Advertisement

ಅವಳಿಗೆ ಹುಷಾರಿಲ್ವಂತೆ, ಆ್ಯಂಬುಲೆನ್ಸ್‌ಗೆ ಕಾಲ್‌ ಮಾಡ್ರಿ…

10:23 AM Jan 27, 2020 | mahesh |

“ಅವಳು ಬರೀ ಐಶ್ವರ್ಯ ಅಲ್ಲ ರೀ. ಐಶ್ವರ್ಯ ರೈ! ನೋಡಲಿಕ್ಕೂ ಹೆಚ್ಚು ಕಡಿಮೆ ಹಾಗೇ ಇದಾಳೆ. ಅದೇನು ಒನಪು, ಅದೆಂಥ ವಯ್ನಾರ, ಅವಳೊಮ್ಮೆ ಸುಳಿದಾಡಿದ್ರೆ ಸಾಕು; ಇಡೀ ಪ್ರದೇಶಕ್ಕೆ ಹೊಸ ಕಳೆ ಬಂದುಬಿಡುತ್ತೆ. ಬೇಜಾರೇನು ಅಂದ್ರೆ, ಹಾಳಾದವಳು ಯಾರ ಜೊತೇನೂ ಮಾತಾಡಲ್ಲ, ಗಮನಿಸಿದ್ದೀರಾ? ನಮ್ಮ ಅಪಾರ್ಟ್‌ಮೆಂಟಿನ ಎಲ್ಲಾ ಹುಡುಗರೂ ಅವಳ ಹಿಂದೆ ಬೀಳಲು ಸಜ್ಜಾಗಿ ನಿಂತಿದಾರೆ. ಆದರೆ ಅವಳು ಯಾರನ್ನೂ ಕಣ್ಣೆತ್ತಿ ಕೂಡ ನೋಡ್ತಾ ಇಲ್ಲ. ಇನ್ನು ಮಾತಾಡಿಸೋದು ದೂರದ ಮಾತು’ -ಲೆಫ್ಟ್-ರೈಟ್‌ ಮಾಡುತ್ತಲೇ ಸಂಕಟಬೆರೆತ ದನಿಯಲ್ಲಿ ಗೊಣಗಿಕೊಂಡರು ಸುಂದರರಾವ್‌.

Advertisement

“ಸಿನಿಮಾಗಳಲ್ಲಿ ಆ್ಯಕ್ಟ್ ಮಾಡಲು ಛಾನ್ಸ್‌ ಸಿಕ್ಕಿತ್ತಂತೆ ಕಣ್ರಿ. ಸೀರಿಯಲ್‌ನವರು ಈಗಲೂ ದುಂಬಾಲು ಬಿದ್ದಿದಾರಂತೆ. ಆದರೆ ಈ ಹುಡುಗೀನೇ ಒಪ್ತಾ ಇಲ್ಲವಂತೆ -ಹೀಗೆಲ್ಲ ಮಾತಾಡ್ತಾರೆ ಜನ. ಈ ಮಾತು ನಿಜ ಇದ್ರೂ ಇರಬಹುದು. ಅದೇನೋ ಬ್ಯೂಟಿ ಫಿಗರ್‌ ಅಂತಾರಲ್ಲ 24-36-24, ಕರೆಕ್ಟಾಗಿ ಅದೇ ಸೈಜಲ್ಲಿ ಇದಾಳೆ ಕಣ್ರಿ ಈ ಹುಡುಗಿ’ -ರಾಯರ ಜೊತೆಗಿದ್ದ ಎಸ್ಕೆ ಪಾಟೀಲ, ತಮ್ಮದೂ ಎರಡು ಮಾತು ಸೇರಿಸಿದ್ದರು.

