Advertisement

ತನ್ನದಲ್ಲದ ತಪ್ಪಿಗೆ ಎಲ್ಲವ ಕಳೆದುಕೊಂಡಳು…

04:17 AM Oct 20, 2018 | |

ಎಂಥಾ ಔಷಧಿಗಳನ್ನು ಕೊಟ್ಟರೂ ಅವಳನ್ನು ಗುಣಪಡಿಸುವುದು ಕಷ್ಟವೇ ಅನ್ನುವ ಸ್ಥಿತಿ. ತಲೆ ಗಿರ್ರೆಂದಿತು. “ಅಂಕಲ್‌, ಎಲ್ಲಾ ಡಾಕ್ಟರೂ ನನಗೇನೋ ರೋಗ ಐತಿ, ಆರಾಮ ಆಗೂದಿಲ್ಲ ಅಂದರ್ರೀ. ನಿಮ್ಮ ಕಡೆ ಆರಾಮ ಆಗ್ತಿನಿ ಅಂತ ಬಂದೀನಿ. ಆರಾಮ ಮಾಡ್ತೀರಲ್ರಿ?’ ಎಂದು ಆ ಹುಡುಗಿ ಕೇಳಿದಾಗಲೇ ನಾನು ನನ್ನ ವಿಚಾರಗಳಿಂದ ಹೊರಬಂದೆ. 

Advertisement

ಅದೊಂದು ರಾತ್ರಿ ಸುಮಾರು ಎರಡು ಗಂಟೆಯ ಸಮಯ. ನಮ್ಮ ಮನೆಯ ಫೋನ್‌ ರಿಂಗಣಿಸತೊಡಗಿತು. ವೈದ್ಯನಾದವನಿಗೆ ಇದು ನಿತ್ಯದ ಕಷ್ಟ. ಅಂದು ನಿಜವಾಗಿಯೂ ಸುಸ್ತಾಗಿದ್ದೆ. ಬೆಳಿಗ್ಗೆಯಿಂದ ನಾಲ್ಕೈದು ಶಸ್ತ್ರಚಿಕಿತ್ಸೆಗಳನ್ನು ಮಾಡಿ, ನೂರಾರು ಹೊರ ರೋಗಿಗಳನ್ನು ಪರೀಕ್ಷಿಸಿ, ರೌಂಡ್ಸ್ ಮಾಡಿ ಮನೆಗೆ ಬಂದಾಗ ರಾತ್ರಿ ಹನ್ನೊಂದೂವರೆ. ಅಷ್ಟೊತ್ತಿಗೆ ಮನೆಯಲ್ಲಿ ಎಲ್ಲರ ಊಟ. (ಬಹುತೇಕ ವೈದ್ಯರ ಮನೆಯ ಸದಸ್ಯರಿಗೂ ಇದು ರೂಢಿಯಾಗಿಬಿಟ್ಟಿರುತ್ತದೆ.) ನಂತರ ನನ್ನ ಓದು. ಎಂಥ ತಡವಾಗಿ ಬಂದರೂ ಮಲಗುವ ಮೊದಲು ಒಂದರ್ಧ ಗಂಟೆಯಾದರೂ ಯಾವುದಾದರೊಂದು ಪುಸ್ತಕ ಓದುವ ರೂಢಿ ಮಾಡಿಕೊಂಡಿದ್ದೇನೆ. ನಿತ್ಯದ ವೃತ್ತಿಯ ಏಕತಾನತೆಯ ಮಧ್ಯೆ ಅದೊಂದಿಷ್ಟು ಸಂತೋಷವನ್ನೂ ತೃಪ್ತಿಯನ್ನೂ ನೀಡುತ್ತದೆ, ಜೊತೆಗೇ ಮನೋವಿಕಾಸ ಎಂಬ ಬೋನಸ್‌.

