Advertisement

ಕುರಿ ತಳಿ ಸಂವರ್ಧನಾ ಘಟಕಕ್ಕೆ ಅಪಸ್ವರ

05:03 PM Jun 29, 2022 | Team Udayavani |

ಕುಷ್ಟಗಿ: ತಾಲೂಕಿನ ನಿಲೋಗಲ್‌ ಗ್ರಾಮದಲ್ಲಿ ದೇಶದ ಎರಡನೇ ನಾರಿ ಸುವರ್ಣ ಕುರಿ ತಳಿ ಸಂವರ್ಧನಾ ಘಟಕ ಸ್ಥಾಪನೆಯ ಕಾಮಗಾರಿ ಶೀಘ್ರ ಪ್ರಾರಂಭವಾಗಲಿದೆ.

Advertisement

ತಾಲೂಕಿನ ಹನುಮನಾಳ ಭಾಗದ ಶರಣು ತಳ್ಳಿಕೇರಿ ಅವರು ಕುರಿ ಮತ್ತು ಉಣ್ಣೆ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ನಂತರ ಈ ಭಾಗಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಅವರ ಮಹಾತ್ವಕಾಂಕ್ಷೆ ಇದೀಗ ಸಾಕಾರಗೊಂಡಿದೆ. ಅವರ ಇಚ್ಛಾಶಕ್ತಿ ಮೇರೆಗೆ ಕೊಪ್ಪಳ ಜಿಲ್ಲಾಧಿ ಕಾರಿಗಳು 9.36 ಎಕರೆ ಜಮೀನು ಕಾಯ್ದಿರಿಸಿದ್ದಾರೆ. ಇದಕ್ಕಾಗಿ 1 ಕೋಟಿ ರೂ. ಅನುದಾನದಲ್ಲಿ 60 ಲಕ್ಷ ರೂ. ತಕ್ಷಣ ಕಾಮಗಾರಿ ಆರಂಭಿಸಲು ಕೆಆರ್‌ಐಡಿಎಲ್‌ಗೆ ಸೂಚಿಸಲಾಗಿತ್ತು. ಈ ಬೆನ್ನಲ್ಲೇ ನಾರಿ ಸುವರ್ಣ ಕುರಿ ತಳಿ ಸಂವರ್ಧನಾ ಘಟಕದ ಕಟ್ಟಡದ ಭೂಮಿಪೂಜೆಯ ಸಿದ್ಧತೆಯೂ ನಡೆಸಲಾಗಿತ್ತು.

ಅಪಸ್ವರ: ಈ ಬೆಳವಣಿಗೆಯಲ್ಲಿ ನಿಲೋಗಲ್‌ ಗ್ರಾಮದಲ್ಲಿ ಸರ್ವೇ ನಂ. 25 ಮತ್ತು 57ರಲ್ಲಿ ಗಾಯರಾಣ ಜಮೀನಿನಲ್ಲಿ ಕಲ್ಲು ಒಡೆದು ಹಾಗೂ ವ್ಯವಸಾಯ ಮಾಡಲಾಗುತ್ತಿದೆ. ಈ ಜಾಗೆಯಲ್ಲಿ ಉದ್ದೇಶಿತ ನಾರಿ ಸುವರ್ಣ ಕುರಿ ಸಂವರ್ಧನಾ ಘಟಕ ಸ್ಥಾಪಿಸುವುದಾದರೆ ನಮ್ಮ ವಿರೋಧ ಇದೆ. ತಾವು ಬೀದಿ ಪಾಲಾಗುವ ಸಂಭವವಿದೆ. ಇಲ್ಲಿ ಬೇಡ ಬೇರೆಡೆಗೆ ಸ್ಥಳಾಂತರಿಸಿರಿ. ಒಂದು ವೇಳೆ ಘಟಕ ಸ್ಥಾಪಿಸಲು ಮುಂದಾದರೆ ವಿಷ ಸೇವಿಸಿ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿ ಶಾಸಕ ಅಮರೇಗೌಡ ಪಾಟೀಲ ಬಯ್ನಾಪೂರ ಅವರಿಗೆ ನಿಲೋಗಲ್‌ ಗ್ರಾಮದ ಕೆಲವರು ಮನವಿ ಸಲ್ಲಿಸಿದ್ದಾರೆ. ಈ ಮನವಿಗೆ ಶಾಸಕ ಬಯ್ನಾಪೂರ ಅವರು ಪ್ರತಿಕ್ರಿಯಿಸಿ, ನಿಲೋಗಲ್‌ ಗ್ರಾಮಸ್ಥರ ಮನವಿ ಸ್ವೀಕರಿಸಿ ಮಾರ್ಚ್‌ 27ರಂದು ಜಿಲ್ಲಾಧಿಕಾರಿಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲು ಪತ್ರ ಬರೆದಿದ್ದರು.

