ಮಾಸ್ಕೋ/ಕೀವ್: ರಷ್ಯಾ ಮತ್ತು ಉಕ್ರೇನ್ ನಡುವೆ ಪರಿಸ್ಥಿತಿ ಉದ್ವಿಗ್ನಗೊಂಡಿರುವಂತೆಯೇ, ಉಕ್ರೇನ್ ಕಡೆಯಿಂದ ತೂರಿಬಂದ ಶೆಲ್‌ವೊಂದು ತನ್ನ ಫೆಡರಲ್ ಭದ್ರತಾ ಸಂಸ್ಥೆ ಬಳಸುತ್ತಿರುವ ಗಡಿ ಶಿಬಿರವನ್ನು ನಾಶ ಮಾಡಿದೆ ಎಂದು ರಷ್ಯಾ ಆರೋಪಿಸಿದೆ. ಮತ್ತೊಂದೆಡೆ,ರಷ್ಯಾ ಪಡೆಯುವ ಉಕ್ರೇನ್‌ನ ಗಡಿಯನ್ನು ಸಮೀಪಿಸುತ್ತಿದ್ದು, ಪ್ರಸ್ತುತ 3 ಮೈಲುಗಳ ದೂರಕ್ಕೆ ತಲುಪಿದೆ.
ರಷ್ಯಾವು ದೊಡ್ಡಮಟ್ಟದಲ್ಲೇ ಆಕ್ರಮಣ ಮಾಡಲು ಯೋಜನೆ ರೂಪಿಸಿದೆ. ದಾಳಿಯ ಮೊದಲ ದಿನವೇ ಸಾವಿರಾರು ಮಂದಿಯನ್ನು ಕೊಲ್ಲುವ ಗುರಿ ಹಾಕಿಕೊಂಡಿದೆ ಎಂದು ಅಮೆರಿಕ ಹೇಳಿದೆ.
ಉಕ್ರೇನ್‌ನ ಉತ್ತರದ ಗಡಿಯಲ್ಲಿ ನಿಯೋಜಿಸಲಾಗಿರುವ ತನ್ನ ಸೇನಾಪಡೆಗಳನ್ನು ವಾಪಸ್ ಪಡೆಯುವುದಾಗಿ ರಷ್ಯಾ ಭಾನುವಾರ ಹೇಳಿತ್ತು. ಆದರೆ, ಈಗ ರಷ್ಯಾ ಯೂಟರ್ನ್ ಹೊಡೆಯುವ ಮೂಲಕ ಉಕ್ರೇನ್ ಮೇಲೆ ದಾಳಿ ನಡೆಸಲು ಸಜ್ಜಾಗಿರುವುದು ಸ್ಪಷ್ಟವಾಗಿದೆ ಎಂದೂ ಅಮೆರಿಕ ಹೇಳಿದೆ.
ಈ ಬೆಳವಣಿಗೆ ಬೆನ್ನಲ್ಲೇ ಆತಂಕಗೊಂಡಿರುವ ಉಕ್ರೇನ್ ರಾಜಧಾನಿ ಕೀವ್‌ನ ನಿವಾಸಿಗಳು ಸ್ವರ್ಣ ಗುಮ್ಮಟದ ಕ್ಯಾಥೆಡ್ರಲ್‌ಗೆ ಧಾವಿಸಿ, ಶಾಂತಿಗಾಗಿ ಪ್ರಾರ್ಥನೆಗಳನ್ನು ಆರಂಭಿಸಿದ್ದಾರೆ.
ಇನ್ನು, ಉಕ್ರೇನ್ ನಡೆಸಿದೆ ಎನ್ನಲಾದ ಶೆಲ್ ದಾಳಿಯಲ್ಲಿ ಯಾವುದೇ ಸಾವು ನೋವು ಉಂಟಾಗಿಲ್ಲ ಎಂದಿರುವ ರಷ್ಯಾ, ದಾಳಿ ಕುರಿತ ವಿಡಿಯೋವನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಒಂದು ಕೊಠಡಿಯಿರುವ ಸಣ್ಣ ಕಟ್ಟಡವು ಧರೆಗುರುಳಿರುವುದು ಮತ್ತು ರಷ್ಯಾದ ಧ್ವಜ ಕೆಳಕ್ಕೆ ಬಿದ್ದಿರುವ ದೃಶ್ಯಗಳಿವೆ. ಆದರೆ, ರಷ್ಯಾದ ಆರೋಪವನ್ನು ತಳ್ಳಿಹಾಕಿರುವ ಉಕ್ರೇನ್ ಸೇನೆ, ನಮ್ಮ ಕಡೆಯಿಂದ ಯಾವುದೇ ಪ್ರಚೋದನೆ ನೀಡಿಲ್ಲ ಎಂದು ಹೇಳಿದೆ.
ಪುಟಿನ್ ಜತೆ ಮಾತುಕತೆಗೆ ಒಪ್ಪಿದ ಬೈಡೆನ್
ಉಕ್ರೇನ್ ಬಿಕ್ಕಟ್ಟಿನ ಕುರಿತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ತಾತ್ವಿಕ ಮಾತುಕತೆ ನಡೆಸಲು ಕೊನೆಗೂ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಒಪ್ಪಿದ್ದಾರೆ. ಫ್ರಾನ್ಸ್‌ನ ಶಿಫಾರಸಿನ ಮೇರೆಗೆ ಈ ಮಾತುಕತೆಗೆ ಒಪ್ಪಲಾಗಿದೆ. ಆದರೆ, ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ನಡೆಸದಿದ್ದರೆ ಮಾತ್ರ ನಾವು ಮಾತುಕತೆಗೆ ರೆಡಿ ಎಂದು ಶ್ವೇತಭವನ ಹೇಳಿದೆ. ಅಲ್ಲದೇ, ಈ ಮಾತುಕತೆಯು ಯುರೋಪ್‌ನ ಭದ್ರತಾ ಬಿಕ್ಕಟ್ಟಿಗೆ ರಾಜತಾಂತ್ರಿಕ ಪರಿಹಾರ ಒದಗಿಸುವ ವಿಶ್ವಾಸವಿದೆ ಎಂದೂ ಶ್ವೇತಭವನ ಹೇಳಿದೆ.