ಬೆಂಗಳೂರಲ್ಲಿ ಅಂಗೈ ಅಗಲದ ಭೂಮಿಗೂ ಚಿನ್ನದ ಬೆಲೆ ಬಂದು, ಒಂಟಿಮನೆಗಳ ಬದಲು ಅಪಾರ್ಟ್‌ಮೆಂಟ್‌ಗಳು ಎದ್ದುನಿಂತವಲ್ಲ; ಅವುಗಳ ಪೈಕಿ, ಕೆಂಗೇರಿಯಲ್ಲಿರುವ ಬಿಡಿಎ ಅಪಾರ್ಟ್‌ಮೆಂಟೂ ಒಂದು ಎಂಬುದು ಸರಿಯಷ್ಟೆ? ಅಲ್ಲಿ ಒಟ್ಟು 60 ಫ್ಲಾಟ್‌ಗಳಿವೆ. ಹೆಚ್ಚಿನ ಫ್ಲಾಟ್‌ಗಳಲ್ಲಿ ಗಂಡ-ಹೆಂಡತಿ, ಮಗು ಮತ್ತು ನಾಯಿಮರಿ ಇವೆ. ಕೆಲವರಷ್ಟೇ ತಮ್ಮೊಂದಿಗೆ ಪೋಷಕರಿಗೂ ಜಾಗ ಕೊಟ್ಟಿದ್ದಾರೆ. ಈ ಪೋಷಕರ ಪೈಕಿ, ಸುಂದರರಾವ್‌ ಮತ್ತು ಎಸ್ಕೆ ಪಾಟೀಲರೂ ಇದ್ದರು. ದಿನವೂ ಬೆಳಗ್ಗೆ ವಾಕ್‌ ಹೋಗುವುದು, ಆಗಲೇ ಒಂದಷ್ಟು ಯೋಗಾಸನ ಮಾಡುವುದು, ಆ ಮೂಲಕ ಆರೋಗ್ಯದ ಕಡೆಗೆ ನಿಗಾ ವಹಿಸುವುದು -ಇವರ ಉದ್ದೇಶವಾಗಿತ್ತು. ಆದರೆ, ಐಶ್ವರ್ಯಾ ಎಂಬ ಸುಂದರಿಯನ್ನು ನೋಡಿದಾಗಿನಿಂದ, ಈ ಹಿರಿಯರ ಬಿ.ಪಿ., ಟಿ.ವಿ. ಸೀರಿಯಲ್‌ನ ಟಿಆರ್‌ಪಿ ಥರವೇ ಕ್ಷಣಕ್ಕೊಮ್ಮೆ ಏರಿ-ಇಳಿಯುವ ಮೂಲಕ, ಸಂತೋಷ ಮತ್ತು ಸಂಕಟಕ್ಕೆ ಕಾರಣವಾಗಿತ್ತು. ಈಗ ವಾಕಿಂಗ್‌ ಹೊರಟ ಸಂದರ್ಭದಲ್ಲಿ ಇವರಿಬ್ಬರೂ ಅದನ್ನೇ ಪರಸ್ಪರ ಹೇಳಿಕೊಂಡು ಸಮಾಧಾನ ಮಾಡಿಕೊಳ್ಳತೊಡಗಿದ್ದರು.

ಆ ಹುಡುಗಿ ಐಶ್ವರ್ಯಾ ಹೇಗಿದ್ದಳಪ್ಪ ಅಂದರೆ, ಆಹಾ, ವಿಶ್ವಸುಂದರಿ -ಎಂದು ಉದ್ಗರಿಸಬೇಕು; ಹಾಗಿದ್ದಳು. ಸಂಪಿಗೆ ಮೂಗು, ತೊಂಡೆಹಣ್ಣಿನಂಥ ತುಟಿಗಳು, ದಾಳಿಂಬೆ ಹಲ್ಲು -ಅಂತೇನೇನೋ ವರ್ಣಿಸಿ ಈ ಕವಿಗಳು ಬರೀತಾರೆ ನೋಡಿ- ಹಾಗೆಯೇ ಇದ್ದಳು! ಯಾವುದೇ ಬಣ್ಣದ ಡ್ರೆಸ್‌ ಹಾಕಿಕೊಂಡರೂ ಆಕೆ ಮುದ್ದಾಗಿ ಕಾಣುತ್ತಿದ್ದಳು. ದಿನವೂ ಬೆಳಗ್ಗೆ ಮತ್ತು ಸಂಜೆ, ಅಪಾರ್ಟ್‌ಮೆಂಟಿನ ಕಾಂಪೌಂಡಿನಲ್ಲೇ ಹತ್ತು ರೌಂಡ್‌ ವಾಕ್‌ ಮಾಡುತ್ತಿದ್ದಳು. ಆಗಲಾದರೂ ಹೇಗೆ ಬರುತ್ತಿದ್ದಳು ಅಂತೀರಿ? ನೀಟಾಗಿ ತಲೆಬಾಚಿ, ಜುಟ್ಟು ಆಚೀಚೆ ಚದುರದಂತೆ ರಬ್ಬರ್‌ ಬ್ಯಾಂಡ್‌ ಹಾಕಿ, ಗಾಳಿಗೆ ವೇಲ್‌ ಒಂದಿಷ್ಟೂ ಅಲುಗಾಡದಂತೆ ಚೂಡಿದಾರ್‌ನ ಎರಡೂ ಬದಿಯಲ್ಲಿ ನೀಟಾಗಿ ಪಿನ್‌ ಮಾಡಿಕೊಂಡೇ ಅಂಗಳಕ್ಕೆ ಇಳಿಯುತ್ತಿದ್ದಳು.

