Advertisement

ವಾಲಿ ಸತ್ತ ನಂತರ ಆಕೆ ಸುಗ್ರೀವನ ಪತ್ನಿ…

08:20 PM Jan 27, 2020 | Lakshmi GovindaRaj |

ಹಲವು ಪತ್ನಿಯರನ್ನು ಹೊಂದುವುದು ಭಾರತೀಯ ಪರಂಪರೆಯಲ್ಲಿ ದೊಡ್ಡ ವಿಷಯವೇನಲ್ಲ. ಒಬ್ಬೊಬ್ಬ ರಾಜರಿಗೂ ಹತ್ತಾರು ಪತ್ನಿಯರು ಮಾಮೂಲಿ. ಹಲವು ಪತ್ನಿಯರನ್ನು ಹೊಂದುವುದು ರಾಜತಾಂತ್ರಿಕ ಕ್ರಮವೂ ಆಗಿತ್ತು. ಹಾಗೆಯೇ, ಪ್ರತಿಷ್ಠೆಯೂ ಆಗಿತ್ತು. ಎರಡೂ ರಾಜ್ಯಗಳ ನಡುವೆ ಸ್ನೇಹಸಂಬಂಧ ಬೆಳೆಸಲು ಮದುವೆ ಮಾಡಿಕೊಳ್ಳುವುದೂ ಉತ್ತಮ ದಾರಿ. ಇದೇ ಮಾತನ್ನು ಬಹುಪತಿತ್ವದ ಬಗ್ಗೆ ಹೇಳಲು ಸಾಧ್ಯವಿಲ್ಲ. ದೇವಕನ್ಯೆಯರು ಅಂದರೆ ಅಪ್ಸರೆಯರನ್ನು ಹೊರತುಪಡಿಸಿದರೆ, ಹಲವರನ್ನು ಗಂಡಂದಿರಾಗಿ ಹೊಂದಿದ ಸ್ತ್ರೀಯರ ಉಲ್ಲೇಖ ಪುರಾಣಗಳಲ್ಲಿ ಬಹಳ ಕಡಿಮೆ.

Advertisement

ಅದಕ್ಕೂ ಕೆಲವು ಉದಾಹರಣೆಗಳನ್ನು ಕೊಡಬಹುದು. ವಾಲ್ಮೀಕಿ ವಿರಚಿತ ರಾಮಾಯಣದಲ್ಲಿ ವಾಲಿಯ ಪತ್ನಿ ತಾರೆ, ತನ್ನ ಪತಿಯ ನಿಧನದ ನಂತರ, ಸುಗ್ರೀವನ ಹೆಂಡತಿಯಾಗುತ್ತಾಳೆ! ಹಾಗೆಯೇ, ಸುಗ್ರೀವನನ್ನು ವಾಲಿ ತನ್ನ ರಾಜ್ಯದಿಂದ ಹೊರಗಟ್ಟಿದ್ದಾಗ, ಸುಗ್ರೀವನ ಪತ್ನಿ ರುಮೆಯನ್ನು ತನ್ನ ಹೆಂಡತಿಯನ್ನಾಗಿ ಮಾಡಿಕೊಂಡಿರುತ್ತಾನೆ. ಇಲ್ಲಿ ಎಂಥ ಸಂದಿಗ್ಧವೆಂದರೆ ವಾಲಿ ಸತ್ತು ಹೋದಾಗ ತಾರೆಯೇನೋ ಸುಗ್ರೀವನಿಗೆ ಹೆಂಡತಿಯಾಗಿ ಬಿಡುತ್ತಾಳೆ. ವಾಲಿ-ತಾರೆಯ ಪುತ್ರ ಅಂಗದನ ಗತಿ? ಸುಗ್ರೀವನನ್ನು ತಾರೆ ಪೂರ್ಣವಾಗಿ ಒಪ್ಪಿಕೊಂಡಿದ್ದು ರಾಮಾಯಣದ ಕಿಷ್ಕಿಂಧಾಕಾಂಡದಲ್ಲಿ ಉಲ್ಲೇಖವಾಗುತ್ತದೆ.

