Advertisement

ಬೆಳೆ ನಷ್ಟ ಸರಿದೂಗಿಸಲು ಕುರಿ ಸಾಕಾಣಿಕೆ!

07:28 AM Feb 25, 2019 | |

ಚಿತ್ರದುರ್ಗ: ಹೊಸ ಸಂಶೋಧನೆ, ಹಣ್ಣಿನ ತೋಟಗಳ ವಿಸ್ತರಣೆಯಂತಹ ಕಾರ್ಯಕ್ರಮಗಳಿಗೆ ಹೆಸರಾಗಿದ್ದ ಜಿಲ್ಲೆಯ ತೋಟಗಾರಿಕೆ ಇಲಾಖೆ, ಬದಲಾದ ಕಾಲಘಟ್ಟದಲ್ಲಿ ತನ್ನ ಪಥ ಬದಲಾಯಿಸಿಕೊಂಡಿದ್ದು ಕುರಿ ಸಾಕಾಣಿಕೆಗೆ ಉತ್ತೇಜನ ನೀಡಲು ಮುಂದಾಗಿದೆ! ಹೌದು, ಅತ್ಯಂತ ಕಡಿಮೆ ಮಳೆ ಬೀಳುವ ಚಿತ್ರದುರ್ಗ ಜಿಲ್ಲೆಯಲ್ಲಿ ರೈತರು ಕೃಷಿ ಮತ್ತು ತೋಟಗಾರಿಕೆ ಬೇಸಾಯದ ಜೊತೆಗೆ ಕೃಷಿಯಲ್ಲಿನ ನಷ್ಟ ಸರಿದೂಗಿಸಲು ಕುರಿ ಸಾಕಾಣಿಕೆಗೆ ಉತ್ತೇಜನ ನೀಡಲು ಕರ್ನಾಟಕ ರಾಜ್ಯ ವಲಯದ ತೋಟಗಾರಿಕೆ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ. 

Advertisement

ಜಿಲ್ಲೆಯ ತೋಟಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿ ಒಟ್ಟು 13 ತೋಟಗಾರಿಕೆ (ನರ್ಸರಿ) ಫಾರಂಗಳಿವೆ. 13ರಲ್ಲಿ 11 ತೋಟಗಾರಿಕೆ ಫಾರಂಗಳಲ್ಲಿ ತಲಾ ಐವತ್ತರಂತೆ ಕುರಿ ಸಾಕಾಣಿಕೆ ಮಾಡಲು ಉದ್ದೇಶಿಸಲಾಗಿದೆ. ಈಗಾಗಲೇ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಸಮೀಪದ ಎನ್‌. ಮಹದೇವಪುರ ಸಸ್ಯ ಕ್ಷೇತ್ರದ ತೋಟಗಾರಿಕೆ ಫಾರಂನಲ್ಲಿ ಈಗಾಗಲೇ 50 ಕುರಿಗಳನ್ನು ಸಾಕಾಣಿಕೆ ಮಾಡಲಾಗುತ್ತಿದೆ.

ಮೊಳಕಾಲ್ಮೂರು ತಾಲೂಕಿನ ರಾಯಾಪುರದ ತೋಟಗಾರಿಕೆ ಫಾರಂನಲ್ಲೂ 50 ಕುರಿಗಳ ಸಾಕಾಣಿಕೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಲ್ಲದೆ ಉಳಿದ 9 ತೋಟಗಾರಿಕೆ ಫಾರಂಗಳಲ್ಲಿ ಶೀಘ್ರದಲ್ಲಿಯೇ ಕುರಿ ಸಾಕಾಣಿಕೆ ಆರಂಭಿಸಲಾಗುತ್ತದೆ. 

