Advertisement

ಅವಳು ತನ್ನ ಹಠ ಸಾಧಿಸಿದಳು, ದಾಂಪತ್ಯದ  ಬಂಧವ ಬಿಗಿಗೊಳಿಸಿದ್ದಳು…

12:30 AM Mar 09, 2019 | |

ಈ ದಂಪತಿಗೆ ಮಗು ಹೊಂದುವ ಬಯಕೆ ಇದ್ದರೂ ಅವನ ವೀರ್ಯದಿಂದ ಸೋಂಕು ತಗಲುವುದರಿಂದ ಆರೋಗ್ಯವಂತ ದಾನಿಯ ವೀರ್ಯ ಪಡೆದು ಕೃತಕ ಗರ್ಭಧಾರಣೆಯ ಆಯ್ಕೆ ಅವರಿಗೆ ತಿಳಿಹೇಳಿದರೆ, ಅವನೇನೋ ಒಂದೇ ಮಾತಿಗೆ ಒಪ್ಪಿದ. ಆದರೆ ಅವಳದು ಒಂದೇ ಹಠ. ತನ್ನ ಗಂಡನ ವೀರ್ಯದಿಂದ ಮಾತ್ರ ತಾನು ಗರ್ಭಧರಿಸಲು ಸಿದ್ಧ, ಇಲ್ಲವಾದರೆ ಬೇಡ, ಎಂದು. ನನಗೆ ಆಶ್ಚರ್ಯ. ಅವನು ಒಪ್ಪಿದರೂ ಅವಳು ಒಪ್ಪದ ಪರಿಸ್ಥಿತಿ.

Advertisement

ಅವರು ನನ್ನ ಚೇಂಬರ್‌ನಲ್ಲಿ ನನ್ನೆದುರು ಕುಳಿತಿದ್ದರು. ಮೇಲ್ನೋಟಕ್ಕೆ ಇಬ್ಬರೂ ಆರೋಗ್ಯಪೂರ್ಣ. ಆದರೆ ಮುಖದಲ್ಲಿ ಆತಂಕ, ಕಾತರ. ಮದುವೆಯಾಗಿ ಎರಡು ವರ್ಷಗಳು. ಮಕ್ಕಳಾಗಿರಲಿಲ್ಲ. ಅದಕ್ಕೇ ಮುಖದಲ್ಲಿ ಚಿಂತೆಯ ಗೆರೆಗಳು. ಆದರೆ  ಅವಳು ಶಾಂತ. ಇವನು ಚಡಪಡಿಸುತ್ತಿದ್ದ. ನನ್ನ ಸಲಹೆ ಪಡೆಯಲು ಬಂದಿದ್ದರು. ವಿವರ ಕೇಳಿದೆ. ಆಗ ಗೊತ್ತಾಯಿತು, ಅವರಿಗೆ ಮಕ್ಕಳಾಗದಿರಲು ಕಾರಣವಿಲ್ಲದಿಲ್ಲ. ಆತನಿಗೆ ಎಚ್‌.ಐ.ವಿ.! ಅಲ್ಲದೆ ಆ ವಿಷಯವನ್ನು ಮದುವೆಯಾದ ದಿನವೇ ಅವಳಿಗೆ ಹೇಳಿಬಿಟ್ಟಿದ್ದ. ಅವಳಿಗೆ ಆಘಾತವಾಗಿತ್ತು. ಮದುವೆಗೆ ಮೊದಲೇ ಹೇಳಿದ್ದರೆ ತನ್ನ ಮದುವೆ ಅಸಾಧ್ಯ ಎಂದು ಆತನಿಗೆ ಗೊತ್ತಿತ್ತು. ಹೆಂಡತಿಯನ್ನು ಪಡೆಯುವ ತನ್ನ ಬಯಕೆಯಿಂದಾಗಿ ಅವಳ ಬಾಳಲ್ಲಿ ಆಟವಾಡುತ್ತಿದ್ದೇನೆಂದು ಆತನಿಗೆ ಅನಿಸಿರಲೇ ಇಲ್ಲ.

