Advertisement

ಮತ್ತೆ ಶಾಸ್ತ್ರಿಯೇ ಕೋಚ್?

02:18 AM Aug 02, 2019 | Team Udayavani |

ಮುಂಬಯಿ: ಭಾರತೀಯ ಕ್ರಿಕೆಟ್ ತಂಡದ ಕೋಚ್ ಹುದ್ದೆಗೆ ಎರಡು ಸಾವಿರಕ್ಕೂ ಹೆಚ್ಚು ಉಮೇದು ವಾರರು ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ಇವರಲ್ಲಿ ಸಾಕಷ್ಟು ಮಂದಿ ಘಟಾನುಘಟಿಗಳು ಹಾಗೂ ಅನುಭವಿಗಳಿದ್ದು, ಇವರೆಲ್ಲ ರವಿಶಾಸ್ತ್ರಿಗೆ ಸವಾಲಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Advertisement

ಇನ್ನೊಂದು ಮೂಲದ ಪ್ರಕಾರ ಹಾಲಿ ಕೋಚ್ ರವಿಶಾಸ್ತ್ರಿ ಅವರೇ ಈ ಹುದ್ದೆಯಲ್ಲಿ ಇನ್ನೊಂದು ಅವಧಿಗೆ ಮುಂದುವರಿಯುವ ಸಾಧ್ಯತೆ ಇದೆ ಎಂದೂ ತಿಳಿದು ಬಂದಿದೆ.

ರೇಸ್‌ನಲ್ಲಿ ಮೂಡಿ
ಆಸ್ಟ್ರೇಲಿಯದ ಮಾಜಿ ಆಲ್ರೌಂಡರ್‌ ಟಾಮ್‌ ಮೂಡಿ, ಕಿವೀಸ್‌ನ ಮಾಜಿ ಹಾಗೂ ಕಿಂಗ್ಸ್‌ ಇಲೆವೆನ್‌ ತಂಡದ ಹಾಲಿ ಕೋಚ್ ಮೈಕ್‌ ಹೆಸನ್‌, ಭಾರತದ ರಾಬಿನ್‌ ಸಿಂಗ್‌, ಲಾಲ್ಚಂದ್‌ ರಜಪೂತ್‌ ಅವರೆಲ್ಲ ರೇಸ್‌ನಲ್ಲಿರುವ ಅಭ್ಯರ್ಥಿಗಳು.

ಈ ನಡುವೆ ಸುದ್ದಿಯಲ್ಲಿದ್ದ ಶ್ರೀಲಂಕಾದ ಮಾಜಿ ಆಟಗಾರ ಮಾಹೇಲ ಜಯವರ್ಧನೆ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿಲ್ಲ ಎಂದು ತಿಳಿದು ಬಂದಿದೆ. ಆದರೆ ಜಾಂಟಿ ರೋಡ್ಸ್‌ ಫೀಲ್ಡಿಂಗ್‌ ಕೋಚ್ ಹುದ್ದೆಗೆ ಉಮೇದುವಾರಿಕೆ ಸಲ್ಲಿಸಿದ್ದು ಖಾತ್ರಿಯಾಗಿದೆ.

ಶೇ. 70ರಷ್ಟು ಪಂದ್ಯಗಳಲ್ಲಿ ಜಯ
ಕೋಚ್ ಸ್ಪರ್ಧೆಯಲ್ಲಿ ಘಟಾನು ಘಟಿಗಳಿದ್ದರೂ ರವಿಶಾಸ್ತ್ರಿಯವರೇ ಮತ್ತೂಂದು ಅವಧಿಗೆ ಈ ಹುದ್ದೆಯಲ್ಲಿ ಮುಂದುವರಿಯುವ ಸಾಧ್ಯತೆ ಹೆಚ್ಚು ಎಂಬುದು ಬ್ರೇಕಿಂಗ್‌ ನ್ಯೂಸ್‌. ಹಾಲಿ ಕೋಚ್ ಆಗಿರು ವುದರಿಂದ ಅವರಿಗೆ ಇಲ್ಲಿ ನೇರ ಪ್ರವೇಶ ಲಭಿಸಿದೆ.

Advertisement

ರವಿಶಾಸ್ತ್ರಿ 2017ರಲ್ಲಿ 2 ವರ್ಷಗಳ ಅವಧಿಗೆ ಮತ್ತೆ ಟೀಮ್‌ ಇಂಡಿಯಾ ಕೋಚ್ ಆಗಿ ನೇಮಕಗೊಂಡಿದ್ದರು. ಅವರ ಒಟ್ಟು ಕಾರ್ಯಾವಧಿಯಲ್ಲಿ ಭಾರತ ಶೇ. 70ರಷ್ಟು ಪಂದ್ಯಗಳಲ್ಲಿ ಯಶಸ್ಸು ಕಂಡಿದೆ ಎನ್ನುತ್ತದೆ ಅಂಕಿ ಅಂಶ. ಆಸ್ಟ್ರೇಲಿಯದಲ್ಲಿ ಐತಿಹಾ ಸಿಕ ಟೆಸ್ಟ್‌ ಸರಣಿ ಗೆಲುವು, 2 ಏಶ್ಯ ಕಪ್‌ ಕಿರೀಟ, ವಾಂಡರರ್ ಟೆಸ್ಟ್‌ ಗೆಲುವೆಲ್ಲ ಪ್ರಮುಖವಾಗಿವೆ. ನಾಯಕ ವಿರಾಟ್ ಕೊಹ್ಲಿ ಕೂಡ ಶಾಸ್ತ್ರಿಯವರನ್ನು ಬೆಂಬಲಿಸಿ ನೇರ ಹೇಳಿಕೆ ಕೊಟ್ಟಿದ್ದಾರೆ.

ಆದರೆ ಶಾಸ್ತ್ರಿ ಕೋಚ್ ಆಗಿದ್ದಾಗ ಭಾರತ ಎರಡೂ ಏಕದಿನ ವಿಶ್ವಕಪ್‌ಗ್ಳಲ್ಲಿ ಸೆಮಿಫೈನಲ್ ಗಡಿ ದಾಟುವಲ್ಲಿ ವಿಫ‌ಲವಾಗಿತ್ತು. ಇದನ್ನು ಮತ್ತೂಬ್ಬ ಉಮೇದುವಾರ ರಾಬಿನ್‌ ಸಿಂಗ್‌ ನೇರವಾಗಿ ಹೇಳಿದ್ದರು.

ಬೌಲಿಂಗ್‌ ಕೋಚ್ ಬಿ. ಅರುಣ್‌ ಕೂಡ ತಮ್ಮ ಹುದ್ದೆಯಲ್ಲಿ ಮುಂದು ವರಿಯುವ ಸಂಭವ ಹೆಚ್ಚು ಎನ್ನಲಾಗಿದೆ.

ಸಲಹಾ ಸಮಿತಿ ನಿರ್ಧಾರವೇ ಅಂತಿಮ’
ಟೀಮ್‌ ಇಂಡಿಯಾ ಕೋಚ್ ವಿಚಾರದಲ್ಲಿ ವಿರಾಟ್ ಕೊಹ್ಲಿ ತಮ್ಮ ಅಭಿಪ್ರಾಯ ಮಂಡಿಸಲು ಅರ್ಹರು, ಆದರೆ ತ್ರಿಸದಸ್ಯ ಕ್ರಿಕೆಟ್ ಸಲಹಾ ಸಮಿತಿಯೇ (ಸಿಎಸಿ) ನೂತನ ಕೋಚ್ ಯಾರೆಂಬುದನ್ನು ನಿರ್ಧರಿಸಲಿದೆ ಎಂಬುದಾಗಿ ಮಾಜಿ ಆಟಗಾರ್ತಿ ಶಾಂತಾ ರಂಗಸ್ವಾಮಿ ಹೇಳಿದ್ದಾರೆ. ಅವರು ಈ ಸಮಿತಿಯ ಓರ್ವ ಸದಸ್ಯರೂ ಆಗಿದ್ದಾರೆ.

‘ಕೆಲವು ಮಾಧ್ಯಮಗಳ ವರದಿಯನ್ನು ಗಮನಿಸಿದೆ. ಅಂಶುಮಾನ್‌ ಗಾಯಕ್ವಾಡ್‌ ಹೇಳಿಕೆಯನ್ನು ನಾನು ಸಂಪೂರ್ಣವಾಗಿ ಸಮ್ಮತಿಸುತ್ತೇನೆ’ ಎಂಬುದಾಗಿ ಶಾಂತಾ ರಂಗಸ್ವಾಮಿ ಹೇಳಿದರು.

‘ಮುಖ್ಯ ಕೋಚ್ ಆಯ್ಕೆ ಮುಕ್ತವಾಗಿರುತ್ತದೆ. ಉಮೇದುವಾರರ ಎಲ್ಲ ಅರ್ಹತೆಯನ್ನು ನಾವು ಅವಲೋಕಿಸಲಿದ್ದೇವೆ. ಅವರ ಅನುಭವ, ಸಾಮರ್ಥ್ಯ, ತಂಡವನ್ನು ಒಗ್ಗೂಡಿಸುವ ತಂತ್ರಗಾರಿಕೆ, ಕಾರ್ಯತಂತ್ರಗಳೆಲ್ಲವೂ ಆಯ್ಕೆಯ ಮಾನದಂಡವಾಗಿರುತ್ತವೆ’ ಎಂದು ಕರ್ನಾಟಕದ ಮಾಜಿ ಆಟಗಾರ್ತಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next