Advertisement

ಆಶ್ರಯ ಮನೆ, ಉದ್ಯೋಗ, ರಸ್ತೆ ಸಮಸ್ಯೆ

04:08 PM Dec 18, 2018 | Team Udayavani |

ದಾವಣಗೆರೆ: ಆಶ್ರಯ ಮನೆ…, ಉದ್ಯೋಗಾವಕಾಶ…, ಆಪರೇಷನ್‌ ವೆಚ್ಚಕ್ಕೆ ನೆರವು…, ರಸ್ತೆ ಸಮಸ್ಯೆ ನಿವಾರಣೆ…, ಇವು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ ಅಧ್ಯಕ್ಷತೆಯಲ್ಲಿ ಜನಸ್ಪಂದನಾ ಕಾರ್ಯಕ್ರಮದಲ್ಲಿ ಸಲ್ಲಿಕೆಯಾದ ಕೆಲವು ಅಹವಾಲುಗಳು.

Advertisement

ದಾವಣಗೆರೆಯ ಜಾಲಿನಗರದ 2ನೇ ಮೇನ್‌ ನಿವಾಸಿ ಪ್ಯಾರಿಜಾನ್‌, ಸಮೀಮ್‌ಬಾನು, ಆಜಾದ್‌ ನಗರದ 1ನೇ ಮುಖ್ಯ ರಸ್ತೆ 4ನೇ ಕ್ರಾಸ್‌ನ ರೇಶ್ಮಾ ಬಾನು, ಸಲ್ಮಾಬಾನು, ಹೀನಾ ಕೌಸರ್‌, ಮಿಲ್ಲತ್‌ ಸ್ಕೂಲ್‌ ಸಮೀಪದ ನಿವಾಸಿ ಶಾಬಾನಾ, ವೆಂಕಾಭೋವಿ ಕಾಲೋನಿಯ ರೇಷ್ಮಾ… ಇತರರು ಆಶ್ರಯ ಮನೆ ಮಂಜೂರಾತಿ ಮೂಲಕ ಅನುಕೂಲ ಮಾಡಿಕೊಡಲು ಮನವಿ ಮಾಡಿದರು.

ಆಶ್ರಯ ಮನೆ ಕೋರಿ ಅರ್ಜಿ ಸಲ್ಲಿಸಲಿಕ್ಕೆ ಬಂದವರಿಗೆ ಏಕಕಾಲದಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ಮಾಡಿಕೊಟ್ಟ ಅಪರ ಜಿಲ್ಲಾಧಿಕಾರಿ, ಸ್ವೀಕರಿಸಿದ ಎಲ್ಲಾ ಅರ್ಜಿಗಳನ್ನು ಮಹಾನಗರ ಪಾಲಿಕೆ ಆಯುಕ್ತರಿಗೆ ಕಳಿಸುವಂತೆ ಸಿಬ್ಬಂದಿಗೆ ಸೂಚಿಸಿದರು.

ದಾವಣಗೆರೆಯ ಇ.ವಿ. ಪೂಜಾ, ಕೆ.ಸಿ. ಶಿವನಗೌಡ, ಎಚ್‌. ಮಂಜುನಾಥ್‌ ಇತರರು ಯಾವುದಾದರೂ ಉದ್ಯೋಗ ಸೌಲಭ್ಯ ಒದಗಿಸುವ ಮೂಲಕ ಜೀವನ ನಿರ್ವಹಣೆಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಜಿಲ್ಲಾಡಳಿತಕ್ಕೆ ನೇರವಾಗಿ ಉದ್ಯೋಗವಕಾಶ ಮಾಡಿಕೊಡುವ ಅಧಿಕಾರ ಇಲ್ಲ. ಯಾವುದಾದರೂ ಇಲಾಖೆಯಲ್ಲಿ ಅರ್ಜಿ ಆಹ್ವಾನಿಸಿದರೆ ಅರ್ಜಿ ಸಲ್ಲಿಸಿ ಎಂದು ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ ಸಲಹೆ ನೀಡಿದರು.
 
ಹರಪನಹಳ್ಳಿ ತಾಲೂಕಿನ ದುಗ್ಗಾವತಿಯ ಪುಟ್ಟಪ್ಪ ದೇಸಾಯಿ ಎಂಬುವರು ತಮಗೆ ಇರುವ 5 ಎಕರೆ 13 ಗುಂಟೆ ಜಮೀನನ್ನು ದಾಖಲೆಯಲ್ಲಿ 8 ಎಕರೆ 13 ಗುಂಟೆ ಎಂಬುದಾಗಿ ಅಧಿಕಾರಿಗಳು ನಮೂದಿಸಿದ್ದಾರೆ. ಅದರಿಂದ ಸಾಕಷ್ಟು ತೊಂದರೆ ಆಗುತ್ತಿದೆ. ದಾಖಲೆ ಸರಿಪಡಿಸಿಕೊಡುವಂತೆ ಅನೇಕ ಬಾರಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನ ಆಗುತ್ತಿಲ್ಲ ಎಂದು ಅಳಲು ತೋಡಿಕೊಂಡ ಅವರು, ಅಧಿಕಾರಿಗಳ ವಿರುದ್ಧ ಏಕ ವಚನದಲ್ಲೇ ಹರಿಹಾಯ್ದರು.

