Advertisement
“ಹಲೋ, ಬೇಗ ಹೇಳು. ಮುಖ್ಯವಾದ ಮೀಟಿಂಗ್‌ನಲ್ಲಿದ್ದೀನಿ. ಅರ್ಜೆಂಟಾ? ಏನಾದ್ರು ಇದ್ರೆ ಮೆಸೇಜ್ ಮಾಡು. ಆಮೇಲೆ ಫೋನ್ ಮಾಡ್ತೀನಿ’.. ಎಂದು, ಇವಳು ಬಾಯ್ಬಿಡುವ ಮುನ್ನವೇ ಫೋನ್ ಕಟ್ ಮಾಡಿ ಬಿಡುತ್ತಾನೆ. ಬೆಳಗ್ಗಿನಿಂದ ಆರು ಬಾರಿ ಫೋನ್ ಮಾಡಿದರೂ ಮಾತನಾಡದ ಗಂಡ, ಸದ್ಯ ಈಗಲಾದರೂ ರಿಸೀವ್ ಮಾಡಿದನಲ್ಲ ಅಂತ ಅಂದುಕೊಳ್ಳುವುದರೊಳಗೆ ಕಾಲ್ ಕಟ್ ಮಾಡಿದಾಗ ಇವಳು ಇಲ್ಲಿ ಕೆಂಡಾಮಂಡಲ. ಮಗುವಿಗೆ ಹುಷಾರಿಲ್ಲ. ಬೆಳಗಿನಿಂದ ನೀರಿನಂಗೆ ವಾಂತಿ-ಭೇದಿ ಮಾಡುತ್ತಿದೆ. ಡಾಕ್ಟರ್ ಹತ್ತಿರ ಹೋಗಬೇಕು. ಒಬ್ಬಳೇ ಮ್ಯಾನೇಜ್ ಮಾಡೋದು ಕಷ್ಟ, ನೀನೂ ಬಾ ಎಂದು ಹೇಳಲು ಫೋನ್ ಮಾಡಿದ್ದಳು. ಇದನ್ನೆಲ್ಲಾ ಟೈಪ್ ಮಾಡಿ ಮೆಸೇಜ್ ಮಾಡಲು ಮಗು ಕೈಬಿಡುತ್ತಿಲ್ಲ. ಮತ್ತೆ ಕಾಲ್ ಮಾಡಿದರೆ ಮನೆಯಲ್ಲಿ ಇವತ್ತು ಯುದ್ಧ ಗ್ಯಾರಂಟಿ.
Related Articles
Advertisement
ಹಾಗಂತ ಅವನಿಗೇನೋ ಬೇರೆಯ ಆಸಕ್ತಿ ಇದೆ ಎಂದಲ್ಲ. ನಮ್ಮ ಸುತ್ತಲಿನ ಜಗತ್ತು ದಿನದಿಂದ ದಿನಕ್ಕೆ ಬದಲಾಗುವ ಹಾಗೆಯೇ ಅವರ ಬದುಕು, ಪರಿಸ್ಥಿತಿ ಎಲ್ಲವೂ ಬದಲಾಗಿದೆ. ಇದನ್ನು ನಿತ್ಯವೂ ಬಲ್ಲವರಷ್ಟೇ ಅನುದಿನದ ಭಾವ ಸಾಂಗತ್ಯವನ್ನು ಒದಗಿಸಬಲ್ಲರು. ಆದ್ದರಿಂದಲೇ, ಸಂಬಂಧದಲ್ಲಿ ಸಮಯದ ಅಂತರ ಕಾಣಿಸಿದರೆ ಅದನ್ನು ಮತ್ತೆ ಸಾಣೆ ಹಿಡಿದು ನವೀಕರಿಸಿಕೊಳ್ಳಲೇಬೇಕು. ಇಲ್ಲವಾದರೆ ಅಲ್ಲೊಂದು ಗ್ಯಾಪ್ ಸೃಷ್ಟಿಯಾಗಿಬಿಡುತ್ತದೆ. ಆಗ ಭಾವಗಳ ಸರಾಗ ಸಂವಹನ ಸಾಧ್ಯವಾಗದು. ನಮ್ಮ ಮೊಬೈಲ್‌ನ ಆ್ಯಪ್‌ಗ್ಳೆಲ್ಲ ವಾರಕ್ಕೋ, ಹದಿನೈದು ದಿನಕ್ಕೋ ಅಪ್ಡೆàಟ್ ಕೇಳುತ್ತವಲ್ಲ, ಹಾಗೆಯೇ ಸಂಬಂಧಗಳು ಕೂಡ! ಆಪ್ತ ಸಂಬಂಧವೊಂದರಲ್ಲಿ ನಿತ್ಯದ ಆಗುಹೋಗುಗಳನ್ನು ಪರಸ್ಪರ ಹೇಳಿಕೊಳ್ಳುತ್ತಿದ್ದರೆ ಮಾತ್ರ ಅಲ್ಲೊಂದು ಅಟ್ಯಾಚ್ಮೆಂಟ್ ಉಳಿಯಬಲ್ಲುದು. ಇಲ್ಲವಾದರೆ ಸಂಬಂಧದಲ್ಲಿನ ಬಂಧ ಮಾಯವಾಗಿ ಜಡವಸ್ತುಗಳಂತಾಗಿಬಿಡುತ್ತದೆ ನಮ್ಮ ಬದುಕು.
