Advertisement

ಚಿಪ್ಪು ಸುಡುವುದರಿಂದ ಕೃಷಿಗೆ ಕಂಟಕ, ಪರಿಸರಕ್ಕೆ ಧಕ್ಕೆ

05:53 PM Oct 16, 2021 | Team Udayavani |

ತಿಪಟೂರು: ತಾಲೂಕಾದ್ಯಂತ ವ್ಯಾಪಕವಾಗಿ ತೆಂಗಿನ ಚಿಪ್ಪುಗಳನ್ನು ಹಾಡುಹಗಲೇ ಕೃಷಿಕರಿಗೆ, ಸಾರ್ವಜನಿಕರಿಗೆ ತೊಂದರೆ ಆಗುವಂತೆ ಸುಡುತ್ತಿದ್ದು, ನಿರಂತರವಾಗಿ ಭುಗಿಲೇಳುತ್ತಿರುವ ದಟ್ಟ ಹೊಗೆಯಿಂದ ವಿಪರೀತ ತಾಪಮಾನ ಉಂಟಾಗುತ್ತಿದೆ.

Advertisement

ಪರಿಸರ ಇಲಾಖೆ ಪರವಾನಗಿ ಪಡೆಯದೆ ಅಕ್ರಮವಾಗಿ ಹಾಗೂ ಅನಧಿಕೃತವಾಗಿ ಸುಡುತ್ತಿರುವುದರಿಂದ ಕೃಷಿ, ತೋಟಗಾರಿಕೆ ಇಳುವರಿ ಮೇಲೆ ಪ್ರಭಾವ ಬೀರುತ್ತಿದ್ದು, ಪರಿಸರಕ್ಕೆ ಧಕ್ಕೆಯಾಗುತ್ತಿದ್ದರೂ ತಾಲೂಕು ಆಡಳಿತ ಕಣ್ಮುಚ್ಚಿ ಕುಳಿತಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ತಾಲೂಕಿನ ಅನೇಕ ಭಾಗಗಳಲ್ಲಿ ನೂರಾರು ಸಂಖ್ಯೆಯಲ್ಲಿ ಈ ದಂಧೆ ನಿರಂತರವಾಗಿ ನಡೆಯುತ್ತಿದ್ದರೂ, ಈ ಅಕ್ರಮ ದಂಧೆಗಳನ್ನು ತಡೆಗಟ್ಟಬೇಕಾದ ಕಂದಾಯ ಅಧಿಕಾರಿಗಳು ದೂರು ಬಂದವರ ವಿರುದ್ಧ ನೆಪಮಾತ್ರಕ್ಕೆ ನೋಟಿಸ್‌ ನೀಡಿ ಕೈ ತೊಳೆದುಕೊಳ್ಳುತ್ತಿರುವುದಲ್ಲದೆ, ಚಿಪ್ಪು ಸುಡುವ ಉದ್ಯಮಿಗಳ ಹಿತ ಕಾಯುವ ಮೂಲಕ ಅನ್ನದಾತನ ಬದುಕಿಗೆ ಕೊಡಲಿ ಪೆಟ್ಟು ನೀಡುತ್ತಿದ್ದಾರೆ.

ಈ ದಂಧೆ ನಡೆಸುತ್ತಿರುವರು ಕೃಷಿಗೆ ಯೋಗ್ಯವಾಗಿರುವ ಮತ್ತು ಬೆಳೆ ಬೆಳೆಯುವ ಬಯಲು ಪ್ರದೇಶದ ಜಮೀನುಗಳನ್ನೇ ಆಯ್ಕೆ ಮಾಡಿಕೊಂಡು(ಚಿಪ್ಪು ಸುಡಲು)ಬಾಡಿಗೆಗೆ ಪಡೆದು ತಾಲೂಕಾದ್ಯಂತ ನೂರಾರು ಕಡೆಗಳಲ್ಲಿ ಈ ದಂಧೆ ನಡೆಸುತ್ತಿದ್ದಾರೆ.

