ಸುರಪುರ: ಆಹಾರ ಸೇವಿಸದೆ ಜೀವಿಸುವ ಹಲವರನ್ನು ಕಂಡಿದ್ದೇವೆ. ಆದರೆ ಬೆಲ್ಲ ತಿಂದು ಜೀವಿಸುತ್ತಿರುವ ಬಾಲಕಿ ರೇಣುಕಾ ವೈದ್ಯ ಲೋಕಕ್ಕೆ ಸವಾಲಾಗಿದ್ದಾಳೆ.
ಹೌದು, ರಂಗಂಪೇಟೆಯ ರೇಣುಕಾ ನಾಗಪ್ಪ ಎಲಿತೋಟದ ಎಂಬ ಬಾಲಕಿ ದಿನನಿತ್ಯ ಬೆಲ್ಲ ತಿಂದು ಇತರೆ ಯಾವುದೇ ಆಹಾರ ಸ್ವೀಕರಿಸದೆ ಜೀವಿಸುತ್ತಿರುವುದು ಬೆಳಕಿಗೆ ಬಂದಿದೆ.
ಈಕೆ ಒಂದು ವರ್ಷ ಇರುವಾಗಿನಿಂದ ಇಲ್ಲಿಯವರೆಗೆ ಊಟ ಮಾಡಿಲ್ಲ. ಅನ್ನ, ರೊಟ್ಟಿ, ಚಪಾತಿ ಸೇರಿ ಯಾವುದೇ ಆಹಾರ ಪದಾರ್ಥ ತಿನ್ನುವುದಿಲ್ಲ. ಹಣ್ಣು, ಹಂಪಲ ಕೂಡ ತಿನ್ನುವುದಿಲ್ಲ. ಪ್ರಸ್ತುತ ಬಾಲಕಿ 11 ವರ್ಷದವಳಿದ್ದು, ತಿಮ್ಮಾಪುರ ಕನ್ಯಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6ನೇ ತರಗತಿಯಲ್ಲಿ ಓದುತ್ತಿದ್ದಾಳೆ.
ಶಾಲೆಗೆ ಹೋಗುವ ಮೊದಲು ಒಂದಿಷ್ಟು ಬೆಲ್ಲ ತಿಂದು ಹೋಗುತ್ತಾಳೆ. ಮಧ್ಯಾಹ್ನ ಊಟದ ಸಮಯದಲ್ಲಿ ಎಲ್ಲಾ ಮಕ್ಕಳು ಬಿಸಿ ಊಟ ಸೇವಿಸಿದರೆ ರೇಣುಕಾ ಮಾತ್ರ ತಾನು ತಂದಿದ್ದ ಬೆಲ್ಲ ತಿನ್ನುತ್ತಾಳೆ. ಬಾಲಕಿ ಎಲ್ಲಾ ಮಕ್ಕಳಂತೆ ಆರೋಗ್ಯಯುತವಾಗಿದ್ದಾಳೆ. ಬೆಳವಣಿಗೆ ಕೂಡ ಚೆನ್ನಾಗಿದ್ದು, ಆಟ, ಪಾಠದಲ್ಲಿಯೂ ಚುರುಕಾಗಿದ್ದಾಳೆ. ಆದರೆ ಮಗಳ ವರ್ತನೆ ಆಶ್ಚರ್ಯ ಮೂಡಿಸಿದೆ ಎಂದು ಪಾಲಕರು ಅಳಲು ತೋಡಿಕೊಂಡಿದ್ದಾರೆ.
ಬಾಲಕಿಗೆ ಅನೇಮಿಯಾ ಇರುವ ಸಾಧ್ಯತೆಯಿದ್ದು, ನಾನು ಕೂಡ ಒಂದೆರಡು ಬಾರಿ ಚಿಕಿತ್ಸೆ ಕೊಟ್ಟು ಔಷಧಿ ನೀಡಿದ್ದೇನೆ. ಆದರೆ ಯಾವುದೇ ಬದಲಾವಣೆ ಕಂಡಿಲ್ಲ. ತಜ್ಞರ ಬಳಿ ಚಿಕಿತ್ಸೆ ಕೊಡಿಸುವಂತೆ ಸಲಹೆ ನೀಡಿದ್ದೇನೆ.
-ಡಾ| ಆರ್.ವಿ. ನಾಯಕ, ತಾಲೂಕು ಆರೋಗ್ಯಾ ಧಿಕಾರಿ
ಎಲ್ಲಾ ಮಕ್ಕಳಂತೆ ಬಾಲಕಿ ರೇಣುಕಾ ಚುರುಕಾಗಿದ್ದಾಳೆ. ಆಟ, ಪಾಠದಲ್ಲಿ ಮುಂದಿದ್ದಾಳೆ. ಶಾಲೆಯಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾಳೆ. ಆದರೆ ನಾವು ಒತ್ತಾಯ ಮಾಡಿದರೂ ಊಟ ಮಾಡುವುದಿಲ್ಲ. ಮಧ್ಯಾಹ್ನ ಕೂಡ ಬೆಲ್ಲ ತಿನ್ನುತ್ತಾಳೆ.
– ಮುದ್ದಪ್ಪ ಅಪ್ಪಾಗೋಳ, ಮುಖ್ಯಗುರು
ಊಟ ನೋಡಿದರೆ ವಾಕರಿಕೆ ಬರುತ್ತದೆ. ಊಟ ಮಾಡಬೇಕು ಅಂತ ಅನಿಸುವುದಿಲ್ಲ. ನನಗೆ ಹಸಿವು ಆಗಲ್ಲ. ಹಸಿವು ಅನಿಸಿದಾಗ ಬೆಲ್ಲ ತಿನ್ನಬೇಕು ಎನಿಸುತ್ತದೆ. ಹೀಗಾಗಿ ಬೆಲ್ಲ ತಿನುತ್ತೇನೆ.
-ರೇಣುಕಾ, ಬಾಲಕಿ
– ಸಿದ್ದಯ್ಯ ಪಾಟೀಲ