ಆದರೆ ನಿಜ ಹೇಳಿದರೆ ಅವನನ್ನು ಯಾರು ಮದುವೆಯಾದಾರು? ಅವನ ಅಭಿಪ್ರಾಯದಲ್ಲಿ ಅವನು ಮಾಡಿದ್ದು ಸರಿಯೇ. ಆದರೆ ಅವಳಿಗೋ ಅದು ನುಂಗಲಾಗದ ತುತ್ತು. ಅರಗಿಸಿಕೊಳ್ಳಲಾಗದ ಸಂಗತಿ. ಆ ರಾತ್ರಿ ಅವನನ್ನು ದೂರವಾಗಿಸಿದವಳು, ಅನೇಕ ತಿಂಗಳು ಹಾಗೇ ಕಳೆದರು. ಅವನೂ ಬಲವಂತ ಮಾಡಿದವನಲ್ಲ. ಆ ವಿಷಯದಲ್ಲಿ ಮಾತ್ರ ಆತ ಒಳ್ಳೆಯವನೇ. ಯಾಕೆಂದರೆ ಅದನ್ನು ತಿಳಿಸದೇ ಮುಂದುವರಿದಿದ್ದರೂ ಅವಳಿಗೆ ಗೊತ್ತಾಗುತ್ತಲೇ ಇರಲಿಲ್ಲ. ಇಷ್ಟೊತ್ತಿಗಾಗಲೇ ಅವಳೂ ಎಚ್‌.ಐ.ವಿ. ಸೋಂಕು ಹೊಂದಿರುತ್ತಿದ್ದಳು. ಅದಾಗಲೇ ಒಂದು ತಪ್ಪು ಮಾಡಿದ ಅವನಿಗೆ ತಾನು ತಪ್ಪಿತಸ್ಥ ಎಂಬ ಭಾವನೆ ಬಲವಾಗಿತ್ತು. ಅವಳೂ ಸ್ಥಿತಪ್ರಜ್ಞೆ. ಹರಿಹಾಯಲಿಲ್ಲ. ವಿಷಯವನ್ನು ಯಾರಿಗೂ ಹೇಳಲಿಲ್ಲ. ಹೇಗೋ ಸಹಬಾಳ್ವೆ ಸಾಗಿತು. ಆದರೆ ಲೈಂಗಿಕ, ಸಾಂಸಾರಿಕ ತೃಪ್ತಿ ಎನ್ನುವುದಿಲ್ಲ. 

ಅವರೇನೂ ಅಂಥ ಕಲಿತವರಲ್ಲ. ಆದರೆ ಬದುಕನ್ನು ಅರಿತವರು. ಮುಂದೆ ಪರಸ್ಪರ  ಸಮಾಲೋಚನೆ, ವೈದ್ಯರಿಂದ ಸಲಹೆ. ಕಾಂಡೋಮ್‌ನಿಂದಾಗಿ ಲೈಂಗಿಕ ತೃಪ್ತಿಯೇನೋ ಸಾಧ್ಯವಾಯಿತು. ಇವರದೂ ಒಂದು ರೀತಿಯ ಆದರ್ಶ ದಾಂಪತ್ಯವೇ. ಯಾಕೆಂದರೆ ಅವನು ನಿಜ ಹೇಳಿದ, ಇವಳದನ್ನು ಒಪ್ಪಿಕೊಂಡಳು! ಆದರೂ ಸರ್ಪದೊಂದಿಗಿನ ಸಹಬಾಳ್ವೆಯಂಥ ಬದುಕು ಅವಳದು. ಯಾವಾಗ ಅವನ ಸೋಂಕು ಇವಳನ್ನು ಕಚ್ಚುತ್ತದೋ ಗೊತ್ತಿಲ್ಲದ ಸ್ಥಿತಿ. ಅವಳದು ಹೇಗೋ ವಹಿಸಿದ ಅನಿವಾರ್ಯ ಧೈರ್ಯ. ಆದರೆ ಕಷ್ಟವೆಂದರೆ ಮಕ್ಕಳು ಅಸಂಭವ. ಯಾಕೆಂದರೆ ಕಾಂಡೋಮ್‌ ಬಳಸದಿದ್ದರೆ ಅವಳಿಗೆ ಸೋಂಕು ಶತಃಸಿದ್ಧ, ಬಳಸಿದರೆ ಮಕ್ಕಳಿಲ್ಲ. ಅವನಿಗೆ ರೋಗ ಅಂಟಿಕೊಂಡಿದ್ದು ಹೇಗೆಂದು