ಜಿಲ್ಲೆಯಲ್ಲಿ ಕಡಿಮೆ ನೀರು ಬಳಕೆ ಮಾಡಿ ತೋಟಗಾರಿಕೆ ಬೆಳೆ ಬೆಳೆಯುತ್ತಿರುವ ರೈತರು ಪರ್ಯಾಯವಾಗಿ ಕುರಿ ಸಾಕಾಣಿಕೆಯನ್ನು ಮಾಡಲಿ ಎಂಬುದು ತೋಟಗಾರಿಕೆ ಇಲಾಖೆ ಕುರಿ ಸಾಕಾಣಿಕೆ ಮಾಡುವ ನಿರ್ಧಾರಕ್ಕೆ ಬರಲು ಪ್ರಮುಖ ಕಾರಣ. ಬರಗಾಲದ ದಿನಗಳಲ್ಲಿ ಗುಳೆ ಹೋಗುವುದನ್ನು ತಪ್ಪಿಸಲು ಲಭ್ಯ ಇರುವ ನೀರಿನಲ್ಲಿ ಕುರಿ ಸಾಕಾಣಿಕೆ ಮಾಡಿ ಹೆಚ್ಚಿನ ಲಾಭ ಪಡೆಯಲಿ ಎನ್ನುವ ಉದ್ದೇಶದಿಂದ ತೋಟಗಾರಿಕೆ ಇಲಾಖೆ ಅಧಿಕಾರಿಗಳು
ಕುರಿ ಸಾಕಾಣಿಕೆಗೆ ಒತ್ತು ನೀಡಿದ್ದಾರೆ.

ಪ್ರಾತ್ಯಕ್ಷಿಕೆ ಮೂಲಕ ರೈತರಲ್ಲಿ ಅರಿವು ಮೂಡಿಸಲಾಗುತ್ತಿದೆ. ಜತೆಗೆ ಇಲ್ಲಿನ ಪ್ರದೇಶಗಳ ಹವಾಮಾನ, ವಾತಾವರಣ ಕೂಡ ಕುರಿ ಸಾಕಾಣಿಕೆಗೆ ಯೋಗ್ಯವಾಗಿದೆ. ನರ್ಸರಿಗಳಲ್ಲಿ ಸಾಕಾಣಿಕೆ ಮಾಡುತ್ತಿರುವ ಕುರಿಗಳನ್ನು ರೈತರಿಗೆ ತೋರಿಸಿ ರೈತರನ್ನು ಕುರಿ ಸಾಕಾಣಿಕೆಯತ್ತ ಆಕರ್ಷಿಸುವ ಆಶಯ
ಹೊಂದಲಾಗಿದೆ.

Advertisement

ಎಷ್ಟು ಸಿಗುತ್ತೆ ಅನುದಾನ?: ಕರ್ನಾಟಕ ರಾಜ್ಯ ತೋಟಗಾರಿಕೆ ಅಭಿವೃದ್ಧಿ ಏಜೆನ್ಸಿಯಿಂದ ನರ್ಸರಿ ಫಾರಂಗಳಲ್ಲಿ ಕುರಿ ಸಾಕಾಣಿಕೆಗೆ (ಕೆಎಸ್‌ಎಚ್‌ಡಿಎ) 2 ಲಕ್ಷ ರೂ. ಅನುದಾನ ನೀಡಲಾಗಿದೆ. ಆ ಅನುದಾನದಲ್ಲಿ ಎನ್‌. ಮಹದೇವಪುರ ನರ್ಸರಿ ಫಾರಂನಲ್ಲಿ 50 ಗಂಡು ಕುರಿ ಮರಿಗಳನ್ನು ತಂದು ನಾಲ್ಕೈದು ತಿಂಗಳು ಸಾಕಾಣಿಕೆ ಮಾಡಲಾಗುತ್ತಿದೆ. ಕುರಿ ಮರಿಗಳಿಗೆ ಹುಲ್ಲು, ನೀರು ಇತರೆ ಆಹಾರ ನೀಡಿ ಬೆಳೆಸಲಾಗಿದೆ. ಟೆಂಡರ್‌ ಕರೆದು ಕುರಿಗಳನ್ನು ಮಾರಾಟ ಮಾಡುವ ಉದ್ದೇಶ ಹೊಂದಲಾಗಿದೆ. ಇದರಿಂದ ಬಂದ ಆದಾಯವನ್ನು ಕೆಎಸ್‌ಎಚ್‌ಡಿಎಗೆ ಜಮಾ ಮಾಡಲಾಗುತ್ತದೆ.
 
ಸ್ಥಳೀಯ ಪಶು ವೈದ್ಯಾಧಿಕಾರಿಗಳು ನಿಯಮಿತವಾಗಿ ನರ್ಸರಿ ಫಾರಂಗೆ ಭೇಟಿ ನೀಡಿ ಕುರಿ ಮರಿಗಳ ಆರೋಗ್ಯ ತಪಾಸಣೆ ನಡೆಸುತ್ತಾರೆ. ಕುರಿ ಸಾಕಾಣಿಕೆ ಮತ್ತು ಇತರೆ ನಿರ್ವಹಣೆಯನ್ನು ಫಾರಂನಲ್ಲಿ ಕಾರ್ಯನಿರ್ವಹಿಸುವ ತೋಟಗಾರಿಕೆ ಇಲಾಖೆ ಸಿಬ್ಬಂದಿಗಳೇ ಮಾಡುತ್ತಿದ್ದಾರೆ.
ಇದಕ್ಕಾಗಿ ಇಲಾಖೆ ಯಾವುದೇ ಅನುದಾನ ಖರ್ಚು ಮಾಡುತ್ತಿಲ್ಲ.

