ಮಾಸ್ಕೋ/ಕೀವ್: ರಷ್ಯಾ ಮತ್ತು ಉಕ್ರೇನ್ ನಡುವಿನ ಸಮರ ತಾರಕಕ್ಕೇರಿದ್ದು, ಬುಧವಾರ (ಮಾರ್ಚ್ 02) ರಷ್ಯಾ ಸೇನಾ ಪಡೆ ಉಕ್ರೇನ್ ನ ಎರಡನೇ ಅತೀ ದೊಡ್ಡ ನಗರವಾದ ಖಾರ್ಕಿವ್ ಗೆ ಲಗ್ಗೆ ಇಟ್ಟಿರುವುದಾಗಿ ಬಿಬಿಸಿ ವರದಿ ಮಾಡಿದೆ.
ಇದನ್ನೂ ಓದಿ:ಉಕ್ರೇನ್ ಸಂಕಷ್ಟ: ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ವಿರುದ್ಧ ವ್ಯಾಪಕ ಆಕ್ರೋಶ
ರಷ್ಯಾ ಸೈನಿಕರು ಪ್ಯಾರಾಚೂಟ್ ಮೂಲಕ ಖಾರ್ಕಿವ್ ನಗರದೊಳಕ್ಕೆ ಪ್ರವೇಶಿಸಿದ್ದು, ರಷ್ಯಾ ಸೇನೆಯ ಬಾಂಬ್ ದಾಳಿಗೆ ಖಾರ್ಕಿವ್ ನಗರ ನಲುಗಿ ಹೋಗಿರುವುದಾಗಿ ವರದಿ ವಿವರಿಸಿದೆ. ಖಾರ್ಕಿವ್ ನಲ್ಲಿನ ಪ್ರಬಲ ಬಾಂಬ್ ದಾಳಿಯಲ್ಲಿ 21 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಪೊಲೀಸ್ ಕಟ್ಟಡವನ್ನು ಗುರಿಯಾಗಿರಿಸಿಕೊಂಡು ನಡೆಸಿದ ಮಿಸೈಲ್ ದಾಳಿಗೆ ಕಟ್ಟಡ ಹೊತ್ತಿ ಉರಿಯುತ್ತಿರುವ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ.
ಮಂಗಳವಾರ ರಷ್ಯಾ ಸೈನಿಕರು ಜನದಟ್ಟಣೆಯ ವಸತಿ ಪ್ರದೇಶದ ಮೇಲೆ ಬಾಂಬ್ ದಾಳಿ ನಡೆಸುವ ಮೂಲಕ ಜನರ ಮಾರಣಹೋಮ ನಡೆಸಿರುವುದಾಗಿ ವರದಿ ತಿಳಿಸಿದೆ. ಬಾಂಬ್ ದಾಳಿಯಿಂದ ದಿಕ್ಕೆಟ್ಟ ಜನರು ಮನೆ ಬಿಟ್ಟು ಓಡಿ ಹೋಗಿದ್ದು, ಜೀವ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿರುವುದಾಗಿ ವರದಿ ಹೇಳಿದೆ. ರಷ್ಯಾದ ಭೀಕರ ದಾಳಿಯಲ್ಲಿ ಉಕ್ರೇನ್ ನ ಸಾವಿರಾರು ಮಂದಿ ಸಾವನ್ನಪ್ಪಿದ್ದು, ಅಧಿಕೃತ ಅಂಕಿಅಂಶ ಇನ್ನಷ್ಟೇ ಲಭ್ಯವಾಗಬೇಕಾಗಿದೆ ಎಂದು ವರದಿ ತಿಳಿಸಿದೆ.
ಏತನ್ಮಧ್ಯೆ ಸಾವಿರಾರು ಮಂದಿ ನಿರಾಶ್ರಿತರು ಪೂರ್ವ ಹಂಗೇರಿಯ ಗ್ರಾಮದಲ್ಲಿ ಬೀಡುಬಿಟ್ಟಿರುವುದಾಗಿ ವರದಿ ವಿವರಿಸಿದೆ. ಮಹಿಳೆಯರು ತಮ್ಮ ಮಕ್ಕಳು, ತಂದೆ, ತಾಯಿ, ಸಹೋದರರನ್ನು ಬಿಟ್ಟು ರಷ್ಯಾದ ಭೀಕರ ಸಮರದ ವಿರುದ್ಧ ಪ್ರತಿರೋಧ ವ್ಯಕ್ತಪಡಿಸುತ್ತಿರುವುದಾಗಿ ಬಿಬಿಸಿ ವರದಿ ಮಾಡಿದೆ.
ಉಕ್ರೇನ್ ನ ಹೆರಿಗೆ ಆಸ್ಪತ್ರೆ ಮೇಲೆ ರಷ್ಯಾ ಸೇನೆ ವೈಮಾನಿಕ ದಾಳಿ ನಡೆಸಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, 16 ಮಂದಿ ಗಾಯಗೊಂಡಿದ್ದಾರೆ. ನಿಕೋಲೇವ್ ಪ್ರದೇಶದಲ್ಲಿ ರಷ್ಯಾದ ಬಾಂಬ್ ದಾಳಿಯಿಂದ ಇಡೀ ಪ್ರದೇಶ ದಟ್ಟವಾದ ಹೊಗೆಯಿಂದ ಆವೃತ್ತವಾಗಿದೆ ಎಂದು ವರದಿ ತಿಳಿಸಿದೆ.