ಗೊತ್ತಿಲ್ಲ, ಅನ್ನುತ್ತಾನೆ. ಯಾವುದೋ ಅಸುರಕ್ಷಿತ ಇಂಜೆಕ್ಷನ್‌ನಿಂದ ಆಗಿರಬಹುದೆಂಬ ಗುಮಾನಿ. ನಂಬಲೇಬೇಕು. ರೋಗಿ ಹೇಳಿದ ವಿವರಗಳನ್ನು ನಂಬಬೇಕೆಂದು ನಮಗೆ ತರಬೇತಿಯಾಗಿರುತ್ತದಲ್ಲ..! ಈಗ  ರೋಗ ಬಂದಿದ್ದು ಹೇಗೆಂಬುದು ಮುಖ್ಯವಲ್ಲ, ಮುಂದೆ ಮಾಡಬೇಕಾದುದಷ್ಟೇ ಮಹತ್ವದ್ದು. 

ಈ ರೀತಿ ರೋಗ ಇರುವುದು ಗೊತ್ತಿದ್ದೂ ಮದುವೆಯಾದವರನ್ನು ನಾನು ಬಹಳ ನೋಡಿದ್ದೇನೆ, ಅದೂ ಸಮಾಜದಲ್ಲಿ “ಉನ್ನತ’ವಾಗಿದ್ದವರÇÉೇ. ನನಗೆ ತುಂಬ ಪರಿಚಯವಿದ್ದವನೊಬ್ಬನ ತಮ್ಮನಿಗೆ ಎಚ್‌.ಐ.ವಿ. ಅವನಿಗೆ ಮದುವೆ ಮಾಡಿ ಒಂದು ಹುಡುಗಿಯ ಆರೋಗ್ಯ ಹಾಳು ಮಾಡಬಾರದೆಂದು ಸಲಹೆ ನೀಡಿದರೆ, ಆತ ನನ್ನೆಡೆ ನೋಡಿ ತೆಳುನಗೆ ನಗುತ್ತ ನುಡಿದಿದ್ದ “ಸರ್‌, ನಮ್ಮ ತಮ್ಮಗ ಮದುವಿ ಆಗಬಾರದೆನ್ರೀ? ಅವನಿಗೆ ರೋಗ ಐತ್ರಿ, ಆದರ ಅವನಿಗೂ ಹೆಂಡತಿ ಮಕ್ಕಳು ಬ್ಯಾಡೇನ್ರೀ? ಸಾವಿರ ಸುಳ್ಳ ಹೇಳಿ ಒಂದು ಮದುವಿ ಮಾಡೂದ್ರೀ. ಆಮ್ಯಾಲ ಅವರ ಹಣ್ಯಾಗ ಬರದಾØಂಗ ಆಗತದ್ರಿ..’ ನಾನು ದಂಗಾಗಿ¨ªೆ, ಜನ ಬೇರೆಯವರ ಜೀವವನ್ನು ಎಷ್ಟು ಲಘುವಾಗಿ ಕಾಣುತ್ತಾರೆ, ಎಂದು. ಅವನ ಮದುವೆಯೂ ಆಯಿತು. ಅವರ ಹಣೆಯಲ್ಲಿ ಏನು ಬರೆದಿತ್ತೋ ಗೊತ್ತಿಲ್ಲ, ಆದರೆ ವೈದ್ಯಕೀಯವಾಗಿ ಏನು ಬರೆದಿದೆ, ಎಂದು ನನಗೆ ಗೊತ್ತಿತ್ತು. ನಿಸರ್ಗ ನಿಯಮ. ಅವನ ಹೆಂಡತಿ ಗರ್ಭಿಣಿಯೂ ಆದಳು. ಅವಳ ಹೊಟ್ಟೆಯಲ್ಲಿ ಮಗು ಮೂಡಿತು, ರಕ್ತದಲ್ಲಿ ಎಚ್‌.ಐ.ವಿ. ಪ್ರಿಂಟು.  ಮಗು ಬೆಳೆದಂತೆ ಅವಳ ರೋಗವೂ ಕೂಡ ಬೆಳೆಯಿತು. ಸಹಜ ಹೆರಿಗೆ, ಆದರೆ ಅಸಹಜ ಮಗು. ಯಾಕೆಂದರೆ ಮಗುವಿಗೂ ಎಚ್‌.ಐ.ವಿ. ಮುಂದಿನ ಕೆಲವೇ ತಿಂಗಳುಗಳಲ್ಲಿ ತಾಯಿ, ಮಗು ಅಸು ನೀಗಿದರು. 

