ನಮ್ಮೊಳಗೆ , ನಿಮ್ಮೊಳಗೆ , ಅವರಿವರೊಳಗೆ ಇರುವ ಆ ಅವಳನ್ನು ಕುರಿತು ಚಿಂತಿಸುವುದಕ್ಕೆ , ಚರ್ಚಿಸುವುದಕ್ಕೆ , ಮನನಮಾಡಿಕೊಳ್ಳುವುದಕ್ಕೆ ವೇದಿಕೆಯಾದುದು ಇತ್ತೀಚೆಗಷ್ಟೇ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಪ್ರದರ್ಶನಗೊಂಡ ಶಿಲ್ಪಾಜೋಶಿಯವರು ರಚಿಸಿ ಅಭಿನಯಿಸಿದ ಏಕವ್ಯಕ್ತಿ ಪ್ರದರ್ಶನ “ನನ್ನೊಳಗಿನ ಅವಳು’.
ಪ್ರೀತಿ , ಕಾಳಜಿ , ಸ್ನೇಹ , ಸೇವೆ , ಆರೈಕೆ ಇದೆಲ್ಲವೂ ಹೆಣ್ಣು ಜೀವಕ್ಕೆ ಒಂದೇ ಪ್ಯಾಕೇಜಿನಲ್ಲಿ ಲಭ್ಯವಾಗುವ ಜವಾಬ್ದಾರಿಗಳು . ಅದನ್ನೇ ಸಮಾಜ ಹೆಣ್ತನ , ತಾಯ್ತನ ಎಂದು ಹೇಳುತ್ತಾ ಬಂದಿದೆ . ಅದು ಅವಳು ಬಯಸಿ ಬಂದವು ಎನ್ನುವುದಕ್ಕಿಂದ ಬಯಸದೆ ಬಂದ ಭಾಗ್ಯಗಳೆನ್ನುವುದೇ ಹೆಚ್ಚು ಸಮಂಜಸವಾದೀತು . ಇದಕ್ಕೆ ನಮ್ಮ ಸಾಮಾಜಿಕ ಮತ್ತು ಕೌಟುಂಬಿಕ ಮೌಲ್ಯಗಳೇ ಪ್ರಧಾನ ಕಾರಣವೆನ್ನಬಹುದು . ಈ ರೀತಿಯ ಬದುಕಿಗೆ ಶೈಕ್ಷಣಿಕ ಆರ್ಥಿಕ ಅಥವಾ ಸಾಮಾಜಿಕ ಹಿನ್ನೆಲೆಗಳ ಭೇದವಿಲ್ಲ. ಸಮಾಜದ ಎಲ್ಲ ಸ್ತರಗಳಲ್ಲೂ ಹಾಸುಹೊಕ್ಕಾಗಿರುವ ವ್ಯವಸ್ಥೆ ಇದು . ಹೆಣ್ಣಿನ ಕನಸು ನಿರೀಕ್ಷೆ ಅಭೀಷ್ಟೆಗಳನ್ನು ಅಥೆìçಸಿಕೊಳ್ಳುವವರೇ ಕಡಿಮೆ. ಇಂತಹ ಹೆಣ್ಣು ಮಕ್ಕಳ ಬದುಕಿನ ವಿವಿಧ ಮಗ್ಗಲುಗಳನ್ನುಶೋಧಿಸಿ ಕಥೆಯಾಗಿ ಹೆಣೆದು ಆಕೆ ಎದುರಿಸುತ್ತಿರುವ ತಲ್ಲಣಗಳನ್ನು ಮೂರು ವಿಭಿನ್ನಪಾತ್ರಗಳಲ್ಲಿ ಮುಖಾಮುಖೀಯಾಗಿಸಿದ ವಿಶಿಷ್ಟ ಪ್ರಯೋಗವಿದು .
