ಊರೇ ನಿನ್ನನ್ನು ನೋಡುತ್ತಿದ್ದರೂ, ನೆಲ ನೋಡುತ್ತಾ ತಲೆ ತಗ್ಗಿಸಿಕೊಂಡು ಗೆಳತಿಯರ ಜೊತೆ ಸಾಗುತ್ತಿದ್ದ ನೀನು, ಹುಚ್ಚ ಸಿನಿಮಾದ ಹೀರೋಯಿನ್ ಅನ್ನು ನೆನಪಿಸುತ್ತಿದ್ದೆ. ಆ ನೆನಪು ಇಂದು ಮತ್ತೆ ಮನದಂಚಲ್ಲಿ ಮೂಡಿ ಆರ್ತನಾದ ಮಾಡಿದಂತಾಯ್ತು.
ಮೊನ್ನೆ ದಾವಣಗೆರೆಯ ಕಾಲೇಜಿನ ಎದುರಲ್ಲಿ ಬೈಕ್‌ನಲ್ಲಿ ಹೋಗುವಾಗ, ಅದೇ ತಿಳಿಬೂದಿ ಬಣ್ಣದ ಲಾಂಗ್ ಚೂಡಿಯ ಯುನಿಫಾರ್ಮ್ ತೊಟ್ಟ ಹುಡುಗಿಯೊಬ್ಬಳು ಚಕ್ಕನೆ ಸ್ಕೂಟಿಯಲ್ಲಿ ಹಾದು ಹೋದಳು. ನನ್ನ ಬೈಕ್ ತಂತಾನೇ ನಿಂತುಬಿಟ್ಟಿತು. ಮನಸಿಗೆ ಎಂಥದೋ ಹುರುಪು. ಎದೆಯಲ್ಲೇನೋ ಕಳವಳ. ಟೀಂಕ್ ಟೀಂಕ್ ಎಂದು ಹಾರ್ನ್ ಮಾಡಿ ಹೋಗಿಬಿಟ್ಟವಳು ನೀನೇ ಇರಬೇಕು ಅಂತ ಮನಸ್ಸು ಅನುಮಾನಿಸತೊಡಗಿತು. ನಾನು, ಕಣ್ಣು ಮಿಟುಕಿಸದೇ ಸ್ಕೂಟಿ ಹೋದ ದಾರಿಯನ್ನೇ ದಿಟ್ಟಿಸಿ ನೋಡುತ್ತಾ ನಿಂತುಬಿಟ್ಟೆ. ನಿಜಕ್ಕೂ ಒಮ್ಮೆಲೆ ಎದೆಯೊಳಗೆ ಕಂಬಳಿಹುಳು ಹರಿದಾಡಿದಂತಾಯಿತು.
ಹಿಂದೆ ಕುಳಿತಿದ್ದ ಗೆಳೆಯ, ಲೋ! ಅವಳು ನಿನ್ ಹುಡುಗಿ ಅಲ್ಲಪ್ಪಾ. ಅವಳೀಗ ಎಲ್ಲಿದ್ದಾಳ್ಳೋ? ಅಷ್ಟಕ್ಕೂ ಅವಳಾÂಕೆ ಇಲ್ಲಿಗೆ ಯುನಿಫಾರ್ಮ್ ಹಾಕೊಂಡ್ ಬರ್ತಾಳೆ. ಅವಳಿನ್ನೂ ಇಲ್ಲೇ ಓದಿ¤ದಾಳ? ನಮ್ಮ ಜೊತೇನೇ ಓದಿ, ಪಾಸಾಗಿ ಹೋಗಿದ್ದಾಳೆ ಅನ್ನೋದನ್ನ ಮರೀಬೇಡ ಆಯ್ತಾ…’ ಎಂದಾಗಲೇ ಹಳೆ ಕಂಬಳಿ ಹುಳು ಸೆಳೆತದ ಬಲೆಯಿಂದ ಹೊರಬಂದಿದ್ದು.
