ಅಮೀನಗಡ: ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಶನಿವಾರ ನಡೆಯಬೇಕಿದ್ದ ಕುರಿ ಸಂತೆ ಬಂದ್ ಮಾಡಿದ್ದರಿಂದ ರಾಜ್ಯದ ವಿವಿಧೆಡೆಯಿಂದ ಬಂದಿದ್ದ ವ್ಯಾಪಾರಸ್ಥರು, ಕುರಿ ಮಾಲೀಕರು ಪರದಾಡುವಂತಾಯಿತು.
ರಾಜ್ಯಮಟ್ಟದಲ್ಲೇ ಹೆಸರುವಾಸಿಯಾಗಿರುವ, ಶತಮಾನ ಕಂಡ ಪಟ್ಟಣದ ಕುರಿ ಸಂತೆಯಲ್ಲಿ ಕಳೆದ ಶನಿವಾರ ಡಿ. 21ರಂದು ಅಹಿತಕರ ಘಟನೆ ನಡೆದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ತಾಲೂಕು ಆಡಳಿತ ಮಂಡಳಿ ಹಾಗೂ ಪೊಲೀಸ್ ಇಲಾಖೆ ಒಂದು ದಿನದ ಮಟ್ಟಿಗೆ ಕುರಿ ಸಂತೆ ಬಂದ್ ಮಾಡಿದ ಹಿನ್ನೆಲೆಯಲ್ಲಿ ಮಾಹಿತಿ ಇಲ್ಲದೆ ಬಂದಿದ್ದ ರಾಜ್ಯದ ವಿವಿಧ ಭಾಗದ ವ್ಯಾಪರಸ್ಥರು ತೀವ್ರ ತೊಂದರೆ ಅನುಭವಿಸಿದರು.
ವ್ಯವಹಾರ ಸ್ಥಗಿತ: ಪ್ರತಿ ಶನಿವಾರ ಕೋಟ್ಯಂತರ ರೂ. ವ್ಯವಹಾರವಾಗುವ ಕುರಿ ಸಂತೆ ಮತ್ತು ದನದ ಸಂತೆ ಕ್ಷುಲಕ್ಕ ಕಾರಣಕ್ಕೆ ಬಂದ್ ಆದ ಹಿನ್ನೆಲೆಯಲ್ಲಿ ಶನಿವಾರ ಕುರಿ ಮತ್ತು ದನದ ಸಂತೆಯಲ್ಲಿ ಕೋಟ್ಯಂತರ ರೂ. ವ್ಯವಹಾರ ಸ್ಥಗಿತಗೊಂಡಿತ್ತು. ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ವ್ಯಾಪಾರಸ್ಥರು ಪಟ್ಟಣದ ಹೊರ ವಲಯದ ರಕ್ಕಸಗಿ, ಬೇವಿನಮಟ್ಟಿ, ಸೂಳೇಭಾವಿ ಸೇರಿದಂತೆ ವಿವಿಧ ರಸ್ತೆಯ ಪಕ್ಕದಲ್ಲಿ ನಿಂತು ಸಣ್ಣ ಪ್ರಮಾಣದಲ್ಲಿ ಸಂತೆ ಮಾಡಿದ್ದು ಕಂಡು ಬಂತು.ಅಷ್ಟೆ ಅಲ್ಲದೇ ದೂರದಿಂದ ಬಂದಿದ್ದ ವ್ಯಾಪಾರಸ್ಥರು ಸಂತೆ ಬಂದ್ ಮಾಡಿದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದರು.
ಬಿಕೋ ಎಂದ ಸಂತೆ: ಪ್ರತಿ ಶನಿವಾರ ಸಾವಿರಾರು ಜನರಿಂದ ತುಂಬಿ ತುಳುಕುತ್ತಿದ್ದ ಕುರಿ ಸಂತೆ ಮತ್ತು ದನದ ಸಂತೆ ಬಂದ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ಸ್ತಬ್ಧವಾಗಿತ್ತು. ಅಷ್ಟೆ ಅಲ್ಲದೇ ನೂರಾರು ಜನರ ಹೋಟೆಲ್‌ಗಳು ಕೂಡಾ ಬಂದ್ ಆಗಿದ್ದವು. ಆದರೆ ದನದ ಸಂತೆಯಲ್ಲಿ ಕೆಲವು ಹೋಟೆಲ್ ಗಳು ತೆರೆದಿದ್ದವು. ಅಲ್ಲಿಯೂ ಕೂಡಾ ಸಂತೆ ಬಂದ್ ಮಾಡಿದ ನಂತರ ಕೆಲವು ಅಂಗಡಿಕಾರರ ತಿಂಡಿ ತಿನಿಸುಗಳು ಹಾಗೆ ಉಳಿದಿದೆ. ಇದರಿಂದ ಅವರ ಮುಖದಲ್ಲಿ ನಿರಾಸೆ ಭಾವ ಮೂಡಿತ್ತು. ಅಮೀನಗಡ ಪಟ್ಟಣದ ಕುರಿ ಸಂತೆಯಲ್ಲಿ ಹಿಂದಿನ ಶನಿವಾರ ಡಿ. 21ರಂದು ನಡೆದ ಕೆಲವು ಅಹಿತಕರ ಘಟನೆಯಿಂದ ಮುಂಜಾಗ್ರತವಾಗಿ ಶಾಂತಿ ಕಾಪಾಡಲು ಡಿ.
28ರಂದು ಶನಿವಾರ ಒಂದು ದಿನ ಮಾತ್ರ ಬಂದ ಆಗಿದ್ದ ಕುರಿ ಸಂತೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಹಾಗೂ ಸ್ವಚ್ಚತೆ ಮಾಡಿ ರಾಜ್ಯ ಹೆದ್ದಾರಿಯಲ್ಲಿ ವ್ಯಾಪಾರಸ್ಥರು ಯಾವುದೇ ಕಾರಣಕ್ಕೂ ನಿಲ್ಲದೇ ಒಳಗೆ ನಿಂತು ಸಂತೆ ಮಾಡುವ ಹಾಗೆ ವ್ಯವಸ್ಥೆ ಮಾಡಿ ಪಟ್ಟಣದಲ್ಲಿ ಮೊದಲು ನಡೆಯುತ್ತಿದ್ದ ಸ್ಥಳದಲ್ಲಿಯೇ ಕುರಿ ಸಂತೆ ಮುಂದುವರಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.