ಅಂದು, ಓದುವುದೂ ರುಚಿಸಿ ನಾನು ಮಲಗಿದಾಗ ರಾತ್ರಿಯ ಒಂದು ಗಂಟೆ. ಫೋನ್‌ ಎತ್ತಿದರೆ, ಅತ್ತ ಕಡೆಯಿಂದ ನಮ್ಮ ಆಸ್ಪತ್ರೆಯ ನರ್ಸ್‌ ಧ್ವನಿ, ಒಬ್ಬ ಗರ್ಭಿಣಿ ಬಂದಿದ್ದಾಳೆಂದೂ, ತುಂಬ ಕಷ್ಟದಲ್ಲಿದ್ದಾಳೆಂದೂ, ನಾನೇ ಬಂದು ಪರೀಕ್ಷಿಸಬೇಕೆಂದು ಹಠ ಮಾಡುತ್ತಿದ್ದಾಳೆಂದೂ ಹೇಳಿದಳು. ಗತ್ಯಂತರವಿಲ್ಲ. ಏನು ಕಷ್ಟವೋ ನೋಡಲೇಬೇಕು. ನನ್ನ ವೃತ್ತಿಯ ಇಷ್ಟು ವರ್ಷಗಳಲ್ಲಿ ನಾನು ರಾತ್ರಿ ಕರೆಗಳನ್ನು ನಿರಾಕರಿಸಿದ್ದು ಬಹಳ ಕಡಿಮೆ. “ಸರಿರಾತ್ರಿ ಅಷ್ಟೊತ್ತಿಗೆ ತಮ್ಮ ಮನೆಯಿಂದ ನಮ್ಮ ಆಸ್ಪತ್ರೆಯವರೆಗೂ ಬರಬೇಕಾದರೆ ಅವರಿಗೆ ಏನಾದರೂ ಕಷ್ಟವಿರಲೇಬೇಕು’ ಎಂಬುದು ನನ್ನ ಅಭಿಪ್ರಾಯ. ಇಲ್ಲವಾದರೆ ಅಷ್ಟು ದೂರದಿಂದ ತಮ್ಮ ಮನೆಮಂದಿಯ ನಿದ್ದೆ ಕೆಡಿಸಿ, ವಾಹನ ತೆಗೆದುಕೊಂಡು ಆಸ್ಪತ್ರೆಯವರೆಗೆ ಬರಲು ಅವರಿಗೇನು ಹುಚ್ಚೆ? (ಅಕಸ್ಮಾತ್‌ ಹುಚ್ಚೇ ಇದ್ದರೂ ಅದೂ ಒಂದು ರೋಗವೇ ಅಲ್ಲವೇ?) ಅನೇಕ ಬಾರಿ ರಾತ್ರಿ ಎದ್ದು ಹೋಗಿ ನೋಡಿದರೆ ಅತೀ ಸಣ್ಣ ರೋಗಗಳು ಇದ್ದದ್ದನ್ನು ನಾನು ಗಮನಿಸಿದ್ದೇನೆ. ಆದರೆ ನಾವು ವೈದ್ಯರಾಗಿ ಅದನ್ನು ಸಾದಾ ರೋಗ ಎಂದು ಪರಿಗಣಿಸಿದರೂ ಆ ರೋಗಿಯ ಮಟ್ಟಿಗೆ ಅದು ದೊಡ್ಡದೇ. ಯಾಕೆಂದರೆ, ನಮ್ಮ ಲೆಕ್ಕಕ್ಕೆ ಅದು ಸಾದಾ ತಲೆನೋವು ಎನಿಸಿದರೂ ಅವರ ಲೆಕ್ಕಕ್ಕೆ ಅದು ಬ್ರೇನ್‌ ಟ್ಯೂಮರ್‌ ಅನಿಸಿರುತ್ತದೆ!! 

