Advertisement

ಕಂಬನಿ ಒರೆಸುವ ಕೈಗಳಿಗಾಗಿ ಆಕೆ ಕಾಯುತ್ತಿದ್ದಾಳೆ…

12:08 AM Nov 08, 2020 | sudhir |

ನನಗೆ ನೂರೆಂಟು ಕನಸುಗಳಿದ್ದವು. ಆದರೆ ಒಂದೂ ನನಸಾಗಲಿಲ್ಲ. ಆ ಮನೆಯಲ್ಲೇ ಇದ್ದರೆ ಹುಚ್ಚು ಹಿಡಿಯೋದು ಗ್ಯಾರಂಟಿ ಅನಿಸಿದ ಅನಂತರ ನಾನೇ ಮುಂದಾಗಿ ಡೈವೋರ್ಸ್‌ಗೆ ಅರ್ಜಿ ಹಾಕಿದೆ.

Advertisement

ನನಗಂತೂ ಈ ಬದುಕಿನ ಬಗ್ಗೇನೇ ಅಸಹನೆ ಶುರುವಾಗಿದೆ. ಬರೀ ಮೂವತ್ತು ವರ್ಷಕ್ಕೆ ನಾನು ಕಾಣಬಾರ¨ªೆಲ್ಲ ಕಂಡೆ. ಹೆಜ್ಜೆ ಹೆಜ್ಜೆಗೂ ಅಪಮಾನ ಎದುರಿಸಿದೆ. ಒಂದು ಬಾರಿಯಂತೂ ದೌರ್ಜನ್ಯಕ್ಕೂ ಗುರಿಯಾದೆ. ಇಷ್ಟು ದಿನಗಳಲ್ಲಿ ನನ್ನ ಹಿಂದೆ, ಮುಂದೆ, ಅತ್ತ-ಇತ್ತ ಸುಳಿದಾಡಿ ಹೋದ ಗಂಡಸರಿಗೆ ಲೆಕ್ಕವಿಲ್ಲ. ಅವರಲ್ಲಿ ನಾನು ಹುಡುಕಿದ್ದು ಸ್ನೇಹವಷ್ಟೇ ತುಂಬಿದ ಒಂದು ಹಿಡಿ ಪ್ರೀತಿ. ಆದರೆ, ಹೆಚ್ಚಿನವರಲ್ಲಿ ನನಗೆ ಕಾಣಿಸಿದ್ದು ಆಸೆಯಷ್ಟೇ ತುಂಬಿದ್ದ ಕಾಮಕಂಗಳ ಪ್ರೀತಿ. ಅದನ್ನೆಲ್ಲ ನೆನಪು ಮಾಡಿಕೊಂಡ್ರೆ ನನ್ನ ಬಗ್ಗೆ, ನನ್ನ ಸೌಂದರ್ಯದ ಬಗ್ಗೆ ಅಸಹ್ಯ ಆಗುತ್ತೆ. ಥೂ, ನಂದೂ ಒಂದು ಜನ್ಮವಾ ಅನಿಸುತ್ತೆ. ಕೆಟ್ಟ ಮಾತು, ಕೆಟ್ಟ ನೋಟ ಹಾಗೂ ಕೊಳಕು ಮನಸ್ಸಿನ ಜನರ ಮಧ್ಯೆ ಬದುಕುವುದಕ್ಕಿಂತ ಸತ್ತುಹೋದ್ರೇ ಒಳ್ಳೆಯದು ಅನಿಸುತ್ತೆ. ಆತ್ಮಹತ್ಯೆ ಮಾಡಿಕೊಂಡು ಬಿಡ್ಲಾ ಅಂತ ಒಂದೆರಡು ಬಾರಿ ಯೋಚಿಸೆª. ಆದ್ರೆ ಧೈರ್ಯ ಬರಲಿಲ್ಲ. ಹಂಗಾಗಿ, ಬದುಕಿದೀನಿ ಎನ್ನುತ್ತಾ ನಿಟ್ಟುಸಿರುಬಿಟ್ಟಳು ಗೀತಾ.

