Advertisement

ಶೆಡ್‌ ನಿರ್ಮಾಣ ಕಾರ್ಯ ಚುರುಕು

11:09 AM Aug 31, 2019 | Suhan S |

ಗದಗ: ಮಲಪ್ರಭಾ ನದಿ ಪ್ರವಾಹಕ್ಕೆ ಒಳಗಾಗಿರುವ ಜಿಲ್ಲೆಯ ನರಗುಂದ ತಾಲೂಕಿನ 8 ಗ್ರಾಮಗಳಲ್ಲಿ ನೂರಾರು ಮನೆಗಳು ಕುಸಿದು ಬಿದ್ದಿವೆ. ಪರಿಣಾಮ ಅನೇಕ ಕುಟುಂಬಗಳಿಗಿನ್ನು ಜಿಲ್ಲಾಡಳಿತ ನಿರ್ಮಿಸುತ್ತಿರುವ ತಾತ್ಕಾಲಿಕ ಶೆಡ್‌ಗಳೇ ಆಸರೆಯಾಗಲಿವೆ.

Advertisement

ಈ ಬಾರಿ ಉಂಟಾಗಿದ್ದ ಪ್ರವಾಹದಿಂದ ಜನ ಜೀವನವನ್ನೇ ಕಸಿದುಕೊಂಡಿದೆ. ಈ ಬಾರಿ ನಿರೀಕ್ಷೆಗೂ ಜಲಾಶಯದಿಂದ ನೀರು ಹರಿಸಿದ್ದರಿಂದ ಬೂದಿಹಾಳದ ನವ ಗ್ರಾಮವೂ ಜಲಾವೃತಗೊಂಡಿತ್ತು. ಕೊಣ್ಣೂರಿನ ಗ್ರಾ.ಪಂ. ವ್ಯಾಪ್ತಿಯ ಕೊಣ್ಣೂರಿನ ಐದು ವಾರ್ಡ್‌ ಹಾಗೂ ಬೂದಿಹಾಳ ಗ್ರಾಮದ ಬಹುತೇಕ ಮನೆಗಳು ನೀರಿನ ರಭಸಕ್ಕೆ ಕುಸಿದು ಬಿದ್ದಿದೆ. 2009ರಲ್ಲಿ ಬೂದಿಹಾಳ ಗ್ರಾಮದಲ್ಲಿ ನಿರ್ಮಿಸಿದ್ದ ಪುನರ್ವಸತಿ ಗ್ರಾಮವನ್ನೂ ಪ್ರವಾಹ ಆವರಿಸಿದ್ದು, ಪ್ರವಾಹ ಭೀಕರತೆಗೆ ಸಾಕ್ಷಿ.

ಅದರಂತೆ ಲಕಮಾಪುರದಲ್ಲಿ 170 ಮನೆಗಳು, ವಾಸನದ 50, ಕೊಣ್ಣೂರಿನಲ್ಲಿ 400, ಬೂದಿಹಾಳದಲ್ಲಿ 70, ಕಪ್ಲಿ ಹಾಗೂ ಕಲ್ಲಾಪುರದಲ್ಲಿ ತಲಾ 20 ಮನೆಗಳು ಕುಸಿದಿರುವ ಬಗ್ಗೆ ಅಂದಾಜಿಸಲಾಗಿದೆ. ಹಿಗಾಗಿ ನೆರೆ ಸಂತ್ರಸ್ತರು ಆಯಾ ಗ್ರಾಮದ ಜಮೀನುಗಳಲ್ಲಿ ತಾಟಪಾಲ್ನಿಂದ ಟೆಂಟ್ ನಿರ್ಮಿಸಿಕೊಂಡು, ತಮ್ಮ ಎತ್ತು, ಜಾನುವಾರುಗಳೊಂದಿಗೆ ದಿನ ಕಳೆಯುತ್ತಿದ್ದಾರೆ.

