Advertisement

ಅಡಕೆಗೆ ಶಾ ಅಭಯ; ಹಾನಿಕಾರಕ ಪಟ್ಟಿಯಿಂದ ಅಡಕೆಗೆ ಕೊಕ್‌

06:00 AM Mar 27, 2018 | Team Udayavani |

ತೀರ್ಥಹಳ್ಳಿ: “ಹಾನಿಕಾರಕ ಪಟ್ಟಿಯಿಂದ ಅಡಕೆಯನ್ನು ಕೈಬಿಡಲು ಕೇಂದ್ರ ಕ್ರಮ ಕೈಗೊಳ್ಳಲಿದೆ. ಕೇಂದ್ರ ಸರಕಾರ ಸದಾ ಕಾಲ ಮಲೆನಾಡಿನ ಅಡಕೆ ಬೆಳೆಗಾರರ ಪರವಾಗಿಯೇ ಇರಲಿದೆ.

Advertisement

– ಇದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅಡಕೆ ಬೆಳೆಗಾರರಿಗೆ ನೀಡಿದ ಭರವಸೆ. ತೀರ್ಥಹಳ್ಳಿಯಲ್ಲಿ ನಡೆದ ಅಡಕೆ ಬೆಳೆಗಾರರ ಸಮಾವೇಶ ಉದ್ಘಾಟಿಸಿದ ಅವರು, ಸಂಕಷ್ಟಕ್ಕೆ ಸಿಲುಕಿದ್ದ ಅಡಕೆ ಬೆಳೆಗಾರರ ಮುಖದಲ್ಲಿ ಭರವಸೆಯ ಬೆಳಕನ್ನು ಮೂಡಿಸುವ ಪ್ರಯತ್ನ ಮಾಡಿದರು.

ಗುಟ್ಕಾ ಮತ್ತು ಅಡಕೆಯ ವ್ಯತ್ಯಾಸ ತಿಳಿಯದ ಆಗಿನ ಪಿ.ವಿ. ನರಸಿಂಹರಾವ್‌ ಸರ್ಕಾರ ಹಾನಿಕಾರಕ ಪಟ್ಟಿಗೆ ಸೇರಿಸಿತು. ಆದರೆ ಈಗಿನ ಕೇಂದ್ರ ಸರಕಾರ ಅದನ್ನು ಆ ಪಟ್ಟಿಯಿಂದ ಕೈ ಬಿಡಲಿದೆ ಎಂದು ಹೇಳಿದರು.

ಅಡಕೆಯಲ್ಲಿ ವಿಷಕಾರಕ ವಸ್ತುಗಳು ಇಲ್ಲವೆಂಬುದನ್ನು ತಜ್ಞರ ಮೂಲಕ ನ್ಯಾಯಾಲಯದಲ್ಲಿಯೇ ದೃಢಪಡಿಸಿ, ರೈತರ ಹಿತ ಕಾಪಾಡಲಾಗುವುದು. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಿಳಿ ಅಡಕೆ ಮತ್ತು ಕೆಂಪು ಅಡಕೆಯ ಬೆಲೆ ಹೆಚ್ಚಿದೆ. ಇದರಿಂದ ಬೆಳೆಗಾರರಿಗೆ ಅತ್ಯಧಿಕ ಸಹಾಯವಾಗಿದೆ. ಸರಕಾರ ಒಟ್ಟು 40 ಸಾವಿರ ಮೆಟ್ರಿಕ್‌ ಟನ್‌ ಅಡಕೆ ಖರೀದಿ ಮಾಡಿದೆ ಎಂದರು.

ಅಡಕೆ ಸಂಶೋಧನಾ ಕೇಂದ್ರ: ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಶಿವಮೊಗ್ಗದಲ್ಲಿ ಸುಮಾರು 500 ಕೋಟಿ ರೂ. ವೆಚ್ಚದಲ್ಲಿ ಅಡಕೆ ಸಂಶೋಧನಾ ಕೇಂದ್ರ ಸ್ಥಾಪಿಸಲಾಗುವುದು. ಆ ಮೂಲಕ  ಅಡಕೆ ಬೆಳೆಗಾರರ ಸಂಪೂರ್ಣ ಹಿತರಕ್ಷಣೆ ಮಾಡಲಾಗುವುದು ಎಂದು ಭರವಸೆ ನೀಡಿದರು.

