ವಾಹನದಲ್ಲಿ ಇರೋ ಕನ್ನಡಿಯಲ್ಲಿ ಒಂದು ಸೂಚನೆಯಿದೆ ಕನ್ನಡಿಯಲ್ಲಿ ಕಾಣುವ ವಸ್ತುಗಳು ವಾಸ್ತವಕ್ಕಿಂತ ಹೆಚ್ಚು ಹತ್ತಿರವಾಗಿ ಇರುತ್ತದೆ ಎಚ್ಚರ ಅಂತ. ನಾವು ನೋಡುತ್ತಿರುವುದು ದೂರದಲ್ಲಿಯೇ ಇದೆ ಎಂದು ಭಾವಿಸಿರುತ್ತೇವೆ ಆದರೆ ಅದು ಸನಿಹದಲ್ಲಿಯೇ ಇದೆ ಅನ್ನುವುದು ಅರ್ಥ ಮಾಡಿಕೊಳ್ಳಬೇಕು. ಈ ಮಾತು ಮಣಿಪಾಲದಲ್ಲಿ ಇತ್ತೀಚೆಗೆ ನಡೆದ ಏಕ ವ್ಯಕ್ತಿ ಪ್ರದರ್ಶನಕ್ಕೆ ಸೂಕ್ತವಾದದ್ದು. ನಾವು ನೋಡುತ್ತಿರುವುದು ಇಂದಿಗೂ ಮಹಿಳೆ ಅನುಭವಿಸುವ ದೃಶ್ಯಗಳೇ ಎಂಬುದಕ್ಕೆ ಪ್ರೇಕ್ಷಕರ ನಿಟ್ಟುಸಿರು ಕಂಬನಿಗಳೇ ಸಾಕ್ಷಿಯಾಗುತ್ತದೆ.
ಶಿಲ್ಪಾ ಜೋಶಿ ತನ್ನ ವೃತ್ತಿಬದುಕಿನ ಅನುಭವವನ್ನು ಅಕ್ಷರ ರೂಪಕ್ಕೆ ತಂದು , ರಂಗದ ಅನುಭವದೊಂದಿಗೆ ಪ್ರೇಕ್ಷಕರ ಮುಂದಿಟ್ಟ ನನ್ನೊಳಗಿನ ಅವಳು ಬಹುತೇಕ ಹೆಣ್ಣು ಮಕ್ಕಳ ಜೀವನವೇ ಆಗಿದೆ.ವ್ಯಾಖ್ಯಾನಕ್ಕೆ ನಿಲುಕದ, ತರ್ಕಕ್ಕೆ ಸಿಗದ ಒಂದು ಮಧುರವಾದ ಬಾಂಧವ್ಯ ಮದುವೆ. ಮದುವೆಯ ಬಂಧನದಲ್ಲಿದ್ದರೂ ಅನಿವಾರ್ಯ ಸ್ಥಿತಿಯಲ್ಲಿ ಬದುಕುವ ಹೆಣ್ಣಿನ ನೈಜ ಚಿತ್ರಣ ಮೂಡಿ ಬರುತ್ತದೆ . ನಗುವಿನ ಹಿಂದಿನ ನೋವು ಒಮ್ಮೆಲೇ ಇಂಥ ಸ್ಥಿತಿಯಲ್ಲೂ ಹೆಣ್ಣು ಇರುತ್ತಾಳೆ ಅನ್ನೋದನ್ನು ಬಿಚ್ಚಿಡುತ್ತಾ ಎಲ್ಲೊ ಒಂದು ಕಡೆ ನಮ್ಮನ್ನೇ ನಾವು ಕಾಣುವಷ್ಟು ಆಪ್ತವಾಗಿ ಬಿಡುತ್ತದೆ ಮೊದಲನೆಯ ಪಾತ್ರ.
ನಮ್ಮ ಕೌಟುಂಬಿಕ ವ್ಯವಸ್ಥೆಗೆ ಕನ್ನಡಿ ಈ ಮದುವೆ ಅನ್ನುವ ಮೂರಕ್ಷರ ಪದ. ತನ್ನದಲ್ಲದ ತಪ್ಪಿಗೆ ವಿಚ್ಚೇದನ ಪಡೆದು ಬದುಕಲ್ಲಿ ಆಕೆ ಪಡುವ ನೋವು ದುಃಖ,ಜೊತೆಗೆ ಸಂಸಾರವನ್ನು ಸರಿತೂಗಿಸುವಲ್ಲಿ ಪಡುವ ಪ್ರಯತ್ನ ವಿಭಿನ್ನ. ಸಂಸಾರದ ಹೊಣೆ ಹೊತ್ತು ತನ್ನ ಜವಾಬ್ದಾರಿಯ ನಿರ್ವಹಣೆಯಲ್ಲೇ ಬದುಕನ್ನು ಕಟ್ಟುವ, ಭಾವನೆಗಳಿಗೆ ಬೆಲೆಕೊಡಲಾರದವರ ಮಧ್ಯೆ ಆಕೆ ಬದುಕುವ ಪರಿಯಂತು ಅಮೋಘವಾಗಿ ಮೂಡಿಬಂದದ್ದು ಎರಡನೆಯ ಪಾತ್ರದಲ್ಲಿ.
