ಢಾಕಾ: ಬಾಂಗ್ಲಾದೇಶ ಮಾಜಿ ಪ್ರಧಾನಿ ಶೇಕ್ ಹಸೀನಾ ನೇತೃತ್ವದ ಅವಾಮಿ ಲೀಗ್ ಪಕ್ಷದ ಹಿರಿಯ ಮುಖಂಡರೊಬ್ಬರ ಕೊಳೆತ ಶವ ಭಾರತ-ಬಾಂಗ್ಲಾದೇಶದ ಗಡಿಭಾಗದಲ್ಲಿ ಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ.
ಬಾಂಗ್ಲಾದೇಶದ ಗಡಿಪ್ರದೇಶದ ಜೈನ್ಟಿಯಾ ಹಿಲ್ಸ್ ಜಿಲ್ಲೆಯ ನಿವಾಸಿಯಾದ ಇಶಾಕ್ ಅಲಿ ಖಾನ್ ಪನ್ನಾ ಅವರ ಕೊಳೆತ ಶವ ಭಾರತ-ಬಾಂಗ್ಲಾ ಗಡಿ ಭಾಗದಿಂದ ಸುಮಾರು 1.5 ಕಿಲೋ ಮೀಟರ್ ದೂರದಲ್ಲಿ ಆಗಸ್ಟ್ 26ರಂದು ಪತ್ತೆಯಾಗಿದೆ.
ಶವ ಕೊಳೆತು ಹೋಗಿದ್ದರಿಂದ ಗುರುತು ಪತ್ತೆ ಹಚ್ಚುವುದು ಅಸಾಧ್ಯವಾಗಿತ್ತು. ಆದರೆ ಪನ್ನಾ ಅವರ ಗುರುತನ್ನು ಅಲ್ಲಿ ಸಿಕ್ಕಿದ ಪಾಸ್ ಪೋರ್ಟ್ ಆಧಾರದ ಮೇಲೆ ಪತ್ತೆ ಹಚ್ಚಲಾಗಿತ್ತು ಎಂದು ಪೊಲೀಸ್ ವರಿಷ್ಠಾಧಿಕಾರಿ ಗಿರಿ ಪ್ರಸಾದ್ ಮಾಹಿತಿ ನೀಡಿರುವುದಾಗಿ ವರದಿ ವಿವರಿಸಿದೆ.
ಇದನ್ನೂ ಓದಿ:
Tragedy: ಬೆಳ್ಳಂಬೆಳಗ್ಗೆ 17 ವರ್ಷದ ಯುವಕನ ಹುಚ್ಚಾಟಕ್ಕೆ ಹಾಲು ವಿತರಕ ಮೃತ್ಯು…
ಪನ್ನಾ ಅವರು ಬಾಂಗ್ಲಾದೇಶ ಛಾತ್ರಾ ಲೀಗ್ ನ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಮತ್ತು ಪಿರೋಜ್ ಪುರ್ ಜಿಲ್ಲೆಯ ಅವಾಮಿ ಲೀಗ್ ಸದಸ್ಯರಾಗಿದ್ದು, ಶೇಖ್ ಹಸೀನಾ ಸರ್ಕಾರದಲ್ಲಿ ಪ್ರಭಾವಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ.
ಪನ್ನಾ ಮೃತದೇಹವನ್ನು ಹೆಚ್ಚಿನ ಗುರುತು ಪತ್ತೆಗಾಗಿ ಸಿವಿಲ್ ಆಸ್ಪತ್ರೆಗೆ ರವಾನಿಸಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದು, ಬಾಂಗ್ಲಾದಲ್ಲಿ ಹಿಂಸಾಚಾರ ಭುಗಿಲೆದ್ದ ಸಂದರ್ಭದಲ್ಲಿ ಪನ್ನಾ ಗಡಿ ದಾಟಲು ಯತ್ನಿಸಿದ ವೇಳೆ ಹೃದಯ ಸ್ತಂಭನದಿಂದ ಸಾವನ್ನಪ್ಪಿರುವ ಸಾಧ್ಯತೆ ಇರುವುದಾಗಿ ತಿಳಿಸಿದ್ದಾರೆ.