ಇನ್ನುಳಿದಂತೆ ಬೆಳ್ಳೇರಿ, ಕಲ್ಲಾಪುರ, ಶಿರೋಳ ಹಾಗೂ ಕಪಲಿ ಗ್ರಾಮಗಳಲ್ಲಿ ಬೆಳೆ ನಾಶವಾಗಿದ್ದು, ಮನೆಗಳಿಗೆ ಹೆಚ್ಚಿನ ಹಾನಿಯಾಗಿಲ್ಲ ಎನ್ನುತ್ತಾರೆ ಸ್ಥಳೀಯ ಗ್ರಾ.ಪಂ. ಸಿಬ್ಬಂದಿ.

ಎಲ್ಲೆಲ್ಲಿ ತಾತ್ಕಾಲಿಕ ಶೆಡ್‌?: ಪ್ರವಾಹದಿಂದ ಸೂರು ಕಳೆದುಕೊಂಡಿರುವ ಗ್ರಾಮ ಗಳ ಜನರ ಅನುಕೂಲಕ್ಕಾಗಿ ಜಿಲ್ಲಾಡಳಿತದಿಂದ ತಾತ್ಕಾಲಿಕ ಶೆಡ್‌ ನಿರ್ಮಾಣ ಕಾರ್ಯವನ್ನು ಚುರುಕುಗೊಳಿಸಲಾಗಿದೆ.

Advertisement

ಪ್ರವಾಹ ಪೀಡಿತ ಕೊಣ್ಣೂರು ಗ್ರಾಮದ ಎಪಿಎಂಸಿ ಆವರಣದಲ್ಲಿ ಈಗಾಗಲೇ 44 ಶೆಡ್‌ಗಳು ಸಿದ್ಧಗೊಳಿಸಲಾಗಿದ್ದು, ಒಟ್ಟು 300 ತಾತ್ಕಾಲಿಕ ಶೆಡ್‌ಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಅದರೊಂದಿಗೆ ಲಕಮಾಪುರದಲ್ಲಿ ಸುಮಾರು 50 ಶೆಡ್‌, ವಾಸನ ಗ್ರಾಮದ ಹೊಸ ಪ್ಲಾಟ್ ಭಾಗದಲ್ಲಿ ಸದ್ಯಕ್ಕೆ 12 ಶೆಡ್‌ಗಳನ್ನು ಹಾಕಲಾಗುತ್ತಿದೆ. ಅದರಂತೆ ಬೂದಿಹಾಳದಲ್ಲಿ ಮುಖ್ಯ ರಸ್ತೆ ಪಕ್ಕದಲ್ಲಿ ಹಾಕಿಕೊಂಡಿರುವ ಟೆಂಟ್‌ಗಳ ಸಂಖ್ಯೆಯನ್ನು ಆಧರಿಸಿ, ತಾತ್ಕಾಲಿಕ ಶೆಡ್‌ ನಿರ್ಮಿಸಲು ಉದ್ದೇಶಿಸಲಾಗಿದೆ.

ನೆರೆ ಸಂತ್ರಸ್ತರ ಅನುಕೂಲಕ್ಕಾಗಿ 15×12 ಚದುರ ಅಡಿ ಅಳತೆಯಲ್ಲಿ ಒಂದು ಕುಟುಂಬ ವಾಸಕ್ಕೆ ಯೋಗ್ಯವಾಗಿರುವಂತೆ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಲಾಗುತ್ತದೆ. ಶೆಡ್‌ಗಳಿಗೆ ಉತ್ತಮ ನೆಲಹಾಸು, ಗಾಳಿ- ಬೆಳಕಿನ ವ್ಯವಸ್ಥೆಯೊಂದಿಗೆ ಉಚಿತ ವಿದ್ಯುತ್‌ ಸಂಪರ್ಕ ಒದಗಿಸಲಾಗುತ್ತದೆ. ಈಗಾಗಲೇ ಮೂರು ಗ್ರಾಮಗಳಲ್ಲಿ ತಾತ್ಕಾಲಿಕ ಶೆಡ್‌ಗಳ ನಿರ್ಮಾಣ ಪ್ರಗತಿಯಲ್ಲಿದ್ದು, ಬೂದಿಹಾಳದಲ್ಲಿ ಇನ್ನಷ್ಟೇ ಆರಂಭವಾಗಬೇಕಿದೆ ಎನ್ನುತ್ತಾರೆ ಅಧಿಕಾರಿಗಳು.

 

•ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next