ಕಾಸರಗೋಡು: ಸಮಾಜವನ್ನು ತಿದ್ದುವಲ್ಲಿ ಯಕ್ಷಗಾನ ಸರ್ವೋತ್ತಮ ಮಾಧ್ಯಮ ಎಂದು ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅಭಿಪ್ರಾಯಪಟ್ಟರು. ಪೇಟೆ ಶ್ರೀ ವೆಂಕಟ್ರಮಣ ದೇವಾಲಯ ದಲ್ಲಿ ಶ್ರೀ ವೆಂಕಟ್ರಮಣ ಸ್ವಾಮಿ ಕೃಪಾಶ್ರಿತ ಯಕ್ಷಗಾನ ಅಧ್ಯಯನ ಕೇಂದ್ರ ಮತ್ತು ಶೇಣಿ ರಂಗ ಜಂಗಮ ಟ್ರಸ್ಟ್ ಕಾಸರಗೋಡು ಜಂಟಿ ಆಶ್ರಯದಲ್ಲಿ ಜರಗಿದ ಶೇಣಿ ಶತ ನಮನ ಮತ್ತು ಅಧ್ಯಯನ ಕೇಂದ್ರದ ತೃತೀಯ ವಾರ್ಷಿಕೋತ್ಸವ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಸರಳ ಮತ್ತು ಸುಂದರ ಕಲೆ ಯಕ್ಷಗಾನ ತನ್ನ ಸಂದೇಶವನ್ನು ಜನತೆಗೆ ಸುಲಭವಾಗಿ ತಲುಪಿಸುತ್ತದೆ. ಈ ಕಲೆಯನ್ನು ಪ್ರಚುರ ಪಡಿಸುವವರು ಮತ್ತು ಹೊಸ ಪೀಳಿಗೆಯನ್ನು ಈ ಕ್ಷೇತ್ರಕ್ಕೆ ಕರೆತರುವವರು ಸಂಸ್ಕೃತಿ ಕಟ್ಟಿಕೊಡುವ ರಾಯಭಾರಿಗಳು. ಶ್ರೀ ವೆಂಕಟ್ರಮಣ ಸ್ವಾಮಿ ಕೃಪಾಶ್ರಿತ ಯಕ್ಷಗಾನ ಅಧ್ಯಯನ ಕೇಂದ್ರ ಮತ್ತು ಶೇಣಿ ರಂಗ ಜಂಗಮ ಈ ನಿಟ್ಟಿನಲ್ಲಿ ನಾಡಿಗೆ ಮಾದರಿ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಧಾರ್ಮಿಕ ಮುಂದಾಳು, ತಂತ್ರಿವರ್ಯ ಬ್ರಹ್ಮಶ್ರೀ ರವೀಶ ತಂತ್ರಿ ಅವರು ಆಶೀ ರ್ವಾದ ನೀಡಿ ಯಕ್ಷಗಾನದ ಬಗೆಗಿನ ಆಸಕ್ತಿಯ ಮೂಲಕ ಸಮಾಜದ ಅಶಾಂತಿಯನ್ನು ಹೋಗಲಾಡಿಸಬಹುದು. ಧಾರ್ಮಿಕ ಜಾಗೃತಿ, ಸಾಮಾಜಿಕ ಏಕತೆಗೆ ಈ ಕಲೆ ನೀಡುವ ಕೊಡುಗೆ ಬಹಳ ದೊಡ್ಡದು ಎಂದರು.
ಕೊಲ್ಲಂಗಾನದ ಬ್ರಹ್ಮಶ್ರೀ ತಂತ್ರಿ ಗಣಾಧಿರಾಜ ಉಪಾಧ್ಯಾಯ, ಭಾಗವತ ರವಿ ಶಂಕರ ಮಧೂರು, ಕೂಡ್ಲು ಮೇಳದ ವ್ಯವಸ್ಥಾಪಕ ರವಿರಾಜ ಅಡಿಗ ಕೂಡ್ಲು, ಉದ್ಯಮಿ ರಾಮ ಪ್ರಸಾದ್, ಯಕ್ಷಗಾನದ ಗುರು ರಾಕೇಶ್ ರೈ ಅಡ್ಕ, ಸಮಾರಂಭದ ರೂವಾರಿ ಕೆ.ಎನ್.ವೆಂಕಟ್ರಮಣ ಹೊಳ್ಳ ಮೊದಲಾದವರು ಉಪಸ್ಥಿತರಿದ್ದರು.
ಯಕ್ಷಗಾನ ಕಲಾವಿದ ಶೇಣಿ ವೇಣು ಗೋಪಾಲ ಭಟ್ ಶೇಣಿ ಶತಕ ನಮನ ಸಲ್ಲಿಸಿದರು. ಕೆ.ಎನ್. ರಾಮಕೃಷ್ಣ ಹೊಳ್ಳ ಸ್ವಾಗತಿಸಿದರು. ಪತ್ರಕರ್ತ ವೀಜಿ ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು. ಕಿಶೋರ್ ಕುಮಾರ್ ವಂದಿಸಿದರು.