Advertisement

Sheetal Devi: ಎರಡೂ ಕೈಗಳಿಲ್ಲದ ಶೀತಲ್‌ ಕೈಯಲ್ಲಿ ಎರಡು ಚಿನ್ನ 

11:50 AM Nov 05, 2023 | Team Udayavani |

ಜಮ್ಮುವಿನ ಕಿಶ್ವ್ತಾರ್ ಜಿಲ್ಲೆಯ ಲಾಯಿಧರ್‌ ಎಂಬ ದೂರದ ಹಳ್ಳಿಯಲ್ಲಿ ಹುಟ್ಟಿದ ಶೀತಲ್‌ ದೇವಿಗೆ ಈಗ ಕೇವಲ 16 ವರ್ಷ. ಈ ಸಣ್ಣ ವಯಸ್ಸಿನಲ್ಲೇ ಆಕೆ ಚೀನಾದ ಹಾಂಗ್‌ ಝೋನಲ್ಲಿ ನಡೆದ ಪ್ಯಾರಾ ಏಷ್ಯಾಡ್‌ನ‌ಲ್ಲಿ ಎರಡು ಚಿನ್ನದ ಪದಕ ಗೆದ್ದಿದ್ದಾರೆ.

Advertisement

ಈಕೆಯ ಸಾಧನೆ ನೋಡಿ ಮಹೀಂದ್ರ ಕಂಪನಿಯ ಮುಖ್ಯಸ್ಥ ಆನಂದ್‌ ಮಹೀಂದ್ರ, “ನಾನು ಜೀವನದಲ್ಲಿ ಇನ್ನೆಂದೂ ಅದು ಸರಿಯಿಲ್ಲ, ಇದು ಸರಿಯಿಲ್ಲ ಎಂದು ಗೊಣಗುವುದಿಲ್ಲ’ ಎಂದಿದ್ದಾರೆ.

ಈಕೆಯ ಸಮಸ್ಯೆಯ ತೀವ್ರತೆ ಏನು ಗೊತ್ತಾ? ಗರ್ಭದಲ್ಲಿದ್ದಾಗಲೇ ಈಕೆ ಫೊಕೊಮೆಲಿಯ ಎಂಬ ರೋಗಕ್ಕೆ ತುತ್ತಾದರು. ಇದು ಅಂಗಾಂಗಗಳು ಸರಿಯಾಗಿ ಬೆಳೆಯದಂತೆ ಮಾಡುವ ರೋಗ. ಹುಟ್ಟುವಾಗಲೇ ಆಕೆ ಎರಡೂ ಕೈಗಳನ್ನು ಕಳೆದುಕೊಂಡಿದ್ದರು. ಅರ್ಥಾತ್‌ ಅದು ಬೆಳೆಯಲೇ ಇಲ್ಲ. ಜಮ್ಮುವಿನ ಯಾವುದೋ ತೀರಾ ಒಳಭಾಗದ ಹಳ್ಳಿಯವರಾದ ಈಕೆಯ ತಾಯಿ, ಬೆಳಗ್ಗೆ ಹೊತ್ತು ವಾಂತಿ ಬರದಂತಾಗದಿರಲಿ ಎಂದು ವೈದ್ಯರಿಂದ ಮಾತ್ರೆ ಪಡೆದಿದ್ದರು. ಆ ಮಾತ್ರೆಯ ಅಡ್ಡ ಪರಿಣಾಮವೇ ಶೀತಲ್‌ ದೇವಿಯ ಈ ಸ್ಥಿತಿಗೆಕಾರಣ.

ಹಳ್ಳಿಯಲ್ಲಿ ಹಾಗೆಯೇ ಬೆಳೆದುಕೊಂಡು ಹೋದ ಈಕೆ 2021ರಲ್ಲಿ ಭಾರತೀಯ ಸೇನೆಯ ಕಣ್ಣಿಗೆ ಬಿದ್ದರು. ರಾಷ್ಟ್ರೀಯ ಯುವ ಕ್ರೀಡಾಕೂಟದಲ್ಲಿ ಈಕೆಯನ್ನು ಗುರ್ತಿಸಿದ ಸೇನೆ, ಈಕೆಗೆ ಆರಂಭದಲ್ಲಿ ಕೃತಕ ಕೈಗಳನ್ನು ಜೋಡಿಸುವ ಯತ್ನ ಮಾಡಿತು. ಈಕೆಯ ಕೈಗಳಿದ್ದ ಪರಿಸ್ಥಿತಿಗೆ ಆ ಜೋಡಣೆ ಅಸಾಧ್ಯವಾಯಿತು. ಅಲ್ಲಿಗೆ ಆ ಯತ್ನವನ್ನು ಕೈಬಿಡಲಾಯಿತು.