ಆಕೆಯ ಬಳಿ ಮೊಬೈಲ್‌ ಇರುತ್ತಿರಲಿಲ್ಲ. ಮೊಗದಲ್ಲಿ, ಸಂತಸದ ಅಥವಾ ಸಂಕಟದ ಭಾವವೂ ಕಾಣುತ್ತಿರಲಿಲ್ಲ. ಒಂಥರಾ ನಿರ್ಲಿಪ್ತ ಮುಖಭಾವ. ಆಕೆ ಒಂದೇ ಒಂದ್ಸಲ ತಮ್ಮ ಕಡೆಗೆ ತಿರುಗಿನೋಡಿ ಹಲೋ ಅಂದರೆ ಸಾಕು; ಒಂದು ಸೆ¾çಲ್‌ ಕೊಟ್ಟು ಹೋಗಿಬಿಟ್ಟರೆ ಸಾಕು ಎಂದು ಅಪಾರ್ಟ್‌ಮೆಂಟಿನ ಪಡ್ಡೆಹುಡುಗರು ಹಂಬಲಿಸಿದರು. ಆಕೆ ಧರಿಸುವ ಓಲೆ, ಬಟ್ಟೆ, ಮೊಡವೆ ಯಾಗಲಿ, ಒಂದು ನೆರಿಗೆಯಾಗಲಿ, ಕಲೆಯಾಗಲಿ ಕಾಣದಂತೆ ಚರ್ಮದ ಆರೋಗ್ಯ ಕಾಪಾಡಿಕೊಳ್ಳುವ ಗುಟ್ಟು ತಿಳಿಯುವ ಉದ್ದೇಶದಿಂದಲೇ ಆಕೆಯ ಫ್ರೆಂಡ್‌ಶಿಪ್‌ ಮಾಡಲು ಅಪಾರ್ಟ್‌ಮೆಂಟಿನ ಹೆಂಗಸರೂ ಪ್ರಯತ್ನಿಸಿದರು. ಒಂದಷ್ಟು ಮಂದಿ- “ಪೂಜೆಗೆ ಬನ್ನಿ, ದೇವಸ್ಥಾನಕ್ಕೆ ಹೋಗಿಬರೋಣ ಬನ್ನಿ’ ಎಂದೆಲ್ಲಾ ಆಹ್ವಾನಿಸಿದರು. ಉಹುಂ, ಈ ಹುಡುಗಿ ಐಶ್ವರ್ಯಾ, ಯಾರ ಕರೆಗೂ ಓಗೊಡಲಿಲ್ಲ. ಯಾವ ಪಡ್ಡೆಗೂ ಸ್ಮೈಲ್‌ ಕೊಡಲಿಲ್ಲ. ಪರಿಣಾಮ- ಅಹಂಕಾರ ಕಣ್ರೀ ಅವಳಿಗೆ. ಗುಡ್‌ ಮಾರ್ನಿಂಗ್‌ ಅಂದುಬಿಟ್ರೆ ಮುತ್ತು ಉದುರಿಹೋಗುತ್ತಾ? ಹೆಸರು ಐಶ್ವರ್ಯಾ ಅಂದಮಾತ್ರಕ್ಕೆ ನಾನೇ ಐಶ್ವರ್ಯಾ ರೈ ಅಂತ ತಿಳಿದಿದ್ದಾಳೆ ಅವಿವೇಕಿ… ಎಂದೆಲ್ಲಾ ಜನ ಕಮೆಂಟ್‌ ಮಾಡಿದರು. ಆಗಲೂ ಈ ಹುಡುಗಿ, ಯಾವ ಮಾತೂ ತನಗೆ ಕೇಳಿಸಲೇ ಇಲ್ಲ ಎಂಬಂತೆ, ಸೈಲೆಂಟ್‌ ಆಗಿ ಇದ್ದುಬಿಟ್ಟಳು.

