Advertisement

“ಅವಳು’ಪ್ರಾರ್ಥಿಸುತ್ತಾಳೆ ಎಲ್ಲರಿಗಾಗಿ…

03:45 AM Mar 29, 2017 | Harsha Rao |

ಈ ದಿನ ಯುಗಾದಿ. ಹೇಳಂಬಿನಾಮ ಸಂವತ್ಸರದ ಪ್ರಾರಂಭ. ಹೊಸಯುಗದ ಆದಿ ಅಂದರೆ ಪ್ರಾರಂಭ. ವಸಂತನ ಆಗಮನ. ಎಲ್ಲೆಲ್ಲೂ ಹಸಿರು ಚಿಗುರು ಹೂವುಗಳ ಘಮಘಮ. ಮನೆಯ ಮುಂಬಾಗಿಲಿಗೆ ಮಾವಿನ ತೋರಣ ಕಟ್ಟಿ, ತುದಿಗಳಿಗೆ ಬೇವಿನ ಚಿಗುರು ಸಿಕ್ಕಿಸಿ ಮಲ್ಲಿಗೆಯ ಹಾರವನ್ನು ಅಲಂಕಾರವಾಗಿ ಹಾಕಿ ಚೈತ್ರಮಾಸವನ್ನು ಬರಮಾಡಿಕೊಳ್ಳಬೇಕು ಎಂಬುದು “ಅವಳ’ ರೂಪದಲ್ಲಿರುವ ಅಜ್ಜಿ, ಅಮ್ಮ, ಹೆಂಡತಿ, ಮಗಳು – ಈ ಎಲ್ಲರ ಸದಾಶಯ. ಇವತ್ತು ಪ್ರತಿ ಮನೆಯಲ್ಲೂ ಒಬ್ಬಟ್ಟಿನ ಘಮಲು, ಪಾಯಸದ ಸವಿ. ಎಂಥವರೂ ಅವರ ಶಕ್ತಾನುಸಾರ ಹೊಸ ಬಟ್ಟೆ ಖರೀದಿಸಿ ತೊಟ್ಟು ಸಂಭ್ರಮಿಸುತ್ತಾರೆ. 

Advertisement

ಎಲ್ಲೆಡೆಯೂ ಇರುವ “ಅವಳೂ’ ಹಬ್ಬಕ್ಕೆ ಎಲ್ಲ ತಯಾರಿ ಮಾಡಿಕೊಂಡಿದ್ದಾಳೆ. ಹಬ್ಬಕ್ಕೆ ಬೇಕಾದ ಪದಾರ್ಥಗಳನ್ನೆಲ್ಲಾ ಖರೀದಿಸಿ ತಂದಿದ್ದಾಳೆ. ಯಾವಾಗಲೂ ದುಡ್ಡಿನ ತಾಪತ್ರಯ ಇದ್ದದ್ದೇ. ಆದರೆ ವರ್ಷದ ಮೊದಲ ಹಬ್ಬವನ್ನು ಸಂಭ್ರಮದಿಂದ ಮಾಡಬೇಕು ಎಂಬ ಹಂಬಲ. ಕಳೆದ ವಾರವೇ ಗಂಡನನ್ನೂ, ಮಕ್ಕಳನ್ನೂ ಹೊರಡಿಸಿ ಪೇಟೆಗೆ ಕರೆದೊಯ್ದು ಹೊಸ ಬಟ್ಟೆ ಕೊಡಿಸಿದ್ದಾಳೆ. ಪುಟ್ಟ ಮಗಳು ನೆರಿಗೆ ನೆರಿಗೆಯಿರುವ ಗುಲಾಬಿ ಬಣ್ಣದ ಫ್ರಾಕು ಬೇಕೆಂದಾಗ ಅದನ್ನೇ ಕೊಡಿಸಿದ್ದಳು. ಮಗಳು “ಇದು ನನಗೇನಾ ಅಮ್ಮಾ’ ಎಂದು ಖುಷಿಯಿಂದ ಕುಣಿದಾಡಿದಾಗ ಅವಳ ಕಣ್ಣುಗಳಲ್ಲಿ ಸಾರ್ಥಕತೆಯ ಬೆಳಕು. ಗಂಡನಿಗಾಗಿ ಶರ್ಟ್‌ ಪ್ಯಾಂಟ್‌ ಖರೀದಿಸಿದ್ದಾಯಿತು. “ನೀನೂ ಸೀರೆ ತಗೋ’ ಎಂದಾಗ ಆಸೆಯಾದರೂ ಅವರೆಲ್ಲಾ ತಗೊಂಡರೆ ತನಗೆ ಖುಷಿಯಲ್ಲವೇ ಎನಿಸಿತ್ತು. ಆದರೆ ಊರಲ್ಲಿರುವ ತಮ್ಮನ ನೆನಪಾಗಿ ಅವನಿಗಾಗಿ ಒಂದು ಟಿ- ಶರ್ಟ್‌ ತೆಗೆದುಕೊಂಡಳು. ಅವಳಿನ್ನೂ ತನಗಾಗಿ ಸೀರೆ ಕೊಳ್ಳುವುದಕ್ಕೆ ಮೀನಾಮೇಷ ಎಣಿಸುತ್ತಿರುವಾಗ ಗಂಡ “ನೀನೇನೂ ತೆಗೆದುಕೊಳ್ಳದಿದ್ದರೆ ನನಗೂ ಬೇಡ’ ಎಂದು ಪ್ರೀತಿಯಿಂದ ಗದರಿದಾಗ ಆ ಬೆಚ್ಚನೆ ಪ್ರೀತಿಗೆ ಸೋತು ಅವನಿಗಿಷ್ಟವಾದ ಸೀರೆಯನ್ನೇ ಖರೀದಿಸಿದ್ದಳು. 

“ಅವಳು’ ಹಬ್ಬದ ದಿನ ಮುಂಜಾನೆಯೇ ಎದ್ದು ಮಿಂದು ಹೊಸ ಸೀರೆ ಉಟ್ಟು ಮುಂಬಾಗಿಲನ್ನು ದೊಡ್ಡದಾಗಿ ಸಾರಿಸಿ ರಂಗವಲ್ಲಿಯಿಡುತ್ತಾಳೆ. ಅದಕ್ಕೆ ಬಣ್ಣ ತುಂಬುತ್ತಾಳೆ. ಆಗಲೇ ತನ್ನ ಬದುಕೂ ಹೀಗೆ ಬಣ್ಣಬಣ್ಣವಾಗಿರಲಿ ಎಂದು ಬೇಡಿಕೊಂಡಿತ್ತು ಮನಸ್ಸು. ಒಳಗೆ ಬಂದಾಗ ಮಕ್ಕಳು ಕಣ್ಣುಜ್ಜುತ್ತಾ ಎದ್ದು ಬಂದಿದ್ದರು. ಮಗಳನ್ನು, ಮಗನನ್ನು ರಮಿಸಿ ಹಾಲು ಕುಡಿಸಿ ಅಭ್ಯಂಜನ ಮಾಡಿಸಿ ಹೊಸ ಬಟ್ಟೆ ತೊಡಿಸಿ ಸಂಭ್ರಮಿಸಿದಳು. ಮುದ್ದಾಗಿ ಕಾಣುತ್ತಿದ್ದ ಮಕ್ಕಳಿಗೆ ದೃಷ್ಟಿ ಬೊಟ್ಟನ್ನಿಟ್ಟು ನೆಟಿಕೆ ಮುರಿಯುತ್ತಾಳೆ. ಮಕ್ಕಳನ್ನು ಆಡಲು ಕಳುಹಿಸಿ ಗಂಡನನ್ನು ಎಬ್ಬಿಸಿ ಸ್ನಾನಕ್ಕೆ ಕಳಿಸಿದಳು. ಬಳಿಕ ಇಬ್ಬರೂ ದೇವರ ಮುಂದೆ ತುಪ್ಪದ ದೀಪ ಬೆಳಗಿಸಿ ಕೈಮುಗಿಯುತ್ತಾರೆ. ಅವಳ ಮನಸ್ಸು ಗಂಡ ಹಾಗು ಪುಟ್ಟ ಮಕ್ಕಳ ಯೋಗಕ್ಷೇಮಕ್ಕಾಗಿ, ಊರಿನಲ್ಲಿದ್ದ ಪ್ರೀತಿಯ ತಮ್ಮನ ಶ್ರೇಯಸ್ಸಿಗಾಗಿ ಬೇಡಿಕೊಳ್ಳುತ್ತದೆ. ತನಗಾಗಿ ಏನೂ ಬೇಡದು ಅವಳ ಮನಸ್ಸು. ತನ್ನ ಸಂಸಾರದ ಸದಸ್ಯರು ನೆಮ್ಮದಿಯಾಗಿದ್ದರೆ ಅದೇ ಅವಳ ತೃಪ್ತಿ. 

– ವೀಣಾ

Advertisement

Udayavani is now on Telegram. Click here to join our channel and stay updated with the latest news.

Next