ಆದರೂ ನೋವು  ನೋವೇ ಅಲ್ಲವೇ? ಅದೂ ಅಲ್ಲದೆ ನಾವು ಪರೀಕ್ಷಿಸಿದ ನಂತರ ಮಾತ್ರ ಅದು ಸಾದಾ ರೋಗವೋ, ಗಂಭೀರ ರೋಗವೋ ಎಂದು ಗೊತ್ತಾಗುವುದು. ಅಲ್ಲಿ ನೋಡಿದರೆ ಆಸ್ಪತ್ರೆಯ ಎದುರು ಹತ್ತಾರು ಜನ. ಎಲ್ಲರ ಮುಖದಲ್ಲೂ ವಿಷಾದದ ಛಾಯೆ. ಎಲ್ಲಾ ಬಹುತೇಕ ಪರಿಚಿತ ಮುಖಗಳೇ. ಅದರಲ್ಲೊಬ್ಬ ನನ್ನೆದುರು ಕೈ ಮುಗಿದು ಹೇಳಿದ..

“ಸಾಹೇಬ್ರ, ಹೆಂಗರ ಮಾಡ್ರಿ, ನನ್ನ ಮಗಳಿಗಿ ಆರಾಮ ಮಾಡ್ರಿ. ಹರ್ಯಾಗಿಂದ ಭಾಳ ತ್ರಾಸ ಮಾಡ್ಕೊಳಾಕ ಹತ್ಯಾಳ್ರಿ. ನಿಮ್ಮನ್ನ ಜಪಿಸಿ ಇಲ್ಲಿ ಬಂದಾಳ್ರಿ’ ಅವನ ಮುಖದಲ್ಲಿದ್ದ ದೈನ್ಯತೆ ನನ್ನನ್ನು ಹೈರಾಣ ಮಾಡಿತು. ಮಗಳಿಗಾಗುತ್ತಿರುವ ಇಡೀ ಕಷ್ಟವನ್ನೇ ತನ್ನಲ್ಲಿ ಆವಾಹಿಸಿಕೊಂಡಂತೆ ತೋರಿದ. “ನೋಡೋಣ ಏನಿದೆಯೋ’ ಎಂದು ಒಳಗೆ ಹೋದರೆ, ಗುಡ್ಡದಂಥ ಹೊಟ್ಟೆ ಮಾಡಿಕೊಂಡು ನರಳುತ್ತ ಟೇಬಲ್‌ ಮೇಲೆ ಮಲಗಿದ, ಸುಮಾರು ಹದಿನಾರು ವರ್ಷ ಪ್ರಾಯದ, ಕೃಶ ಶರೀರದ ಹುಡುಗಿ. ನನ್ನನ್ನು ನೋಡಿದವಳೇ ಧಡಕ್ಕನೆ ಟೇಬಲ್‌ ಮೇಲಿನಿಂದ ಇಳಿದು ನನ್ನ ಕಾಲಿಗೆರಗಿದಳು. 

