ಕಡೂರು: ಕಡೂರು ವಿಧಾನಸಭಾ ಕ್ಷೇತ್ರದ ಪ್ರಮುಖ ಜಾತ್ರೆಗಳಲ್ಲಿ ಅಂತರಘಟ್ಟೆಯ ದುಗಾಂìಬಾ ದೇವಿಯದು ಪ್ರಮುಖವಾದದ್ದು. ಇದೀಗ ಅಜ್ಜಂಪುರ ತಾಲೂಕಿನಲ್ಲಿರುವ ಅಂತರಘಟ್ಟಮ್ಮ ದೇವಿಗೆ ಕಡೂರು-ಬೀರೂರಿನಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ಭಕ್ತರಿದ್ದಾರೆ.
ಕಡೂರು ಜನತೆಗೆ ಅಂತರಘಟ್ಟಮ್ಮನ ಬಾನ ಅಥವಾ ಅಮ್ಮನಹಬ್ಬ ಬಂತೆಂದರೆ ಕಡೂರಿನಲ್ಲಿ ಕುರಿ ವ್ಯಾಪಾರ ಬಲುಜೋರು. ಅದರಲ್ಲೂ ಹಬ್ಬಕ್ಕೆ ಮುನ್ನ ಸೋಮವಾರ ಬಂತೆಂದರೆ ಅದು ಹಬ್ಬದ ಸಂತೆ. ಸಾವಿರಾರು ಸಂಖ್ಯೆಯಲ್ಲಿ ದೂರದ ಚಿತ್ರದುರ್ಗ, ಹೊಳಲ್ಕೆರೆ, ಹಿರಿಯೂರು, ಹಾವೇರಿ, ದಾವಣಗೆರೆ, ಮುಂತಾದ ಕಡೆಗಳಿಂದ ಕುರಿಗಳನ್ನು ಕಡೂರಿಗೆ ತರುತ್ತಾರೆ. ಪಟ್ಟಣದ ಎಪಿಎಂಸಿ ಮಾರುಕಟ್ಟೆ ಪ್ರಾಂಗಣ ಭಾನುವಾರ ರಾತ್ರಿಯೇ ಕುರಿಗಳಿಂದ ತುಂಬಿಹೋಗಿತ್ತು. ಸೋಮವಾರವಿಡೀ ಕುರಿ ವ್ಯಾಪಾರ-ವಹಿವಾಟು ಬಹಳ ಜೋರಾಗಿ ನಡೆಯಿತು.
ಒಂದು ಕುರಿಗೆ ಕನಿಷ್ಟ ಹದಿನೈದರಿಂದ ಮೂವತ್ತು ಸಾವಿರ ರೂಪಾಯಿ ಬೆಲೆಯಿತ್ತು. ಚಿತ್ರದುರ್ಗದ ರಾಮಪ್ಪ ಎಂಬುವವರ ಟಗರೊಂದು 25 ಸಾವಿರ ರೂಪಾಯಿಗೆ ಬಿಕರಿಯಾಯಿತು. ಸುಮಾರಾಗಿದ್ದ ಕುರಿಯ ಬೆಲೆಯೂ ಈ ಬಾರಿ 12 ರಿಂದ 18 ಸಾವಿರ ಕಂಡದ್ದು ವಿಶೇಷ. ಸೋಮವಾರದ ಸಂತೆಯಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಕುರಿಗಳು ಮಾರಾಟಗೊಂಡವು. ಕುರಿ ಖರೀದಿ ಸಿದವರು ಬೈಕ್, ಆಟೋ, ಕಾರುಗಳಲ್ಲಿ ಕುರಿಯನ್ನು ಸಾಗಿಸುತ್ತಿದ್ದದ್ದು ಕಂಡು ಬಂದಿತು. ವರ್ಷಕ್ಕೊಮ್ಮೆ ಬರುವ ಈ ಹಬ್ಬಕ್ಕೆ ದೇವಿ ಭಕ್ತರು ಏನೇ ತೊಂದರೆಯಿದ್ದರೂ ಕುರಿ ಖರೀದಿಸುತ್ತಾರೆ. ಇಡೀ ಪಟ್ಟಣ ಅಮ್ಮನ ಹಬ್ಬಕ್ಕೆಶುಭ ಕೋರುವ ಬ್ಯಾನರ್‌ಗಳಿಂದ ತುಂಬಿಹೋಗಿತ್ತು. ಕುರಿ ಖರೀದಿಸಲಾಗದವರು ಕೋಳಿಗಳನ್ನುಖರೀದಿಸುವುದರ ಜೊತೆಗೆ ಮಸಾಲೆ ವಸ್ತುಗಳನ್ನೂಸಂತೆಯಲ್ಲಿ ಖರೀದಿಸಿದರು. ತರಕಾರಿ ವ್ಯಾಪಾರವೂ ಬಹು ಜೋರಾಗಿ ನಡೆಯಿತು. ಈರುಳ್ಳಿ ಮತ್ತು ಬೆಳ್ಳುಳ್ಳಿ, ಸುಂಟಿ ಹೆಚ್ಚು ಮಾರಾಟವಾಯಿತು.
ಮಂಗಳವಾರ ಸಂಜೆ ಕಡೂರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಎತ್ತಿನ ಗಾಡಿಗೆ ಶೃಂಗಾರ ಮಾಡಿಕೊಂಡು ಗಾಡಿ ಓಡಿಸುವ ಸಂಪ್ರದಾಯ ನಡೆಯಲಿದೆ. ಹೊಸ ಬಟ್ಟೆ ತೊಟ್ಟು. ಗಾಡಿಗಳಲ್ಲಿಪಾನಕ ತುಂಬಿಕೊಂಡು ಗಾಡಿ ಓಡಿಸುವಾಗ ಅವಘಡ ನಡೆದ ಪ್ರಸಂಗಗಳು ಸಹ ಇವೆ. ಪೊಲೀಸ್ ರಕ್ಷಣೆಯಲ್ಲಿ ಗಾಡಿ ಓಟ ನಡೆಯಲಿದೆ.ಶುಕ್ರವಾರ ಅಂತರಗಟ್ಟೆಯಲ್ಲಿ ಶ್ರೀ ದುರ್ಗಾಂಬಾ ದೇವಿಯ ರಥೋತ್ಸವ ನಡೆಯಲಿದೆ. ಅಂದು ಜಾತ್ರೆಯ ವಿಶೇಷವಿದ್ದು ಇತರೆ ಹಲವಾರು ಜನಾಂಗದವರು ಶುಕ್ರವಾರ ಹೋಳಿಗೆ ಮಾಡಿ ಅಂತರಘಟ್ಟಮ್ಮನವರಿಗೆ ನೈವೇದ್ಯ ಮಾಡುವ ವಾಡಿಕೆ ನಡೆದು ಬಂದಿದೆ.