ಪರ್ತ್: ವಿಕ್ಟೋರಿಯಾವನ್ನು 9 ವಿಕೆಟ್‌ಗಳಿಂದ ಕೆಡವಿದ ಪಶ್ಚಿಮ ಆಸ್ಟ್ರೇಲಿಯ “ಶೆಫೀಲ್ಡ್ ಶೀಲ್ಡ್’ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಜತೆಗೆ ತನ್ನ ಪ್ರಶಸ್ತಿ ಗೆಲುವಿನ ದಾಖಲೆಯನ್ನು 17ಕ್ಕೆ ವಿಸ್ತರಿಸಿದೆ.
ಪರ್ತ್‌ನ “ವಾಕಾ’ದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಶ್ಚಿಮ ಆಸ್ಟ್ರೇಲಿಯದ ನಾಯಕ ಸ್ಯಾಮ್ ವೈಟ್‌ಮ್ಯಾನ್ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದ್ದರು. ವಿಕ್ಟೋರಿಯಾ 195ಕ್ಕೆ ಆಲೌಟ್ ಆಗಿತ್ತು. ಜವಾಬಿತ್ತ ಪಶ್ಚಿಮ ಆಸ್ಟ್ರೇಲಿಯ 315 ರನ್ ಪೇರಿಸಿತು. ಆ್ಯಶನ್ ಟರ್ನರ್ ಆಕರ್ಷಕ ಶತಕ (128) ಬಾರಿಸಿದರು. ವಿಕ್ಟೋರಿಯಾ ಪರ ಮಧ್ಯಮ ವೇಗಿ ವಿಲ್ ಸದರ್‌ಲ್ಯಾಂಡ್ 5 ವಿಕೆಟ್ ಕೆಡವಿ ಗಮನ ಸೆಳೆದರು.
120 ರನ್ ಹಿನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ವಿಕ್ಟೋರಿಯಾ ಮತ್ತೆ ಬ್ಯಾಟಿಂಗ್ ಕುಸಿತಕ್ಕೆ ಸಿಲುಕಿ 210ಕ್ಕೆ ಸರ್ವಪತನ ಕಂಡಿತು. ಸದರ್‌ಲ್ಯಾಂಡ್ ಬ್ಯಾಟಿಂಗ್‌ನಲ್ಲೂ ಹೋರಾಟ ನಡೆಸಿ 83 ರನ್ ಹಾಗೂ ನಾಯಕ ಪೀಟರ್ ಹ್ಯಾಂಡ್ಸ್‌ಕಾಂಬ್ 52 ರನ್ ಮಾಡಿದರು. ಪಶ್ಚಿಮ ಆಸ್ಟ್ರೇಲಿಯ ಒಂದಕ್ಕೆ 93 ರನ್ ಬಾರಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು.
ಇದು 2014-17ರ ಬಳಿಕ ತಂಡವೊಂದು ಶೆಫೀಲ್ಡ್ ಶೀಲ್ಡ್ ಉಳಿಸಿಕೊಂಡ ಮೊದಲ ನಿದರ್ಶನ. ಅಂದು ವಿಕ್ಟೋರಿಯಾ ಪ್ರಶಸ್ತಿಗಳ ಹ್ಯಾಟ್ರಿಕ್ ಸಾಧಿಸಿತ್ತು. ಕಳೆದ ಸಲದ ಫೈನಲ್‌ನಲ್ಲೂ ಪಶ್ಚಿಮ ಆಸ್ಟ್ರೇಲಿಯ-ವಿಕ್ಟೋರಿಯಾ ಮುಖಾಮುಖಿ ಆಗಿದ್ದವು.