Advertisement

ಸಿದ್ದರಾಮಯ್ಯನವರೇ, ನೀವು ಕಿವಿ ತೆರೆದು ಕೇಳಿಸಿಕೊಳ್ಳಿ. ಯುಪಿಎ ಸರ್ಕಾರ ತನ್ನ ಅವಧಿಯಲ್ಲಿ ಕರ್ನಾಟಕಕ್ಕೆ ಕೇವಲ 88 ಸಾವಿರ ಕೋಟಿ ರೂ.ಗಳನ್ನು ಕೊಟ್ಟಿತ್ತು. ಆದರೆ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕರ್ನಾಟಕಕ್ಕೆ 2 ಲಕ್ಷ 19 ಸಾವಿರ ಕೋಟಿ ಕೊಡಲಾಗಿದೆ ಈ ಹಣವೆಲ್ಲ ಹೋಗಿದ್ದೆಲ್ಲಿ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಸರ್ಕಾರ  ಅಧಿಕಾರ ಉಳಿಸಿಕೊಳ್ಳಲು ಧರ್ಮಗಳ ಮಧ್ಯೆ, ಸಮಾಜದ ಮಧ್ಯೆ ಒಡಕು ತರುವ ಕೆಟ್ಟ ಕೆಲಸ ಮಾಡುತ್ತಿದೆ. ಕುವೆಂಪುರವರ ನಾಡಗೀತೆಯ ಆಶಯವನ್ನು ಸರಿಯಾಗಿ ಅರ್ಥೈಸಿಕೊಂಡು ಆಡಳಿತ ನಡೆಸಲಿ ಎಂದರು. ಮೆಕ್ಕೆಜೋಳ, ಕಬ್ಬು, ಈರುಳ್ಳಿ ಮುಂತಾದ ಬೆಳೆಗಳಿಗೆ ಸೂಕ್ತ ಬೆಲೆ ನೀಡಿದ್ದು ಕೇಂದ್ರ ಸರ್ಕಾರವೇ ಹೊರತು ರಾಜ್ಯ ಸರ್ಕಾರವಲ್ಲ. ಮುಂದಿನ ದಿನಗಳಲ್ಲಿ ಅಡಕೆ ಹಾಗೂ ತೆಂಗಿಗೂ ಬೆಂಬಲ ಬೆಲೆ ನೀಡಲಾಗುವುದು ಎಂದರು. 1982 ರಲ್ಲಿ ಯಡಿಯೂರಪ್ಪನವರು ರೈತರ, ಬಡವರ ಹಾಗೂ ಕಾರ್ಮಿಕರ ಹಿತಕ್ಕಾಗಿ 65 ಕಿಮೀ ಪಾದಯಾತ್ರೆ ಮಾಡಿದ್ದರು. ಇಡೀ ಭಾರತದಲ್ಲೇ ಅವರೊಬ್ಬ ರೈತ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದರು.

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮಾತನಾಡಿ, ಅಡಕೆ ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೀಡಾದ ಸಮಯದಿಂದಲೂ ಸದಾ ಕಾಲ ಬೆಳೆಗಾರರ ಹಿತರಕ್ಷಣೆ ಮಾಡಿದ್ದು ಬಿಜೆಪಿ ಹಾಗೂ ಅದರ ಅಂಗ ಸಂಸ್ಥೆಗಳು. ಆದರೆ, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಂಪೂರ್ಣ ರೈತವಿರೋಧಿಯಾಗಿ ವರ್ತಿಸುತ್ತಿದೆ ಎಂದರು.

ಕೇಂದ್ರ ಸಚಿವ ಅನಂತಕುಮಾರ್‌, ಸಂಸದ ಪ್ರಹ್ಲಾದ್‌ ಜೋಷಿ, ರಾಜ್ಯ ಉಸ್ತುವಾರಿ ಮುರಳೀಧರ ರಾವ್‌, ರಾಜ್ಯಸಭಾ ಸದಸ್ಯ ಕೇರಳದ ಮುರಳೀಧರ್‌, ರಾಜ್ಯ ಮುಖಂಡರಾದ ರವಿಕುಮಾರ್‌, ಶಾಸಕರಾದ ಬಿ.ವೈ. ರಾಘವೇಂದ್ರ, ಡಿ.ಎನ್‌. ಜೀವರಾಜ್‌ ಇನ್ನಿತರರಿದ್ದರು. ಇದೇ ಸಂದರ್ಭದಲ್ಲಿ ರೈತ ಮುಖಂಡರೊಂದಿಗೆ ಅಮಿತ್‌ ಶಾ ಸಂವಾದ ನಡೆಸಿದರು.