ತೀರಾ ಆಕಸ್ಮಿಕವಾಗಿ ಒಂದು ಕಾರ್ಯಕ್ರಮದಲ್ಲಿ ಪರಿಚಯ ವಾದವಳು ಗೀತಾ. ಅವಳದು ಮಧುಗಿರಿ ಸಮೀಪದ ಒಂದು ಹಳ್ಳಿ. ಬೆಂಗಳೂರಲ್ಲಿ ನೌಕರಿಗಿದ್ದಳು. ಅವಳಿಗೆ ಹಾಡಲು ಬರುತ್ತಿತ್ತು. ಭರತನಾಟ್ಯ ಮಾತ್ರವಲ್ಲ, ಡಿಸ್ಕೋ ಡ್ಯಾನ್ಸ್ ಗೆ ಹೆಜ್ಜೆ ಹಾಕಲೂ ತಿಳಿದಿತ್ತು. ನಾಟಕಗಳಲ್ಲಿ ಅಭಿನಯಿಸಿ ಗೊತ್ತಿತ್ತು. ಕಾರ್ಯಕ್ರಮದ ನಿರೂಪಣೆ ಮಾಡಿದ ಅನುಭವವಿತ್ತು. ಇಂಥ ಗೀತಾಳ ನಗೆಯ ಹಿಂದೆ ಸಂಕಟದ ಕಥೆಯಿದೆ ಎಂದು ಗೊತ್ತೇ ಇರಲಿಲ್ಲ. ಗೆಳೆ ತನದ ತಂತು ಗಟ್ಟಿಯಾಗುತ್ತಾ ಹೋದಂತೆ, ಅದೊಂದು ದಿನ ಆ ಕಣ್ಣೀರ ಭಾವಗೀತೆಯನ್ನು ನನ್ನೆದುರು ತೆರೆದಿಟ್ಟಿದ್ದಳು. ಆ ಕಥೆ ಹೀಗೆ:

“ಗೀತಾಳ ತಾಯಿ ಪ್ರಾಥಮಿಕ ಶಾಲೆಯೊಂದರಲ್ಲಿ ಶಿಕ್ಷಕಿ. ಅವರಿಗೆ ಮೂರು ಮಕ್ಕಳು. ಎರಡು ಹೆಣ್ಣು, ಒಂದು ಗಂಡು. ಹೆಂಡತಿಯೇ ನೌಕರಿಗೆ ಹೋಗುತ್ತಾಳಲ್ಲ ಎಂದುಕೊಂಡು ಆಕೆಯ ಪತಿರಾಯ ಆರಾಮಾಗಿ ಮನೇಲಿ ಉಳಿದುಬಿಟ್ಟ. ಗಂಡ ದುಡಿಯುವುದಿಲ್ಲ, ಹೀಗಿರುವಾಗ, ಬರುವ ಚಿಕ್ಕ ಸಂಬಳದಲ್ಲಿ ಇಬ್ಬರು ಹೆಣ್ಣು ಮಕ್ಕಳ ಮದುವೆ ಮಾಡುವುದು ಹೇಗೆ? ಎಂಬ ಚಿಂತೆ ಗೀತಾಳ ತಾಯಿಗೆ ಶುರುವಾಯಿತು. ಆಕೆ ಮನದ ಸಂಕಟವನ್ನೆಲ್ಲ ತನ್ನದೇ ಶಾಲೆಯ ಹೆಡ್‌ಮೇಡಂ ಬಳಿ ಹೇಳಿಕೊಂಡರು. ತುಂಬ ಶ್ರೀಮಂತ ಕುಟುಂಬ ದಿಂದ ಬಂದಿದ್ದ ಆ ಹೆಡ್‌ಮೇಡಂ ತತ್‌ಕ್ಷಣ ಹೇಳಿದರಂತೆ- “”ನನಗೆ ಇರೋನು ಒಬ್ಬನೇ ಮಗ. ಎರಡು ವರ್ಷದಲ್ಲಿ ಅವನಿಗೆ ಮದುವೆ ಮಾಡೋಣ ಅಂತಿದೀನಿ. ಮೂರು ತಲೆಮಾರಿಗೆ ಆಗುವಷ್ಟು ಆಸ್ತಿ ಇದೆ. ಅವನು ಮನೇಲಿದ್ದುಕೊಂಡು ಆಳುಗಳಿಂದ ಕೆಲಸ ಮಾಡಿಸಿದ್ರೆ ಸಾಕು. ನಿಮ್ಮ ಮಗಳನ್ನು ನಮ್ಮ ಮನೆಗೆ ಸೊಸೆಯಾಗಿ ಕಳಿಸ್ತೀರಾ?”
ಮುಂದಿನದೆಲ್ಲ ಥೇಟ್‌ ಸಿನೆಮಾದಲ್ಲಿ ಆಗುತ್ತಲ್ಲ; ಅಷ್ಟೇ ಬೇಗ ಬೇಗ ನಡೆದುಹೋಯಿತು. ಪಿಯುಸಿ ಮುಗೀತಿದ್ದ ಹಾಗೆಯೇ ಶ್ರೀಮಂತ ಕುಟುಂಬದ ಆ ಹುಡುಗನೊಂದಿಗೆ ಗೀತಾಳ ಮದುವೆ ಆಗಿಹೋಯಿತು. “ಕೊಟ್ಟ ಮನೆಗೆ ಕೆಟ್ಟ ಹೆಸರು ತರಬೇಡ, ಗಂಡನಿಗೆ ಅಥವಾ ಅತ್ತೆ-ಮಾವಂದಿರಿಗೆ ತಿರುಗಿ ಮಾತಾಡಬೇಡ’ ಎಂದೆಲ್ಲ ಬುದ್ಧಿ ಹೇಳಿ ಗೀತಾಳನ್ನು ಗಂಡನ ಮನೆಗೆ ಕಳುಹಿಸಿಕೊಟ್ಟಿದ್ದಾಯ್ತು. ಹೊಸಮನೆಗೆ ಹೋದಾಗಲೇ ಎದೆಯೊಡೆಯುವಂಥ ಸುದ್ದಿ ಗೊತ್ತಾಯಿತು. ಏನೆಂದರೆ, ಗೀತಾಳ ಗಂಡನಿಗೆ ಊರಲ್ಲಿ ಐದಾರು ಮಂದಿ ಗೆಳತಿಯರಿದ್ದರು. ಈ ಸಂಬಂಧಗಳ ಕುರಿತು ಅವನನ್ನು ಹೆತ್ತವರು ಕೇಳುತ್ತಲೇ ಇರಲಿಲ್ಲ. ಆದರೆ, ಮೂರು ತಿಂಗಳ ಅನಂತರ, ಅದೂ ಗೀತಾಳ ಒತ್ತಾಯದ ಮೇಲೆ, ಅದೊಂದು ದಿನ ಆ ತಾಯಿ ಧೈರ್ಯ ಮಾಡಿ ಮಗನನ್ನು ಪ್ರಶ್ನಿಸಿದಳು. ಕುಡಿಯೋದನ್ನೂ ಕಲಿತಿದ್ದೀಯಂತೆ… ಅನ್ನುತ್ತಾ ಸಿಟ್ಟಿನಿಂದ ಒಂದೇಟು ಹಾಕಿದಳು.

