Advertisement

ತನ್ನದೇ ಮರಣ ಪ್ರಮಾಣ ಪತ್ರ ಮುಂದಿಟ್ಟ ಬಾಲೆ!

07:10 AM Jul 24, 2017 | Team Udayavani |

ಕಾಸರಗೋಡು: ಶಾಲೆ, ಕಾಲೇಜು ಸೇರುವಾಗ ಕೇಳುವ ಸರ್ಕಾರಿ ದಾಖಲೆಗಳು ಒಂದೆರಡಲ್ಲ. ಜನನ, ಜಾತಿ, ವಾಸಸ್ಥಳ, ಆದಾಯ ಪ್ರಮಾಣಪತ್ರ ಸೇರಿ ಹತ್ತು ಹಲವು ದಾಖಲೆ ಕೊಡಲೇಬೇಕು ಅಂತಾರೆ. ಆದರೆ ಇಂಥ ಪ್ರಮಾಣಪತ್ರ ಕೋರಿ ಸರ್ಕಾರಿ ಕಚೇರಿ, ಪಂಚಾಯಿತಿಗಳಿಗೆ ಹೋದರೆ ತಪ್ಪಿಲ್ಲದೆ ದಾಖಲೆ ಕೊಟ್ಟರೆಂದರೆ ಅಚ್ಚರಿಯಾಗುವುದರಲ್ಲಿ ಅನುಮಾನವೇ ಇಲ್ಲ. ಬದುಕಿರುವವರನ್ನು ಸಾಯಿಸುವುದು, ಮೇಲ್ವರ್ಗದವರಿಗೆ ಎಸ್‌ಸಿ, ಎಸ್‌ಟಿ ಪ್ರಮಾಣಪತ್ರ ಕೊಡುವುದು, ಕೂಲಿ ಮಾಡಿ ಹೊಟ್ಟೆ ಹೊರೆಯುವ ಬಡವರಿಗೆ ಲಕ್ಷಾಧೀಶ ಎಂದು ಸರ್ಟಿಫಿಕೇಟ್‌ ನೀಡುವ ಕೆಲಸವನ್ನು ಸರ್ಕಾರಿ ಸಿಬ್ಬಂದಿ ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ‘ಸರ್ಕಾರಿ ಕೆಲಸ ದೇವರ ಕೆಲಸ’ ಎಂದು ನಂಬಿರುವ ಸರ್ಕಾರಿ ಸಿಬ್ಬಂದಿಗೆ ಬದುಕಿರುವವರನ್ನು ದೇವರ ಬಳಿ ಕಳಿಸುವುದೆಂದರೆ (ದಾಖಲೆಯಲ್ಲಿ) ಬಲು ಪ್ರೀತಿ. ಹೀಗೇ ಸರ್ಕಾರಿ ಸಿಬ್ಬಂದಿ ಮಾಡಿದ ಅಚಾತುರ್ಯದಿಂದಾಗಿ ಕೇರಳದ ಕಾಸರಗೋಡಿನ ಬಾಲಕಿಯೊಬ್ಬಳು ಹುಟ್ಟಿದ ದಿನವೇ ಸತ್ತಿದ್ದಾಳೆ!

Advertisement

ಕಾಸರಗೋಡು ಜಿಲ್ಲೆಯ ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿನ್ನಿಂಗರ್‌ ಎಂಬ ಗ್ರಾಮದ ನಿವಾಸಿ ರಾಮಣ್ಣ ಪೂಜಾರಿ ಅವರ ಒಬ್ಬಳೇ ಮಗಳು ಶ್ವೇತಾ ಪೂಜಾರಿ (14). ಅಲ್ಲಿನ ಶಾಲೆಯೊಂದರಲ್ಲಿ ಶ್ವೇತಾ ಹತ್ತನೇ ತರಗತಿ ಓದುತ್ತಿದ್ದಾಳೆ. ಎಸ್ಸೆಸ್ಸೆಲ್ಸಿ ಅಂಕಪಟ್ಟಿ ಹಾಗೂ ಜನನ ಪ್ರಮಾಣಪತ್ರದಲ್ಲಿ ಒಂದೇ ಜನ್ಮ ದಿನಾಂಕ ಇರುವುದನ್ನು ಖಾತ್ರಿ ಪಡಿಸಿಕೊಳ್ಳಲು ಬಯಸಿದ ಶಾಲೆಯ ಶಿಕ್ಷಕಿಯೊಬ್ಬರು, ಜನನ ಪ್ರಮಾಣಪತ್ರ ತರುವಂತೆ ಶ್ವೇತಾಗೆ ಸೂಚಿಸುತ್ತಾರೆ. ಅಂದು ಸಂಜೆ ಮನೆಗೆ ಹೋದ ಶ್ವೇತಾ, ‘ಮೇಡಂ ಹೇಳಿದ್ರು ಬರ್ತ್‌ ಸರ್ಟಿಫಿಕೇಟ್‌ ಕೊಡಬೇಕಂತೆ,’ ಎಂದು ಅಪ್ಪನನ್ನು ಕೇಳಿದ್ದಾಳೆ. ಮರುದಿನ ಬೆಳಗ್ಗೆ ಬೀರುವಿನಲ್ಲಿದ್ದ ಜನನ ಪ್ರಮಾಣಪತ್ರ ತೆಗೆದ ತಂದೆ ರಾಮಣ್ಣ, ಅದನ್ನ ಮಗಳಿಗೆ ಕೊಟ್ಟಿದ್ದಾರೆ. ಮಗಳು ಶಾಲೆಗೆ ಹೋದ ಕೂಡಲೇ ಟೀಚರ್‌ ಎದುರು ಸರ್ಟಿಫಿಕೇಟ್‌ ಇರಿಸಿದ್ದಾಳೆ. ಅದನ್ನು ನೋಡಿದ ಟೀಚರ್‌ ದಂಗಾಗಿದ್ದಾರೆ. ಕಾರಣ, ಶ್ವೇತಾ ಕೊಂಡೊಯ್ದದ್ದು ಅವಳದ್ದೇ ಮರಣ ಪ್ರಮಾಣಪತ್ರ!