ಹಿಂಗಾರದ ಕುರಿತು ವಿಚಾರಿಸಿದ  ಶಾ
ಮಲೆನಾಡು ಭಾಗದಲ್ಲಿ ಹಿಂಗಾರ ಎನ್ನುವ ಹಾಗೂ ಬೇರೆಡೆ ಸಿಂಗಾರ ಎಂದು ಕರೆಯಲ್ಪಡುವ ಅಡಕೆಯ ಹಿಂಗಾರವನ್ನು ಬಿಚ್ಚುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ತಮ್ಮ ಆಸನದತ್ತ ತೆರಳಿದ ಬಳಿಕ ಅಡಕೆ ಹಿಂಗಾರದ ಕುರಿತು ಕೇಂದ್ರ ಸಚಿವ ಅನಂತಕುಮಾರ್‌ ಅಮಿತ್‌ ಶಾರಿಗೆ ವಿವರಿಸುತ್ತಿದ್ದ ದೃಶ್ಯ ಕಂಡು ಬಂತು.

ಸಿದ್ದರಾಮಯ್ಯನ ಆಡಳಿತದ ಟ್ರಾನ್ಸ್‌ ಫಾರ್ಮರ್‌ ಸುಟ್ಟು ಭಸ್ಮವಾಗಿದ್ದು , ಆ ಜಾಗದಲ್ಲಿ ಯಡಿಯೂರಪ್ಪರ ಹೊಸ ಟ್ರಾನ್ಸ್‌ ಫಾರ್ಮರ್‌ ತರುವುದು ನಮ್ಮ ಗುರಿ.
– ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

ಸಿದ್ದಗಂಗಾ ಶ್ರೀಗಳೊಂದಿಗೆ ಗೌಪ್ಯ ಮಾತುಕತೆ
ತುಮಕೂರು
: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರು ಸೋಮವಾರ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಡಾ.ಶಿವಕುಮಾರ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.

ಹೆಲಿಕಾಪ್ಟರ್‌ ಮೂಲಕ ನಗರಕ್ಕೆ ಆಗಮಿಸಿದ ಅಮಿತ್‌ ಶಾ ನೇರವಾಗಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಕೇಂದ್ರ ಸಚಿವ ಅನಂತ್‌ಕುಮಾರ್‌, ಕರ್ನಾಟಕ ಉಸ್ತುವಾರಿ ಮುರಳೀಧರ್‌ರಾವ್‌, ಸಂಸದ ಪ್ರಹ್ಲಾದ್‌ ಜೋಷಿ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಂತೋಷ್‌, ವಿಧಾನ ಪರಿಷತ್‌ ಸದಸ್ಯ ಲೆಹರ್‌ಸಿಂಗ್‌ ಜೊತೆ ಶ್ರೀಮಠಕ್ಕೆ ತೆರಳಿದರು. ಬಳಿ ಕ ಶ್ರೀಗಳಿಂದ ಆಶೀರ್ವಾದ ಪಡೆದು ಹತ್ತು ನಿಮಿಷ  ಗೌಪ್ಯ ಮಾತುಕತೆ ನಡೆಸಿದರು.

ಮಾತುಕತೆ ವೇಳೆ ಶ್ರೀಗಳ ಆರೋಗ್ಯ ವಿಚಾರಿಸಿ, ನಂತರ ಚುನಾವಣೆ ಸಿದ್ಧತೆ ಕುರಿತು ಮಾಹಿತಿ ನೀಡಿದರು. ನಿಮ್ಮ ಆಶೀರ್ವಾದ ನಮಗೆ ಬೇಕು ಎಂದು ಮನವಿ ಮಾಡಿಕೊಂಡರು ಎಂದು ತಿಳಿದು ಬಂದಿದೆ.  ಈ ವೇಳೆ ಶ್ರೀಗಳು ನಗುತ್ತಲೇ  “ಒಳ್ಳೆಯದಾಗಲಿ’ ಎಂದು ಹೇಳಿ, “ನೀವು ಚುನಾವಣೆ ನಿಮಿತ್ತ ಎಲ್ಲ ಕಡೆ ಓಡಾಟ ಮಾಡುತ್ತೀರಿ. ಆರೋಗ್ಯದ ಕಡೆ ಗಮನ ಹರಿಸಿ’ ಎಂದು ಶಾಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next