ಹೊನ್ನಾಳಿ ತಾಲೂಕಿನ ರಾಂಪುರ ಗ್ರಾಮದ ಪ್ರವೀಣ್‌ಕುಮಾರ್‌ ಎಂಬುವರು ಜಮೀನುಗಳಿಗೆ ರಸ್ತೆ ಮಾಡಿಕೊಡುವಂತೆ ಮನವಿ ಮಾಡಿದರು. ಹರಿಹರ ತಾಲೂಕಿನ ಗುತ್ತೂರು ಗ್ರಾಮದ ಎಸ್‌. ನಾಗರಾಜ್‌ ಎನ್ನುವರು, ರಾಜೀವ್‌ಗಾಂಧಿ ವಸತಿ ನಿಗದಮದಿಂದ ಗುತ್ತೂರು ಗ್ರಾಮಕ್ಕೆ ವಸತಿ ಯೋಜನೆಯ ಗುರಿ ನಿಗದಿ ಕಳಿಸಿಕೊಡಬೇಕು ಎಂದು ಕೋರಿದಾಗ ಅರ್ಜಿಯನ್ನು ಜಿಲ್ಲಾ ಪಂಚಾಯತ್‌ಗೆ ಕಳಿಸಿಕೊಡುವಂತೆ ಅಪರ ಜಿಲ್ಲಾಧಿಕಾರಿ ಸೂಚಿಸಿದರು. 

Advertisement

ಹೊನ್ನಾಳಿ ತಾಲೂಕಿನ ಕುಳಗಟ್ಟೆಯ ಎಚ್‌.ಡಿ. ಚಂದ್ರಪ್ಪ ಎಂಬುವರು, ಸಾಸ್ವೇಹಳ್ಳಿ ಟ್ರೇಡರ್ಸ್‌ನ ಸಂತೋಷ್‌ಕುಮಾರ್‌ ಎಂಬುವರು ಭತ್ತದ ಕಳಪೆ ಬೀಜ ನೀಡುವ ಮೂಲಕ ರೈತರಿಗೆ ಮೋಸ ಮಾಡಿದ್ದಾರೆ. ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಸಲ್ಲಿಸಿದರು.

ಭತ್ತದ ಕಳಪೆ ಬೀಜ ವಿತರಣೆ ಬಗ್ಗೆ ಗಮನಕ್ಕೆ ಬಂದಿದೆ. ವಿತರಿಸಿರುವ ಬೀಜವನ್ನು ಪರಿಶೀಲನೆಗೆ ಕಳಿಸಿಕೊಡಲಾಗಿದೆ. ವರದಿ ಬಂದ ನಂತರ ಸಂಬಂಧಿತರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದರು. 

ಹರಿಹರ ತಾಲೂಕಿನ ಗುಳೇದಹಳ್ಳಿಯ ಕೆ.ಎಸ್‌. ಚಂದ್ರಶೇಖರಪ್ಪ ಎಂಬುವರು, ಗ್ರಾಮದ ಸರ್ವೇ ನಂಬರ್‌ 32/2 ರಲ್ಲಿ 1 ಎಕರೆ 13 ಗುಂಟೆ ಜಮೀನು ದೇವರಬೆಳಕೆರೆ ಪಿಕಪ್‌ ಡ್ಯಾಂನ ಹಿನ್ನಿರಿನ ಜೌಗು ಪ್ರದೇಶದಲ್ಲಿ ಮುಳುಗಡೆಯಾಗಿದೆ. ನೇರ ಖರೀದಿ ಮೂಲಕ ಭೂ ಸ್ವಾಧೀನ ಮಾಡಿಸಿಕೊಡಬೇಕು ಎಂದು ಮನವಿ ಮಾಡಿದರು.

ಜಗಳೂರು ತಾಲೂಕಿನಿಂದ ಬಂದಿದ್ದ ಒಬ್ಟಾತ ತನ್ನ ಅಣ್ಣನಿಗೆ ಈಗಾಗಲೇ ಎರಡು ಬಾರಿ ಶಸ್ತ್ರಚಿಕಿತ್ಸೆ ಆಗಿದೆ. ಇನ್ನೊಂದು ಶಸ್ತ್ರಚಿಕಿತ್ಸೆ ಮಾಡಿಸಬೇಕು ಎಂದು ವೈದ್ಯರು ಹೇಳಿದ್ದಾರೆ. ಈಗಾಗಲೇ ಸಾಕಷ್ಟು ಹಣ ಖರ್ಚು ಮಾಡಿದ್ದೇವೆ. ಇನ್ನೊಂದು ಶಸ್ತ್ರಚಿಕಿತ್ಸೆಗೆ ನೆರವು ನೀಡಬೇಕು ಎಂದು ಮನವಿ ಮಾಡಿದರು. ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ|ಎಂ.ಎಸ್‌. ತ್ರಿಪುಲಾಂಬಗೆ ಸೂಚಿಸಿದರು. 

ನಗರಾಭಿವೃದ್ಧಿಕೋಶ ಯೋಜನಾ ನಿರ್ದೇಶಕಿ ಜಿ. ನಜ್ಮಾ, ದಾವಣಗೆರೆ ತಹಶೀಲ್ದಾರ್‌ ಜಿ. ಸಂತೋಷ್‌ ಕುಮಾರ್‌, ಹೀನಾ ಕೌಸರ್‌, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next