Advertisement

ಹಸುಗಳನ್ನೇ ಮಾರಾಟ ಮಾಡಿ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿದರು!

11:05 PM Feb 25, 2021 | Team Udayavani |

ಕಾರ್ಕಳ: ಇಲ್ಲಿನ ನೀರೆ ಬೈಲೂರಿನ ವೃದ್ಧೆ ಸುಜಾತಾ ಪ್ರಭು ಅವರು ಹೈನುಗಾರಿಕೆಯನ್ನೇ ಮಾಡಿ ಮಕ್ಕಳನ್ನು ಎಂಜಿನಿಯರಿಂಗ್‌ ಓದಿಸಿದ ಸಾಧನೆ ಮಾಡಿದ್ದಾರೆ.

Advertisement

ಬೈಲೂರಿನ ಸುಬ್ರಾಯ ಪ್ರಭು- ಸುಜಾತಾ ದಂಪತಿಗೆ ನಾಲ್ಕು ಮಂದಿ ಹೆಣ್ಣು ಮಕ್ಕಳು. ಅತ್ಯಲ್ಪ ಕೃಷಿ ಭೂಮಿಯಿದೆ. ಮಲ್ಲಿಗೆ ಕೃಷಿ ಮಾಡಿ ಜೀವನ ಸಾಗಿಸುತ್ತಿದ್ದರು. ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದಂತೆ ದಂಪತಿ ನೋಡಿಕೊಂಡಿದ್ದರು. ಹಿರಿಯ ಇಬ್ಬರು ಪುತ್ರಿಯರಲ್ಲಿ ಒಬ್ಬಳು ಶಿಕ್ಷಕಿ ಯಾದರೆ, ಇನ್ನೊಬ್ಬಳಿಗೆ ನರ್ಸಿಂಗ್‌ ಶಿಕ್ಷಣ ಕೊಡಿಸಿದ್ದರು.

2014ರಲ್ಲಿ ಸುಬ್ರಾಯ ಪ್ರಭುಗಳು ಅನಾರೋಗ್ಯದಿಂದ ನಿಧನ ಹೊಂದಿದರು. ನಿಧರಾಗುವ ಹೊತ್ತಿಗೆ ಕಿರಿಯರಿಬ್ಬರು ಪುತ್ರಿಯರಲ್ಲಿ ಒಬ್ಟಾಕೆ ಎಸೆಸೆಲ್ಸಿ ಮತ್ತು ಪಿಯುಸಿ ಅಂತಿಮ ಪರೀಕ್ಷೆ ಬರೆಯುತ್ತಿದ್ದರು. ಪತಿಯ ನಿಧನದ ಬಳಿಕ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿತ್ತು. ಅವರ ಚಿಕಿತ್ಸೆಗೆ ವ್ಯಯಿಸಿದ್ದ 25 ಲಕ್ಷ ರೂ. ಸಾಲದ ಹೊರೆಯೊಂದಿಗೆ, ಮಕ್ಕಳ ಶಿಕ್ಷಣದ ಹೊರೆಯಿತ್ತು. ಆದರೆ ಅವರು ಕಂಗೆಡಲಿಲ್ಲ.

ಕಿರಿಯ ಮಕ್ಕಳು ಎಂಜಿನಿಯರಿಂಗ್‌ ಸೇರಿದಾಗ ಮಲ್ಲಿಗೆ ಹೂವು ಕಟ್ಟಲು ಜನರಿಲ್ಲದೆ, ಹೈನುಗಾರಿಕೆ ಅವಲಂಬಿಸಿದರು. ಅವರ ವಿದ್ಯಾಭ್ಯಾಸಕ್ಕೆ ಹಾಲು ಮಾರಾಟದಿಂದ ಬಂದ ಆದಾಯ ಅವಲಂಬಿಸಿದರು.

1.5 ಕಿ.ಮೀ. ನಿತ್ಯ ನಡಿಗೆ
ಅಶ್ವಿ‌ನಿ ಬೆಂಗಳೂರಿನ ಬಿಎಂಎಸ್‌ ಕಾಲೇಜಿನಲ್ಲಿ ಕೆಮಿಕಲ್‌ ಎಂಜಿನಿಯರಿಂಗ್‌ ಮಾಡಿದ್ದರೆ, ಕೃತಿಕಾ ಸುಳ್ಯದ ಕೆವಿಜಿ ಕಾಲೇಜಿನಲ್ಲಿ ಸಿವಿಲ್‌ ಎಂಜಿನಿಯರಿಂಗ್‌ ಪೂರೈಸಿದ್ದಾರೆ. ಸರಕಾರಿ ಸೀಟು ಲಭಿಸಿದರೂ ಹಾಸ್ಟೆಲ್‌ ಇತ್ಯಾದಿ ಶುಲ್ಕ ಸೇರಿ ತಲಾ 6 ಲಕ್ಷ ರೂ. ವೆಚ್ಚವಾಗಿದೆ. ನಾಲ್ಕೈದು ಹಸುಗಳಿದ್ದ ಇವರು ನಿತ್ಯ 1.5 ಕಿ.ಮೀ. ನಡೆದು ಬೈಲೂರು ಡೈರಿಗೆ ಹಾಲು ಹಾಕುತ್ತಿದ್ದರು.

