ಮಂಬಯಿ : ಅತ್ಯಂತ ನಿಗೂಢ ಹಾಗೂ ಕುತೂಹಲಕಾರಿ ಎನಿಸಿಕೊಂಡ ಶೀನಾ ಬೋರಾ ಮರ್ಡರ್ ಕೇಸಿನ ತನಿಖೆ ನಡೆಸುತ್ತಿರುವ ವಿಶೇಷ ಸಿಬಿಐ, ಇಂದ್ರಾಣಿ ಮುಖರ್ಜಿ, ಆಕೆಯ ಪತಿ ಪೀಟರ್ ಮುಖರ್ಜಿ ಮತ್ತು ಮಾಜಿ ಪತಿ ಸಂಜೀವ್ ಖನ್ನಾ ವಿರುದ್ದ ಕೊಲೆ ಕೃತ್ಯದ ದೋಷಾರೋಪವನ್ನು ಮಾಡಿದೆ.
ಮೂವರೂ ಆರೋಪಿಗಳ ವಿರುದ್ಧ ವಿಶೇಷ ಸಿಬಿಐ, ಕ್ರಿಮಿನಲ್ ಸಂಚುಮತ್ತು ಕೊಲೆ ಆರೋಪವನ್ನು ಹೊರಿಸಿದೆ.
ಮುಂದಿನ ತಿಂಗಳು ಫೆ.1ರಿಂದ ಈ ನಿಗೂಢ ಕೊಲೆ ಪ್ರಕರಣದ ವಿಚಾರಣೆಯು ವಿಶೇಷ ಸಿಬಿಐ ಕೋರ್ಟಿನಲ್ಲಿ ಆರಂಭವಾಗಲಿದೆ.
ಶೀನಾ ಬೋರಾ ಕೊಲೆ ಕೇಸಿನ ಎಲ್ಲ ಮೂವರು ಆರೋಪಿಗಳ ವಿರುದ್ಧ ಐಪಿಸಿ ಸೆ.120(ಬಿ) (ಕ್ರಿಮಿನಲ್ ಸಂಚು). ಸೆ.364 (ಅಪಹರಣ), 302 ಕೊಲೆ, 34 (ಸಮಾನ ಉದ್ದೇಶದೊಂದಿಗೆ ಹಲವು ವ್ಯಕ್ತಿಗಳಿಂದ ಕೃತ್ಯ) 203 (ಅಪರಾಧಕ್ಕೆ ಸಂಬಂಧಿಸಿದಂತೆ ಸುಳ್ಳು ಮಾಹಿತಿ ನೀಡುವುದು) ಮತ್ತು 201 (ಸಾಕ್ಷ್ಯ ನಾಶ) ಪ್ರಕಾರ ದೋಷಾರೋಪ ಹೊರಿಸಲಾಗಿದೆ.
ಇದಲ್ಲದೆ ಇಂದ್ರಾಣಿ ಮತ್ತು ಸಂಜೀವ್ ವಿರುದ್ಧ ಐಪಿಸಿ ಸೆ.307 (ಕೊಲೆ ಯತ್ನ), ಸೆ.120 ಬಿ (ಕ್ರಿಮಿನಲ್ ಸಂಚು – ಮಗನನ್ನು ಹಾಗೂ ಶೀನಾ ಬೋರಾ ಳ ಸಹೋದರ ಮಿಖಾÀಯಲ್ ಬೋರಾನನ್ನು ಕೊಲೆ ಮಾಡುವ ಸಂಚು) ದೋಷಾರೋಪ ಹೊರಿಸಲಾಗಿದೆ.
ಆರೋಪಿಗಳು ತಾವು ಅಪರಾಧಿಗಳಲ್ಲ ಎಂದು ಹೇಳಿಕೊಂಡಿರುವುದರಿಂದ ಮುಂದಿನ ವಿಚಾರಣೆಯನ್ನು ಪೆ.1ಕ್ಕೆ ನಿಗದಿಸಲಾಗಿದೆ.