Advertisement
ನಿತ್ಯದ ಮಾತಿನ ಅಲರಾಂನಂತಿದ್ದ ಅವಳಿಲ್ಲದೆ ಲೇಟಾಗಿಯೇ ಎದ್ದ. ಗೀಜರ್ ಹಾಕಿಲ್ಲದ ಕಾರಣ ಇಂದೂ ಕೂಡ ತಣ್ಣಿರಿನಲ್ಲೇ ಸ್ನಾನ. ಬೆಂಗಳೂರಿನ ಬೆಳಗಿನ ತಂಪಿಗೆ ಒಂದು ಕ್ಷಣ ಮೈ ನಡುಗಿತ್ತು. ಆದರೆ ಬೇರೆ ದಾರಿಯೇ ಇಲ್ಲ. ಕಷ್ಟವೋ ಸುಖವೋ ಸ್ನಾನ ಮುಗಿಸಿ ಬಚ್ಚಲಿನಿಂದ ಹೊರ ಬರುವ ಹೊತ್ತಿಗೆ ಗಂಟೆ ಹತ್ತು ದಾಟುತ್ತಿತ್ತು. ಅಡುಗೆ ಮನೆಯ ಕಟ್ಟೆಯ ಮೇಲೆ ಪಾತ್ರೆಗಳು ಕೇಳುವವರಿಲ್ಲದೆ ಬಿದ್ದಿದ್ದವು. ಒಂದೊಂದೇ ಸಾಮಾನು ಸರಿಸಿ ತಡಕಿದಾಗ ಸಿಕ್ಕ ಅಳಿದುಳಿದ ಬ್ರೆಡ್ಡಿನ ತುಂಡುಗಳೂ ಕೂಡ ಆಗಲೇ ಫಂಗಸ್ಸಿಗೆ ಬಲಿಯಾಗಿದ್ದವು. ಅದನ್ನು ಕಸದ ಬುಟ್ಟಿಗೆ ಹಾಕಿ, ಮಧ್ಯೆ ಹೋಟೆಲ್‌ನಲ್ಲಿ ತಿಂಡಿ ತಿಂದರಾಯ್ತು, ಎಂದು ಬಾಗಿಲಿಗೆ ಬೀಗ ಹಾಕುವಾಗ, ಒಮ್ಮೆ ಮನೆಯೊಳಗೆ ಕಣ್ಣಾಡಿಸಿದ. “ಹೋಗಿ ಬರುವೆ’ ಎಂದು ಹೇಳುವುದನ್ನು ಕೇಳಿಸಿಕೊಳ್ಳಲೂ ಅವಳಿಲ್ಲ. ಕೆನ್ನೆಗೆ ಮುತ್ತನಿಟ್ಟು “ಬೈ ಪಪ್ಪಾ’ ಎನ್ನುತ್ತಿದ್ದ ಕಂದಮ್ಮಗಳ ಕಿಲಕಿಲ ನಗುವಿಲ್ಲ. ದೀರ್ಘ ಉಸಿರೆಳೆದುಕೊಂಡು ಬಿಟ್ಟ ನಿಟ್ಟುಸಿರು, ಮತ್ತಷ್ಟು ಭಾರವೆನ್ನಿಸಿತ್ತು.
Related Articles
Advertisement
ಅವಳಿಲ್ಲದೆ ಬದುಕಲಾದೀತೆ? ಬದುಕಿದರೂ ನಿಜಕ್ಕೂ ಅದು ಬದುಕೇ ? ಮನೆ ಬಿಟ್ಟು ಅವಳು ಹೋಗುವಾಗ ನನಗೇಕೆ ತಡೆಯುವ ಮನಸಾಗಲಿಲ್ಲ? ನಾನಿಷ್ಟ ಪಡುವ ಫಿಲ್ಟರ್ ಕಾಫಿ, ಮುಂಜಾವಿನ ಸವಿ ನಿದ್ದೆಯಲಿದ್ದಾಗ ಅವಳು ಅಡುಗೆ ಮನೆಯಿಂದ ಗುನುಗುತ್ತಿದ್ದ ಹಾಡು, “ಹುಷಾರು ರೀ’ ಎಂದು ಹೇಳಿ ಬಾಗಿಲವರೆಗೂ ಬಂದು ಬೀಳ್ಕೊಡುವ ಪರಿ, ಚಿಕ್ಕ ಚಿಕ್ಕದಕ್ಕೂ ಮಕ್ಕಳಂತೆ ಕೋಪ ಮಾಡಿಕೊಳ್ಳುವಾಗ ಚೂಪಾಗುತ್ತಿದ್ದ ಅವಳ ಮೊಂಡು ಮೂಗು, ಅವನನ್ನು ಬಿಟ್ಟೂ ಬಿಡದೆ ಕಾಡಿತು.
ಅವಳೂ ನನ್ನಂತೆಯೇ ನೆನಪುಗಳಲ್ಲಿ ಒದ್ದಾಡುತ್ತಿರಬಹುದೇ…? ಪಾಪ ಹೆಣ್ಣು ಜೀವ, ಗಂಡನ ಮನೆಯೇ ಸರ್ವಸ್ವ ಎಂದು ತನ್ನವರನ್ನೆಲ್ಲಾ ಬಿಟ್ಟು ಬಂದಿರುತ್ತದೆ. ಅಲ್ಲೂ ಇಲ್ಲದ, ಇಲ್ಲೂ ಸಲ್ಲದ ಪರಿಸ್ಥಿತಿಯಲ್ಲಿ ಅದೆಷ್ಟು ನೋಯುತ್ತಿರುವಳ್ಳೋ ಎಂದು ಯೋಚಿಸುವ ಹೊತ್ತಿಗೆ ಗಂಟೆ ಸಂಜೆ ಆರು ದಾಟುತಿತ್ತು. ಆಫೀಸಿನಿಂದ ಹೊರಬಂದು ಕಾರ್ ಸ್ಟಾರ್ಟ್ ಮಾಡಿದ. ಅವನಿಗೆ ಅರಿವಿಲ್ಲದೆಯೇ ಗಾಡಿ ಅವಳ ತವರು ಮನೆಯತ್ತ ಸಾಗಿತು.ಎಂದು ನಿನ್ನ ನೋಡುವೆ ?
ಎಂದು ನಿನ್ನ ಸೇರುವೆ ?
ನಿಜ ಹೇಳಲೇನು ? ನನ್ನ ಜೀವ ನೀನು…
ಎಂದು ಎಫ್ಎಂ ರೇಡಿಯೋ ಮಧುರವಾಗಿ ಗುನುಗುತ್ತಿತ್ತು. – ಜಮುನಾ ರಾಣಿ ಎಚ್.ಎಸ್.