Advertisement

ಶಿಕ್ಷಣಕ್ಕಾಗಿ ಹಸು ಮಾರಾಟ
ವೃದ್ಧೆ ಸುಜಾತಾ ಅವರಿಗೆ ಈಗ 62ರ ಇಳಿವಯಸ್ಸು, 90ರ ವಯಸ್ಸಿನ ಅಜ್ಜಿ ಕೂಡ ಇದ್ದಾರೆ. ಅವರು ಕೂಡ ಕೈಲಾದಷ್ಟು ನೆರವು ನೀಡುತ್ತ ಬಂದಿದ್ದಾರೆ. ಇದೀಗ ಸಹಜವಾಗಿ ಆರೋಗ್ಯ ಸಮಸ್ಯೆ ಎದುರಾಗಿದೆ. ಜಾನುವಾರು ಪೋಷಣೆ ಸಾಧ್ಯವಾಗದೆ 1 ವರ್ಷದ ಹಿಂದೆ 5 ಹಸುಗಳನ್ನೂ ಮಾರಿ, ಮಕ್ಕಳ ಅಂತಿಮ ವರ್ಷದ ಶುಲ್ಕ 2 ಲಕ್ಷ ರೂ. ಪಾವತಿಸಿ ವಿದ್ಯಾಭ್ಯಾಸಕ್ಕೆ ವ್ಯವಸ್ಥೆ ಮಾಡಿದ್ದಾರೆ.

ಉದ್ಯೋಗದ ನಿರೀಕ್ಷೆಯಲ್ಲಿ ಮಕ್ಕಳು
ಎಂಜಿನಿಯರಿಂಗ್‌ ಪೂರೈಸಿದ ಮಕ್ಕಳಲ್ಲಿ ಒಬ್ಟಾಕೆ ಗುತ್ತಿಗೆ ನೆಲೆಯಲ್ಲಿ ಮಂಗಳೂರಿನಲ್ಲಿ ಕೆಲಸಕ್ಕೆ ಸೇರಿದ್ದರೆ, ಇನ್ನೊಬ್ಟಾಕೆ ಮನೆಯಲ್ಲಿದ್ದಾರೆ. ಇವರು ಶಿಕ್ಷಣಕ್ಕೆ ತಕ್ಕಂತೆ ಉದ್ಯೋಗದ ನಿರೀಕ್ಷೆಯಲ್ಲಿದ್ದಾರೆ. ಕಷ್ಟದ ಸಂದರ್ಭದಲ್ಲಿ ಕುಟುಂಬದಲ್ಲಿ ಹಲವು ಮಂದಿ ದಾನಿಗಳು ನೆರವು ನೀಡಿದ್ದಾರೆ.

ವಿಮಾನದಲ್ಲಿ ಕರೆದೊಯ್ಯುವಾಸೆ
ತಂದೆ ತಾಯಿ ನನಗಾಗಿ ತ್ಯಾಗ ಮಾಡಿದ್ದಾರೆ. ಅವರ ಋಣ ತೀರಿಸಬೇಕಿದೆ. ನಿರೀಕ್ಷಿತ ಉದ್ಯೋಗ ದೊರೆತಲ್ಲಿ ಅನಂತರ ಕಷ್ಟಪಟ್ಟು ಇಂಜಿನಿಯರಿಂಗ್‌ ಶಿಕ್ಷಣ ಕೊಡಿಸಿದ ತಾಯಿಯನ್ನು ಒಮ್ಮೆ ವಿಮಾನದಲ್ಲಿ ಕರೆದುಕೊಂಡು ಹೋಗುವ ಆಕಾಂಕ್ಷೆ ನನ್ನ ಕನಸಾಗಿದೆ.

-ಅಶ್ವಿ‌ನಿ

ಸಮಾಜಕ್ಕೆ ನೆರವಾಗುವ ಬಯಕೆ
ಉದ್ಯೋಗದ ಜತೆಗೆ ವಿದ್ಯಾಭ್ಯಾಸವನ್ನು ಮುಂದುವರಿಸುವ ಆಕಾಂಕ್ಷೆ ಇದೆ. ಸಮಾಜದಲ್ಲಿರುವ ಬಡ ಕುಟುಂಬದ ಪ್ರತಿಭಾವಂತ ಹೆಣ್ಣುಮಕ್ಕಳು ಉನ್ನತ ಶಿಕ್ಷಣವನ್ನು ಪಡೆಯಲು ಬಯಸಿದರೆ ಅವರಿಗೆ ಮಾರ್ಗದರ್ಶನ ನೀಡುವುದರ ಜತೆಗೆ ಶಿಕ್ಷಣದ ಖರ್ಚನ್ನೂ ಭರಿಸುವ ಚಿಂತನೆಯಿದೆ.

-ಕೃತಿಕಾ

Advertisement

Udayavani is now on Telegram. Click here to join our channel and stay updated with the latest news.

Next