ಇದನ್ನೂ ಓದಿ;- ಹಲವು ಸ್ವಾತಂತ್ರ್ಯ ಹೋರಾಟಗಾರರನ್ನು ಮರೆಮಾಚಲಾಗಿದೆ, ಅವರಿಗೆ ನ್ಯಾಯ ಒದಗಿಸಬೇಕು; ಶಾ

Advertisement

ಪರಸರಕ್ಕೆ ತೀವ್ರ ಹಾನಿ: ಕೃಷಿ ಭೂಮಿಯಲ್ಲೇ ದೊಡ್ಡ ಗುಂಡಿಗಳನ್ನು ತೆಗೆದು ಲೋಡುಗಟ್ಟಲೆ ಕೊಬ್ಬರಿ ಚಿಪ್ಪು ಸುರಿದು ಬೆಂಕಿ ಹಚ್ಚುತ್ತಿದ್ದು, ಈ ಗುಂಡಿಯಿಂದ ಭುಗಿಲೇಳುವ ದಟ್ಟ ಹೊಗೆ ನಿರಂತರವಾಗಿ ಮೇಲೆ ಬಂದು ಕೃಷಿ ಭೂಮಿಯ ಸುತ್ತಮುತ್ತ ಒಂದು ಕಿಲೋಮೀಟರ್‌ ವಿಸ್ತಾರದಲ್ಲಿ ಹರಡಿಕೊಳ್ಳುತ್ತಿದೆ. ಹೀಗೆ ಹಬ್ಬಿದ ದಟ್ಟ ಹೊಗೆ ಗಾಳಿ ಬೀಸಿದಂತೆಲ್ಲ ರಸ್ತೆ, ಹೊಲ-ತೋಟಗಳಿಗೆಲ್ಲ ಬೆಳ್ಳಗೆ ಸುತ್ತಿಕೊಳ್ಳುತ್ತಿದೆ. ಈ ಗುಂಡಿಗಳಿಂದ ಅತೀಯಾದ ಬಿಸಿಯಿರುವ ದಟ್ಟ ಹೊಗೆ ಹೊಲ-ತೋಟಗಳಲ್ಲೇ ಯಥೇಚ್ಚವಾಗಿ ಹರಡಿ ಸುತ್ತಿಕೊಳ್ಳುವುದರಿಂದ ಗಿಡ ಮರಗಳು ಸುಟ್ಟ ರೋಗಬಂದಂತಾಗಿ ಕೃಷಿ ಮತ್ತು ಪರಸರಕ್ಕೆ ತೀವ್ರ ಹಾನಿಯಾಗುತ್ತಿದೆ.

ಬಿಸಿ ಹೊಗೆಯಿಂದ ರೈತ ಉಪಕಾರಿಗಳಾದ ಜೇನು ಮತ್ತಿತರೆ ಕೀಟಗಳು, ಪಕ್ಷಿ ಸಂಕುಲಗಳು ನಾಶವಾಗಿ ಹೊಲ-ತೋಟಗಳ ಬೆಳೆಗಳ ಇಳುವರಿ ವಿಪರೀತವಾಗಿ ಕಡಿಮೆಯಾಗಿರುವುದಲ್ಲದೆ, ತಾಪಮಾನಕ್ಕೆ ಖುಷ್ಕಿ ಬೆಳೆಗಳಾದ ರಾಗಿ, ತೊಗರಿ, ಜೋಳ ಸೇರಿದಂತೆ ತೆಂಗು, ಅಡಕೆ ಮತ್ತು ಬಾಳೆಯಂಥ ತೋಟಗಾರಿಕೆ ಬೆಳೆ ನಾನಾ ರೋಗರುಜಿನೆಗಳಿಗೆ ಈಡಾಗಿ ರೈತನಿಗೆ ತೀವ್ರ ಹೊಡೆತ ಬೀಳುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.

 ಸೂಕ್ತ ಕ್ರಮ ಜರುಗಿಸಿ: ವ್ಯವಸಾಯಕ್ಕೆಂದು ಬಳಕೆಯಲ್ಲಿರುವ ಪಂಪ್‌ಸಟ್‌ಗಳಿಂದ ಅಕ್ರಮವಾಗಿ ಈ ಉದ್ಯಮಕ್ಕೆ ಯಥೇಚ್ಚವಾಗಿ ನೀರು ಉಪಯೋಗಿ ಸುತ್ತಿದ್ದು, ಈ ಬಗ್ಗೆ ಬೆಸ್ಕಾಂನವರು ಯಾವುದೇ ಕ್ರಮ ಜರುಗಿಸದಿರುವುದು ಅನುಮಾನಕ್ಕೆಡೆ ಮಾಡಿದೆ. ಈ ಎಲ್ಲಾ ಅಕ್ರಮಗಳು ತಾಲೂಕಿನ ಅಧಿಕಾರಿಗಳಿಗೆ ತಿಳಿದಿದ್ದರೂ, ಏನು ಕ್ರಮ ಕೈಗೊಳ್ಳುತ್ತಿಲ್ಲ.