ಆಕೆ ತನ್ನ ತರಬೇತುದಾರರಾದ ಅಭಿಲಾಷಾ ಮತ್ತು ಕುಲದೀಪ್‌ ವೇದ್ವಾನ್‌ರ ಸಲಹೆಯಂತೆ ತನ್ನಂತೆಯೇ ಅಂಗವೈಕಲ್ಯ ಹೊಂದಿರುವ ಹಲವು ವ್ಯಕ್ತಿಗಳನ್ನು ನೋಡಿದರು. ಅವರ ಸಾಧನೆಗಳನ್ನು ನೋಡಿ ಸ್ಫೂರ್ತಿಗೊಂಡು ಬಿಲ್ಗಾರಿಕೆಯಲ್ಲಿ ಮುಂದುವರಿ ಯುವ ತೀರ್ಮಾನ ಮಾಡಿದರು.

Advertisement

ಹಲವು ತಿಂಗಳು ಆಕೆಗೆಬಿಲ್ಲನ್ನು ಎತ್ತಿ, ಅದಕ್ಕೆ ಬಾಣ ಜೋಡಿಸುವುದರಲ್ಲೇ ಕಾಲ ಕಳೆಯಿತು.ಆದರೂ ತರಬೇತುದಾರರು ನೀಡಿದ ಪ್ರೇರಣೆಯಿಂದ ಬಲವಾಗಿ ಅಭ್ಯಾಸ ನಡೆಸಲಾರಂಭಿಸಿದರು.

ದಿನವೊಂದಕ್ಕೆ 300 ಬಾರಿ ಬಾಣವನ್ನು ಹೊಡೆಯಲು ಅವರಿಗೆ ಸಾಧ್ಯವಾಯಿತು. 2022ರಲ್ಲಿ ಬಿಲ್ಗಾರಿಕೆಯನ್ನು ಗಂಭೀರವಾಗಿ ಪರಿಗಣಿಸಿದರು. ಶ್ರೀಮಾತಾ ವೈಷ್ಣೋದೇವಿ ದೇವಸ್ಥಾನ ಮಂಡಳಿಯ ಕ್ರೀಡಾಸಂಕೀರ್ಣದಲ್ಲಿ ತರಬೇತಿ ನಡೆಸಿದರು. ಹರ್ಯಾಣದ ಸೋನೆಪತ್‌ನಲ್ಲಿ ನಡೆದ ರಾಷ್ಟ್ರೀಯ ಪ್ಯಾರಾ ಗೇಮ್ಸ್‌ನಲ್ಲಿ ಬೆಳ್ಳಿ ಗೆದ್ದರು. ಇದು ಅವರಿಗೆ ಆತ್ಮವಿಶ್ವಾಸ ನೀಡಿತು.

ಇಷ್ಟರ ಮಧ್ಯೆ ಶೀತಲ್‌ಗೆ ಒಂದು ನೋವಂತೂ ಕಾಡುತ್ತಿತ್ತು. ಆಕೆಯ ಸಾಧನೆಯನ್ನು, ಪರಿಶ್ರಮವನ್ನು ಎಲ್ಲರೂ ಗೌರವದಿಂದ ನೊಡುತ್ತಿದ್ದರೂ ಅವರ ಭುಜದತ್ತ ನೋಡಿದಾಗ, ಕೈಗಳಿಲ್ಲವಲ್ಲ ಎಂಬ ಭಾವವನ್ನು ಹೊಮ್ಮಿಸುತ್ತಿದ್ದರು. ಅದನ್ನು ತಿಳಿದಾಗ ಶೀತಲ್‌ಗೆ ನೋವು ಕಾಡುತ್ತಿತ್ತು. ಏಷ್ಯಾಡ್‌ನ‌ಲ್ಲಿ ಎರಡು ಚಿನ್ನ, ಒಂದು ಬೆಳ್ಳಿ ಪದಕವನ್ನು ಗೆದ್ದ ನಂತರ ಆಕೆಯ ಯೋಚನೆಯ ದಿಕ್ಕೇ ಬದಲಾಗಿದೆ.

