ನವದೆಹಲಿ: ಬಾಂಗ್ಲಾದೇಶದಲ್ಲಿ ಮೀಸಲಾತಿ ವಿಚಾರದಿಂದ ಹಿಂಸಾಚಾರ ಭುಗಿಲೆದ್ದು, 300 ಜನರು ಸಾವನ್ನಪ್ಪಿದ್ದ ನಂತರ ಶೇಖ್ ಹಸೀನಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಸಂದರ್ಭದಲ್ಲಿ ಭಾರತಕ್ಕೆ ಆಗಮಿಸುವ ಮನವಿಗೆ ಅನುಮತಿ ನೀಡುವಂತೆ ಕೋರಿದ್ದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಮಂಗಳವಾರ (ಆಗಸ್ಟ್ 06) ರಾಜ್ಯಸಭೆಯಲ್ಲಿ ಮಾತನಾಡುತ್ತ ಮಾಹಿತಿ ನೀಡಿದರು.
ನಮ್ಮ ತಿಳಿವಳಿಕೆಯ ಪ್ರಕಾರ, ದೇಶದ ಭದ್ರತಾ ಸಂಸ್ಥೆಗಳ ಅಧಿಕಾರಿಗಳ ಸಭೆ ನಡೆಸಿದ ನಂತರ ಶೇಖ್ ಹಸೀನಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ತೆಗೆದುಕೊಂಡಿದ್ದರು. ತುಂಬಾ ಕಡಿಮೆ ಸಮಯದಲ್ಲಿ ಶೇಖ್ ಹಸೀನಾ ಭಾರತಕ್ಕೆ ಆಗಮಿಸುವ ಮನವಿಗೆ ಅನುಮತಿ ನೀಡುವಂತೆ ಕೇಳಿಕೊಂಡಿದ್ದರು. ಆ ಪ್ರಕಾರ ಸೋಮವಾರ ರಾತ್ರಿ ಹಸೀನಾ ದೆಹಲಿಗೆ ಆಗಮಿಸಿದ್ದಾರೆ ಎಂದು ಸಚಿವ ಜೈಶಂಕರ್ ಹೇಳಿದರು.
ಬಾಂಗ್ಲಾದೇಶದಲ್ಲಿನ ಪ್ರಸ್ತುತ ದಂಗೆ, ಬಿಕ್ಕಟ್ಟಿನ ಕುರಿತು ಚರ್ಚಿಸಲು ಮಂಗಳವಾರ ಕೇಂದ್ರ ಸರ್ಕಾರ ಸರ್ವ ಪಕ್ಷ ಸಭೆ ನಡೆಸಿದ ನಂತರ ರಾಜ್ಯಸಭೆಯ ಕಲಾಪದಲ್ಲಿ ಸಚಿವ ಎಸ್.ಜೈಶಂಕರ್ ಸಂಸದರಿಗೆ ಮಾಹಿತಿಯನ್ನು ನೀಡಿದರು.
ಗಾಜಿಯಾಬಾದ್ ನ Hindon ವೈಮಾನಿಕ ನೆಲೆಗೆ ಶೇಖ್ ಹಸೀನಾ ಆಗಮಿಸುವ ಮೊದಲು ಏಕಕಾಲದಲ್ಲಿ ಬಾಂಗ್ಲಾದೇಶದ ಅಧಿಕಾರಿಗಳಿಂದ ಫ್ಲೈಟ್ ಕ್ಲಿಯರೆನ್ಸ್ ಮನವಿಯನ್ನು ಸ್ವೀಕರಿಸಿರುವುದಾಗಿ ಜೈಶಂಕರ್ ತಿಳಿಸಿದರು.
ಶೇಖ್ ಹಸೀನಾ ಬಾಂಗ್ಲಾದೇಶ ಏರ್ ಫೋರ್ಸ್ ನ ಮಿಲಿಟರಿ ಟ್ರಾನ್ಸ್ ಪೋರ್ಟ್ ವಿಮಾನದಲ್ಲಿ ಭಾರತಕ್ಕೆ ಆಗಮಿಸಿದ್ದು, ದೆಹಲಿಗೆ ಆಗಮಿಸಿದ್ದ ಶೇಖ್ ಹಸೀನಾ ಅವರನ್ನು ಬಿಗಿ ಭದ್ರತೆಯಲ್ಲಿ ರಹಸ್ಯ ಸ್ಥಳಕ್ಕೆ ಸ್ಥಳಾಂತರಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ತಿಳಿಸಿದೆ.