Advertisement

ಹಳ್ಳಿ ಮತ್ತು ತಾಲೂಕಾ ಮಟ್ಟದ ಆಸ್ಪತ್ರೆಗಳಲ್ಲಿ ಕಾಲಿಗೆರಗುವ ಈ ಕ್ರಿಯೆ ಸಾಮಾನ್ಯವಾದರೂ ಅದು ನನ್ನನ್ನು ಗಲಿಬಿಲಿಗೊಳಿಸುತ್ತದೆ. ಅನೇಕ ಬಾರಿ, ವಯಸ್ಸಿನಲ್ಲಿ ನನಗಿಂತ ದೊಡ್ಡವರೂ ಕಾಲಿಗೆರಗುವುದಿದೆ. “ಇದಕ್ಕೆ ನಾನು ಅರ್ಹನೇ?’ ಎಂದು ಪ್ರತಿ ಬಾರಿಯೂ ಅಂದುಕೊಳ್ಳುತ್ತೇನೆ. ಯಾಕೆಂದರೆ, ಈ ಕಾಲಿಗೆರಗುವ ಕ್ರಿಯೆ, ಎರಗಿದವನಲ್ಲಿ ದೈನ್ಯತೆಯನ್ನೂ, ಎರಗಿಸಿಕೊಂಡವನಲ್ಲಿ ಅಹಮಿಕೆಯನ್ನೂ ತುಂಬಿಬಿಡುತ್ತದೆ. ಹೀಗಾಗಿ ನನಗದು ಮುಜುಗರವೆನಿಸುತ್ತದೆ. ಆದರೂ ಅದು “ನನ್ನೊಳಗಿನ ವೈದ್ಯನಿಗೆ ಸಂದ ಗೌರವ’. ನನಗಲ್ಲ ಎಂದು ಸಮಾಧಾನಿಸಿಕೊಳ್ಳುತ್ತೇನೆ. “ಹಿಂಗ್ಯಾಕ ಅಳ್ತಿಯವಾ..ಸುಮ್ನಿರು. ಆರಾಮ ಮಾಡೂಣಂತ, ನಿನಗ ಏನ್‌ ತ್ರಾಸ ಐತಿ ಹೇಳು…?’ ಅಂದೆ. “ಅಂಕಲ್‌, ನನ್ನ ನೆನಪ ಇಲ್ಲೇನ್ರೀ ನಿಮಗ? ನಾನ್ರೀ ಗೀತಾ….(ಹೆಸರು ಬದಲಿಸಿದ್ದೇನೆ..). ನೀವು ಲೋಕಾಪುರದಾಗ ಇದ್ದಾಗ ನಿಮ್ಮ ಮನಿ ಮುಂದ ಆಡಾಕ ಬರ್ತಿದ್ದೆ. ನಿಮ್ಮ ಮನ್ಯಾಗ ಊಟಾ ಮಾಡೂದು, ನೀರ್‌ ಕುಡಿಯೋದು ಮಾಡ್ತಿದೆಲ್ರಿ’ ಅಂದಳು.

ಸರಕಾರೀ ವೈದ್ಯನಾಗಿ ನಾನು ಲೋಕಾಪುರದಲ್ಲಿ ಇದ್ದದ್ದು ಮೂರು ವರ್ಷ ಮಾತ್ರ. ಆದರೆ ಆ  ಮೂರು ವರ್ಷಗಳು ನನ್ನ ವೈದ್ಯಕೀಯ ಜೀವನದ ಅತೀ ಮಹತ್ವದ ದಿನಗಳು. ಹಾಗೆ ನೋಡಿದರೆ ನನ್ನ ಜೀವನಕ್ಕೆ “ಅರ್ಥಪೂರ್ಣ’ ತಿರುವು ಕೊಟ್ಟ ಊರು ಲೋಕಾಪುರ. ಇತ್ತ ಹಳ್ಳಿಯೂ ಅಲ್ಲದ ಅತ್ತ ಪಟ್ಟಣವೂ ಅಲ್ಲದ ಊರು. ಗಿಜುಗುಡುವ ಆಸ್ಪತ್ರೆ, ಕೃತಜ್ಞತೆ ತೋರುವ ರೋಗಿಗಳು. ಕೈತುಂಬ ಕೆಲಸ, ಮನಸ್ಸಿನ ತುಂಬ ತೃಪ್ತಿ, ಹಾಗಿದ್ದವು ಆ ದಿನಗಳು. ನಾನು ಸರ್ಜನ್‌ ಆಗಿದ್ದರೂ ಕೂಡ, ಎಲ್ಲ ರೀತಿಯ ರೋಗಿಗಳನ್ನು ನೋಡುವುದು ಅನಿವಾರ್ಯವಿತ್ತು. ಹೀಗಾಗಿ ಓ.ಪಿ.ಡಿ.ಯಲ್ಲಿ “ಜನರಲ್‌ ಪ್ರಾಕ್ಟಿಶನರ್‌’, ಓ.ಟಿ.ಯಲ್ಲಿ ಸರ್ಜನ್‌ ಆಗಿದ್ದೆ. ಸಣ್ಣ ಊರಾದ್ದರಿಂದ ಊರಿನ ಎಲ್ಲರೂ ಪರಿಚಯವಾಗಿಬಿಟ್ಟು ನಾನು ಆ ಊರಿನವನೇ ಆಗಿಬಿಟ್ಟಿದ್ದೆ.