ಅಷ್ಟೆ: ಮರುದಿನದಿಂದ ಗೀತಾಳ ಗಂಡ ಮನೆಗೆ ಬರುವುದನ್ನೇ ಬಿಟ್ಟನಂತೆ. ಊರ ತುಂಬಾ ಪ್ರೇಯಸಿಯರಿದ್ದರಲ್ಲ; ಅವರ ಮನೇಲಿ ಊಟ, ಅಲ್ಲಿಯೇ ನಿದ್ರೆ! ಮಗ ಕೈತಪ್ಪಿ ಹೋಗುತ್ತಿದ್ದಾನೆ ಎಂಬುದು ಗ್ಯಾರಂಟಿಯಾದಾಗ ಗೀತಾಳ ಅತ್ತೆ-ಮಾವ ಈ ಹುಡುಗಿಯ ವಿರುದ್ಧವೇ ತಿರುಗಿಬಿದ್ದರಂತೆ. ಗಂಡನನ್ನು ನೀನು ಹೇಗಾದ್ರೂ ಮಾಡಿ ಸೆಳೆಯಬೇಕು, ಹಾಗೆ ಮಾಡದೇ ಇದ್ದುದಕ್ಕೇ ನಮ್ಮ ಮಗ ಹಾಳಾಗಿಹೋದ ಎಂದೆಲ್ಲ ಹಂಗಿಸಿದರಂತೆ. ಇದನ್ನು ನೆನಪಿಸಿಕೊಂಡು ಗೀತಾ ಹೇಳುತ್ತಿದ್ದಳು: “”ಮದುವೆ, ಗಂಡ-ಹೆಂಡ್ತಿ ಅಂದ್ರೆ ನನಗೆ ನೂರೆಂಟು ಕನಸುಗಳಿದ್ದವು. ಆದರೆ ಒಂದೂ ನನಸಾಗಲಿಲ್ಲ. ಆ ಮನೆಯಲ್ಲೇ ಇದ್ದರೆ ಹುಚ್ಚು ಹಿಡಿಯೋದು ಗ್ಯಾರಂಟಿ ಅನಿಸಿದ ನಂತರ ನಾನೇ ಮುಂದಾಗಿ ಡೈವೋರ್ಸ್‌ಗೆ ಅರ್ಜಿ ಹಾಕಿದೆ. ಅತ್ತೆ-ಮಾವ ಎರಡನೇ ಮಾತಾಡಲಿಲ್ಲ. ನನ್ನ ತಂಗಿ ಆಗಲೇ ಮದುವೆಗೆ ಬಂದಿದ್ದಳು. ನನ್ನಿಂದ ಅವಳ ಭವಿಷ್ಯ ಹಾಳಾಗುತ್ತೆ ಎಂದೆಲ್ಲ ಬಂಧುಗಳು ಮಾತಾಡಿದರು. ಅಂಥ ಸೀನ್‌ ನೋಡೋದು ಬೇಡ ಅಂದುಕೊಂಡು ಸೀದಾ ಬೆಂಗಳೂರಿಗೆ ಬಂದುಬಿಟ್ಟೆ…”

Advertisement

ಒಡೆದುಹೋದ ಮನಸಿನೊಂದಿಗೆ ಅದೇ ಮೊದಲ ಬಾರಿ ಬೆಂಗಳೂರಿಗೆ ಬಂದ ಗೀತಾ, ಮೊದಲು ಗಾರ್ಮೆಂಟ್ಸ್‌ಗೆ ಸೇರಿದಳು. ಅಲ್ಲಿನ ಮ್ಯಾನೇಜರ್‌ಗೆ ತನ್ನ ಸಂಕಟದ ಕಥೆ ಹೇಳಿಕೊಂಡಳು. ಅವನು, ಸಂತೈಸಿದ. ಆರು ತಿಂಗಳಲ್ಲಿ ಒಂದಿಷ್ಟು ಸಂಬಳವನ್ನೂ ಹೆಚ್ಚು ಮಾಡಿಸಿದ. ಈ ಹುಡುಗಿ ಅದನ್ನು ಉಪಕಾರ ಎಂದು ತಿಳಿದಳು. ಆದರೆ, ಆ ಮ್ಯಾನೇಜರ್‌ನ ಲೆಕ್ಕಾಚಾರವೇ ಬೇರೆಯಿತ್ತು. ಒಂಟಿ ಹುಡುಗಿ, ಅಸಹಾಯಕಿ ಎಂಬುದು ಗ್ಯಾರಂಟಿಯಾದ ಮೇಲೆ ಅದೊಂದು ದಿನ ಪಿಕ್ನಿಕ್‌ ನೆಪದಲ್ಲಿ ದೂರದ ಊರಿಗೆ ಕರೆದೊಯ್ದು ಈ ಹುಡುಗಿಯನ್ನು ಕೆಡಿಸಿಬಿಟ್ಟ!