Advertisement

ಯಾಕೆಂದರೆ ಆ ದಿನಗಳಲ್ಲಿ ಈಗಿನಂಥ ಪರಿಣಾಮಕಾರಿ ಔಷಧಿಗಳು ಲಭ್ಯವಿರಲಿಲ್ಲ. ಅವನೊಬ್ಬ ಮಾತ್ರ ಮುಂದೆ  ಕೆಲ ವರ್ಷ ಬದುಕಿದ. ಬದುಕಿದ ವರ್ಷಗಳಲ್ಲಿ ಮತ್ತೆ ಎಷ್ಟು ಮಹಿಳೆಯರಿಗೆ ತನ್ನ ರೋಗವನ್ನು ಧಾರೆ ಎರೆದನೋ ಏನೋ. ಅವನಲ್ಲಿ, ಅವನ ಮದುವೆ ಮಾಡಿಸಿದವರಲ್ಲಿ  ಅಪರಾಧಿ ಪ್ರಜ್ಞೆಯನ್ನು ಹುಡುಕಿದೆ. ಎಳ್ಳಷ್ಟೂ ಕಾಣಲಿಲ್ಲ. ಆದರೆ  ನನಗೇ ಬಹಳಷ್ಟು ದಿನ ಅಪರಾಧಿ ಪ್ರಜ್ಞೆ ಕಾಡಿತು. ಆ ಹುಡುಗಿಯ ಮನೆಯವರಿಗೆ ತಿಳಿಸಬೇಕಾಗಿತ್ತೇನೋ ಎಂದು. ಆದರೆ ರೋಗಿಗಳ ಗೌಪ್ಯ ಕಾಪಾಡುವುದು ನಮ್ಮ ವೃತ್ತಿ ನಿಯಮಗಳÇÉೊಂದು. ಎಲ್ಲ ಗೊತ್ತಿದ್ದೂ ಏನೂ ತಿಳಿಯದವರ ಹಾಗೆ ಇದ್ದರೆ ಮಾತ್ರ ಸಮಾಜ ಸ್ವಾಸ್ಥ್ಯ ಕಾಪಾಡಲು ಸಾಧ್ಯ. ವೈದ್ಯರು ಎಲ್ಲವನ್ನೂ ಜಗಜ್ಜಾಹೀರು ಮಾಡಿದರೆ ಕಲಹಗಳೇ ಆದಾವು. ಮನೆಗಳೂ ಮನಗಳೂ ಮುರಿದಾವು. ಕೆಲವೊಮ್ಮೆ ನಾವು ಬರೀ ಅಂಪೈರ್‌ಗಳು ಮಾತ್ರ. ಅದಕ್ಕೇ ಜನ್ಮರಾಶಿಗಳನ್ನು, ಕುಂಡಲಿಗಳನ್ನು ಜಾಲಾಡುವ ಮೊದಲು ರಕ್ತಪರೀಕ್ಷೆ ಮಾಡುವುದನ್ನು ಕಡ್ಡಾಯ ಮಾಡಬೇಕು. ಇಲ್ಲವೇ ಅಮಾಯಕ ಜೀವಗಳು ಬಲಿಯಾಗಿಬಿಡುತ್ತವೆ.

