Advertisement
ರಾಷ್ಟ್ರೀಯ ಹೆದ್ದಾರಿ 207 ಪ್ರಾಧಿಕಾರ ರಸ್ತೆ ಅಗಲೀ ಕರಣ ಮಾಡಿದ್ದರೂ ರಸ್ತೆಗಳಲ್ಲಿ ವೇಗಮಿತಿ ತಡೆಗಳನ್ನು ಹಾಕದೆ ಇರುವುದು ಅಪಘಾತಕ್ಕೆ ಕಾರಣವಾಗಿದೆ. ಇದರಿಂದ ಆಗಾಗ ಅಪಘಾತಗಳು ಆಗುತ್ತಿವೆ. ಎಷ್ಟೋಜನ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ದೇವನಹಳ್ಳಿ: ತಾಲೂಕಿನ ಬೀರಸಂದ್ರ ಗೇಟಿನ ಬಳಿ ಟಾಟಾ ಸುಮೋ ಡಿಕ್ಕಿ ಹೊಡೆದು ಬೈರದೇನಹಳ್ಳಿ ಹರ್ಷಿತಾ ಸಾವನ್ನಪ್ಪಿರುವುದರಿಂದ ಆಕ್ರೋಶಗೊಂಡು ಸುತ್ತಮುತ್ತಲಿನ ಗ್ರಾಮಸ್ಥರು ಶವವನ್ನು ಇಟ್ಟುಕೊಂಡು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
Related Articles
Advertisement
ಸ್ಥಗಿತಗೊಂಡಿರುವ ರಸ್ತೆ ಕಾಮಗಾರಿ ಅಪಘಾತಕ್ಕೆ ಕಾರಣ: ರಾಷ್ಟ್ರೀಯ ಹೆದ್ದಾರಿ ನಾಲ್ಕರ ರಸ್ತೆ ದಾಬಸ್‌ಪೇಟೆ, ದೊಡ್ಡಬಳ್ಳಾಪುರ, ದೇವನಹಳ್ಳಿ, ಕೋಲಾರ, ಸೂಲಿಬೆಲೆ, ಹೊಸಕೋಟೆ, ಕೆ.ಆರ್.ಪುರಂ, ತಮಿಳುನಾಡಿನ ಹೊಸೂರು ಕಡೆಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ. ನಾಲ್ಕು ಪಥದ ರಸ್ತೆಯನ್ನಾಗಿಸಲು 2011ರಲ್ಲಿ ಕೇಂದ್ರ ಸರ್ಕಾರದ ಬಹುಕೋಟಿ ವೆಚ್ಚದ ರಸ್ತೆ ಅಭಿವೃದ್ಧಿಯನ್ನು ಗುತ್ತಿಗೆದಾರರಿಗೆ ನೀಡಲಾಗಿತ್ತು. ಆದರೆ ಒಂದು ಕಡೆ ಸ್ಥಗಿತಗೊಂಡಿರುವ ಕಾಮಗಾರಿ, ಮತ್ತೂಂದು ಕಡೆ ಹಳೆಯ ರಸ್ತೆಯಲ್ಲಿಯೇ ಸಂಚರಿಸುವ ವಾಹನಗಳು, ಬೃಹತ್ ಗಾತ್ರದ ಸರಕು ಸಾಗಾಣಿಕೆ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ಇದರಿಂದ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಪ್ರತಿಭಟನೆಯಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮಸ್ಥ ಭೈರೇಗೌಡ ಮಾತನಾಡಿ, ಚಪ್ಪರದ ಕಲ್ಲು ಸರ್ಕಲ್ ನಿಂದ ಬೀರಸಂದ್ರ ಗೇಟಿನವರೆಗೆ ಅಪಘಾತಗಳು ಹೆಚ್ಚು ಸಂಭವಿಸುತ್ತದೆ. ರಾಷ್ಟ್ರೀಯ ಹೆದ್ದಾರಿ 207ರಲ್ಲಿ ಇದುವರೆಗೂ ಸುಮಾರು 25ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದು, ಅದರಲ್ಲಿ 10-12 ಜನ ಪ್ರಾಣ ಕಳೆದುಕೊಂಡಿದ್ದಾರೆ. ಇಷ್ಟೆಲ್ಲಾ ಘಟನೆಗಳು ನಡೆಯುತ್ತಿದ್ದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬದುಕಿದ್ದು ಸತ್ತಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಷ್ಟ್ರೀಯ ಹೆದ್ದಾರಿ 207ರ ರಸ್ತೆಯಲ್ಲಿ ಸಂಚಾರ ಮಾಡಲು ಕಷ್ಟಕರವಾಗುತ್ತಿದೆ. ಹೆಚ್ಚಿನ ವಾಹನಗಳ ದಟ್ಟಣೆ ಇರುವುದರಿಂದ ದ್ವಿಚಕ್ರ ವಾಹನ ಸವಾರರು ಹಿಂದೆ ಬರುವ ವಾಹನಗಳನ್ನು ತಪ್ಪಿಸಿ ಹೋಗಬೇಕಾಗುತ್ತದೆ. ಏನಾದರೂ ಆಯಾ ತಪ್ಪಿದರೆ ಯಮನಿಗೆ ಶರಣಾಗುವುದು ಖಚಿತವಾಗುತ್ತದೆ ಎಂದು ಗ್ರಾಮಸ್ಥ ರವಿ ಹೇಳಿದರು.