ರಂಗದ ಮೇಲೆ ಮೊದಲು ಪ್ರಕಟಗೊಳ್ಳುವ ಪಾತ್ರ ಕವನಾಳದ್ದು. ಆಕೆಯನ್ನು ಕಂಡಾಗ ನಮ್ಮ ಸುತ್ತ ಗಂಡನಿದ್ದು ಇಲ್ಲದವರಂತೆ ಬದುಕುವ ಅದೆಷ್ಟೋ ಹೆಣ್ಣು ಮಕ್ಕಳು ಚಿತ್ತದ ಭಿತ್ತಿಯಲ್ಲಿ ಸುಳಿದು ಮರೆಯಾಗುತ್ತಾರೆ . ಸಾಂಪ್ರದಾಯಿಕ ಕೌಟುಂಬಿಕ ನೆಲೆಯಲ್ಲಿ ತಮಗೆ ತಾವೇ ಹಾಕಿಕೊಂಡ ಬಂಧನದಲ್ಲಿ ಇರಲು ಆಗದೆ ಮೀರಿ ಹೊರ ಬರಲು ಸಾಧ್ಯವಾಗದೆ ಚಡಪಡಿಸುತ್ತಿರುವ ಪರಿಯಿದು.
ಇನ್ನು ಎರಡನೆಯ ಹಂತದಲ್ಲಿ ನಾವು ಇದಿರುಗೊಳ್ಳುವುದು ಪ್ರೀತಿಸಿ ತನ್ನನ್ನು ಇಷ್ಟಪಟ್ಟವನನ್ನೇ ಮದುವೆಯಾಗಿ ಕೆಲ ಕಾಲ ಸುಖೀ ಸಂಸಾರವನ್ನು ಸಾಗಿಸಿದ ಎರಡು ಮಕ್ಕಳ ತಾಯಿ ಭಾವನಾಳದ್ದು . ಆದರೇನು ? ಗಂಡನೆನ್ನುವವ ದಾಂಪತ್ಯದ ಎಲ್ಲೇ ಮೀರಿ ಮತ್ತೂಂದು ಹೆಣ್ಣಿನ ಮೋಹಕ್ಕೆ ಒಳಗಾದಾಗ ವಿಚ್ಛೇದನದಿಂದ ಪರಸ್ಪರ ದೂರವಾಗುತ್ತಾರೆ . ಒಂದೆಡೆ ಸಂಸಾರವನ್ನು ಪೋಷಿಸಿಕೊಂಡು ಹೋಗಬೇಕಾದ ಅನಿವಾರ್ಯತೆ . ಇನ್ನೊಂದೆಡೆ ಶಂಕೆ ತಾತ್ಸಾರ, ಕುತ್ಸಿತ ನೋಟದಿಂದ ಕಾಣುವ ಸಮಾಜ . ಇವೆರಡರ ನಡುವೆ ಬದುಕು ಕಟ್ಟಿಕೊಳ್ಳಲು ಹೆಣಗಾಡುವ ಹೆಣ್ಣಿನ ತುಡಿತ, ಮಿಡಿತ ಸಂಕಟಗಳೆಲ್ಲವೂ ಎರಕಗೊಂಡು ಅಭಿವ್ಯಕ್ತಗೊಂಡ ಪಾತ್ರವದು . ರಂಗದ ಮೇಲೆ ಭಾವನಾಳ ಪಾತ್ರ ಅದೆಷ್ಟು ಪರಿಣಾಮಕಾರಿಯಾಗಿ ಮೂಡಿಬಂತೆಂದರೆಪ್ರತಿಯೊಬ್ಬ ಪ್ರೇಕ್ಷಕನೂ ನಾನು ಈ ಅನ್ಯಾಯದಲ್ಲಿ ಪಾಲುದಾರನೇ ಎಂದು ತನ್ನಎದೆಮುಟ್ಟಿ ಪ್ರಶ್ನಿಸಿಕೊಳ್ಳುವಂತೆ, ಪಶ್ಚಾತಾಪ ಪಡುವಂತೆ ಶಿಲ್ಪಾ ಜೋಶಿಯವರ ಅಭಿನಯವಿತ್ತು .