ಯಾರೊಂದಿಗಾದರೂ ವಿಷಯ ಹೇಳಿದ್ರೆ ನಿಂಗೇ ತೊಂದರೆ ಎಂದು ಹೆದರಿಸಿದ. ಈ ಪಾಪದ ಹುಡುಗಿ, ಮರ್ಯಾದೆಗೆ
ಹೆದರಿ ಮೌನವಾದಳು. ಅಲ್ಲಿಯೇ ಉಳಿದರೆ, ಅವನ ಕಾಟ ಮುಂದುವರಿಯಬಹುದು ಅನ್ನಿಸಿದಾಗ ಅದೊಂದು ದಿನ
ದಿಢೀರನೆ ಕೆಲಸ ಬಿಟ್ಟಳು.

ಹೊಟ್ಟೆಪಾಡಿನ ಸಲುವಾಗಿಯಾದರೂ ಗೀತಾ ಯಾವು ದಾದರೊಂದು ಕೆಲಸ ಮಾಡಲೇಬೇಕಿತ್ತು. ಹೇಗಿದ್ದರೂ ಕಾಲೇಜಿನಲ್ಲಿದ್ದಾಗ ಹಾಡಿ, ನಾಟಕ ಮಾಡಿ ಅಭ್ಯಾಸವಾಗಿತ್ತಲ್ಲ; ಅದೇ ಧೈರ್ಯದ ಮೇಲೆ ರಂಗಭೂಮಿಯತ್ತ ಮುಖ ಮಾಡಿದಳು. ಅದೃಷ್ಟಕ್ಕೆ ಒಂದೆರಡು ಸೀರಿಯಲ್‌ಗ‌ಳಲ್ಲಿ ಅವಕಾಶಗಳೂ ಸಿಕ್ಕವು. ಕಿರುತೆರೆ ಕಲಾವಿದೆ ಅನ್ನಿಸಿಕೊಂಡ ಮೇಲೆ ಕೇಳಬೇಕೆ? ಗೀತಾಳಿಗೆ ಹಲವು ಮಂದಿಯ ಗೆಳೆತನ ಲಭಿಸಿತು. ಇವನ್ನೆಲ್ಲ ಕಂಡು ಗೀತಾ ಖುಷಿಯಾದಳು. ಸೌಂದರ್ಯ ಕಾಪಾಡಿಕೊಳ್ಳಲು ಜಿಮ್‌ಗೆ ಹೋಗಿ ಬಂದಳು. ಜಗತ್ತು ನಾನು ಅಂದುಕೊಂಡಷ್ಟು ಕೆಟ್ಟದಾಗಿ ಖಂಡಿತ ಇಲ್ಲ ಎಂದುಕೊಂಡಳು. ಎಲ್ಲರೊಂದಿಗೂ ಮುಕ್ತವಾಗಿ ಮಾತಾಡಲು ಶುರುವಿಟ್ಟಳು. ಈ ಮಧ್ಯೆ, ತೀರಾ ಕ್ಲೋಸ್‌ ಎಂಬಂತಿದ್ದ ಒಂದಿಬ್ಬರು ನಟರು ಹಾಗೂ ನಿರ್ದೇಶಕರಿಗೆ ತನ್ನ ಬದುಕಿನ ಕರುಣಕಥೆ ಹೇಳಿ ಕೊಂಡಳು. ಅವರುಗಳಿಂದ ಒಂದು ಬೊಗಸೆಯಷ್ಟು ಸೋದರ ಬಾಂಧವ್ಯವನ್ನು, ಎರಡೇ ಎರಡು ಧೈರ್ಯದ ಮಾತುಗಳನ್ನು ಈಕೆ ನಿರೀಕ್ಷಿಸಿದ್ದಳು. ಆದರೆ, ಆಗಿದ್ದೇ ಬೇರೆ: ಒಬ್ಬ ನಟ, ನಾಚಿಕೆ ಬಿಟ್ಟು ಕೇಳಿದನಂತೆ: “ಮೇಡಂ, ನಿಮಗೆ ಸೌಂದರ್ಯವಿದೆ. ಯೌವನವಿದೆ. ಎಷ್ಟು ದಿನ ಅಂತ ಒಬ್ಬರೇ ಇರ್ತೀರಿ? ಗರ್ಲ್ಫ್ರೆಂಡ್‌ ಥರಾ ನನ್ನ ಜತೆ ಇರಬಾರದೆ?’