ಮರಣ ಪ್ರಮಾಣಪತ್ರ ಕೊಟ್ಟರು: 2002ರ ಸೆಪ್ಟೆಂಬರ್‌ನಲ್ಲಿ ಶ್ವೇತಾ ಜನಿಸಿದಾಗ, ತಂದೆ ರಾಮಣ್ಣ ಪೂಜಾರಿ ಸ್ಥಳೀಯ ಪಂಚಾಯಿತಿಗೆ ಹೋಗಿ ಜನನ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಿದ್ದರು. 2003ರ ಫೆಬ್ರವರಿ ತಿಂಗಳಲ್ಲಿ ಪಂಚಾಯಿತಿಯಿಂದ ನೀಡಿದ ಪ್ರಮಾಣಪತ್ರವನ್ನು ರಾಮಣ್ಣ ಅವರು ಸೇಫಾಗಿ ಬೀರುವಿನಲ್ಲಿರಿಸಿದ್ದರು. ಮಗಳು, ‘ಬರ್ತ್‌ ಸರ್ಟಿಫಿಕೇಟ್‌ ಬೇಕಂತೆ’ ಎಂದು ಕೇಳಿದಾಗ ಅದನ್ನೇ ಕೊಟ್ಟು ಕಳುಹಿಸಿದ್ದರು. ಆದರೆ ಪಂಚಾಯಿತಿಯ ಸಿಬ್ಬಂದಿ ಮಹಾಶಯರು, ಜನನ ಪ್ರಮಾಣಪತ್ರದ ಬದಲು ಮರಣ ಪ್ರಮಾಣಪತ್ರ ನೀಡಿದ್ದರು. ಸತತ ನಾಲ್ಕು ತಿಂಗಳ ಕಾಯುವಿಕೆ ನಂತರ ಪ್ರಮಾಣಪತ್ರ ಬಂದಿದ್ದರಿಂದ ರಾಮಣ್ಣ ಅವರು ಅದರಲ್ಲಿ ಏನು ಬರೆದಿದ್ದಾರೆ ಎಂದು ಪರಿಶೀಲಿಸುವ ಗೋಜಿಗೇ
ಹೋಗಿರಲಿಲ್ಲ. 
ಆದರೆ ಪ್ರಮಾಣಪತ್ರ ನೋಡಿದ ಕೂಡಲೆ ಟೀಚರ್‌ಗೆ ಅದರಲ್ಲಿನ ದೋಷ ಗೊತ್ತಾಗಿದೆ. ‘ಅಲ್ಲಮ್ಮ ಶ್ವೇತಾ, ನೀನು ತಂದಿರುವುದು ನಿನ್ನದೇ ಮರಣ ಪ್ರಮಾಣಪತ್ರ. ಇದರ ಪ್ರಕಾರ ನೀನು 14 ವರ್ಷ ಹಿಂದೆಯೇ ಸತ್ತಿರುವೆ!!’, ಎಂದಾಗ ಶ್ವೇತಾ ಮುಖದಲ್ಲೂ ಅಚ್ಚರಿಯ ಗೆರೆ ಮೂಡಿದೆ. ಮನೆಗೆ ಹೋದ ಶ್ವೇತಾ ವಿಷಯ ತಿಳಿಸಿದಾಗ ತಂದೆ ರಾಮಣ್ಣ ಕೂಡ ಚಕಿತಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next