ಮೂರನೆಯದಾಗಿ ತಾಯ್ತನದ ಸಂಭ್ರಮವನ್ನು ಕಾಣಿಸುತ್ತಲೇ ಮೊಟಕುಗೊಂಡ ಹೆಣ್ಣಿನ ವಾಸ್ತವ ಬದುಕಿನ ಸೂಕ್ಷ್ಮತೆಯನ್ನು ಬಯಲುಗೊಳಿಸುವ ಮಿಸೆಸ್ ದೇಶಪಾಂಡೆಯ ಪಾತ್ರ . ಸಾಂಪ್ರದಾಯಿಕ ವ್ಯವಸ್ಥೆ ಆಕೆಯಿಂದ ಎಲ್ಲವನ್ನು ನಿರೀಕ್ಷಿಸುತ್ತಿರುತ್ತದೆ . ಗಂಡ ಮಗ ಸೊಸೆ ಮೊಮ್ಮೊಕ್ಕಳು…. ಮೇಲ್ನೋಟಕ್ಕೆ ಎಲ್ಲರೂ ಸಂಭಾವಿತರೇ. ತಾಯ್ತನದ ಭಾವುಕ ಗುಣವನ್ನೇ ಆಳಾಗಿಸಿಕೊಂಡು ದುಡಿಸಿಕೊಳ್ಳುತ್ತಿದ್ದರೂ ಅದರ ಪರಿವೆಯೇ ಇಲ್ಲದ ದುಡಿಮೆ ಆ ಅಜ್ಜಿಯದು.ಏಕೆಂದರೆ ಬದುಕು, ಸಂಪ್ರದಾಯ ಅವಳಿಗೆ ಕಲಿಸಿಕೊಟ್ಟಿದ್ದು ಅದನ್ನೇ . ಕುಟುಂಬಕ್ಕಾಗಿತನ್ನತನವನ್ನೇ ಮರೆತು ದೀಪದಂತೆ ಬದುಕನ್ನೇ ತೆತ್ತುಕೊಳ್ಳುತ್ತಲೇ, ಹೆಣ್ಣಾಗಿ ಹುಟ್ಟಿದ್ದರಿಂದಲೇ ತಮ್ಮ ಹಕ್ಕುಗಳನ್ನು ಕನಸುಗಳನ್ನು ಆಸೆಗಳನ್ನು ಮರೆತು ಬಿಟ್ಟುದುಡಿಯುವ ರೀತಿ ಇದು.
ಒಂದು ಗಂಟೆಯ ಕಾಲಾವಧಿಯಲ್ಲಿ ಇಡೀ ಪ್ರದರ್ಶನವನ್ನು ಶಿಲ್ಪಾ ಜೋಶಿಯವರು ನಿರ್ವಹಿಸಿದರೀತಿ ಶ್ಲಾಘನೀಯವಾದುದು. ಎಲ್ಲೂ ನೀರಸವೆನಿಸದ ಕತೆಯ ಓಟ. ಮಾತಿನ ಸೊಗಸು , ನಟನೆಯ ಕೌಶಲ ಗಮನ ಸೆಳೆಯುತ್ತದೆ. ಜೊತೆಗೆ ರಂಗಭೂಮಿಯ ರವಿರಾಜ್ ಹೆಚ್. ಪಿ.ಯವರ ನಿರ್ದೇಶನ , ಗೀತಂ ಗಿರೀಶ್ ಅವರ ಸಂಗೀತ ತೀವ್ರ ಪರಿಣಾಮವನ್ನು ಸಾಧಿಸುವಲ್ಲಿ ಕಾರ್ಯ ನಿರ್ವಹಿಸಿದೆ.
ಆ ಪ್ರದರ್ಶನ ಕೇವಲ ಮನೋರಂಜನೆಯಷ್ಟೇ ಆಗಿರದೆ ನೋಡುಗರ ಅರಿವನ್ನು ಹಿಗ್ಗಿಸುವ , ಅನುಭವವನ್ನು ಹೆಚ್ಚಿಸುವ ಕೆಲಸ ಮಾಡುತಿದೆಯೆನ್ನುವುದು ತುಂಬಾ ಮುಖ್ಯ ವಿಚಾರ .
ಡಾ| ರೇಖಾ ವಿ. ಬನ್ನಾಡಿ