ಅಬುದಾಭಿ ಕರ್ನಾಟಕ ಸಂಘ ಕೊಡಮಾಡುವ ಪ್ರತಿಷ್ಠಿತ ದ.ರಾ. ಬೇಂದ್ರ ಪ್ರಶಸ್ತಿಗೆ ಈ ವರ್ಷ ಯಕ್ಷಗಾನ ವೇಷಧಾರಿ, ಯಕ್ಷಗುರು ಶೇಖರ ಡಿ. ಶೆಟ್ಟಿಗಾರ್ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭ ನ.3, 2017ರಂದು ಅಬುದಾಭಿಯಲ್ಲಿ ನಡೆಯುವ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಡಾ| ಬಿ.ಆರ್. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಗಣ್ಯ ಅತಿಥಿಗಳ ಸಮ್ಮುಖ ನಡೆಯಲಿದೆೆ. ಶೇಖರ ಶೆಟ್ಟಿಗಾರ್ ಅವರು ಈಗ ಹವ್ಯಾಸಿ ಕಲಾವಿದರಾದರೂ ಕಟೀಲು ಮೇಳದಲ್ಲಿ ವೃತ್ತಿಪರ ತಿರುಗಾಟ ನಡೆಸಿದ ಅನುಭವವನ್ನೂ ಹೊಂದಿದ್ದಾರೆ. ಪ್ರಸಿದ್ಧ ವೇಷಧಾರಿ ಸುಣ್ಣಂಬಳ ವಿಶ್ವೇಶ್ವರ ಭಟ್ ಇವರು ಕಟೀಲು ಮೇಳ ಸೇರಲು ಕಾರಣರು. ಕಟೀಲು ಮೇಳದಲ್ಲಿ ಹಿರಿಯ ಭಾಗವತ ಕುರಿಯ ಗಣಪತಿ ಶಾಸ್ತ್ರಿಯವರ ಗರಡಿಯಲ್ಲಿ ಪಳಗಿ ಅವರ ಪ್ರತಿಭೆ ಪ್ರಕಟಗೊಂಡಿತು. ಪ್ರಸಂಗ ರಚನೆ, ಸಂಭಾಷಣೆ – ನಿರ್ದೇಶನ ನೀಡಿ ಅನೇಕ ಪುರಾಣ ಪ್ರಸಂಗ ರಂಗಕ್ಕೇರಿಸಿದ್ದಾರೆ. ಫೆಬ್ರವರಿ 11, 1966ರಲ್ಲಿ ಜನಿಸಿದ ಶೇಖರ ಶೆಟ್ಟಿಗಾರರು ಬಿ.ಕಾಂ. ಪದವೀಧರರು. ಉದ್ಯೋಗ ನಿಮಿತ್ತ ಕೊಲ್ಲಿ ರಾಷ್ಟ್ರದಲ್ಲಿ ನೆಲೆಸಿದ್ದು, ಅಲ್ಲಿ ಆಸಕ್ತರಿಗೆ ಯಕ್ಷಗಾನ ತರಬೇತಿ ನೀಡುತ್ತಿದ್ದಾರೆ. ಇದಕ್ಕೆ ಮುನ್ನ ಸ್ವದೇಶದಲ್ಲಿದ್ದಾಗ ಅನೇಕ ಶಿಷ್ಯರನ್ನು ತಯಾರು ಮಾಡಿದ್ದಾರೆ. ಬೆಹರೈನ್ ಯಕ್ಷೋತ್ಸವ, ಮಸ್ಕತ್‌ನ ಒಮನ್ ತುಳುವರೆ ಕೂಟ ಇವರನ್ನು ಸಮ್ಮಾನಿಸಿವೆ.