ಮುಖ ದಿಟ್ಟಿಸಿದೆ. ಪೂರಾ ಬದಲಾದ ಆ ಮುಖದಲ್ಲಿ ಒಂದೆರಡು ಗುರುತಿನ ಗೆರೆಗಳು ಕಂಡವು. ಹೌದು, ಈಗ ಬರೀ ಎಂಟು ವರ್ಷಗಳ ಹಿಂದೆ ನಮ್ಮ ಮನೆಯೆದುರು ಚಟುವಟಿಕೆಯಿಂದ ಆಡಿಕೊಂಡಿದ್ದ ಲಂಗ ದಾವಣಿಯ ಚೆಂದನೆಯ, ಚೈತನ್ಯ ತುಂಬಿದ ಎಂಟೊಂಬತ್ತು ವರ್ಷದ ಮುಗ್ಧ ಹುಡುಗಿ. ತನ್ನ ಓರಗೆಯವರೊಡನೆ ಆಡುತ್ತಾ ಬಾಯಾರಿದಾಗಲೆಲ್ಲ ಓಡೋಡಿ ನಮ್ಮ ಅಡುಗೆ ಮನೆಗೆ ನುಗ್ಗಿ ತನಗೆ ಬೇಕಾದ್ದಾಲ್ಲವನ್ನೂ ತಿಂದು ನೀರು ಕುಡಿದು ಜಿಂಕೆಯಂತೆ ಓಡುತ್ತಿದ್ದವಳು. ಆಗ ಅವಳ ಕಣ್ಣಲೊಂದು ಮಿಂಚಿತ್ತು, ಕುತೂಹಲವಿತ್ತು. ಆಟದಲ್ಲಿ ಗೆದ್ದಾಗಲೆಲ್ಲ ಜಗವ ಗೆದ್ದ ಸಂತಸವಿತ್ತು.

ಈಗ ನೋಡಿದರೆ ಹೀಗೆ, ಮೂಳೆಗಳ ಮೇಲೆ ಬರೀ ಚರ್ಮ ಹೊದ್ದುಕೊಂಡು ತನ್ನ ಹೊಟ್ಟೆಯೊಳಗೊಂದು ಮಗು ಬೆಳೆಸಿಕೊಂಡು ಒದ್ದಾಡುತ್ತಾ ಮಲಗಿದ್ದಾಳೆ. ಮನಸ್ಸು ವಿಹ್ವಲಗೊಂಡಿತು. ಬರೀ ಹದಿನಾರು, ಹದಿನೇಳು ವರ್ಷ ಪ್ರಾಯದ ಆಕೆ ತುಂಬು ಗರ್ಭಿಣಿ…! ಅಂದರೆ ಅವಳು ಹದಿನೈದು ವರ್ಷದವಳಿದ್ದಾಗಲೇ ಮದುವೆ ಮಾಡಿದ್ದಾರೆ. ಯಾವ ಕಾಲದ ಜನ ಇವರು ಎನಿಸಿತು. “ಏನಾಗಿದೆ ಇವಳಿಗೆ?’ ಎಂದು ಕೇಳಿದರೆ ಆ ಹುಡುಗಿಯ ತಂದೆ ಕರುಳು ಹಿಂಡುವ ಕಥೆ ಬಿಚ್ಚಿಟ್ಟ…

ಅವಳಿನ್ನೂ ಹೈಸ್ಕೂಲಿನ ಒಂಬತ್ತನೇ ವರ್ಗ ಕಲಿಯುತ್ತಿದ್ದಾಗಲೇ ದೊಡ್ಡ ಮನೆತನದವರು ನೋಡಲು ಬಂದು ಹುಡುಗಿಯನ್ನು ಮೆಚ್ಚಿಕೊಂಡಿದ್ದಾರೆ. ಮೊದಲೇ ಬಡತನದಲ್ಲಿದ್ದ ಇವಳ ತಂದೆ ಅಂತಹ ಒಳ್ಳೆಯ ಮನೆತನ ದೊರೆಯುತ್ತದೆಂದು ಹಿಂದು ಮುಂದು ವಿಚಾರಿಸದೆ ಮದುವೆಗೆ ಒಪ್ಪಿಕೊಂಡುಬಿಟ್ಟಿದ್ದಾನೆ. ತಾಯಿಯಿಲ್ಲದ ಹುಡುಗಿಗೆ ಶ್ರೀಮಂತ ಮನೆತನ ದೊರೆತದ್ದು ಅವನಿಗೂ ಸಂತೋಷ ತರಿಸಿತ್ತು. ಮದುವೆಯಾದೊಡನೆಯೇ ಗಂಡನ ಮನೆ ಸೇರಿದ್ದಾಳೆ. ನಿಸರ್ಗ ನಿಯಮದಂತೆ ಗರ್ಭಿಣಿಯಾಗಿದ್ದಾಳೆ. ಮೊದಲ ಆರು ತಿಂಗಳು ಎಲ್ಲರಿಗೂ ಖುಷಿಯ ವಿಷಯವೇ. ಅವಳ ತಂದೆಗಂತೂ ಆಕಾಶ ಮೂರೇ ಗೇಣು, ತಮ್ಮ ಮಗಳು ತಾಯಿಯಾಗುವುದು ತಿಳಿದು. ಮುಂದೆ ಅವಳಿಗೆ ಜ್ವರ, ಕೆಮ್ಮು, ಭೇದಿ ಕಾಡಿದೆ. ಆಸ್ಪತ್ರೆಗೆ ಹೋದಾಗಲೇ ಬರಸಿಡಿಲೊಂದು ಬಗಲಲ್ಲಿ ಬಂದು ಕುಳಿತಂತಾಗಿತ್ತು. ಅವಳ ರಕ್ತ ಪರೀಕ್ಷೆ ಮಾಡಿದ ವೈದ್ಯರು ಇವನನ್ನು ಬದಿಗೆ ಕರೆದು ತಿಳಿಸಿದ್ದು, “ನಿಮ್ಮ ಮಗಳಿಗೆ ಎಚ್‌.ಐ.ವಿ. ಇದೆ’ ಎಂದು!