ವಾಲಿಯ ಹತ್ಯೆ ಮಾಡಿದರೆ ಸೀತೆಯನ್ನು ಹುಡುಕಿಕೊಡಲು ತಾನು ನೆರವಾಗುತ್ತೇನೆ ಎಂದು ಸುಗ್ರೀವ ರಾಮನಿಗೆ ಭಾಷೆ ಕೊಟ್ಟಿರುತ್ತಾನೆ. ವಾಲಿ ಸತ್ತು ತಿಂಗಳುಗಳೇ ಕಳೆದರೂ ಸುಗ್ರೀವನ ಪತ್ತೆಯೇ ಇಲ್ಲ. ಇದರಿಂದ ರೊಚ್ಚಿಗೆದ್ದ ಲಕ್ಷ್ಮಣ ನೇರವಾಗಿ ಸುಗ್ರೀವನ ಅರಮನೆಗೆ ನುಗ್ಗುತ್ತಾನೆ. ಆಗ, ತಾರೆ ಅವನನ್ನು ಸಮಾಧಾನಿಸಿ ಹೀಗೆನ್ನುತ್ತಾಳೆ: “ನೋಡು ದೀರ್ಘ‌ಕಾಲ ವಿರಹದಿಂದ ಸುಗ್ರೀವ ಮೈಮರೆತಿದ್ದಾನೆ. ಈಗವನು ರತಿಸುಖದಲ್ಲಿ ಮುಳುಗಿ ಹೋಗಿದ್ದಾನೆ. ಅದು ನಿನಗೆ ಹೇಗೆ ಅರ್ಥವಾಗಬೇಕು?’ ಎಂದು ಕೇಳುತ್ತಾಳೆ. ಆಗ ಅವಳೂ ಕೂಡ ಉನ್ಮತ್ತಳಾಗಿರುತ್ತಾಳೆ!

ಆದರೆ ಅಂಗದನ ಕಥೆಯೇನು? ಅವನು ಚಿಕ್ಕಪ್ಪನನ್ನು ಚಿಕ್ಕಪ್ಪ ಎಂದು ಪ್ರೀತಿಸಬಹುದೇ ಹೊರತು, ಅಪ್ಪ ಎಂದು ಹೇಳಲು ಆಗುವುದಿಲ್ಲ. ಅದೂ ತನ್ನ ತಂದೆಯನ್ನು ಸ್ವತಃ ಚಿಕ್ಕಪ್ಪನೇ ಕೊಲ್ಲಿಸಿದ ನಂತರ, ಹಾಗೆ ಹೇಳಲು ಅವನಿಗೆ ಮನಸ್ಸಾದರೂ ಹೇಗೆ ಬಂದೀತು? ಅಂಗದನಿಗೆ ಯುವರಾಜನೆಂದು ಹೇಳಿದ್ದರೂ ಅವನಿಗೆ ತನ್ನ ಸ್ಥಿತಿ ಅಷ್ಟು ಯೋಗ್ಯವಾಗಿಲ್ಲ ಎಂಬ ಅರಿವಿರುತ್ತದೆ. ಅದರ ಸುಳಿವು ಸೀತೆಯ ಅನ್ವೇಷಣೆಯ ವೇಳೆ ಸಿಗುತ್ತದೆ. ಅಂಗದ, ಹನುಮಂತನ ನೇತೃತ್ವದಲ್ಲಿ ದಕ್ಷಿಣದಿಕ್ಕಿಗೆ ಹೊರಟಿದ್ದ ಕಪಿಸೇನೆ ಎಷ್ಟು ಹುಡುಕಿದರೂ ಸೀತೆಯ ಸುಳಿವನ್ನು ಪಡೆಯುವುದಿಲ್ಲ.