Advertisement

ಎದುರಿಗಿರುವವರು, ಪುಣ್ಯಕೋಟಿಯಂಥವರು ಎಂದು ಗೊತ್ತಾ ದರೆ- ಅವರನ್ನು ಸ್ವಲ್ಪ ಗೋಳು ಹುಯ್ದುಕೊಂಡು ಮಜಾ ತಗೊಳ್ಳುವ ಮೆಂಟಾಲಿಟಿಯ ಜನರಿಗೆ ಕೊರತೆಯೆ? ಅಪಾರ್ಟ್‌ಮೆಂಟಿನ ಜನರೂ ಅದೇ ಕೆಲಸ ಮಾಡಿದರು. ಅವಳು ಯಾರೋ ಶ್ರೀಮಂತನನ್ನು ಮದು ವೆ ಆಗಿದ್ಲಂತೆ. ಇವಳ ಅಹಂಕಾರ ಕಂಡು, ಅವನೇ ಡೈವೋರ್ ಕೊಟ್ಟು ಕೈಮುಗಿದನಂತೆ. ಪರಿಹಾರದ ರೂಪದಲ್ಲಿ ಅದೆಷ್ಟೋ ಲಕ್ಷ ಸಿಕ್ಕಿದೆ. ಆ ಹಣದ ಬಲದಿಂದ ಇವಳಿಲ್ಲಿ ಮೆರೀತಿದಾಳೆ… ಎಂದು ಕೆಲವರು ಕಥೆ ಕಟ್ಟಿದರು. “ಯಾವೊªà ದೊಡ್ಡ ಕಂಪನೀಲಿ ಕೆಲಸ ಇತ್ತಂತೆ. ಆದ್ರೆ ಅಲ್ಲಿನ ಕೆಲಸಗಾರರೆಲ್ಲ ಕೆಲಸ ಮಾಡೋದು ಬಿಟ್ಟು ಈವಮ್ಮನ ಸುತ್ತಲೇ ಅಲೀತಿ ದ್ರಂತೆ. ಅದ ನ್ನು ಕಂಡು, ಆ ಕಂಪನಿಯವರೇ ಪರಿಹಾರ ಕೊಟ್ಟು ಹೋ ಗ್ಬಾರಮ್ಮ ತಾಯಿ’ ಎಂದು ಕಳಿಸಿಬಿಟ್ರಂತೆ! -ಎಂದು ಕೆಲವರು ಮಾತಾಡಿ ಕೊಂಡರು. “ಸರ್ಕಾರಿ ನೌಕರಿಯಿಂದ ವಿಆರ್‌ಎಸ್‌ ತಗೊಂಡು ಬದುಕ್ತಾ ಇರೋದಂತೆ’, “ಮನೆಯಿಂದಾನೇ ಅಮೆರಿಕದ ಕಂಪನಿಗೆ ಕೆಲಸ ಮಾಡ್ತಾ ಳಂತೆ’ -ಎಂಬಂಥ ಸುದ್ದಿಗಳೂ ಕೇಳಿಬಂದವು. ಇದ್ಯಾವುದರ ಕುರಿತೂ ಐಶ್ವರ್ಯ ಪ್ರತಿಕ್ರಿಯಿಸಲಿಲ್ಲ. ಆಕೆಯ ಮನೆಗೆ ಆಗೊಮ್ಮೆ ಈಗೊಮ್ಮೆ ಹಿರಿಕಿರಿಯರು ಬರುತ್ತಿದ್ದರು. ಅವರ ಪಾಡಿಗೆ ಅವರು ಇರುತ್ತಿ ದ್ದುದರಿಂದ, ಅವರ ಬಗ್ಗೆ ಏನು ಹೇಳಲೂ ಯಾರಿಗೂ ಸಾಧ್ಯವಿರಲಿಲ್ಲ. ಒಟ್ಟಾರೆ, ಐಶ್ವರ್ಯ ಎಂಬ ಸುಂದರಾಂಗಿ, ಎಲ್ಲರ ಪಾಲಿಗೂ ಹುಳಿದ್ರಾಕ್ಷಿಯಾಗಿ, ನಿಗೂಢ ವ್ಯಕ್ತಿಯಾಗಿ ಉಳಿದುಕೊಂಡಳು.