ನಿಲೋಗಲ್‌ ಗ್ರಾಮದ ರೈತರ ವಿರೋಧದ ಬಗ್ಗೆ ಸದರಿ ಪತ್ರಕ್ಕೆ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಉಪ ನಿರ್ದೇಶಕರು, ಜಿಲ್ಲಾಧಿ ಕಾರಿ ಹಾಗೂ ಶಾಸಕರ ಪತ್ರದ ಉಲ್ಲೇಖದನ್ವಯ ಕುರಿ ಮತ್ತು ಉಣ್ಣೆ ನಿಗಮದ ಸಹಾಯಕ ನಿರ್ದೇಶಕರಿಗೆ ಜೂನ್‌ 22ರಂದು ನಿಮ್ಮ ಹಂತದಲ್ಲಿ ಪರಿಶೀಲಿಸಲು ಪತ್ರ ಬರೆಯಲಾಗಿದೆ.

Advertisement

ಬರಗಾಲ ಪೀಡಿತ ತಾಲೂಕಿನಲ್ಲಿ ಕೃಷಿಗೆ ಪರ್ಯಾಯವಾಗಿ ಕುರಿ ಸಾಕಾಣಿಕೆಯಲ್ಲಿ ನಾರಿ ಸುವರ್ಣ ತಳಿ ಕುರಿ ಸಾಕಾಣಿಕೆ ಲಾಭದಾಯವಾಗಿದೆ. ಈ ಸುಧಾರಿತ ತಳಿ ನಾರಿ ಎಂದರೆ ನಿಂಬಾಳ್ಕರ್‌ ಅಗ್ರಿಕಲ್ಚರಲ್‌ ರಿಸರ್ಚ್‌ ಇನ್ಸ್ಟಿಟ್ಯೂಟ್‌ (ಎನ್‌ ಎಆರ್‌ ಐ) ಇದು ಮಹಾರಾಷ್ಟ್ರ ಮೂಲದ್ದು, ಈ ತಳಿಗೆ ವಿಜ್ಞಾನಿ ನಿಂಬಾಳ್ಕರ್‌ ಹೆಸರು ಇಡಲಾಗಿದೆ. ಇದು ರೋಗ ನಿರೋಧಕ ಶಕ್ತಿ ಹೆಚ್ಚು ಹೊಂದಿದೆ. ಅವಳಿ, ತ್ರಿವಳಿ ಮರಿ ಹಾಕುವ ವಿಶಿಷ್ಟತೆ ಇದೆ. ಪ್ರತಿ ಕುರಿ 25 ಸಾವಿರ ರೂ.ಗೆ ಮಾರಾಟವಾಗಲಿದೆ. ಈ ಘಟಕ ಸ್ಥಾಪನೆಯಾದರೆ ಕೊಪ್ಪಳ ಜಿಲ್ಲೆ ಮಾತ್ರ ಅಲ್ಲ ರಾಜ್ಯದ 15 ಲಕ್ಷ ಕುರಿಗಾಹಿ ಕುಟುಂಬಗಳಿಗೆ ಆರ್ಥಿಕ ಸ್ವಾವಲಂಬನೆ ಸಾಧ್ಯವಾಗಲಿದೆ. ನಿರುದ್ಯೋಗಿ ಯುವಕ, ಯುವತಿಯರಿಗೆ ಸ್ವಾವಲಂಬಿ ಜೀವನ ನಡೆಸಲು ಪೂರಕವಾಗಲಿದೆ.

