ಗೋರಖ್ ಪುರ: ಪ್ರೇಯಸಿಯ ಪತಿಗೆ 71 ಕುರಿಗಳನ್ನು ನೀಡಿ, ಅಕೆಯೊಂದಿಗೆ ಬಾಳಲು ಪಂಚಾಯತ್‌ನಿಂದ ಅನುಮತಿ ಪಡೆದ ಭಗ್ನ ಪ್ರೇಮಿಯ ಕಥೆ ಇದೀಗ ಭಾರೀ ವೈರಲ್ ಆಗಿದೆ.
ಉತ್ತರ ಪ್ರದೇಶದ ಗೋರಖ್ ಪುರ ಜಿಲ್ಲೆಯ ಬೈಲೋ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಗ್ರಾಮ ಪಂಚಾಯತ್‌ನ ಈ ವಿಲಕ್ಷಣ ನಿರ್ಧಾರ ಇದೀಗ ಚರ್ಚೆಗೆ ಗ್ರಾಸವಾಗಿದೆ.
ವರದಿಗಳ ಪ್ರಕಾರ ವಿವಾಹಿತೆ ತನ್ನ ಪ್ರಿಯಕರನೊಂದಿಗೆ ಕಳೆದ ತಿಂಗಳು ನಾಪತ್ತೆಯಾಗಿದ್ದರು. ಈ ಕುರಿತು ಆಕೆಯ ಪತಿ ಪೊಲೀಸ್ ಠಾಣೆಗೆ ದೂರನ್ನು ನೀಡಿದಾಗ, ಜೋಡಿಯು ಪೊಲೀಸ್ ಠಾಣೆಗೆ ಹಾಜರಾಗಿತ್ತು. ಆಕೆ ತನ್ನ ಪತಿಯೊಂದಿಗೆ ಜೀವನ ನಡೆಸಲು ಆಗುವುದಿಲ್ಲ, ತಾನೀಗ ಗರ್ಭಿಣಿ ಎಂಬ ಹೇಳಿಕೆ ನೀಡಿದ್ದಳು.
ಈ ಬಗ್ಗೆ ಕೌಟುಂಬಿಕ ಮತ್ತು ವೈವಾಹಿಕ ಭಿನ್ನಾಭಿಪ್ರಾಯಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಲು ಗ್ರಾಮದಲ್ಲಿ ಪಂಚಾಯತ್ ಸಭೆಯನ್ನು ಏರ್ಪಡಿಸಲಾಗಿತ್ತು. ಅಲ್ಲಿ ಪ್ರಿಯಕರ ತಾನು ಸಾಕಿರುವ ಕುರಿಗಳಲ್ಲಿ ಅರ್ಧದಷ್ಟನ್ನು ಕೊಡಲೊಪ್ಪಿದರೆ ವಿವಾಹಿತೆಯನ್ನು ಜೊತೆಗೆ ಕರೆದೊಯ್ಯಬಹುದೆಂದು ಪಂಚಾಯತ್ ಆದೇಶ ನೀಡಿತು. ಇದಕ್ಕೆ ತಕ್ಷಣವೇ ಒಪ್ಪಿದ ಪ್ರಿಯಕರ, ಪ್ರೇಯಸಿಯ ಪತಿಗೆ 71 ಕುರಿಗಳನ್ನು ಒಪ್ಪಿಸಿದಾಗ ಪ್ರಕರಣ ಸುಖಾಂತ್ಯವಾಗಿ ಜೀವನವನ್ನು ಮುಂದುವರಿಸಿದ್ದರು.
ಅದರೆ ಪ್ರಕರಣಕ್ಕೆ ವಿಚಿತ್ರ ತಿರುವು ದೊರೆತು ಪ್ರಿಯಕರನ ತಂದೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ವಿವಾಹಿತೆಯೆ ಮೊದಲ ಪತಿ ತನ್ನ 71 ಕುರಿಗಳನ್ನು ಕದ್ದೊಯ್ದಿದ್ದಾನೆಂದು ದೂರು ದಾಖಲಿಸಿದ್ದಾರೆ. ನಿಮ್ಮ ಮಗನೇ ಕುರಿಗಳನ್ನು ನೀಡಿದ್ದಾನೆ ಎಂದರೂ ಒಪ್ಪದ ಅವರು ಕುರಿಗಳ ಮಾಲಿಕ ನಾನು, ನಾನು ಅವುಗಳನ್ನು ಸಾಕಿದ್ದೇನೆ . ನನ್ನ ಮಗನಿಗೆ ಅದರ ಮೇಲೆ ಯಾವುದೇ ಹಕ್ಕಿಲ್ಲ ಎಂದು ವಾದಿಸಿದ್ದಾರೆ. ಅತ್ತ ಅವರ ಮಗನೂ ಕುರಿಗಳ ಮೇಲೆ ತನಗೂ ಹಕ್ಕಿದೆ ಎಂದೂ ವಾದಿಸುತ್ತಿದ್ದಾನೆ.
ಒಟ್ಟಾರೇ ಪ್ರಕರಣ ಗೊಂದಲದ ಗೂಡಾಗಿದ್ದು, ಸಮಸ್ಯೆಯನ್ನು ಬಗೆಹರಿಸುವ ಹೊಣೆಗಾರಿಕೆ ಪೊಲೀಸರ ಹೆಗಲೇರಿದ್ದು ಹೇಗೆ ಪರಿಹರಿಸಬೇಕೆಂದು ತಿಳಿಯದೆ ಒತ್ತಡಕ್ಕೆ ಸಿಲುಕಿದ್ದಾರೆ.