸಂಪುಟದಲ್ಲಿ ಸ್ಥಾನ ಪಡೆಯುವಲ್ಲಿ ವಿಫ‌ಲರಾದ ದೇಶಪಾಂಡೆ, ರಾಯರೆಡ್ಡಿ, ಹ್ಯಾರೀಸ್‌, ಎಚ್‌. ಸಿ. ಬಾಲಕೃಷ್ಣ, ಬಿ.ಕೆ. ಹರಿಪ್ರಸಾದ್‌, ರಿಜ್ವಾನ್‌ ಅರ್ಷದ್‌ ಒಂದು ಕಡೆಯಾದರೆ, ಬಿಜೆಪಿಯಿಂದ ಕಾಂಗ್ರೆಸ್‌ಗೆ ವಲಸೆ ಬಂದ ಶೆಟ್ಟರ್‌ ಹಾಗೂ ಸವದಿ ಇನ್ನೊಂದೆಡೆಯಲ್ಲಿದ್ದಾರೆ. ಬಿಜೆಪಿ ಬಿಟ್ಟು ಬಂದರೂ ಕಾಂಗ್ರೆಸ್‌ ಸಂಸ್ಕೃತಿ ಹಾಗೂ ರಾಜಕೀಯ ಪಟ್ಟುಗಳು ಇವರಿಬ್ಬರಿಗೆ ಇನ್ನೂ ಕರಗತವಾಗಿಲ್ಲ.

ಇವರಿಬ್ಬರನ್ನೂ ಡಿ.ಕೆ. ಶಿವಕುಮಾರ್‌ ಬಣದ ಸದಸ್ಯರು ಎಂದೇ ಪರಿಗಣಿಸಲಾಗಿದ್ದು, ಬೆಳಗಾವಿ ರಾಜ ಕಾರಣದಲ್ಲಿ ಸವದಿ ಅವಗಣಿಸಲ್ಪಟ್ಟಿದ್ದಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಪ್ರವಾಸದಲ್ಲಿರುವ ಬಿಜೆಪಿ ಶಾಸಕರು ಶೆಟ್ಟರ್‌ ಹಾಗೂ ಸವದಿಗೆ ಆತ್ಮೀಯರಾಗಿದ್ದಾರೆ.

Advertisement

ಯಾರ್ಯಾರು ಭಾಗಿ?
ಸಾರ್ವಜನಿಕ ಲೆಕ್ಕ ಪತ್ರಿ ಸಮಿತಿ ಅಧ್ಯಕ್ಷರಾದ ಆರ್‌. ಅಶೋಕ್‌ ನೇತೃತ್ವದ ಪ್ರವಾಸ ತಂಡದಲ್ಲಿ ಕಾಂಗ್ರೆಸ್‌ನ ಆರ್‌.ವಿ. ದೇಶಪಾಂಡೆ, ಎನ್‌.ವೈ. ಗೋಪಾಲಕೃಷ್ಣ, ಬಸವರಾಜ ರಾಯರೆಡ್ಡಿ, ಎಚ್‌.ವೈ. ಮೇಟಿ, ಎಚ್‌.ಸಿ. ಬಾಲಕೃಷ್ಣ, ಎಸ್‌.ಆರ್‌. ಶ್ರೀನಿವಾಸ, ಲಕ್ಷ್ಮಣ ಸವದಿ, ಎನ್‌.ಎ. ಹ್ಯಾರೀಸ್‌, ರಿಜ್ವಾನ್‌ ಅರ್ಷದ್‌, ರಾಘವೇಂದ್ರ ಹಿಟ್ನಾಳ್‌ ಇದ್ದಾರೆ. ಜೆಡಿಎಸ್‌ನಿಂದ ಜಿ.ಟಿ. ದೇವೇಗೌಡ, ಬಿಜೆಪಿಯ ವಿ. ಸುನಿಲ್‌ ಕುಮಾರ, ಸಿ.ಸಿ. ಪಾಟೀಲ್‌, ಎಸ್‌.ಆರ್‌. ವಿಶ್ವನಾಥ್‌ ಇದ್ದಾರೆ. ಪರಿಷತ್‌ ಸದಸ್ಯರಾದ ಜಗದೀಶ್‌ ಶೆಟ್ಟರ್‌, ಬಿ.ಕೆ. ಹರಿಪ್ರಸಾದ್‌, ಶಶೀಲ್‌ ಜಿ.ನಮೋಶಿ, ಟಿ.ಎ. ಸರವಣ, ಪ್ರತಾಪ್‌ ಸಿಂಹ ನಾಯಕ್‌ ಕೂಡಾ ಈ ಪ್ರವಾಸದಲ್ಲಿ ಭಾಗಿಯಾಗುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next