ಶ್ರಾವಣ ಮಾಸಕ್ಕೂ ಹೆಣ್ಮಕ್ಕಳಿಗೂ ಅವಿನಾಭಾವ ಸಂಬಂಧ. ಎಲ್ಲರ ಮನೆಯಲ್ಲೂ ಸುಂದರವಾದ ಗೌರಿ ಮೂರ್ತಿಗಳು ಹೊಸ ವಸ್ತ್ರ, ಒಡವೆ, ವಿದ್ಯುದ್ದೀಪಗಳ ಅಲಂಕಾರ. ಈ ಸಮಯದಲ್ಲಿ ಮುತ್ತೆ„ದೆಯರು ಅವರಿವರ ಮನೆಯ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು, ತಮ್ಮ ಬಾಂಧವ್ಯವನ್ನು, ಆತ್ಮೀಯತೆಯನ್ನು ಹೆಚ್ಚಿಸಿಕೊಳ್ಳುತ್ತಾರೆ…
– ಶ್ರಾವಣ ಮಾಸ ಆರಂಭವಾದ ಎರಡನೇ ಶುಕ್ರವಾರದಿಂದ ಸ್ತ್ರೀಯರು ಶುಕ್ರಗೌರಿ ವ್ರತ ಹಿಡಿಯುತ್ತಾರೆ. ಅದೇ ರೀತಿ ಮಂಗಳವಾರದಿಂದ ಮಂಗಳಗೌರಿ ವ್ರತವನ್ನು ಆಚರಿಸುತ್ತಾರೆ. ಒಮ್ಮೆ ಪೂಜೆಯನ್ನು ಆರಂಭಿಸಿದರೆ ಅದನ್ನು 5 ವರ್ಷ ಆಚರಿಸುತ್ತಲೇ ಇರಬೇಕು. ಈ ಪೂಜೆಯನ್ನು ಕನ್ಯೆಯರು, ಹೊಸದಾಗಿ ಮದುವೆಯಾದವರು, ಮಕ್ಕಳಾಗದೇ ಇರುವರು ಮತ್ತು ಮನೆಯ ಪರಿಸ್ಥಿತಿ ಸರಿಯಿಲ್ಲದವರು ಆಚರಿಸುತ್ತಾರೆ.
– ಮೊದಲನೇ ಬಾರಿಗೆ ಪೂಜೆ ಮಾಡುವರು ತುಂಬಿದ ಬಿಂದಿಗೆ ಮೇಲೆ ತೆಂಗಿನಕಾಯಿ ಇಟ್ಟು ಅದನ್ನು ಶುಚಿಗೊಳಿಸಿ, ಅದಕ್ಕೆ ಹಾಲು, ತುಪ್ಪ, ಬೆಣ್ಣೆ ಮತ್ತು ಜೇನು ತುಪ್ಪದಿಂದ ಆ ತೆಂಗಿನಕಾಯಿ ಮೇಲೆ ಅಭಿಷೇಕ ಮಾಡಬೇಕು. ಇದೇ ರೀತಿ ಐದು ಬಾರಿ ಮಾಡಿ, ಮತ್ತೆ ಪವಿತ್ರ ಜಲದಿಂದ ಅದನ್ನು ತೊಳೆಯಬೇಕು. ನಂತರ ಹೊಸ ಸೀರೆ ಅಥವಾ ಹೊಸ ವಸ್ತ್ರವನ್ನು ಆ ತೆಂಗಿನಕಾಯಿಗೆ ಉಡಿಸಬೇಕು. ಇಲ್ಲಿ ತೆಂಗಿನಕಾಯಿ ಲಕ್ಷ್ಮೀಯ ರೂಪವಾಗಿರುತ್ತೆ. ಹಾಗಾಗಿ ಅದಕ್ಕೆ ಹೊಸ ಒಡವೆ, ಹೂವು, ಬಿಲ್ವಪತ್ರೆ ಮುಂತಾದ ವಿಶೇಷ ಹೂವುಗಳಿಂದ ಶೃಂಗರಿಸಿ, ಬಾಳೆಹಣ್ಣು, ಸೇಬು, ಪೇರಳೆ, ದಾಳಿಂಬೆ ಮತ್ತು ಚಿಕ್ಕು ಮುಂತಾದ ಹಣ್ಣುಗಳನ್ನು ಮತ್ತು ಗೋಡಂಬಿ- ದ್ರಾಕ್ಷಿ, ಉತ್ತತ್ತಿ, ಸಕ್ಕರೆ- ಪುಟಾಣಿ, ಉಡಿ ತುಂಬುವ ಸಾಮಗ್ರಿ ಅಂದರೆ ಅರಿಶಿನ- ಕುಂಕುಮ, ಹಸಿರು ಗಾಜಿನ ಬಳೆಗಳು, ಅರಿಶಿನದ ಕೊಂಬು, ಕಾಲುಂಗುರ ಮತ್ತು ಮಲ್ಲಿಗೆ ಹೂವು- ಇವುಗಳನ್ನು ಒಂದೊಂದು ಬಟ್ಟಲುಗಳಲ್ಲಿ ಇಟ್ಟು ಪೂಜೆಯನ್ನು ಆರಂಭಿಸುತ್ತಾರೆ. ಅನುಕೂಲಸ್ಥರು ಈ ರೀತಿ ಮನೆಯಲ್ಲಿ ಮಾಡಬಹುದು. ಅದು ಸಾಧ್ಯವಾಗದೇ ಇದ್ದವರು, ದೇಗುಲಗಳಿಗೆ ಹೋಗಿ ಉಡಿ ತುಂಬುವ ಸಾಮಗ್ರಿಗಳನ್ನು ಕೊಟ್ಟು ದೇವಿಗೆ ಪೂಜೆ ಮಾಡಿಸಿ ನಂತರ ಅದೇ ಸಾಮಗ್ರಿಯನ್ನು ಮನೆಯಲ್ಲಿಟ್ಟು ಪೂಜಿಸಬಹುದು.