1987ರಲ್ಲಿ ಮೊದಲ ಬಾರಿ ಈ ರೋಗ ಚೆನ್ನೈ ಮುಖಾಂತರ ಇಂಡಿಯಾಕ್ಕೆ ಬಂದಾಗ ಅದು ನಡೆಸಿದ “ಜೈತ್ರಯಾತ್ರೆ’ಗೆ ಬಲಿಯಾದವರು ಅನೇಕ. ಆಗಿನ್ನೂ ಆ ರೋಗದ ಪರಿಕಲ್ಪನೆ ಇಲ್ಲದ ಜನ, ಕ್ಷಣಮಾತ್ರದ ಸುಖಕ್ಕಾಗಿ ಸಾವಿನ ಮನೆಯ ಬಾಗಿಲು ತಟ್ಟಿದ್ದರು. “ರಾಮ’ನನ್ನು ಆರಾಧಿಸುವ ಭಾರತದಲ್ಲಿ ಈ ರೋಗ ಅಷ್ಟೊಂದು ಹಬ್ಬಲಿಕ್ಕಿಲ್ಲ, ಎಂದು ಅನೇಕ ವೈದ್ಯರು ಭಾವಿಸಿದ್ದರು. ಆದರೆ “ವಿಶಾಲಹೃದಯಿ’ಗಳಾದ ನಮ್ಮವರು ಅದನ್ನು ಸುಳ್ಳುಮಾಡಲು ಬಹಳ ಸಮಯ ಬೇಕಾಗಲಿಲ್ಲ. ಒಂದು ಸಮೀಕ್ಷೆಯಂತೆ 1999ರ ವೇಳೆಗೆ ನಮ್ಮ ದೇಶದಲ್ಲಿ 2.4 ಮಿಲಿಯನ್‌ ಜನ ಈ ರೋಗ ಹೊಂದಿದ್ದರು. ಬಡವರೂ, ಕುಪೋಷಿತರೂ, ತಿಳಿವಳಿಕೆ ಇಲ್ಲದವರೂ ಆದ ನಮ್ಮ ಬಹಳಷ್ಟು ಜನ ನೋಡ ನೋಡುವುದರಲ್ಲಿ  “ಏಡ್ಸ್’ ನಿಂದಾಗಿ ಮರಣಿಸುವುದು ಸಾಮಾನ್ಯವಾಯಿತು. “ಏಡ್ಸ್ ಎಂದರೆ ಮರಣದಂಡನೆ’, ಎನ್ನುವಂತಾಯಿತು. ಆದರೆ 1992ರಲ್ಲಿ ಕೇಂದ್ರ ಸರಕಾರ ಪ್ರಾರಂಭಿಸಿದ National Aids Control Organisation(NACO) ಎಂಬ ಸಂಸ್ಥೆಯಿಂದಾಗಿ ಅದ್ಭುತ ಕೆಲಸಗಳಾದವು. ರೋಗ ಹೊಂದಿದವರನ್ನು ಗುರುತಿಸುವುದು, ಅವರಿಗೆ ಯಥೋಚಿತ ಔಷಧೋಪಚಾರ,  ಸಾಮಾಜಿಕ ಜಾಗೃತಿಯನ್ನುಂಟು ಮಾಡುವುದು, ಆರೋಗ್ಯ ಶಿಕ್ಷಣ ನೀಡುವುದು ಮುಂತಾದ ವ್ಯವಸ್ಥಿತ ಕಾರ್ಯಗಳಿಂದಾಗಿ ಏಡ್ಸ್ ನ್ನು ತಕ್ಕ ಮಟ್ಟಿಗೆ ತಹಬಂದಿಗೆ ತರಲಾಯಿತು. ಈ ವಿಷಯಕ್ಕೆ ನಮ್ಮ ಆರೋಗ್ಯ ಇಲಾಖೆಯವರನ್ನು ಎಷ್ಟು ಅಭಿನಂದಿಸಿದರೂ ಕಡಿಮೆಯೇ. 