ಹೀಗೆ ಹೇಳಿದನಲ್ಲ; ಆ ನಟ ತೆರೆಯ ಮೇಲೆ ಘನಗಂಭೀರ ಪಾತ್ರಗಳಿಂದ ಖ್ಯಾತಿ ಪಡೆದಿದ್ದ! ಅಂಥವನು ಹೀಗೆ ಮಾತಾಡಿದ್ದು ಕೇಳಿ, ಈ ಹುಡುಗಿ ಬಿಕ್ಕಿ ಬಿಕ್ಕಿ ಅತ್ತಳು. ತನ್ನ ಮನದ ಸಂಕಟವನ್ನೆಲ್ಲ ನಿರ್ದೇಶಕನೊಬ್ಬನ ಬಳಿ ಹೇಳಿಕೊಂಡಳು. ಅವನು ಸಮಾಧಾನ ಹೇಳಿದ. ರಕ್ಷಣೆಗೆ ನಾನಿತೇìನೆ, ಹೆದರಬೇಡ ಎಂದ. ಹೀಗೇ ಆರು ತಿಂಗಳು ಕಳೆಯಿತು. ಆ ವೇಳೆಗೆ ಈ ಹುಡುಗಿ, ಪರ್ಸನಲ್‌ ಎಂಬುದು ಏನೇನೂ ಇಲ್ಲ ಎಂಬಂತೆ ಅವನೊಂದಿಗೆ ಎಲ್ಲವನ್ನೂ ಹೇಳಿಕೊಂಡಿದ್ದಳು. ಎಂಟನೇ ತಿಂಗಳು ಆ ಪುಣ್ಯಾತ್ಮ ಹೇಳಿದನಂತೆ: “ಸೋದರಿ ಅನ್ನೋ ದೃಷ್ಟೀಲಿ ನಿಮ್ಮನ್ನು ನೋಡಲು ಸಾಧ್ಯವಾಗ್ತಾ ಇಲ್ಲ. ನಂಗೆ ಈಗಾಗ್ಲೆ ಮದುವೆ ಆಗಿರೋದ್ರಿಂದ ನಿಮ್ಮನ್ನು ಮದುವೆ ಆಗೋಕೆ ಆಗಲ್ಲ. ಆದರೆ ಜತೆಗೇ ಬದುಕಬಲ್ಲೇ. ಎಲ್ಲಾದ್ರೂ ಒಂದು ದೊಡ್ಡ ಮನೆ ನೋಡಿ, ಅದರ ಅಡ್ವಾನ್ಸು, ಬಾಡಿಗೆ ಎರಡನ್ನೂ ನಾನು ಕೊಡ್ತೇನೆ. ವಾರಕ್ಕೆರಡು ಸಲ ಬಂದುಹೋಗ್ತೀನೆ. ನಿಮ್ಮನ್ನು ಗೊಂಬೆ, ಗೊಂಬೆ ಥರಾ ನೋಡಿಕೊಳ್ತೇನೆ…’