– ಹೆಸರುಬೇಳೆ ಪಾಯಸ ಈ ವ್ರತಕ್ಕೆ ಬೇಕಾದ ಮತ್ತು ಇರಲೇಬೇಕಾದ ಶ್ರೇಷ್ಠವಾದ ನೈವೇದ್ಯ. ಪೂಜೆ ಮಾಡುವರು ವ್ರತ ಮುಗಿಯುವವರೆಗೂ ಪ್ರತಿ ಮಂಗಳವಾರ ಮತ್ತು ಶುಕ್ರವಾರದಂದು ದೀಪ ಹಚ್ಚಿ ದೇವಿಯ ಸ್ತೋತ್ರವನ್ನು ಬೆಳಗ್ಗೆ ಮತ್ತು ಸಾಯಂಕಾಲ ಶುದ್ಧ ಮನಸ್ಸಿನಿಂದ ಪಠಿಸಬೇಕು. ಈ ರೀತಿ ಮಾಡುವುದರಿಂದ ಅಂದುಕೊಂಡದ್ದೆಲ್ಲಾ ನೆರವೇರುತ್ತದೆ ಎಂಬ ನಂಬಿಕೆಯಿದೆ.
– ಮುಖ್ಯವಾಗಿ ಈ ವ್ರತ ಮಾಡುವಾಗ ಮಗಳೊಟ್ಟಿಗೆ ತಾಯಿ ಇರಲೇಬೇಕು. ಮಗಳು ಪೂಜಾ ತಯಾರಿಗೆ ತಾಯಿಯನ್ನು ಹೊರತುಪಡಿಸಿ ಬೇರೆಯವರ ಸಹಾಯ ಪಡೆಯುವಂತಿಲ್ಲ ಮತ್ತು ಈ ವ್ರತ ಮುಗಿಯುವವರೆಗೂ ತಾಯಿ ಇರಲೇಬೇಕು ಅಂದರೆ ತಾಯಿಯ ಉಪಸ್ಥಿತಿಯಲ್ಲಿಯೇ ನಡೆಯಬೇಕು. ಮಗಳು ದೇವಿಯ ಸ್ತೋತ್ರಗಳನ್ನು ಓದುತ್ತಿರುವಾಗ ತಾಯಿಯಾದವಳು ಅವಳ ಜಡೆಯನ್ನು ಹೆಣೆಯತ್ತಿರಬೇಕಂತೆ. ಇದರಿಂದ ಮಗಳ ಬೇಡಿಕೆಗಳು ಆದಷ್ಟು ಬೇಗ ಈಡೇರುತ್ತವೆ ಎಂಬ ನಂಬಿಕೆಯಿದೆ.
– ವ್ರತದ ಕೊನೆಗೆ ಪೂಜೆ ಮಾಡಿದವರು ಕನಿಷ್ಠವೆಂದರೆ, ಐದು ಮುತ್ತೆ„ದೆಯರನ್ನಾದರೂ ಆಹ್ವಾನಿಸಿ ಅವರಿಗೆ ಮುತ್ತೈದೆ ಸಂಕೇತಗಳಾದ ಹೂವು, ಅರಿಶಿನ- ಕುಂಕುಮ, ಬಳೆ, ಉಡಿ ತುಂಬುವ ಸಾಮಗ್ರಿಗಳನ್ನು ಮರದಲ್ಲಿಟ್ಟು ಬಾಗೀನ ಕೊಡುತ್ತಾರೆ. ಇನ್ನೊಂದು ವಿಶೇಷವೆಂದರೆ, ಈ ಪೂಜೆ ವೇಳೆ ಹೆಣ್ಣುಮಕ್ಕಳು ಹೊಸ ಸೀರೆಗಳನ್ನುಟ್ಟು ಸಾಕ್ಷಾತ್ ಲಕ್ಷ್ಮೀಯಂತೆ, ಸಾಕಷ್ಟು ಒಡವೆಗಳನ್ನು ಧರಿಸುತ್ತಾರೆ.
– ಅಣ್ಣ- ತಂಗಿಯರ ಬೆಸೆಯುವ ರಕ್ಷಾಬಂಧನದಲ್ಲೂ ಸ್ತ್ರೀಗೆ ಒಂದು ಭದ್ರತಾ ಭಾವ ದಕ್ಕುತ್ತದೆ. ಆಕೆಯ ಭಾವಬಂಧಗಳು ಗಟ್ಟಿಯಾಗುತ್ತವೆ.
ಗೌರಿ ಭೀ. ಕಟ್ಟಿಮನಿ