ಆಗ ಅಂಗದ ಹತಾಶನಾಗುತ್ತಾನೆ. ಸೀತೆ ಸಿಗದೇ ಹಿಂತಿರುಗಿದರೆ ಸುಗ್ರೀವ ನಮ್ಮನ್ನು ಸುಮ್ಮನೆ ಬಿಡುವುದಿಲ್ಲ, ಮೊದಲೇ ಅವನಿಗೆ ನನ್ನ ಮೇಲೆ ಸಿಟ್ಟಿದೆ. ಈಗ ಅವನಿಗೊಂದು ಕಾರಣ ಸಿಕ್ಕಂತಾಯಿತು. ಹೇಗಿದ್ದರೂ ನಮ್ಮನ್ನು ಕೊಲ್ಲಿಸುತ್ತಾನೆ. ಆದ್ದರಿಂದ, ಉಪವಾಸ ಮಾಡಿ ಪ್ರಾಣ ಬಿಡುವುದೇ ಒಳಿತು ಎಂದು ಹೇಳಿ ಪ್ರಾಯೋಪವೇಶಕ್ಕೆ ಸಿದ್ಧನಾಗುತ್ತಾನೆ! ಈ ಹಂತದಲ್ಲಿ ಹನುಮಂತನ ವಾಕ್ಚಾತುರ್ಯ ನೆರವಿಗೆ ಬರುತ್ತದೆ. ಅವನು ಸಾಮ, ದಾನ, ಭೇದ ಈ ತಂತ್ರಗಾರಿಕೆಗಳನ್ನು ಬಳಸಿ, ಅಂಗದನ ಪಕ್ಷ ಸೇರಿದ್ದವರನ್ನು ಮತ್ತೆ ತನ್ನತ್ತ ಸೆಳೆದುಕೊಳ್ಳುತ್ತಾನೆ.

Advertisement

ಮಾತ್ರವಲ್ಲ, ಸೀತೆಯನ್ನು ಹುಡುಕಲು ಮತ್ತೆ ಸಿದ್ಧವಾಗುವಂತೆ ಮಾಡುತ್ತಾನೆ. ಒಂದು ರಾಜ್ಯದಲ್ಲಿ, ಒಂದು ಕುಟುಂಬದಲ್ಲಿ ಬಹಳ ದೊಡ್ಡ ಸ್ಥಿತ್ಯಂತರಗಳು ನಡೆದಾಗ, ಅದಕ್ಕೆ ಯಾರ್ಯಾರು ಹೊಂದಿಕೊಂಡಿರುತ್ತಾರೆ? ಯಾರ್ಯಾರು ಹೊಂದಿಕೊಂಡಂತೆ ನಾಟಕ ಮಾಡುತ್ತಾರೆ ಗೊತ್ತಾಗುವುದಿಲ್ಲ. ತಾರೆಯನ್ನು ಸುಗ್ರೀವ ವಶಪಡಿಸಿಕೊಂಡಿದ್ದನೋ? ಆಕೆಯೇ ಅವನನ್ನು ಒಪ್ಪಿಕೊಂಡಿದ್ದಳ್ಳೋ? ಆಗ ರುಮೆಯ ಪರಿಸ್ಥಿತಿ ಏನಾಯಿತು? ಅವಳ ತುಮುಲಗಳೇನು? ಸುಗ್ರೀವ ರಾಜನಾದಾಗ ಅವಳೇ ಪಟ್ಟದ ರಾಣಿಯಾಗಬೇಕು. ಇಲ್ಲಿ ನಿಜವಾಗಿಯೂ ಪಟ್ಟದ ರಾಣಿ ಯಾರು? ತಾರೆಯ? ರುಮೆಯ? ಈ ಇಬ್ಬರ ನಡುವೆ ತಿಕ್ಕಾಟಗಳು ಬರಲಿಲ್ಲವೇ? ಇವು ಯಾವುದಕ್ಕೂ ವಾಲ್ಮೀಕಿ ರಾಮಾಯಣದಲ್ಲಿ ಉತ್ತರವಿಲ್ಲ.

* ನಿರೂಪ

Advertisement

Udayavani is now on Telegram. Click here to join our channel and stay updated with the latest news.

Next