ನೆರಳಾಗಲು ಒಪ್ಪಿದ್ದವನೇ ನೆಲೆ ತಪ್ಪಿಸುವ ಮಾತಾಡಿದಾಗ ಗೀತಾ ಕಂಪಿಸಿದ್ದಳು. ಈ ಸೌಂದರ್ಯಕ್ಕೆ ಬೆಂಕಿ ಬೀಳಲಿ ಎಂದುಕೊಂಡೇ ಮೇಕಪ್‌ ಅಳಿಸಿ ಎದ್ದುಬಂದಿದ್ದಳು. ಎಷ್ಟು ಒಳ್ಳೆಯವಳಾಗಿ ಬದುಕಿ ದರೂ ಗೀತಾಳಿಗೆ ಆಕೆ ಬಯಸಿದ ಬದುಕು ಸಿಗಲೇ ಇಲ್ಲ. ಹಿಂದೆ ಮುಂದೆ ಸುಳಿದವರೆಲ್ಲ, ಈ ಹುಡುಗಿಯ ಮೈಮಾಟದ ಮೇಲೆ ಒಂದು ಕಣ್ಣಿಟ್ಟೇ ಮಾತಿಗೆ ನಿಲ್ಲುತ್ತಿದ್ದರು. ಅದನ್ನೆಲ್ಲ ಕಂಡ ಅನಂತರವೇ ಗೀತಾ ನೋವಿನಿಂದ ಹೇಳುತ್ತಿದ್ದಾಳೆ: “ನಾನು ಹೆತ್ತ ಮನೆಗೆ ಬೆಳಕಾಗಲಿಲ್ಲ. ಗಂಡನ ಮನೆ ನನಗೆ ನೆರಳಾಗಲಿಲ್ಲ. ಈ ಸೌಂದ ರ್ಯವೂ ನನಗೊಂದು ನೆಲೆ ಕಲ್ಪಿಸಿಕೊಡಲಿಲ್ಲ. ಅಂದಮೇಲೆ, ಈ ಬದುಕಿಗೊಂದು ಅರ್ಥವಿದೆಯಾ? ಹೀಗೆ ನರಳುತ್ತಾ ಬದುಕುವು ದಕ್ಕಿಂತ ಆತ್ಮಹತ್ಯೆ ಮಾಡಿಕೊಳ್ಳೋದೇ ಒಳ್ಳೆಯದಲ್ವಾ?”

ಬದುಕಲ್ಲಿ ತುಂಬ ನೊಂದವಳು ಗೀತಾ. ಆಕೆ ತಾಯಿ ಮನಸಿನ ಹುಡುಗಿ. ಒಂದು ಹಿಡಿ ಪ್ರೀತಿ ತೋರುವ, ಸಾಂತ್ವನದ ಮಾತುಗಳಿಂದ ತನ್ನ ಕಂಬನಿ ಒರೆಸುವ ಹುಡುಗನಿಗಾಗಿ ಕಾದಿದ್ದಾಳೆ. ಅಂಥ ಸಂಯಮದ ಹುಡುಗರು ಯಾರಾದ್ರೂ ಇದ್ದರೆ ಹೇಳ್ತೀರಾ?

– ಎ.ಆರ್‌.ಮಣಿಕಾಂತ್‌

Advertisement

Udayavani is now on Telegram. Click here to join our channel and stay updated with the latest news.

Next