2017ರಲ್ಲಿ ಭಾರತದಲ್ಲಿ ಹೊಸದಾಗಿ ಸೋಂಕಿಗೊಳಗಾದವರು ಬರೀ 87,000 ಜನ ಮಾತ್ರ. ಈಗ ಸರಕಾರದ ಕಟ್ಟುನಿಟ್ಟಾದ ನಿಯಮಗಳಿಂದಾಗಿ  ರಕ್ತಭಂಡಾರಗಳಿಂದ, ಚುಚುಮದ್ದುಗಳಿಂದ ಬರುವ ಸೋಂಕನ್ನು ಸಂಪೂರ್ಣ ತಡೆಗಟ್ಟಲಾಗಿದೆ. ಅಲ್ಲದೆ ತಾಯಿಯಿಂದ ಮಗುವಿಗೆ ಬರುವ ಸೋಂಕನ್ನೂ ಕೂಡ, ಗರ್ಭಿಣಿಯರಿಗೆ ಮಾತ್ರೆಗಳನ್ನು ನೀಡುವ ಮೂಲಕ ನಿಯಂತ್ರಿಸಲಾಗಿದೆ.  ಈಗ ಏನಿದ್ದರೂ ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಮಾತ್ರವೇ ಹರಡುವುದು ಸಾಮಾನ್ಯ. ಅದನ್ನೂ ಕೂಡ ಆರೋಗ್ಯ ಶಿಕ್ಷಣದ ಮುಖಾಂತರ ಕಡಿಮೆಗೊಳಿಸಲಾಗಿದೆ. ಕಾಂಡೋಮ್‌ ಎಂಬುದೊಂದು ಕಡಿಮೆ ವೆಚ್ಚದ ಅದ್ಭುತ ಸಾಧನ. ಮಹಿಳೆಯರ ಕಾಂಡೋಮ್‌ಗಳೂ ಈಗ ಲಭ್ಯ. ಅಲ್ಲದೆ ಪರಿಣಾಮಕಾರಿ ಔಷಧಿಗಳಿಂದಾಗಿ ಮತ್ತು ಅಂತಹ ಔಷಧಿಗಳ ಉಚಿತ ಲಭ್ಯತೆಯಿಂದಾಗಿ ಎಚ್‌.ಐ.ವಿ.ಯಿಂದ ಏಡ್ಸ್ ಗೆ ಪರಿವರ್ತಿತರಾಗುವವರ ಪ್ರಮಾಣ ತುಂಬ ಕಡಿಮೆಯಾಗಿದೆ.. ಈಗ ಏಡ್ಸ್ ನಿಂದಾಗಿ ಸಾಯುವವರ ಸಂಖ್ಯೆ ಮೊದಲಿಗಿಂತಲೂ 71% ಕಡಿಮೆಯಾಗಿದೆಯೆಂದರೆ ಎಂಥ ಗುಣಮಟ್ಟದ ಔಷಧಿಗಳ ಲಭ್ಯತೆ ಇದೆ, ಎಂಬ ಅರಿವಾದೀತು. ಅದಕ್ಕೇ ಇತ್ತೀಚಿನ ದಿನಗಳಲ್ಲಿ ಎಚ್‌.ಐ.ವಿ. ಹೊಂದಿದವರೇ ಯಾವುದೂ ಹಿಂಜರಿಕೆಯಿಲ್ಲದೆ ತಮ್ಮ ರೋಗದ ಬಗ್ಗೆ ಚರ್ಚಿಸಲಾರಂಭಿಸಿದ್ದಾರೆ.