50 ಸಾವಿರ ರೂ. ವೈಯಕ್ತಿಕ ನೆರವು ನೀಡಿದ ಶಾಸಕ: ಸ್ಥಳಕ್ಕೆ ಆಗಮಿಸಿದ ಶಾಸಕ ಪಿಳ್ಳಮುನಿಶಾಮಪ್ಪ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯದಿಂದ ಅಮಾಯಕ ಪ್ರಾಣಗಳು ಬಲಿಯಾಗುತ್ತಿವೆ. ವಿದ್ಯಾರ್ಥಿನಿ ಸಾವಿನಿಂದ ಇಡೀ ತಾಲೂಕು ಸೂತಕದ ಛಾಯೆ ಉಂಟಾಗಿದೆ.
ವೈಯಕ್ತಿಕವಾಗಿ 50 ಸಾವಿರ ರೂ.ಗಳನ್ನು ಅವರ ಕುಟುಂಬಕ್ಕೆ ನೀಡುತ್ತಿದ್ದೇನೆ. ಕೂಡಲೇ ಸರ್ಕಾರದಿಂದ ಪರಿಹಾರ ಕೊಡಿಸಲು ಒತ್ತಾಯಿಸುತ್ತೇನೆ. ಜಿಲ್ಲಾಧಿಕಾರಿಗಳು, ತಹಶೀಲ್ದಾರ್ ಜೊತೆ ಚರ್ಚಿಸಿ ಸರ್ಕಾರದಿಂದ ಜರೂರಾಗಿ ಪರಿಹಾರ ನೀಡುವಂತೆ ಮನವಿ ಮಾಡುತ್ತೇನೆ. ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು ಕ್ರಮ ಕೈಗೊಳ್ಳುವಂತೆ ತಿಳಿಸುತ್ತೇನೆ. ಈಗಾಗಲೇ ಅಧಿಕಾರಿಗಳ ಸಭೆ ಕರೆದು ಆ ರಸ್ತೆಯಲ್ಲಿ ಆಗಬೇಕಾಗಿರುವ ಕಾಮಗಾರಿ ಕೆಲಸಗಳು ತ್ವರಿತವಾಗಿ ಆಗುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ ನೀಡಿದ್ದೇವೆ ಎಂದು ಹೇಳಿದರು.
ಜೆಡಿಎಸ್ ಮುಖಂಡ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ಬಹಳ ಜಾಗರೂಕತೆಯಿಂದ ರಸ್ತೆ ದಾಟಬೇಕು. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಮೂಲ ಸೌಕರ್ಯ ಕಲ್ಪಿಸಿ ಅಪಘಾತಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು. ಬೆಂಗಳೂರು ಗ್ರಾಮಾಂತರ ಎಸ್‌ಪಿ ಅಮಿತ್ ಸಿಂಗ್, ಡಿವೈಎಸ್ಪಿನಾಗರಾಜ್, ಉಪವಿಭಾಗದ ಅಧಿಕಾರಿ ಮಹೇಶ್ ಬಾಬು, ತಹಶೀಲ್ದಾರ್ ಎಂ.ರಾಜಣ್ಣ, ಮತ್ತಿತರರ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದರು.