ಮುಂಬಯಿ: ಶೀಘ್ರದಲ್ಲೇ ಭಾರತ ಕ್ರಿಕೆಟ್ ತಂಡದ ನೂತನ ತರಬೇತುದಾರರ ಆಯ್ಕೆ ನಡೆಯಲಿದೆ. ಪ್ರಸ್ತುತ ತರಬೇತುದಾರ ರವಿಶಾಸ್ತ್ರಿ ಅಂತಿಮ ಹಂತದ ಸಂದರ್ಶನಕ್ಕೆ ನೇರ ಪ್ರವೇಶ ಪಡೆದಿದ್ದಾರೆ. ಗ್ಯಾರಿ ಕರ್ಸ್ಟನ್, ಮಾಹೇಲ ಜಯವರ್ಧನೆ, ರಾಬಿನ್ ಸಿಂಗ್ ಅವರಂತಹ ದಿಗ್ಗಜರು ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ನಾಯಕ ವಿರಾಟ್ ಕೊಹ್ಲಿ ಮಾತ್ರ ಹಾಲಿ ತರಬೇತುದಾರ ರವಿಶಾಸ್ತ್ರಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.
ವೆಸ್ಟ್ ಇಂಡೀಸ್ ಪ್ರವಾಸಕ್ಕೂ ಮೊದಲು ಸೋಮವಾರ ಮುಂಬಯಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿರಾಟ್ ಕೊಹ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ರವಿಶಾಸ್ತ್ರಿಯೊಂದಿಗೆ ಉತ್ತಮ ಬಾಂಧವ್ಯ”ನಮಗೆಲ್ಲರಿಗೂ ರವಿಶಾಸ್ತ್ರಿಯೊಂದಿಗೆ ಉತ್ತಮ ಸಂಬಂಧವಿದೆ. ಅವರೇ ಮುಂದಿನ ಕೋಚ್ ಆದರೆ ಬಹಳ ಸಂತೋಷಪಡುತ್ತೇವೆ. ಆದರೆ ಇದೆಲ್ಲ ಕಪಿಲ್‌ದೇವ್ ನೇತೃತ್ವದ ಉನ್ನತ ಸಲಹಾ ಸಮಿತಿಗೆ ಬಿಟ್ಟಿದ್ದು. ಇಲ್ಲಿಯ ವರೆಗೆ ಕಪಿಲ್ ಸಮಿತಿ ನನ್ನ ಅಭಿಪ್ರಾಯ ಕೇಳಿಲ್ಲ’ ಎಂದು ಕೊಹ್ಲಿ ಹೇಳಿದ್ದಾರೆ.
ಕಪಿಲ್ ಸಮಿತಿ ತನ್ನ ಅಭಿಪ್ರಾಯ ಕೇಳಿಲ್ಲ ಎಂದು ಕೊಹ್ಲಿ ಹೇಳಿದ್ದರೂ, ಅವರು ರವಿಶಾಸ್ತ್ರಿಗೆ ನೇರಾನೇರ ಬೆಂಬಲ ವ್ಯಕ್ತಪಡಿಸಿರುವುದು ಆಯ್ಕೆ ಮೇಲೆ ಪ್ರಭಾವ ಬೀರುವುದಿಲ್ಲವೇ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ.