ಬೆಂಗಳೂರು: ಆಸ್ತಿ ಮಾರಾಟ ಮಾಡಿದ ಹಣದ ಆಸೆಗಾಗಿ ಸ್ವಂತ ತಾಯಿಯನ್ನು ಪ್ರಿಯಕರನ ಜತೆ ಸೇರಿಕೊಂಡು ಕೊಲೆಗೈದು ನಂತರ ಸ್ವಾಭಾವಿಕ ಸಾವು ಎಂದು ಬಿಂಬಿಸಿದ ಮಗಳು, ಸೋದರ ಅಳಿಯ ಸೇರಿದಂತೆ 7 ಮಂದಿಯನ್ನು ಚಿಕ್ಕಜಾಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸುಬ್ರಹ್ಮಣಿ, ಈತನ ಪ್ರೇಯಸಿ ಸೌಭಾಗ್ಯ, ಶಶಿ, ಶಿಡ್ಲಘಟ್ಟದ ಚಂದ್ರು, ನವೀನ್‌ಯಾದವ್, ಮಂಜುರೆಡ್ಡಿ ಹಾಗೂ ಚೇತನ್ ಕುಮಾರ್ ಬಂಧಿತರು. ಆರೋಪಿಗಳು ಎರಡು ತಿಂಗಳ ಹಿಂದೆ ಶಾಂತಮ್ಮ ಎಂಬಾಕೆಯನ್ನು ಕೊಲೆಗೈದಿದ್ದರು.
ಎರಡು ತಿಂಗಳ ಹಿಂದೆ ಕೈವಾರ ಮೂಲದ ಶಾಂತಮ್ಮ ತಮ್ಮ 30 ಗುಂಟೆ ಜಮೀನುನ್ನು ಮಾರಾಟ ಮಾಡಿದ್ದರು. ಇದಕ್ಕೆ ಆರೋಪಿ ಸೋದರಳಿಯ ಸುಬ್ರಹ್ಮಣಿ ಸಹಾಯ ಮಾಡಿದ್ದು, ಇದರಿಂದ 50 ಲಕ್ಷ ರೂ. ಹಣ ಬಂದಿತ್ತು. ಇದನ್ನು ಪಡೆಯಲು ಆರೋಪಿ ಶಾಂತಮ್ಮನ ಮಗಳು ಹಾಗೂ ಪ್ರೇಯಿಸಿ ಸೌಭಾಗ್ಯ ಜತೆ ಸೇರಿಕೊಂಡು ಇತರೆ ಆರೋಪಿಗಳಿಗೆ ಸುಪಾರಿ ಕೊಟ್ಟು ಕೃತ್ಯವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಬ್ರಹ್ಮಣಿ ಮತ್ತು ಸೌಭಾಗ್ಯ ಶಾಲಾ ದಿನಗಳಿಂದಲೇ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಶಾಂತಮ್ಮ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ತನ್ನ ಮಗಳನ್ನು ಬಿಎಎಲ್ ಉದ್ಯೋಗಿಯೊಬ್ಬರೊಂದಿಗೆ ವಿವಾಹ ಮಾಡಿಕೊಟ್ಟಿದ್ದರು. ಕೆಲವು ವರ್ಷದ ಬಳಿಕ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಸೌಭಾಗ್ಯ ವಿಚ್ಚೇದನ ಪಡೆದು ತಾಯಿಯೊಂದಿಗೆ ಕೈವಾರದಲ್ಲಿ ನೆಲೆಸಿದ್ದರು. ಆಗ ಮತ್ತೂಮ್ಮೆ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ.
ಇದನ್ನೇ ಬಳಸಿಕೊಂಡ ಆರೋಪಿ ಸುಬ್ರಹ್ಮಣಿ ಪ್ರೇಯಸಿಕೊಂದಿಗೆ ಅತ್ತೆಯನ್ನು ಕೊಲಲ್ಲು ಸಪಾರಿ ಕೊಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಮಧ್ಯೆ ಶಾಂತಮ್ಮನ ಜತೆ ಆತ್ಮೀಯತೆ ಹೊಂದಿದ್ದ ಆರೋಪಿ, ಕೆಲವು ತಿಂಗಳ ಹಿಂದೆ ಅತ್ತೆ ಹಾಗೂ ಸೌಭಾಗ್ಯಗಳನ್ನು ಕೈವಾರದಿಂದ ಕರೆತಂದು ಚಿಕ್ಕಚಾಲದಲ್ಲಿ ಬಾಡಿಗೆ ಮನೆ ಮಾಡಿ ಇರಿಸಿದ್ದ.
