ಇಸ್ಲಾಮಾಬಾದ್: ಈ ವರ್ಷಾಂತ್ಯದಲ್ಲಿ ಸಾರ್ವತ್ರಿಕ ಚುನಾವಣೆ ತಯಾರಿ ನಡೆಸುವ ನಿಟ್ಟಿನಲ್ಲಿ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯನ್ನು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ನೇತೃತ್ವದ ಸಮ್ಮಿಶ್ರ ಸರ್ಕಾರವು ಅವಧಿಗೆ ಮುಂಚಿತವಾಗಿ ವಿಸರ್ಜಿಸುವ ಸಾಧ್ಯತೆ ಇದ್ದು, ಆ ಹಿನ್ನೆಲೆಯಲ್ಲಿ ಶೆಹಬಾಜ್ ಬುಧವಾರ(ಆಗಸ್ಟ್ 09) ಪ್ರಧಾನಿ ಹುದ್ದೆಯಿಂದ ಕೆಳಗಿಳಿಯವ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:Crime News: ಕುಡುಮಲ್ಲಿಗೆ ಆಂಜನೇಯ ದೇವಸ್ಥಾನದಲ್ಲಿ ಕಳ್ಳತನ: 2ಲಕ್ಷ ಮೌಲ್ಯದ ವಸ್ತುಗಳು ಕಳವು
ಪಾಕಿಸ್ತಾನ ಸಂಸತ್ ನ ಕೆಳಮನೆಯ ಅವಧಿಯು ಆಗಸ್ಟ್ 12ರಂದು ಕೊನೆಗೊಳ್ಳಲಿದ್ದು, ಇದರ ಹಿನ್ನೆಲೆಯಲ್ಲಿ ಆಗಸ್ಟ್ 9ರಂದು ನ್ಯಾಷನಲ್ ಅಸೆಂಬ್ಲಿಯನ್ನು ವಿಸರ್ಜಿಸುವಂತೆ ಕೋರಿ ಪ್ರಧಾನಿ ಷರೀಫ್ ಪಾಕ್ ಅಧ್ಯಕ್ಷ ಆರಿಫ್ ಅಲ್ವಿಗೆ ಪ್ರಸ್ತಾವನೆ ಕಳುಹಿಸಿರುವುದಾಗಿ ವರದಿ ವಿವರಿಸಿದೆ.
ಒಂದು ವೇಳೆ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್ ಎ ಇನ್ಸಾಫ್ ಪಕ್ಷದ ಮಾಜಿ ನಾಯಕ, ಪಾಕ್ ಅಧ್ಯಕ್ಷ ಆರಿಫ್ ಅಲ್ವಿ ಪ್ರಧಾನಿ ಷರೀಫ್ ಪ್ರಸ್ತಾವನೆಗೆ ಅಂಕಿತ ಹಾಕಿದಲ್ಲಿ 48 ಗಂಟೆಯೊಳಗೆ ಪಾಕ್ ರಾಷ್ಟ್ರೀಯ ಅಸೆಂಬ್ಲಿ ವಿಸರ್ಜನೆಯಾಗಲಿದೆ.
ಪಾಕಿಸ್ತಾನದ ಸಂವಿಧಾನದ ಪ್ರಕಾರ ನ್ಯಾಷನಲ್ ಅಸೆಂಬ್ಲಿ ವಿಸರ್ಜನೆಗೊಂಡರೆ 60 ದಿನಗಳಲ್ಲಿ ಚುನಾವಣೆ ನಡೆಸಬೇಕು. ಆದರೆ ಅವಧಿಗೂ ಮುನ್ನವೇ ವಿಸರ್ಜನೆಯಾದಲ್ಲಿ ಚುನಾವಣೆ ನಡೆಸಲು 90 ದಿನಗಳವರೆಗೂ ಕಾಲಾವಕಾಶ ಇರಲಿದೆ ಎಂದು ದಿ ಎಕ್ಸ್ ಪ್ರೆಸ್ ಟ್ರೈಬ್ಯೂನ್ ಪತ್ರಿಕೆ ವರದಿ ಮಾಡಿದೆ.