ಹಿರಿಯಡ್ಕ: ಹಿರಿಯಡಕ ಗಾಂಧಿ ಮೈದಾನದಲ್ಲಿ ಶೇಖರಿಸಿದ ಮರಳನ್ನು ಕೂಡಲೇ ತೆರವುಗೊಳಿಸಿ ಸಾರ್ವಜನಿಕರಿಗೆ ಉಪಯೋಗವಾಗಲು ಯೋಗ್ಯವಾಗಿ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾಡಳಿತದ ವತಿಯಿಂದ ಪೂರೈಸಲು ಹಿರಿಯಡಕದ ಸಾರ್ವಜನಿಕ ಆಟದ ಮೈದಾನದಲ್ಲಿ ಮರಳನ್ನು ಸುಮಾರು 7 ತಿಂಗಳುಗಳಿಂದ ಶೇಖರಿಸಲಿಡಲಾಗಿತ್ತು. ಸಾರ್ವಜನಿಕರಿಗೆ ಮುಖ್ಯವಾಗಿ ಸ್ಥಳೀಯ ಶಾಲಾ ಮಕ್ಕಳಿಗೆ, ಮುಂಜಾನೆ-ಸಂಜೆ ನಡೆದಾಡಲು ಹೋಗುವ ಹಿರಿಯ ನಾಗರಿಕರಿಗೆ, ಆಟವಾಡುವ ಯುವಕರಿಗೆ ಇದರಿಂದ ತೊಂದರೆಯಾಗಿರುವ ಹಿನ್ನಲೆಯಲ್ಲಿ ಸಾರ್ವಜನಿಕರು ಈ ಹಿಂದೆ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದು, ಅವರು ಡಿ. 31ರೊಳಗೆ ಮರಳನ್ನು ತೆರವುಗೊಳಿಸುವುದಾಗಿ ಭರವಸೆ ಕೊಟ್ಟಿದ್ದರು.
ಜಿಲ್ಲಾಧಿಕಾರಿಯವರ ಆದೇಶದಂತೆ ನಗರಸಭೆಯ ಪೌರಾಯುಕ್ತರು ಡಿ. 31ರ ಒಳಗೆ ಮರಳನ್ನು ತೆರವುಗೊಳಿಸಿ ಮೈದಾನವನ್ನು ಸಾರ್ವಜನಿಕರ ಉಪಯೋಗಕ್ಕೆ ಬಿಟ್ಟುಕೊಡುವುದಾಗಿ ಲಿಖೀತ ಭರವಸೆ ನೀಡಿದ್ದರೂ ಈ ಎಲ್ಲ ಭರವಸೆಗಳನ್ನು ಪೂರೈಸದೇ ಇರುವುದರಿಂದ ಮಾ.18ರಂದು ಸಾರ್ವಜನಿಕರು ಪುನಃ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಈ ಕೂಡಲೇ ಮೈದಾನವನ್ನು ತೆರವುಗೊಳಿಸುವಂತೆ ಒತ್ತಾಯಿಸಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಯವರು ಉಡುಪಿ ನಗರಸಭೆಯ ಪೌರಾಯುಕ್ತರಿಗೆ ಕರೆಮಾಡಿ ಮರಳನ್ನು ಕೂಡಲೇ ತೆರವು ಮಾಡುವಂತೆ ಸೂಚಿಸಿದ್ದರಲ್ಲದೇ ಗಾಂಧಿ ಮೈದಾನ, ಅಲಿಯೇ ಇರುವ ಬಾಲವನವನ್ನು ಅಭಿವೃದ್ಧಿಗೊಳಿಸುವುದಾಗಿ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಹಿರಿಯಡಕ ಶರತ್, ರಾಘವೇಂದ್ರ ಜಿ., ಪ್ರಸನ್ನ ಶೆಟ್ಟಿ, ನರಸಿಂಹ ಕಾಮತ್, ಸಂತೋಷ್ ಶೆಟ್ಟಿ, ಯಶ್ವವಂತ್ ಬಿ.ಉಪಸ್ಥಿತರಿದ್ದರು.