ಈ ಹುಡುಗಿಗಿಂತ 12 ವರ್ಷ ದೊಡ್ಡವನಾದ ಆ ದೊಡ್ಡ ಮನೆತನದ ಹುಡುಗ “ಸರ್ವಗುಣ ಸಂಪನ್ನ’ನೆಂದೂ, ಅವನು ಮನೆಯಲ್ಲಿ ಮಲಗಿದ್ದಕ್ಕಿಂತ ಹೊರಗೆ ಮಲಗಿದ್ದೇ ಹೆಚ್ಚೆಂದೂ ಆಮೇಲೆ ವಿಚಾರಿಸಿದಾಗ ತಿಳಿದಿದೆ. ಆದರೆ ಕಾಲ ಮಿಂಚಿತ್ತು. ಅವನು ತನ್ನ “ಎಲ್ಲ’ವನ್ನೂ ಈ ಎಳೆಯ ಹುಡುಗಿಗೆ ದೇಹಾಂತರ ಮಾಡಿಬಿಟ್ಟಿದ್ದ… ಇದೆಲ್ಲ ಕೇಳಿ ಬೇಸರವಾಯಿತು. ಅವಳನ್ನು ಪರೀಕ್ಷಿದರೆ ಮೈಯಲ್ಲಿ ರಕ್ತವೇ ಇಲ್ಲದ ಪರಿಸ್ಥಿತಿ. ಬೇರೆ ಕಡೆ ಮಾಡಿಸಿದ ಪರೀಕ್ಷೆಗಳಲ್ಲಿ ಇವಳ ರೋಗ ಅದಾಗಲೇ ಎಚ್‌.ಇ.ವಿ.ಯಿಂದ ಏಡ್ಸ್ ಗೆ ಪರಿವರ್ತನೆಗೊಂಡ ಲಕ್ಷಣಗಳಿದ್ದವು. ಎಂಥಾ ಔಷಧಿಗಳನ್ನು ಕೊಟ್ಟರೂ ಅವಳನ್ನು ಗುಣಪಡಿಸುವುದು ಕಷ್ಟವೇ ಅನ್ನುವ ಸ್ಥಿತಿ. ತಲೆ ಗಿರ್ರೆಂದಿತು. “ಅಂಕಲ್‌, ಎಲ್ಲಾ ಡಾಕ್ಟರೂ ನನಗೇನೋ ರೋಗ ಐತಿ, ಆರಾಮ ಆಗೂದಿಲ್ಲ ಅಂದರ್ರೀ. ನಿಮ್ಮ ಕಡೆ ಆರಾಮ ಆಗ್ತಿನಿ ಅಂತ ಬಂದೀನಿ. ಆರಾಮ ಮಾಡ್ತೀರಲ್ರಿ?’ ಎಂದು ಆ ಹುಡುಗಿ ಕೇಳಿದಾಗಲೇ ನಾನು ನನ್ನ ವಿಚಾರಗಳಿಂದ ಹೊರಬಂದೆ.

ಏನೆಂದು ಉತ್ತರಿಸಲಿ ಅವಳ ಮುಗ್ಧ ಪ್ರಶ್ನೆಗೆ? ಉತ್ತರಿಸುವ ಧೈರ್ಯ ಇರಲಿಲ್ಲ. ಸುಮ್ಮನಾದೆ. ಮನದಲ್ಲಿ ಹಲವು ಭಾವನೆಗಳು. ವೈದ್ಯಕೀಯ ಒಮ್ಮೊಮ್ಮೆ ನಮ್ಮನ್ನು ಅಸಹಾಯಕರನ್ನಾಗಿಸುತ್ತದೆ. ವೈದ್ಯಕೀಯ ವಿಜ್ಞಾನದ ಅದ್ಭುತ ಬೆಳವಣಿಗೆಗಳ ನಡುವೆಯೂ ಕೆಲವೊಂದು ರೋಗಗಳಿಗೆ ಪೂರ್ಣ ಗುಣಪಡಿಸುವ ಚಿಕಿತ್ಸೆ ಲಭ್ಯವಿಲ್ಲದೆ ನಾವು ಅನಿವಾರ್ಯವಾಗಿ ಕೈಚೆಲ್ಲಬೇಕಾಗುತ್ತದೆ. ನಿಜ ಹೇಳಿದರೆ ಅವಳಿಗೆ ಆಘಾತ, ಹೇಳದಿದ್ದರೆ ಅನ್ಯಾಯ. ಅದಕ್ಕೆ ಕೆಲವೊಮ್ಮೆ ಮೌನ ನಮ್ಮನ್ನು ಪಾರು ಮಾಡುತ್ತದೆ. ಅವಳೆಡೆಗೆ ನೋಡಿದೆ. ಆಗಲೇ ನಿಶ್ಚಿಂತೆಯಾಗಿ ಮಲಗಿದ್ದಾಳೆ. ತಾನು ಬಯಸಿದ ವೈದ್ಯನ ಆರೈಕೆಯಿಂದ ಗುಣವಾಗುತ್ತೇನೆಂಬ ಭರವಸೆ ಇದ್ದಿರಬಹುದೇ? ಅಥವಾ ಸುಸ್ತಾಗಿರಬಹುದೇ? ಅವಳ ನೋವನ್ನು ಸ್ವಲ್ಪ ಕಡಿಮೆ ಮಾಡುವ, ದೇಹದಲ್ಲಿ ಒಂದಿಷ್ಟು ಚೈತನ್ಯ ತುಂಬುವ ಇಂಜೆಕ್ಷನ್‌, ಸಲೈನ್‌ಗಳನ್ನು ಕೊಡಲು ನಮ್ಮ ಸಿಬ್ಬಂದಿಗೆ ತಿಳಿಸಿ ಮನೆಗೆ ಬಂದೆ. ತನ್ನದಲ್ಲದ ತಪ್ಪಿಗೆ ಅವಳು ಏನೇನೆಲ್ಲ ಕಳೆದುಕೊಂಡಳಲ್ಲ ಎಂದು ಯೋಚಿಸುತ್ತ…