ರೈತರು ಸಾಂಪ್ರದಾಯಿಕ ಕೃಷಿಯನ್ನು ನಂಬಿ ಕೂರದೆ ಕುರಿ ಸಾಕಾಣಿಕೆಯತ್ತ ಗಮನ ಹರಿಸಿದರೆ ಅಲ್ಪಾವಧಿಯಲ್ಲಿ ಅಧಿಕ ಆದಾಯ ಗಳಿಸಬಹುದಾಗಿದೆ. ರೈತರು ಬರಗಾಲಕ್ಕೆ ತುತ್ತಾಗಿ ನಷ್ಟ ಅನುಭವಿಸುತ್ತಿದ್ದಾರೆ. ಹಾಗಾಗಿ ಬೆಳೆಯ ಜತೆಗೆ ಉಪಕಸುಬಿನ ರೀತಿಯಲ್ಲಿ ಕುರಿ ಸಾಕಾಣಿಕೆ ಮಾಡುವುದರಿಂದ ಆರ್ಥಿಕವಾಗಿ ಸಬಲರಾಗಬಹುದು. ಅದಕ್ಕೆ ರೈತರು ಮನಸ್ಸು ಮಾಡಬೇಕಷ್ಟೇ.

ರೈತರಿಗೆ ಪ್ರಾತ್ಯಕ್ಷಿಕೆ ನೀಡಲು ಮತ್ತು ಕಡಿಮೆ ನೀರಿನಲ್ಲಿ ಕುರಿ ಸಾಕಾಣಿಕೆ ಮಾಡಲು ಸಾಧ್ಯ ಎನ್ನುವುದನ್ನು ತೋರಿಸಲು ಕುರಿ ಸಾಕಾಣಿಕೆಗೆ ಮುಂದಾಗಿದ್ದೇವೆ. ಜಿಲ್ಲೆಯ ಆರು ತಾಲೂಕುಗಳಲ್ಲೂ ಸರ್ಕಾರಿ ಫಾರಂಗಳಿವೆ. ಅದರಲ್ಲಿ ಲಭ್ಯವಾಗುವ ಮೇವು ಬಳಸಿ ಸಾಕಾಣಿಕೆ ಮಾಡಲಾಗುತ್ತದೆ.
 ಬಿ. ದೇವರಾಜ್‌, ಹಿರಿಯ ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ.

ಮೊಳಕಾಲ್ಮೂರು ಹಾಗೂ ಹೊಸದುರ್ಗ ನರ್ಸರಿ ಹೊರತುಪಡಿಸಿ ಜಿಲ್ಲೆಯ ಉಳಿದ 11 ತೋಟಗಾರಿಕೆ ಫಾರಂಗಳಲ್ಲಿ ಕುರಿ ಸಾಕಾಣಿಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಚಿತ್ರದುರ್ಗದ ನರ್ಸರಿ, ಟಿ.ಎನ್‌. ಕೆರೆ, ನೆಲ್ಲಿಕಟ್ಟೆ, ಐನಳ್ಳಿ, ಚಿತ್ರಹಳ್ಳಿ, ಹಾಲುರಾಮೇಶ್ವರ, ವೇದಾವತಿ ಫಾರಂ ಹಾಗೂ ನಗರಂಗೆರೆ ಗ್ರಾಮದ ನರ್ಸರಿಗಳಲ್ಲಿ ಕುರಿ ಸಾಕಾಣಿಕೆ ಮಾಡಲಾಗುತ್ತದೆ. 
ಜಿ. ಸವಿತಾ, ಉಪನಿರ್ದೇಶಕಿ,  ತೋಟಗಾರಿಕೆ ಇಲಾಖೆ.

ಹರಿಯಬ್ಬೆ ಹೆಂಜಾರಪ್ಪ

Advertisement

Udayavani is now on Telegram. Click here to join our channel and stay updated with the latest news.

Next