ತನ್ನ ಹೋಂ ಸ್ಟೇ ಮತ್ತು ಎಸ್ಟೇಟ್ ಮಾರಾಟ ಮಾಡಲು ಕಾರವಾರಕ್ಕೆ ಬರುವ ಶೀಲ ವ್ಯವಹಾರದ ಸಲುವಾಗಿ ತನ್ನ ಎಸ್ಟೇಟ್‌ನ ಹೋಂ ಸ್ಟೇನಲ್ಲಿಯೇ ಆ ದಿನ ರಾತ್ರಿ ಅಲ್ಲಿಯೇ ಕಳೆಯಬೇಕಾಗುತ್ತದೆ. ಇನ್ನೇನು ಬೆಳಿಗ್ಗೆಯಾದರೆ ತನ್ನ ಹೆಸರಿನಲ್ಲಿರುವ ದೊಡ್ಡ ಆಸ್ತಿ ಬೇರೆಯವರಿಗೆ ವರ್ಗಾವಣೆಯಾಗುತ್ತದೆ. ತನ್ನ ಕುಟುಂಬ ಮಾಡಿಕೊಂಡಿರುವ ದೊಡ್ಡ ಮೊತ್ತದ ಸಾಲವನ್ನು ತೀರಿಸಿ ನಿಟ್ಟುಸಿರು ಬಿಡಬಹುದು ಎಂಬ ಯೋಚನೆ ಶೀಲಳದ್ದು. ಆದರೆ ಕೆಲವೇ ಕ್ಷಣಗಳಲ್ಲಿ ಅಲ್ಲಿ ಯಾರೂ ನಿರೀಕ್ಷಿಸಿದ ಘಟನೆಯೊಂದು ನಡೆದು ಹೋಗುತ್ತದೆ. ಬೆಚ್ಚಗೆ ಭವಿಷ್ಯದ ಬಗ್ಗೆ ಯೋಚಿಸುತ್ತಿದ್ದ ಶೀಲ, ನೀಚರ ಕಬಂಧ ಬಾಹುಗಳಲ್ಲಿ ಸಿಲುಕಿ ನಲುಗುತ್ತಾಳೆ. ನೋಡ-ನೋಡುತ್ತಿದ್ದಂತೆ ಒಂಬತ್ತು ಜನ ರಕ್ತಪಿಪಾಸುಗಳ ಹೇಯ ಕೃತ್ಯ ನಡೆಯಲು ಶುರುವಾಗುತ್ತದೆ. ತನ್ನದೇ ಎಸ್ಟೇಟ್‌ನ ಹೋಂ ಸ್ಟೇನಲ್ಲಿ ಬಂಧಿಯಾಗುವ ಶೀಲ ಅದರಿಂದ ಹೊರಗೆ ಬರುತ್ತಾಳಾ? ಇಲ್ಲವಾ? ಎಂಬುದನ್ನು ತಿಳಿಯಬೇಕಾದರೆ ಈ ವಾರ ತೆರೆಗೆ ಬಂದಿರುವ “ಶೀಲ’ ಸಿನಿಮಾದತ್ತ ಮುಖ ಮಾಡಬಹುದು.
ಸಿನಿಮಾದ ಟೈಟಲ್ಲೇ ಹೇಳುವಂತೆ “ಶೀಲ’ ಮಹಿಳಾ ಪ್ರಧಾನ ಕಥಾಹಂದರ ಹೊಂದಿರುವ ಔಟ್ ಆ್ಯಂಡ್ ಔಟ್ ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಶೈಲಿಯ ಸಿನಿಮಾ. ಸಾಲಗಾರರ ಕಿರುಕುಳ, ಹೆಣ್ಣೊಬ್ಬಳ ಅಸಹಾಯಕತೆ, ಮನುಷ್ಯ ಮುಖವಾಡದಲ್ಲಿ ನಡೆಯುವ ದೌರ್ಜನ್ಯ, ಅಧಿಕಾರಿಗಳ ಧನದಾಹ ಹೀಗೆ ಹತ್ತಾರು ವಿಷಯಗಳನ್ನು ಬಿಚ್ಚಿಡುತ್ತ ಸಾಗುವ ಸಿನಿಮಾಕ್ಕೆ ಕ್ಲೈಮ್ಯಾಕ್ಸ್ ನಲ್ಲಿ ತಾರ್ಕಿಕ ಅಂತ್ಯ ಕೊಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು.
ಸಿನಿಮಾದ ಕಥೆಯ ಎಳೆ ಚೆನ್ನಾಗಿದ್ದರೂ, ಅದನ್ನು ಪರಿಣಾಮಕಾರಿಯಾಗಿ ಪ್ರೇಕ್ಷಕರ ಮುಂದಿಡುವಲ್ಲಿ ನಿರ್ದೇಶಕರು ಅಲ್ಲಲ್ಲಿ ಎಡವಿದಂತಿದೆ. ಚಿತ್ರಕಥೆ ಮತ್ತು ಪಾತ್ರಗಳಲ್ಲಿನ ಕಂಟಿನ್ಯುಟಿ ಕೊರತೆ, ಅಸಮರ್ಪಕ ನಿರೂಪಣೆ, ಪೇಲವ ಸಂಭಾಷಣೆಗಳು, ಅಸಹಜವೆನಿಸುವ ದೃಶ್ಯಗಳು ಪ್ರೇಕ್ಷಕರ ಮನಮುಟ್ಟುವ “ಶೀಲ’ ಪ್ರಯತ್ನಕ್ಕೆ ಹಿನ್ನಡೆಯಾಗಿ ಪರಿಣಮಿಸಿದೆ. ಇನ್ನು ತಾಂತ್ರಿಕ ಗುಣಮಟ್ಟದ ಕೊರತೆ ಕೂಡ “ಶೀಲ’ಳಿಗೆ ದೊಡ್ಡ ಸವಾಲಾಗಿದೆ.
ರಾಗಿಣಿ ದ್ವಿವೇದಿ ಸೇರಿದಂತೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ಕಲಾವಿದರ ಪಾತ್ರಗಳಿಗೆ ಲಿಪ್‌ಸಿಂಕ್ ಆಗದಿರುವುದು, ಪರಿಣಾಮಕಾರಿಯಾಗಿರದ ಹಿನ್ನೆಲೆ ಸಂಗೀತ, ಲೈಟಿಂಗ್ಸ್ ಹೀಗೆ ಒಂದಷ್ಟು ತಾಂತ್ರಿಕ ವಿಷಯಗಳ ಕಡೆಗೆ ಚಿತ್ರತಂಡ ಗಮನ ನೀಡಿದ್ದರೆ, ಚೆನ್ನಾಗಿರುತ್ತಿತ್ತು.
ಜಿ.ಎಸ್.ಕಾರ್ತಿಕ ಸುಧನ್