ತಾನೊಬ್ಬ ವಿಶೇಷ ವ್ಯಕ್ತಿ ಎಂದು ಅನಿಸುತ್ತಿದೆಯಂತೆ. ವಿಶೇಷವೇನು ಗೊತ್ತಾ? ಇಡೀ ಭಾರತದಲ್ಲೇ ಕಾಲು ಮತ್ತು ಹಲ್ಲನ್ನು ಬಳಸಿ ಬಿಲ್ಗಾರಿಕೆ ಸ್ಪರ್ಧೆಯಲ್ಲಿ ಪಾಲ್ಗೊಂಡಿರುವ ಏಕೈಕ ವ್ಯಕ್ತಿ ಶೀತಲ್‌. ಜಗತ್ತಿನಲ್ಲಿ ಕೇವಲ ಆರನೆಯವರು.

ಕಣ್ಣೇ ಕಾಣದ ನಮ್ಮೂರ ಶರತ್‌ ಬಿರುಗಾಳಿ ಓಟಗಾರ :

ಕರ್ನಾಟಕದ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಮಾಕನಹಳ್ಳಿಯ ಶರತ್‌ ಪಕ್ಕಾ ರೈತ ಕುಟುಂಬದವರು. ಇವರ ತಂದೆ ಶಂಕರಪ್ಪ,ತಾಯಿ ಭಾಗ್ಯಮ್ಮ. ಈಗ ಶರತ್‌ ಕಾರಣಕ್ಕಾಗಿಯೇ ಅವರು ಹುಟ್ಟಿದ ಹಳ್ಳಿಯ ಹೆಸರು ಪ್ರಸಿದ್ಧವಾಗಿದೆ.  ಅವರನ್ನು ಎಲ್ಲ ಕರೆಯುವುದೇ ಶರತ್‌ ಮಾಕನಹಳ್ಳಿ ಎಂದು.

ಶರತ್‌ಗೆ ಹುಟ್ಟಿನಿಂದಲೇ ದೃಷ್ಟಿದೋಷವಿತ್ತು. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ಅವರಿಗೆ ಶೇ. 95 ಕಣ್ಣು ಕಾಣುವುದಿಲ್ಲ. ಅಂದರೆ ಕನ್ನಡಕ ಧರಿಸಿದರೂ ಉಪಯೋಗವಿಲ್ಲ ಎನ್ನುವ ಸ್ಥಿತಿ. ಇದನ್ನು ಅಂಧತ್ವ ಅಂದರೂ ತಪ್ಪೇನು ಆಗುವುದಿಲ್ಲ. ಸಾಮಾನ್ಯವಾಗಿ ಇಂತಹ ಸ್ಥಿತಿ ಬಂದಾಗ ಜನ ತಮ್ಮನ್ನು ತಾವು ನಿರುಪಯೋಗಿಗಳು ಎಂದು ಭಾವಿಸಿಕೊಂಡು ಮೂಲೆ ಸೇರಿ ಬಿಡುತ್ತಾರೆ. ಕಣ್ಣು ಅತ್ಯಂತ ಅಮೂಲ್ಯ ಅಂಗವಾಗಿರುವಾಗ ಅದೇ ಇಲ್ಲದೇ ಬದುಕು ಹೇಗೆ?