 ಈ ದಂಪತಿಗೆ ಮಗು ಹೊಂದುವ ಬಯಕೆ ಇದ್ದರೂ ಅವನ ವೀರ್ಯದಿಂದ ಸೋಂಕು ತಗಲುವುದರಿಂದ ಆರೋಗ್ಯವಂತ ದಾನಿಯ ವೀರ್ಯ ಪಡೆದು ಕೃತಕ ಗರ್ಭಧಾರಣೆಯ ಆಯ್ಕೆ ಅವರಿಗೆ ತಿಳಿಹೇಳಿದರೆ, ಅವನೇನೋ ಒಂದೇ ಮಾತಿಗೆ ಒಪ್ಪಿದ. ಆದರೆ ಅವಳದು ಒಂದೇ ಹಠ. ತನ್ನ ಗಂಡನ ವೀರ್ಯದಿಂದ ಮಾತ್ರ ತಾನು ಗರ್ಭಧರಿಸಲು ಸಿದ್ಧ, ಇಲ್ಲವಾದರೆ ಬೇಡ, ಎಂದು. ನನಗೆ ಆಶ್ಚರ್ಯ. ಅವನು ಒಪ್ಪಿದರೂ ಅವಳು ಒಪ್ಪದ ಪರಿಸ್ಥಿತಿ. ಭಾರತದಲ್ಲಿ ಪಾತಿವ್ರತ್ಯದ ಪರಿಕಲ್ಪನೆ ಯಾವ ರೀತಿ ಬೇರೂರಿದೆಯಲ್ಲ, ಎನಿಸಿತು. ಮಹಿಳಾವಾದಿಗಳು ಎಷ್ಟೇ ಅಲವತ್ತುಕೊಂಡರೂ ಸಮಾಜದಲ್ಲಿ ಈ ಮನಸ್ಥಿತಿಯ ಜನ ತುಂಬ ಇದ್ದಾರೆ. ಅವರಿಂದ ಸಮಾಜ ಮತ್ತು ಕೌಟುಂಬಿಕ ಸ್ವಾಸ್ಥ್ಯಕ್ಕೆ ಒಂದು ರೀತಿಯ ಸಹಾಯವೂ ಆಗಿದೆ, ಎಂತಲೇ ಹೇಳಬೇಕು. ಅವಳಿಗೆ ತಿಳಿಹೇಳುವ ನನ್ನ ಪ್ರಯತ್ನ ವ್ಯರ್ಥವಾಯಿತು. ಇನ್ನು ಉಳಿದದ್ದು ತುಂಬ ಸಂಕೀರ್ಣವಾದ ದಾರಿ. ಅದು “ಹೈಟೆಕ್‌ ಫ‌ಲವತ್ತತಾ ಕೇಂದ್ರ’ಗಳಲ್ಲಿ ಕೈಗೊಳ್ಳುವ “ನೆರವಿನ ಸಂತಾನೋತ್ಪತ್ತಿ’ಯಿಂದ ಮಾತ್ರ ಸಾಧ್ಯ. ಅಂಥ ಕೇಂದ್ರಗಳಲ್ಲಿ ಗಂಡನ ರಕ್ತದಲ್ಲಿರುವ ವೈರಸ್‌ಗಳ ಸಾಂಧ್ರತೆಯನ್ನು ಕಡಿಮೆ ಮಾಡುವ ಮಾತ್ರೆಗಳನ್ನು ನೀಡಿ, ಅವನಿಂದ ಸೋಂಕು ತಗಲುವ ಸಾಧ್ಯತೆಗಳನ್ನು ಕಡಿಮೆಗೊಳಿಸುತ್ತಾರೆ. ಕೃತಕ ಗರ್ಭಧಾರಣೆಗೂ ಮೊದಲು ವೀರ್ಯದಲ್ಲಿರುವ ಪ್ಲಾಸ್ಮಾವನ್ನು ರಾಸಾಯನಿಕಗಳನ್ನು ಬಳಸಿ ತೊಳೆದು ತೆಗೆದು, ಶುಕ್ರಾಣುಗಳನ್ನಷ್ಟೇ ಪ್ರತ್ಯೇಕಿಸಿ ಪಡೆಯುತ್ತಾರೆ. ಯಾಕೆಂದರೆ  ಎಚ್‌.ಐ.