ಹೀಗಿರುವಾಗಲೇ, ಜನರ ಕಣ್ಣಲ್ಲಿ ಐಶ್ವರ್ಯಾ ವಿಲನ್‌ ಆಗುವಂಥ ಸಂದರ್ಭವೊಂದು ಅಕಸ್ಮಾತ್‌ ನಡೆದು ಹೋಯಿತು. ಏನಾಯಿತೆಂದರೆ- ತಮ್ಮ ಮಗುವಿನ ಹುಟ್ಟುಹಬ್ಬವನ್ನು ಅಪಾರ್ಟ್‌ಮೆಂಟ್‌ ನಿವಾಸಿಗಳ ಸಮ್ಮುಖದಲ್ಲಿ ಆಚರಿಸಬೇಕೆಂದು ಅದೇ ಫ್ಲಾಟ್‌ನಲ್ಲಿದ್ದ ದಂಪತಿ ಆಸೆಪಟ್ಟರು. ಪ್ರತಿಯೊಂದು ಮನೆಗೂ ಖುದ್ದಾಗಿ ಹೋಗಿ ಆಹ್ವಾನ ನೀಡಿದರು. ಅಪಾರ್ಟ್‌ಮೆಂಟ್‌ನ ಒಂದು ಮೂಲೆಯಲ್ಲಿ ಪೆಂಡಾಲ್‌ ಹಾಕಿಸಿದರು. ಎಲ್ಲ ಮಕ್ಕಳಿಗೂ ಬಲೂನ್‌, ಟೊಪ್ಪಿ ಕೊಟ್ಟರು. ಇನ್ನೇನು ಕೇಕ್‌ ಕಟ್‌ ಮಾಡಬೇಕು ಅನ್ನುವ ವೇಳೆಗೆ ಸರಿಯಾಗಿ, ನಿಧಾನವಾಗಿ ಮೆಟ್ಟಿಲಿಳಿದು ಬಂದಳು ಐಶ್ವರ್ಯಾ. ವಿಶೇಷವೆಂದರೆ, ಬರ್ತ್‌ಡೇಯ ಮಗು ಹಾಕಿದ್ದಂಥದೇ ಕಲರಿನ ಬಟ್ಟೆಯನ್ನು ಅವಳೂ ಧರಿಸಿದ್ದಳು. ಆ ಮಗು, ಇನ್ನಿಲ್ಲದ ಖುಷಿಯಿಂದ- ಆಂಟೀ… ಅನ್ನುತ್ತಾ ಅವಳತ್ತ ಓಡಿಹೋಯಿತು. ಆದರೆ ಮಗುವನ್ನು ಒಮ್ಮೆ ನೋಡಿ, ಕೈಕುಲುಕು ವುದನ್ನು ಮರೆತವಳಂತೆ, ಅಲ್ಲಿಂದ ಹೋಗಿಯೇ ಬಿಟ್ಟಳು ಐಶ್ವರ್ಯಾ.

ಅವಳ ಈ ವರ್ತನೆ ಎಲ್ಲರಿಗೂ ಬೇಸರ ತಂದಿತು. ಬರ್ತ್‌ಡೇ ಮಗುವಿಗೆ, ಶುಭಾಶಯ ಹೇಳುವಂಥ ಮನಸ್ಸೂ ಇಲ್ಲ ಅಂದಮೇಲೆ ಆ ಸೌಂದರ್ಯ ತಗೊಂಡು ಉಪ್ಪಿನಕಾಯಿ ಹಾಕ್ಕೋಕ್ಕಾಗ್ತದಾ? ಮನೆಗೇ ಹೋಗಿ ಕರೆದಿದ್ದಾರೆ. ಅಪಾರ್ಟ್‌ಮೆಂಟಿನ ಅಷ್ಟೂ ಫ್ಯಾಮಿಲಿಯ ಜನ ಹಾಜರಾಗಿದ್ದಾರೆ. ಮಕ್ಕಳು ಅಂದ್ರೆ ದೇವರ ಸಮಾನ ಅಂತಾರೆ. ಅದು ಗೊತ್ತಿದ್ದೂ ಆ ಮಗುವಿಗೆ, ಅದೂ ಹುಟ್ಟುಹಬ್ಬದ ದಿನ ಒಂದು ವಿಷ್‌ ಮಾಡದೆ ಹೋಗಿಬಿಟ್ಟಳಲ್ಲ; ಅವಳ ಅಹಂಕಾರ ಅದೆಷ್ಟಿರಬೇಕು… ಹಿಡಿದು ನಿಲ್ಲಿಸಿ ಛೀಮಾರಿ ಹಾಕುವವರು ಇಲ್ಲವಲ್ಲ -ಎಂದೆಲ್ಲಾ ಮಾತಾ ಡಿಕೊಂಡರು. ಇದುವರೆಗೂ ಕೆಲವರಲ್ಲಷ್ಟೇ ಇದ್ದ ಅಸಹನೆ, ಈಗ ಅವಳ ಮೇಲಿನ ದ್ವೇಷವಾಗಿ ಎಲ್ಲರನ್ನೂ ಆವರಿಸಿಕೊಳ್ಳ ತೊಡಗಿತು.

