ಕುಡುಪು: ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧನ ಕ್ಷೇತ್ರ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಸಂಭ್ರಮದ ಷಷ್ಠಿ ಬ್ರಹ್ಮರಥೋತ್ಸವ ಶುಕ್ರವಾರ ಜರಗಿತು. ಮುಂಜಾನೆಯಿಂದ ಸರದಿ ಸಾಲಿನಲ್ಲಿ ನಿಂತು ಸುಮಾರು 25ಸಾವಿರ ಭಕ್ತರು ದೇವಸ್ಥಾನಕ್ಕೆ ಆಗಮಿಸಿ, ಶ್ರೀ ದೇವರ ದರ್ಶನ ಪಡೆದರು.
ನಾಗಬನದಲ್ಲಿ ತಂಬಿಲ ಸೇವೆ, ಪಂಚಾಮೃತ ಅಭಿಷೇಕ, ಕ್ಷೀರ ಅಭಿಷೇಕ, ಸೀಯಾಳ ಅಭಿಷೇಕ ನಿರಂತರವಾಗಿ ನಡೆಯಿತು. ಭದ್ರ ಸರಸ್ವತಿ ತೀರ್ಥ ಸರೋವರದಲ್ಲಿ ಷಷ್ಠಿ ತೀರ್ಥಸ್ನಾನ ವಿಶೇಷವಾಗಿತು. ಪಂಚಮಿ ಹಾಗೂ ಪಷ್ಠಿಯ ಎರಡು ದಿನ ಭಕ್ತರಿಂದ ಸುಮಾರು 8,000 ಪಂಚಾಮೃತ ಅಭಿಷೇಕ, 16,000 ತಂಬಿಲ ಸೇವೆ ಸಮರ್ಪಿತವಾಯಿತು.
ದೇವಸ್ಥಾನದಲ್ಲಿ ದೇವರು ಬಲಿ ಉತ್ಸವ ನಡೆದು ಬಳಿಕ ರಥಬೀದಿಯಲ್ಲಿ ಬ್ರಹ್ಮರಥೋತ್ಸವ ಜರಗಿತು. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಹೊಸ ಸಿಸ್ಟಮ್‌ನೊಂದಿಗೆ ಸೇವಾ ಕೌಂಟರ್‌ವ್ಯವಸ್ಥೆ ಮಾಡಲಾಗಿತ್ತು. ಗ್ರಾಮದ ಎಲ್ಲ ಸಂಘ-ಸಂಸ್ಥೆಗಳು ಕಾರ್ಯಕರ್ತರು ವಿವಿಧ ಸೇವಾ ಕಾರ್ಯದಲ್ಲಿ ಸಹಕರಿಸಿದ್ದರು. ಮಂಗಳೂರು ಗ್ರಾಮಾಂತರ ಪೊಲೀಸರು ಬಂದೋಬಸ್ತು ಏರ್ಪಡಿಸಿ ಸುವ್ಯವಸ್ಥೆಗೆ ಸಹಕರಿಸಿದ್ದರು.
4,000 ಲೀ. ಮಜ್ಜಿಗೆ
ಕುಡುಪು ಹತ್ತು ಸಮಸ್ತರು ಹಾಗೂ ನಂದಿನಿ ಡೈರಿಯ ಸಹಕಾರದೊಂದಿಗೆ ಸುಮಾರು 4,000 ಲೀಟರ್ ಮಜ್ಜಿಗೆಯನ್ನು ಸೇವಾರೂಪದಲ್ಲಿ ಬಂದ ಭಕ್ತರಿಗೆ ವಿತರಿಸಲಾಯಿತು.