ಇಂದಿಗೂ ಆ ಕಾಲೇಜಿನಲ್ಲಿ ಅದೇ ಯುನಿಫಾರ್ಮ್ ಇದೆ. ಅಂದು ಉದ್ದ ಜಡೆ ಬಿಟ್ಟು, ಹೆಗಲಿಗೊಂದು ಬ್ಯಾಗ್ ತೊಟ್ಟು, ಹೈ ಹೀಲ್ಡ್ ನಡಿಗೆಯಲ್ಲಿ, ಊರೇ ನಿನ್ನನ್ನು ನೋಡುತ್ತಿದ್ದರೂ, ನೆಲ ನೋಡುತ್ತಾ ತಲೆ ತಗ್ಗಿಸಿಕೊಂಡು ಗೆಳತಿಯರ ಜೊತೆ ಸಾಗುತ್ತಿದ್ದ ನೀನು, ಹುಚ್ಚ ಸಿನಿಮಾದ ಹೀರೋಯಿನ್ ಅನ್ನು ನೆನಪಿಸುತ್ತಿದ್ದೆ. ಆ ನೆನಪು ಇಂದು ಮತ್ತೆ ಮನದಂಚಲ್ಲಿ ಮೂಡಿ ಆರ್ತನಾದ ಮಾಡಿದಂತಾಯ್ತು. ನಿನ್ನ ಚೆಲುವಿಗೆ ಮರುಳಾಗಿ ನಾನಂತೂ ನನ್ನ ಸಂಗಾತಿ ಇವಳೇ ಎನ್ನುವಷ್ಟು ಫಿದಾ ಆಗಿದ್ದೆ.
ಚೂಡಿದಾರ ಧರಿಸಿ, ಬಿಳಿ ವೇಲ್ ಹೊದ್ದು, ಒಂದೆರಡು ಪುಸ್ತಕ ಎದೆಗೊತ್ತಿಕೊಂಡು ನೀನು ಎದುರಾದರೆ ಸಾಕು! ಮೈಯಲ್ಲಿ ಅದೇನೋ ರೋಮಾಂಚನ. ನೋಡಿಯೂ ನೋಡದಂತೆ ತಿರುಗಿ ಮುಗುಳ್ನಕ್ಕರಂತೂ, ಇಡೀ ಕಾಲೇಜು ನಂದೇ ಎನ್ನುವಷ್ಟು ಸಡಗರ, ಸಂಭ್ರಮ. ಒಂದು ದಿನ ನೀನು ಕಾಲೇಜಿಗೆ ಬಂದಿಲ್ಲವೆಂದರೆ ಅದೇನೋ ಕಳೆದುಕೊಂಡಂತೆ, ಹೃದಯ ಬಡಿಯುವುದನ್ನೇ ನಿಲ್ಲಿಸಿದಂತೆ ಅನ್ನಿಸುತ್ತಿತ್ತು. ಮಾರನೆದಿನ ನಿನ್ನನ್ನು ಮತ್ತೆ ನೋಡುವವರೆಗೂ ಜೀವಕ್ಕೆ ಸಮಾಧಾನ ಇರುತ್ತಿರಲಿಲ್ಲ.
ಇಂದು ನೀನಿಲ್ಲ; ಎಲ್ಲಿರುವೆಯೋ ತಿಳಿದಿಲ್ಲ! ಆದರೂ ಆ ದಾರಿ, ಆ ನಡೆ, ಆ ನೈಜತೆಯ ಕುರುಹು ಎಲ್ಲವೂ ಹಾಗೆಯೇ ಇದೆ. ಗರಿಗೆದರಿದ ಮನದ ಭಾವನೆಗಳು ನಿನ್ನನ್ನು ಆಗಾಗ ನೆನಪಿಸಿಕೊಳ್ಳುತ್ತಿರುತ್ತವೆ. ನಿನಗೆ ನನ್ನ ನೆನಪಿದೆಯೋ, ಇಲ್ಲವೋ ಎನ್ನುವುದೇ ಇವತ್ತಿಗೂ ಯಕ್ಷಪ್ರಶ್ನೆಯಾಗಿದೆ. ಆದರೂ, ಮೊನ್ನೆ ಆ ಸ್ಕೂಟಿ ಸುಂದರಿ ನಿನ್ನ ನೆನಪಿನ ಓಕುಳಿಯನ್ನು ಮತ್ತೂಮ್ಮೆ ಮನದ ಅಂಗಳದಲ್ಲಿ ಚೆಲ್ಲಿ ಹೋಗಿದ್ದಾಳೆ. ಇನ್ನೆಷ್ಟು ದಿನ ಇದೇ ಕನವರಿಕೆಯೋ?
ಲಕ್ಷ್ಮೀಕಾಂತ್ ಎಲ್., ತುಮಕೂರು