ನಾರಿ ಸುವರ್ಣ ಕುರಿ ಸಂವರ್ಧನಾ ಘಟಕ ನಮ್ಮ ಭಾಗದಲ್ಲಿ ಸ್ಥಾಪನೆಗೆ ಸ್ವಾಗತವಿದೆ. ಘಟಕದಿಂದ ಈ ಭಾಗದ ರೈತರಿಗೆ ಅನುಕೂಲ ಆಗಲಿದೆ. ಇದಕ್ಕೆ ನನ್ನ ವಿರೋಧ ಇಲ್ಲ. ನಿಲೋಗಲ್‌ನ ಕೆಲವರು ನನಗೆ ಮನವಿ ಪತ್ರ ಸಲ್ಲಿಸಿದ್ದರು. ಅದನ್ನೇ ಜಿಲ್ಲಾ ಧಿಕಾರಿಗೆ ಪರಿಶೀಲಿಸಿ ಕ್ರಮಕ್ಕೆ ಪತ್ರ ಬರೆದಿರುವೆ. ಈ ಯೋಜನೆಗೆ ನನ್ನ ಸಹಮತವಿದೆ ಹೊರತು ವಿರೋಧ ಇಲ್ಲ. –ಅಮರೇಗೌಡ ಪಾಟೀಲ ಬಯ್ನಾಪೂರ ಕುಷ್ಟಗಿ ಶಾಸಕ

ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮೇಲೆ ನನ್ನ ತಾಲೂಕಿಗೆ ನಾರಿ ಸುವರ್ಣ ಕುರಿ ತಳಿ ಸಂವರ್ಧನಾ ಘಟಕ ಸ್ಥಾಪಿಸಬೇಕೆನ್ನುವುದು ನನ್ನ ಮಹಾದಾಸೆ. ಘಟಕ ಸ್ಥಾಪನೆಗೆ ಸರ್ಕಾರವು ಸ್ಪಂದಿಸಿದೆ. ಸರ್ಕಾರ ಬಜೆಟ್‌ನಲ್ಲಿ ನಿಗದಿತ ಅನುದಾನ ಬಿಡುಗಡೆ ಮಾಡದೇ ಇದ್ದರೂ ನಿಗಮದಿಂದ 1 ಕೋಟಿ ರೂ. ಅನುದಾನದಲ್ಲಿ ಈಗಾಗಲೇ 60 ಲಕ್ಷ ರೂ. ಕೆಆರ್‌ಐಡಿಎಲ್‌ಗೆ ಮಂಜೂರು ಮಾಡಲಾಗಿದೆ. ಹೆಚ್ಚುವರಿಯಾಗಿ 50 ಲಕ್ಷ ರೂ. ಬಿಡುಗಡೆಗೆ ಸರ್ಕಾರಕ್ಕೆ ಕ್ರಿಯಾಯೋಜನೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಘಟಕ ಸ್ಥಾಪನೆಗೆ ಅಲ್ಲಿನ ಕೆಲವರು ವಿರೋಧಿಸಿದ್ದಾರೆ.ದೇಶದ ಎರಡನೇ ಘಟಕ ಹೆಮ್ಮೆಗೆ ಪಾತ್ರವಾಗಿರುವ ನಾರಿ ಸುವರ್ಣ ಸಂವರ್ಧನಾ ಘಟಕ ಶೀಘ್ರವೇ ಭೂಮಿಪೂಜೆ ಮಾಡಿ ಕಾಮಗಾರಿ ಆರಂಭಿಸಲಾಗುವುದು.  -ಶರಣು ತಳ್ಳಿಕೇರಿ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಅಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next