ಶಾಂತಮ್ಮನವರ ಸಾವು ಸ್ವಾಭಾವಿಕವಾಗಿಲ್ಲ ಎಂಬ ಬಗ್ಗೆ ಕೆಲವು ಸಂಬಂಧಿಕರು ಶಂಕೆ ವ್ಯಕ್ತಪಡಿಸಿದ್ದರು. ಅಲ್ಲದೆ ಸೌಭಾಗ್ಯ ಹಾಗೂ ಸುಬ್ರಹ್ಮಣಿ ನಡುವೆ ಪ್ರೇಮಕಥೆ ಬಗ್ಗೆ ಹೇಳಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ಡಿಸಿಪಿ ಗಿರೀಶ್ ಪ್ರತ್ಯೇಕ ತಂಡ ರಚನೆ ಮಾಡಿದ್ದರು. ಅದರಂತೆ ಕಾರ್ಯಾಚರಣೆ ನಡೆಸಿದ ತಂಡ, ಆರಂಭದಲ್ಲಿ ಸೌಭಾಗ್ಯ ಮತ್ತು ಸುಬ್ರಹ್ಮಣಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿಗಳ ಕೃತ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
2 ಬಾರಿ ಕೊಲೆ ಯತ್ನ: ಈ ಹಿಂದೆಯೂ ಸಹ ಎರಡು ಬಾರಿ ಶಾಂತಮ್ಮ ಅವರನ್ನು ಕೊಲೆಗೈಯಲು ಆರೋಪಿಗಳು ಸಂಚು ರೂಪಿಸಿದ್ದರು. ಒಮ್ಮೆ ನಿದ್ರೆ ಮಾತ್ರೆ ನೀಡಿ ಕೊಲೆ ಮಾಡಲು ಯತ್ನಿಸಿದ್ದ. ಬಳಿಕ ಊಟದಲ್ಲಿ ವಿಷ ಬೆರೆಸಿ ಕೊಲೆಗೆ ಪ್ರಯತ್ನಿಸಿದ್ದ. ಅದೃಷ್ಟವಶಾತ್ ಎರಡೂ ಪ್ರಯತ್ನದಲ್ಲಿ ಶಾಂತಮ್ಮ ಬಚಾವಾಗಿದ್ದರು. 3ನೇ ಪ್ರಯತ್ನವಾಗಿ ಸುಫಾರಿ ಕೊಟ್ಟು ತನ್ನ ಕೃತ್ಯವೆಸಗಿದ್ದಾನೆ.
ಹಣದಾಸೆಗೆ ಬಿದ್ದ ಸುಬ್ರಹ್ಮಣಿ ತನ್ನ ಸಂಬಂಧಿ ಶಶಿ ಜತೆ ಚರ್ಚಿಸಿ, ಆಗ ಶಶಿ ನಟೋರಿಯಸ್ ಚಂದ್ರುನನ್ನು ಪರಿಚಯಿಸಿದ್ದ. ಇದಕ್ಕೆ ಸೌಭಾಗ್ಯ ಕೂಡ ಸಹಕಾರ ನೀಡಿದ್ದಾಳೆ. ಮೊದಲೇ ನಿರ್ಧರಿಸಿದ್ದಂತೆ ಎರಡು ತಿಂಗಳ ಹಿಂದೆ ಚಂದ್ರು ಹಾಗೂ ಸಹಚರರು ಶಾಂತಮ್ಮನ ಮನೆಗೆ ನುಗ್ಗಿದ್ದರು. ಇದೇ ವೇಳೆಗೆ ಪ್ರೇಮಿಗಳಿಬ್ಬರು ಶಾಂತಮ್ಮಗೆ ನಿದ್ರೆ ಮಾತ್ರೆ ಹಾಕಿದ್ದರು.
ನಂತರ ಎಲ್ಲರೂ ಸೇರಿ ಉಸಿರುಗಟ್ಟಿಸಿ ಕೊಲೆಗೈದಿದ್ದಾರೆ ಎಂದು ಪೊಲೀಸರು ವಿವರಿಸಿದರು. ನಂತರ ಶಾಂತಮ್ಮ ವಯೋಸಹಜವಾಗಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಇಡೀ ಸಂಬಂಧಿಕರು ಹಾಗೂ ಸ್ಥಳೀಯರನ್ನು ನಂಬಿಸಿದ್ದರು. ಅಲ್ಲದೇ ವಿದ್ಯಾರಣ್ಯಪುರದಲ್ಲಿರುವ ಸರ್ಕಾರಿ ವಿದ್ಯುತ್ ಚಿತಾಗಾರದಲ್ಲಿ ಶವಸಂಸ್ಕಾರ ಮಾಡಿದ್ದರು.