ಜೀವನವೂ ನಾವು ಉಪಯೋಗಿಸುವ ಮಿಕ್ಸಿ, ಟಿವಿ, ಫ್ರಿಡ್ಜ್ನ ಹಾಗೆ. ದಿನವೂ ಚಾಲನೆ ನೀಡದಿದ್ದರೆ ಕೆಟ್ಟು ಹೋಗಿರುವುದೂ ಕೂಡ ನಮಗೆ ತಿಳಿಯುವುದಿಲ್ಲ. ಹಾಗಂತ ಅವನಿಗೆ ಅದು ತಿಳಿಯುವುದಿಲ್ಲ ಎಂದಲ್ಲ. ತಿಳಿದೋ, ತಿಳಿಯದೆಯೋ ಅಥವಾ ತಿಳಿಯುವ ಹೊತ್ತಿಗಾಗಲೇ ಬದುಕಿನ ದಾರಿಯನ್ನು ಬಹಳಷ್ಟು ಸವೆಸಿಯಾಗಿರುತ್ತದೆ. ಸಂಬಂಧಗಳು ಸಡಿಲಗೊಳ್ಳುವುದು ವಿಷಯಗಳ ವಿನಿಮಯ ಇಲ್ಲದೇ ಹೋದಾಗ. ಇದೆಲ್ಲಾ ಅವಳಿಗೇಕೆ, ಅವಳಿಗೇನು ಅರ್ಥವಾಗುತ್ತದೆಯೇ ಅಥವಾ ಅವಳಿಂದೇನು ಸಹಾಯವಾಗುತ್ತದೆಯೇ, ಇಲ್ಲಾ ಅವಳಿಗೇಕೆ ಇವೆಲ್ಲಾ ಟೆನ್ಸ್ನ್ನು. ಆರಾಮಾಗಿ ಇರಲಿ… ಎಂದು ಇವನು ಸುಮ್ಮನಾದಾಗ ನಿಧಾನವಾಗಿ ಅವರ ಜೀವನದಲ್ಲಿ ಮಾತುಗಳಿಗೆ ಕೊರತೆಯುಂಟಾಗುತ್ತದೆ. ಅದು ಭಾವನೆಗಳ ಕೊರತೆಯತ್ತ ಮುಖ ಮಾಡಲು ಹೆಚ್ಚು ಹೊತ್ತು ಬೇಕಿಲ್ಲ.
ಯಾವುದೇ ಸಂಬಂಧ ನವನವೀನವಾಗಿರಲು ಅದರಲ್ಲಿ ಬೆಸುಗೆ ಹಾಕಿಕೊಂಡಿರುವ ಇಬ್ಬರ ಪ್ರಯತ್ನವೂ ಬೇಕು. ಇಬ್ಬರ ಆಸಕ್ತಿಗಳು, ವೃತ್ತಿ ಕ್ಷೇತ್ರ ಬೇರೆಯಾದಾಕ್ಷಣ ಹೇಳಿಕೊಳ್ಳುವಿಕೆ ನಿಲ್ಲಬೇಕೆಂದೇನೂ ಇಲ್ಲ. ತನ್ನ ಜಗತ್ತಿನ ಆಗುಹೋಗುಗಳನ್ನು ಇವಳು ತೆರೆದಿಟ್ಟ ಹಾಗೇ ಅವನೂ ತೆರೆದಿಟ್ಟುಕೊಳ್ಳಬೇಕು. ಅವಳ ಬೇಸರಕ್ಕೆ ಇವನು ಕಿವಿಯಾಗಬೇಕು. ಖುಷಿಗೆ ಸಾಥಿಯಾಗಬೇಕು. ಏನೂ ಇಲ್ಲದೆ ಸುಮ್ಮನೆ ತಬ್ಬಿ ಮೌನವಾಗಬೇಕು. ಆಗಲೇ ಬಂಧ ಮತ್ತೆ ಮತ್ತೆ ಹೊಸ ಸ್ವಾದ ಪಡೆದುಕೊಳ್ಳುವುದು. ಅದೇ ಆಪ್ತತೆಯನ್ನು ಉಳಿಸಿಕೊಳ್ಳವುದು. ಭಾವಗಳಿಗೆ ಬೆಸುಗೆ ಹಾಕುವ ಈ ಪ್ರಕ್ರಿಯೆ ನಡೆಯದೇ ಇದ್ದಲ್ಲಿ ಗಂಡ-ಹೆಂಡತಿಯು ಜತೆಜತೆಯಲ್ಲಿದ್ದರೂ ಅಪರಿಚಿತರೇ ಆಗುವುದು ಸುಳ್ಳಲ್ಲ. ಅದಕ್ಕಾಗಿ ದಿನದಲ್ಲಿ ಹದಿನೈದು ನಿಮಿಷವನ್ನಾದರೂ ಒಬ್ಬರಿಗೊಬ್ಬರು ಮೀಸಲಿಟ್ಟರೆ ಸಾಕು. ಅದೆಷ್ಟೋ ಸಂಬಂಧಗಳು ಬದುಕಿನ ದಡ ಸೇರಿಬಿಡುತ್ತವೆ.
ಜಮುನಾ ರಾಣಿ ಹೆಚ್.ಎಸ್.