ವಿ. ವೈರಸ್‌ಗಳು ಪ್ಲಾಸ್ಮಾದಲ್ಲಿ ಇರುತ್ತವೆಯೇ ವಿನಃ ಶುಕ್ರಾಣುಗಳಲ್ಲಿ ಅಲ್ಲ. ನಂತರ Intra Uterine Insemination, In Vitro Fertilisation, Intra Cytoplasmic Sperm Injection ಇವುಗಳಲ್ಲಿ ಯಾವುದಾದರೂ ಒಂದು ವಿಧಾನದಿಂದ ಗರ್ಭಧಾರಣೆ ಮಾಡಲಾಗುತ್ತದೆ. ಆದರೆ ಎಷ್ಟೇ ತೊಳೆದರೂ ಕೆಲವು ಬಾರಿ ವೈರಸ್‌ಗಳು ಉಳಿದುಕೊಳ್ಳುವ ಸಾಧ್ಯತೆ ಇಲ್ಲದಿಲ್ಲ. ಹಾಗಾಗಿ ಅವಳಿಗೆ  ಸೋಂಕು ತಗಲುವ ಸಾಧ್ಯತೆಗಳು ತುಂಬ ಕಡಿಮೆ ಇದ್ದರೂ ಪೂರ್ಣ ಸುರಕ್ಷಿತವಲ್ಲ. ಇವೆಲ್ಲವನ್ನೂ ಅವಳೆದುರಿಗೆ ತಿಳಿಹೇಳಿದೆ. ತನಗೆ ಗೊತ್ತಿರದಿದ್ದರೆ ಅದಾಗಲೇ ಸೊಂಕಿತಳಾಗುತ್ತಿದ್ದೆ, ಈಗ ಅದರ ಪ್ರಮಾಣ ಕಡಿಮೆ ಆಯಿತಲ್ಲ ಸಾಕು, ಎಂಬ ಅವಳ ವಾದದೆದುರು ಅವಳ ಗಂಡನೂ ಒಪ್ಪಿಬಿಟ್ಟ. ಅವಳು ಒಂದಿಷ್ಟು ಅಪಾಯವನ್ನೆದುರಿಸಲು ಸಿದ್ಧಳಾದಳು. ನನಗೆ ಪರಿಚಯದ ಸಂತಾನೋತ್ಪತ್ತಿ ಕೇಂದ್ರದ ತಜ್ಞರಿಗೆ ಫೋನ್‌ ಮಾಡಿ ಅವರಿಗೆ ಶುಭ ಹಾರೈಸಿ ಬೀಳ್ಕೊಟ್ಟೆ…

ಅನೇಕ ತಿಂಗಳುಗಳ ನಂತರ ನನಗೊಂದು ವಿಸ್ಮಯಕಾರಿ ಸಂತಸ. ಅವರು ನನ್ನನ್ನು ಕಾಣಲು ಬಂದಿದ್ದರು. ರೋಗಿಯಾಗಿ ಅಲ್ಲ. ಸುಂದರ ಹೆಣ್ಣು ಮಗುವಿನ ತಂದೆ ತಾಯಿಯಾಗಿ. ಇನ್ನೂ ಸಂತಸದ ವಿಷಯವೆಂದರೆ ಅವಳಿಗೆ ಅಥವಾ ಮಗುವಿಗೆ ಸೋಂಕು ಇಲ್ಲ. ವೈದ್ಯವಿಜ್ಞಾನ ಎಂಥದನ್ನೂ ಸಾಧಿಸಬಹುದೆಂಬುದು ವೈದ್ಯನಾದ ನನಗೇ ಆಶ್ಚರ್ಯ ನೀಡಿತು. ಅವಳು ತನ್ನ ಹಠ ಸಾಧಿಸಿದ್ದಳು, ಜೊತೆಗೇ ದಾಂಪತ್ಯದ  ಬಂಧವನ್ನು ಇನ್ನಷ್ಟು ಬಿಗಿಗೊಳಿಸಿದ್ದಳು…

ಡಾ. ಶಿವಾನಂದ ಕುಬಸದ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next