ಇದಾಗಿ, ಮೂರು ತಿಂಗಳು ಕಳೆದಿಲ್ಲ; ಆಗಲೇ ಮತ್ತೂಂದು ತೊಂದರೆಗೆ ಸಿಕ್ಕಿಕೊಂಡಳು ಐಶ್ವರ್ಯಾ. ಅಪಾರ್ಟ್‌ಮೆಂಟಿನ ಜನ, ಈಗ ಪ್ರಸ್ಟೀಜ್‌ನ ನೆಪದಲ್ಲಿ ನಾಯಿಗಳನ್ನು ಸಾಕುತ್ತಾರಲ್ಲ; ಅವುಗಳನ್ನು ಬೆಳಗ್ಗೆ-ಸಂಜೆ ವಾಕ್‌ ಮಾಡಿಸುವ ಕೆಲಸವನ್ನು, ಮನೆಯಲ್ಲಿರುವ ಹೆತ್ತವರಿಗೆ ವಹಿಸುತ್ತಾರೆ. ಅವತ್ತು ಏನಾಯಿತೆಂದರೆ- ಅಜ್ಜಿಯೊಬ್ಬರು, ನಾಯಿಯನ್ನು ವಾಕಿಂಗ್‌ಗೆ ಕರೆದೊಯ್ದಿದ್ದರು. ವಾಪಸ್‌ ಬರುವಾಗ, ಹಕ್ಕಿಯನ್ನು ಕಂಡ ನಾಯಿ, ಅದನ್ನು ಹಿಡಿಯುವ ಉದ್ದೇಶದಿಂದ ದಿಢೀರನೆ ನುಗ್ಗಿದೆ. ಈ ಅನಿರೀಕ್ಷಿತ ಘಟನೆಯಿಂದ ಆಯತಪ್ಪಿದ ಅಜ್ಜಿ, ಹೋ ಎಂದು ಚೀರುತ್ತಾ ಮುಗ್ಗರಿಸಿದ್ದಾರೆ. ಈ ವೇಳೆ, ನಾಯಿಗೆ ಕಟ್ಟಿದ್ದ ಹಗ್ಗ ಆಕೆಯ ಕೈನಿಂದ ಜಾರಿದೆ. ಇಡೀ ಘಟನೆಯಿಂದ ಕಂಗಾಲಾದ ನಾಯಿ, ಅಲ್ಲೇ ನಾಲಗೆ ಚಾಚಿಕೊಂಡು ನಿಂತಿದೆ!

ಕರೆಕ್ಟಾಗಿ ಇದೇ ಸಮಯಕ್ಕೆ ಅಲ್ಲಿಗೆ ಬಂದಳು ಐಶ್ವರ್ಯ. ಇಡೀ ದೃಶ್ಯ ಕಂಡವಳು, ನರಳುತ್ತಿದ್ದ ಆ ಅಜ್ಜಿಯನ್ನು ಎತ್ತಲೂ ಹೋಗದೆ, ಗಡಿಬಿಡಿಯಿಂದ ಹೋಗಿಬಿಟ್ಟಳು. ಈ ವೇಳೆಗೆ ಓಡೋಡಿಬಂದ ವಾಚ್‌ಮನ್‌, ಲಾಠಿಯಿಂದ ಆ ನಾಯಿಗೆ ಹೆದರಿಸಿ ಅಜ್ಜಿಯನ್ನು ಎತ್ತಿ ನಿಲ್ಲಿಸಿದ. ಅಷ್ಟರೊಳಗೆ, ಸುತ್ತಮುತ್ತ ಇದ್ದವರೆಲ್ಲ ಓಡಿಬಂದು, ಅಜ್ಜಿಯನ್ನೂ ಎತ್ತಿಕೊಂಡು ಹೋದರು. ಅವತ್ತೇ ಸಂಜೆ ಆಸ್ಪತ್ರೆಗೆ ಹೋದರೆ ಕೆಟ್ಟ ಸುದ್ದಿಯೊಂದು ಬಂತು, “ಮುಗ್ಗರಿಸಿ ಬಿದ್ದ ಕಾರಣಕ್ಕೆ, ಅಜ್ಜಿಯ ಮಂಡಿಚಿಪ್ಪು ತುಂಡಾಗಿತ್ತು. ಆಪರೇಷನ್‌ ಮಾಡಬೇಕು. ನಾಲ್ಕು ತಿಂಗಳು ಬೆಡ್‌ರೆಸ್ಟ್‌ ಅಗತ್ಯ’ ಎಂದಿದ್ದರು ಡಾಕ್ಟರ್‌.