ತಂದೆಯ ಧಾವಂತಕೆ ತನ್ನ ಬಾಲ್ಯವನ್ನು, ಗಂಡನೆನಿಸಿ ಕೊಂಡವನ ತಪ್ಪಿನಿಂದ ತನ್ನ ಆರೋಗ್ಯವನ್ನು, ಸಮಾಜದ ತಪ್ಪಿನಿಂದ ತನ್ನ ಶಿಕ್ಷಣವನ್ನು, ಭಯಂಕರ ರೋಗದಿಂದ ತನ್ನ ಭವಿಷ್ಯವನ್ನು, ರೋಗ ಉಲ್ಬಣವಾದರೆ ತನ್ನ ಕರುಳಕುಡಿಯನ್ನು, ಕೊನೆಗೆ ಜೀವವನ್ನೂ…  ಹೀಗೆ ತನ್ನದೆನ್ನುವದೆಲ್ಲವನ್ನೂ ಕಳೆದುಕೊಂಡಳಲ್ಲ …ಎನಿಸಿತು. ಮಲಗಿದರೆ ನಿದ್ದೆ ಸನಿಹ ಸುಳಿಯುತ್ತಿಲ್ಲ. ಮೊನ್ನೆ ತಾನೇ ಆಟ ಆಡಿಕೊಂಡಿದ್ದ ಹುಡುಗಿ ಈಗ ಸಾವಿನ ಸಮೀಪ! ಅವಳು ತನ್ನನ್ನು ಮೊದಲಿನಂತಾಗಿಸಲು ನನ್ನಲ್ಲಿ ಬೇಡಿದಂತೆ, ನಮ್ಮ ಮನೆಯ ಅಂಗಳದಲ್ಲಿ ಮತ್ತೆ ಆಡಿಕೊಂಡಂತೆ…ಎಲ್ಲ ಗೋಜಲು.

ಇದನ್ನು ತಪ್ಪಿಸಬಹುದಿತ್ತೇ? ಮದುವೆಗೆ ಮೊದಲು ರಕ್ತ ಪರೀಕ್ಷೆ ಕಡ್ಡಾಯವಾಗಬೇಕೆ? ಕಡ್ಡಾಯ ಮಾಡಿದರೂ ಮದುವೆಯಾದ ಮೇಲೆ ರೋಗ ಅಂಟಿಸಿಕೊಂಡು ಬಂದರೆ ಏನು ಮಾಡುವುದು? ಇತ್ಯಾದಿ ನೂರೆಂಟು ಪ್ರಶ್ನೆಗಳು ತಲೆತಿನ್ನತೊಡಗಿದವು. ನಿದ್ದೆ ಬರಲಿಲ್ಲ….
ಮುಂಜಾನೆಯ ವಾಕಿಂಗ್‌ಗೆಂದು ಸೆಟ್‌ ಮಾಡಿದ ಅಲಾರ್ಮ್ ರಿಂಗಣಿಸತೊಡಗಿತು… 

ಡಾ. ಶಿವಾನಂದ ಕುಬಸದ

Advertisement

Udayavani is now on Telegram. Click here to join our channel and stay updated with the latest news.

Next