ಅಕ್ರಮ ವ್ಯವಹಾರಕ್ಕೆ ಕುಮ್ಮಕ್ಕು: ಚಿಪ್ಪು ಸುಡುವ ಉದ್ಯಮ ವನ್ನ ಪ್ರಶ್ನಿಸಬೇಕಾದ ಕಂದಾಯ, ಪರಿಸರ, ಕೈಗಾರಿಕೆ ಇಲಾಖೆ ಸೇರಿದಂತೆ ಗ್ರಾಪಂ ಪ್ರಶ್ನಿಸದೆ ಇಂತಹ ಅಕ್ರಮ ವ್ಯವಹಾರಕ್ಕೆ ಕುಮ್ಮಕ್ಕು ನೀಡುವ ಕೆಲಸ ಮಾಡುತ್ತಿ ರುವುದು ತಾಲೂಕು
ಆಡಳಿತದ ವೈಪಲ್ಯವನ್ನು ಎತ್ತಿ ತೋರಿ ಸುತ್ತಿದೆ. ಈ ಎಲ್ಲ ಕಾರಣಗಳಿಂದ ಜಿಲ್ಲಾಧಿ ಕಾರಿಗಳು, ಪರಿಸರ ಇಲಾಖೆ ಮತ್ತು ಸಂಬಂಧಪಟ್ಟ ಇಲಾಖೆ ಕೂಡಲೇ ಚಿಪ್ಪು ಸುಡುವ ಉದ್ಯಮಗಳಿಗೆ ವೈಜ್ಞಾನಿಕ ರೀತಿಯ ತಂತ್ರಜ್ಞಾನ ಮತ್ತು ಕಠಿಣ ಕಾನೂನು ಜಾರಿಗೆ ತರುವ ಮೂಲಕ ಇದೀಗ ಚಾಲ್ತಿ  ಯಲ್ಲಿರುವ ಅವೈಜ್ಞಾನಿಕ ಮತ್ತು ಅಕ್ರಮ ದಂಧೆ  ಯನ್ನು ಕೂಡಲೇ ಬಂದ್‌ ಮಾಡಿಸುವ ಮೂಲಕ ಈ ಉದ್ಯಮಕ್ಕೆ ವೈಜ್ಞಾನಿಕ ನೆಲೆ ಕಲ್ಪಿಸಬೇಕಾಗಿದೆ.

ನಮ್ಮ ಜಮೀನಿನ ಬಳಿ ಅಕ್ರಮವಾಗಿ ಚಿಪ್ಪು ಸುಡುವ ಕೈಗಾರಿಕೆ ನಡೆಯುತ್ತಿದ್ದು, ಇದರಿಂದ ಬರುವ ದಟ್ಟ ಹೊಗೆಯಿಂದ ನಮ್ಮ ಖುಷ್ಕಿ ಜಮೀನಿನಲ್ಲಿ ಬೆಳೆವ ಬೆಳೆಗಳಿಗೆ ಹಾಗೂ ತೆಂಗಿನ ತೋಟದ ಇಳುವರಿಗೆ ಭಾರೀ ಧಕ್ಕೆಯಾಗಿದ್ದು, ಕೂಡಲೇ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕು. – ಜೆ.ಎಸ್‌. ನವೀನ್‌ಕುಮಾರ್‌, ರೈತ

ಕೃಷಿ ಜಮೀನು, ರಸ್ತೆ ಅಕ್ಕಪಕ್ಕದಲ್ಲಿ ಯಾರೂ ಚಿಪ್ಪು ಸುಡುವ ಉದ್ಯಮ ನಡೆಸಬಾರದು. ಅದರ ದಟ್ಟ ಹೊಗೆ ಬೆಳೆಗಳಿಗೆ ಹಾಗೂ ರಸ್ತೆಯಲ್ಲಿ ಓಡಾಡುವ ವಾಹನಗಳಿಗೆ ಮತ್ತು ಪರಿಸರಕ್ಕೆ ಯಾವುದೇ ತೊಂದರೆ ನೀಡದಂತೆ ವೈಜ್ಞಾನಿಕವಾಗಿ ಹೊಗೆ ಪೈಪ್‌ ಅಳವಡಿಸಿಕೊಂಡು ನಡೆಸಬೇಕು. ಹಾಗಾಗಿ, ನಿಯಮಗಳ ಮೀರಿ ನಡೆಸುತ್ತಿರುವ ಚಿಪ್ಪು ಉದ್ಯಮಗಳ ಬಗ್ಗೆ ರೈತರು ಲಿಖೀತ ದೂರು ನೀಡಿದಲ್ಲಿ ಕ್ರಮ ಜರುಗಿಸಲಾಗುವುದು. – ಚಂದ್ರಶೇಖರ್‌, ತಹಶೀಲ್ದಾರ್‌,ತಿಪಟೂರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next