ಪರಿಚಯದ ವೃದ್ಧೆಯೊಬ್ಬಳು ಮುಗ್ಗರಿಸಿ ಬಿದ್ದು ನೋವಿನಿಂದ ಚೀರುತ್ತಿದ್ದರೂ ಸಹಾಯಕ್ಕೆ ಹೋಗಲಿಲ್ಲ ಎಂಬ ಕಾರಣಕ್ಕೆ ಅಪಾರ್ಟ್‌ ಮೆಂಟ್‌ನ ಜನ ರೊಚ್ಚಿಗೆದ್ದರು. ಅಕಸ್ಮಾತ್‌ ಆ ಶಾಕ್‌ಗೆ ಹಾರ್ಟ್‌ ಅಟ್ಯಾ ಕ್‌ ಆಗಿ ಜೀವ ಹೋಗಿದ್ದರೆ ಗತಿ ಏನಾಗುತ್ತಿತ್ತು? ಮನುಷ್ಯತ್ವ ಇಲ್ಲದ ಮೇಲೆ ಸೌಂದರ್ಯವಿದ್ದು ಏನುಪಯೋಗ? ಆ ಹುಡುಗಿಗೆ ಕಾಮನ್‌ಸೆನ್ಸ್‌ ಇಲ್ಲ ಅನ್ಸುತ್ತೆ. ಕರೆದು ಕೆನ್ನೆಗೆರಡು ಬಿಟ್ಟು, ಛೀಮಾರಿ ಹಾಕುವಾ. ಒಂದ್ಕಡೆ ಬದುಕುವಾಗ ಒಬ್ಬರಿಗೊಬ್ಬರು ಆಗಬೇಕೇ ಹೊರತು ಗಾಂಚಾಲಿ ಮಾಡಬಾರದು. ಕರೀರಿ ಅವಳನ್ನು… ಎಂದೆಲ್ಲಾ ಒತ್ತಾಯಿಸಿದರು.

ಬುದ್ಧಿ ಹೇಳುವ ನೆಪದಲ್ಲಿ ಬದ್ಮಾಷ್‌ ಎಂದು ಬಯ್ಯಲೂ ಜನರೇನೋ ಸಿದ್ಧರಾಗಿದ್ದರು. ಆದರೆ, ಅವತ್ತು ಐಶ್ವರ್ಯ ಬರಲಿಲ್ಲ. ಬದಲಿಗೆ ಅವಳ ತಮ್ಮ ಬಂದ. “ಅಕ್ಕನ ಬದಲು ನಾನೇ ಬಂದಿದೀನಿ. ಏನು ಹೇಳ್ಳೋದಿದ್ರೂ ನನಗೇ ಹೇಳಿ, ಅಂದ. ಮೊದಲೇ ಸಿಟ್ಟಾಗಿದ್ದ ಜನ ಅವನಿಗೂ, ಐಶ್ವರ್ಯ ಳಿಗೂ ತಾರಾಮಾರಾ ಉಗಿದರು. “ಅವಳು ಹೆಂಗ್ಸ್ ಲ್ಲ ಕಣೋ ಕಲ್ಲು’ ಸಖತ್‌ ಕಾಸಿದೆ ಅಂದೊRಂಡು ಕೊಬ್ಬು ತೋರಿಸಬಹುದಾ?’ ಅಂದರು.

ಎಲ್ಲರ ಬೈಗುಳವೂ ಮುಗಿಯುವವರೆಗೂ ಸುಮ್ಮನಿದ್ದ ಆ ಹುಡುಗ -“ಎರಡು ಮಾತು ಹೇಳ್ಳೋದಿದೆ’ ಅಂದ. “ಅದೇನ್‌ ಪುಂಗ್ತಿಯೋ ಪುಂಗು’ ಅಂದರು ಜನ. ಆ ವ್ಯಂಗ್ಯವನ್ನು ಗಮನಿಸದೆ ಆತ ಹೇಳಿದ- ನಮ್ಮಕ್ಕ ಮೊದಲಿಂದ್ಲು ಶುಗರ್‌ ಪೇಷೆಂಟ್‌! ಜೊತೆಗೆ, ಇಬ್ಬರು ಬೆಸ್ಟ್‌ ಫ್ರೆಂಡ್‌ಗಳನ್ನು ಆಕೆ ಕಾಲೇಜಿನಲ್ಲಿದ್ದಾಗ ಕಳೆದುಕೊಂಡುಬಿಟ್ಳು. ಅವತ್ತಿಂದ ಆಗಾಗ ಡಿಪ್ರಶನ್‌ಗೆ ಹೋಗ್ತಿರ್ತಾಳೆ. ಶುಗರ್‌ ಜಾಸ್ತಿ ಇರುವ ಕಾರ ಣಕ್ಕೆ, ತಾನು ಯಾವಾಗ ಬೇಕಾದ್ರೂ ಸಾಯಬಹುದು ಎಂಬ ಅರಿವು ಆಕೆಗಿದೆ. ಅಕಸ್ಮಾತ್‌ ಯಾರನ್ನಾದ್ರೂ ಹಚ್ಕೋಬಿಟ್ರೆ, ನಾಳೆ ತನ್ನ ಕಥೆ ಮುಗಿದು ಹೋಗಿ, ಉಳಿದವರಿಗೆ ನೋವಾಗಬಹುದು ಅಂತ ಆಕೆ ಯಾ ರನ್ನೂ ಹಂಚ್ಕೊಡಿಲ್ಲ. ನಮ್ಮಿಂದಲೂ ಅದೇ ಕಾರಣಕ್ಕೆ ದೂರ ಇದ್ದಾಳೆ….’