ಪತ್ನಿಯಾದ ಮಾತ್ರಕ್ಕೆ ತನ್ನ ಅಭಿರುಚಿಗಳನ್ನು ಬಲಿ ಕೊಡಬೇಕಾದ ಅನಿವಾರ್ಯ ಹೆಣ್ಣಿಗೆ. ತಾನು ತನ್ನವರು ಅನ್ನುತ್ತಾ ತನ್ನ ಜೀವನವನ್ನೇ ಮುಡಿಪಾಗಿಸುವಲ್ಲಿ ಹೆಣ್ಣಿನ ಪಾತ್ರ ಅದೆಷ್ಟು ಮಹತ್ತರವಾದದ್ದು.ತನ್ನೆಲ್ಲ ಅಸೆ ಆಕಾಂಕ್ಷೆಗಳನ್ನು ಬದಿಗೊತ್ತಿ ಕುಟುಂಬಕ್ಕೋಸ್ಕರ ಬದುಕನ್ನು ಸವೆಸುವ ಹೆಣ್ಣು ಅಯ್ಯೋ ಅದೆಷ್ಟು ನೈಜತೆ ಆ ಪಾತ್ರದಲ್ಲಿ. ಇದು ನಮ್ಮೆಲ್ಲರ ಜೀವನದ ಸಾರಂಶಕ್ಕೆ ಹಿಡಿದ ಕನ್ನಡಿ. ಒಂದೊಮ್ಮೆ ಮೆಲುಕು ಹಾಕಿದರೆ ಇಷ್ಟೆಲ್ಲ ಕಷ್ಟವನ್ನು ಸಹಿಸುವ ಸಾಮರ್ಥ್ಯ ಹೆಣ್ಣಿಗಲ್ಲದೆ ಮತ್ಯಾರಿಗೆ ಸಾಧ್ಯ ಅನ್ನುವುದು ನೆನಪಾಗುತ್ತದೆ. ಇದು ಮೂರನೆಯ ಪಾತ್ರದಲ್ಲಿ ಕಂಡುಬಂದದ್ದು. ಜೀವನಕ್ಕೆ ಅನಿವಾರ್ಯವಾಗಿ ಹೋಗಿರುವ ಹೊಂದಾಣಿಕೆಯಿಂದ ನಲುಗುತ್ತಾ ತಾನು ಬೆಳಗಿದ ದೀಪದಿಂದ ಮನೆಯೆಲ್ಲ ಬೆಳಗುತ್ತಿದ್ದ ಹೆಣ್ಣು ಕೊನೆಗೆ ದೀಪವೇ ಅವಳ ಅಸ್ತಿತ್ವದ ಕುರುಹು ಆಗುವ ಪರಿ ಅರ್ಥಪೂರ್ಣವಾಗಿತ್ತು.
ಸಮಾಜದ ಕಟ್ಟುಪಾಡುಗಳಿಂದ ಹೊರಬರಲಾಗದೆ ತೊಳಲಾಡುವ ಹೆಣ್ಣಿನ ಸ್ಥಿತಿಯನ್ನು ಮನೋಜ್ಞವಾಗಿ ರಂಗದಲ್ಲಿ ವ್ಯಕ್ತಪಡಿಸಿದ ಶಿಲ್ಪಾ ಅವರ ನಟನೆ ಅದೆಷ್ಟೋ ಹೆಣ್ಣು ಮಕ್ಕಳ ಜೀವನದಲ್ಲೂ ನಡೆಯದೆ ಇರಲಾರದು ಅನ್ನುವುದಂತೂ ಸತ್ಯ. ಎಲ್ಲರಿಗೂ ಇರುವುದೊಂದೇ ಬದುಕು, ಅದು ಅವರಿಚ್ಛೆಯಂತೆ ಸಾಗಲಿ. ಆ ಇಚ್ಛೆ ಅವಳ ಬದುಕನ್ನು ಅತಂತ್ರ ಮಾಡದಿರಲಿ ಎಂಬ ಎಚ್ಚರಿಕೆ ಇರಬೇಕಷ್ಟೇ. ಇದು ಈ ಏಕವ್ಯಕ್ತಿ ಚಿತ್ರಣದಿಂದ ಮೂಡಿ ಬಂದ ಸೂಕ್ಷ್ಮ.
ಮೂರು ಭಿನ್ನ ಭಿನ್ನ ಪಾತ್ರದಲ್ಲಿ ಮೂಡಿ ಬಂದಿರುವ ನಟನೆ ನಿಜಕ್ಕೂ ಶ್ಲಾಘನೀಯ. ಶಿಲ್ಪಾರವರ ರಂಗದಲ್ಲಿ ಮೂಡಿಬಂದ ಸಹಜವಾದ ಅಭಿನಯ, ಹಿತವಾದ ಸಂಗೀತ, ಪಾತ್ರಕ್ಕೆ ತಕ್ಕಂತೆ ಮೂಡಿಬರುತ್ತಿದ್ದ ರಂಗ ಪರಿಕರಗಳು, ನಿರ್ದೇಶಕ ರವಿರಾಜ್ ಹೆಚ್. ಪಿ. ಮತ್ತು ಗಿರೀಶ್ ಇವರ ಸಂಗೀತ ಸಹಕಾರದಿಂದ ಮೂಡಿ ಬಂದ ಈ ಕಲಾತ್ಮಕ ಪ್ರದರ್ಶನ ನಮ್ಮ ಸಮಾಜಕ್ಕೆ ಹಿಡಿದ ಹಾಗೂ ನಮ್ಮೊಳಗನ್ನು ತೋರಿಸುವ ಕನ್ನಡಿಯಂತಿತ್ತು.
ಡಾ| ಪ್ರತಿಮಾ ಜಯಪ್ರಕಾಶ್ ಆಚಾರ್ಯ