ಆದರೆ ಶರತ್‌ ಹಾಗೆ ಮೂಲೆ ಸೇರಲಿಲ್ಲ. ದಿವ್ಯಾಂಗರ ವಿಭಾಗದಲ್ಲಿ ಕ್ರೀಡಾ ಚಟುವಟಿಕೆ ಶುರು ಮಾಡಿದ ಅವರು ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದಾರೆ. ಚೀನಾದಲ್ಲಿ ನಡೆದ ಪ್ಯಾರಾ ಏಷ್ಯಾಡ್‌ನ‌ಲ್ಲಿ ಅವರ ಸಾಧನೆಯನ್ನೊಮ್ಮೆ ನೀವು ನೋಡಬೇಕು. ಅಂತರ್ಜಾಲದಲ್ಲಿ ಅದರ ವಿಡಿಯೊಗಳು ಸಿಗುತ್ತವೆ. ಹಾಗೆಯೇ ಕಣ್ಣಾಡಿಸಿದರೆ ಮೈಜುಮ್ಮನ್ನಿಸುತ್ತದೆ. ಟಿ13 ವಿಭಾಗದಲ್ಲಿ ಮೊದಲು ಅವರು 5000 ಮೀ.ಯಲ್ಲಿ ಓಡಿದರು. ಅತಿಸಣ್ಣ ಅಂತರದಲ್ಲಿ ಚಿನ್ನದ ಪದಕ ಗೆದ್ದರು.

ಆರಂಭದಲ್ಲಿ ಒಂದು ಹದ ಕಾಯ್ದುಕೊಂಡಿದ್ದ ಶರತ್‌, ಕಡೆಕಡೆಗೆ ಬಿರುಗಾಳಿಯಂತೆ ಓಡಿದರು. ಸಾಮಾನ್ಯವಾಗಿ ಅಂಧತ್ವ ಇರುವವರು ಇಂತಹ ಸ್ಪರ್ಧೆಗಳಲ್ಲಿ ಓಡುವಾಗ ಅದಕ್ಕಾಗಿಯೇ ಇರುವ ವ್ಯಕ್ತಿಗಳಿಂದ ಸಹಾಯ ಪಡೆಯುತ್ತಾರೆ. ಶರತ್‌ ಯಾವುದೇ ನೆರವು ಪಡೆಯದೇ, ಕಣ್ಣು ಸ್ಪಷ್ಟವಾಗಿ ಕಾಣುತ್ತದೆಯೇನೋ ಎಂಬಂತೆ ಓಡಿದ್ದಾರೆ. ಬರೀ ವಿಡಿಯೊ ನೋಡಿದರೆ, ನೀವು ಅವರಿಗೆ ಶೇ. 95ರಷ್ಟು ಕಣ್ಣು ಕಾಣುವುದಿಲ್ಲ ಎಂದು ನಂಬುವುದಿಲ್ಲ. ಇಷ್ಟೆಲ್ಲ ಆದರೂ ಶರತ್‌ಗೆ ಕಡೆಯಲ್ಲಿ ನಿರಾಶೆ ಕಾದಿತ್ತು.

ನಿಯಮಗಳ ಪ್ರಕಾರ ಒಂದು ಸ್ಪರ್ಧೆಯಲ್ಲಿ ಕನಿಷ್ಠ ಮೂವರು ಇರಲೇಬೇಕು. ಇಲ್ಲಿ ಓಡಿದ್ದೇ ಇಬ್ಬರು. ಹಾಗಾಗಿ ಆ ಸ್ಪರ್ಧೆಯನ್ನೇ ಅಮಾನ್ಯ ಮಾಡಲಾಯಿತು. ಆರಂಭದಲ್ಲಿ ಅವರು ಚಿನ್ನ ಗೆದ್ದಿದ್ದಾರೆ ಎಂದು ಘೋಷಿಸಿದ್ದರೂ ಎಲ್ಲವೂ ಬದಲಾಯಿತು. ಹೀಗಾದರೂ ಅವರು ಛಲ ಬಿಡಲಿಲ್ಲ. ಅದೇ ಕೂಟದ 1,500 ಮೀ.ನಲ್ಲಿಪಾಲ್ಗೊಂಡರು. ಅಲ್ಲಿ ಬೆಳ್ಳಿಯನ್ನು ಗೆದ್ದರು. ಪ್ರಧಾನಿಯಿಂದಲೇ ಅಭಿನಂದಿಸಲ್ಪಟ್ಟರು.

ಕೆ. ಪೃಥ್ವಿಜಿತ್‌

Advertisement

Udayavani is now on Telegram. Click here to join our channel and stay updated with the latest news.

Next