ಮೊನ್ನೆಯ ಘಟನೆಯ ಬಗ್ಗೆ ಕೇಳಿದ್ರಿ. ಅಜ್ಜಿ ಹಿಡಿದಿದ್ರಲ್ಲ ಅದು ಜಾತಿ ನಾಯಿ. ತಮ್ಮ ಒಡೆಯರು ಬಿದ್ದುಹೋ ಗಿದ್ದಾಗ, ಅಲ್ಲಿಗೆ ಯಾರಾದ್ರೂ ಬಂದ್ರೆ, ಜಾತಿನಾಯಿಗಳು ಅಟ್ಯಾಕ್‌ ಮಾಡಿಬಿಡ್ತವೆ. ಮೊನ್ನೆ ಹಾಗೇನಾದ್ರೂ ಹೋಗಿದ್ದರೆ, ಆ ನಾಯಿ ಐಶ್ವರ್ಯಳನ್ನು ಪರಚಿ, ಗಾಯಗೊಳಿಸುವ ಸಾಧ್ಯತೆಯಿತ್ತು. ಶುಗರ್‌ ಇದ್ದಾಗ ಗಾಯ ವಾದ್ರೆ ಜೀವಕ್ಕೇ ತೊಂದರೆ. ಅದನ್ನು ಯೋಚಿಸಿಯೇ ಆಕೆ ಗಲಿಬಿಲಿಯಿಂದ ಓಡಿದ್ದು. ಲಿಫ್ಟ್ ಹತ್ತುವ ಮೊದಲೇ ಅವಳು ಅಲಾರಾಂ ಬಾರಿಸಿ ವಾಚ್‌ಮನ್‌ಗೆ ಎಚ್ಚರಿಸಿದ್ದಾಳೆ. ಅಲಾರಂ ಸದ್ದು ಕೇಳಿದ ಮೇಲೇ ವಾಚ್‌ಮನ್‌ ಓಡಿ ಬಂದಿರೋದು. ಇಷ್ಟಾದಮೇಲೂ, ನಡೆದಿದ್ದನ್ನೆಲ್ಲ ತಿಳಿದು ಅವಳಿಗೆ ಶಾಕ್‌ ಆಗಿದೆ. ಬಿ.ಪಿ. ಅಳತೆಗೆ ಸಿಗದಷ್ಟು ಜಾಸ್ತಿ ಆಗಿದೆ. ಶುಗರ್‌ ಕೂಡಾ ಕಂಟ್ರೋಲ್‌ಗೆ ಬರಿ¤ಲ್ಲ. ಆಸ್ಪತ್ರೆಗೆ ಹೋಗೋಣ ಅಂತಿದ್ವಿ. ಅಷ್ಟರಲ್ಲಿ ನೀವು ಕರೆ ಕಳಿಸಿದ್ರಿ. ಪರವಾಗಿಲ್ಲ, ಏನೇ ಹೊಡೆಯೋದಿದ್ರೂ, ಉಗಿಯೋ ದಿದ್ರೂ ಅದನ್ನೆಲ್ಲ ನನಗೇ ಮಾಡಿ. ಅಕ್ಕ ತುಂಬಾ ನೊಂದಿದಾಳೆ. ಅವಳಿಗೆ ಬೈಬೇಡಿ…’ ಎನ್ನುತ್ತಾ ಮಾತು ನಿಲ್ಲಿಸಿದ.

ಐಶ್ವರ್ಯಾಳಿಗೆ ಬುದ್ಧಿ ಹೇಳಲೆಂದು ಅಲ್ಲಿಗೆ ಬಂದಿದ್ದವರಿಗೆ ಈಗ ಉಸಿರು ಸಿಕ್ಕಿಕೊಂಡಂತಾಯಿತು. ಆಗಲೇ ಹೆಂಗಸೊಬ್ಬಳು- “ಪಾಪ, ಆ ಹುಡುಗಿಗೆ ಹುಷಾರಿಲ್ವಂತೆ. ಬೇಗ ಆ್ಯಂಬುಲೆನ್ಸ್‌ಗೆ ಫೋನ್‌ ಮಾಡಿ’ ಅಂದಳು.

ಎ.ಆರ್‌.ಮಣಿಕಾಂತ್‌

Advertisement

Udayavani is now on Telegram. Click here to join our channel and stay updated with the latest news.

Next